ತಣ್ಣೀರಾದರೂ ತಣಿಸಿ ಕುಡಿಯಬೇಕು

kundapuradotcom@gmail.com
5 Min Read

‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ದಾಸಶ್ರೇಷ್ಠರಾದ ಕನಕದಾಸರ ಮಾತು ಇಂದಿಗೂ ಪ್ರಸ್ತುತ. ತಾಳ್ಮೆಯ ಮನಸ್ಸು ಇದ್ದರೆ ಮಾತ್ರ ವ್ಯಕ್ತಿ ಜಯಿಸುತ್ತಾನೆ. ಯಾವಾಗ ಮನುಷ್ಯ ತಾಳ್ಮೆ ಕಳೆದುಕೊಳ್ಳುವನೋ, ಆಗ ಮನಸ್ಸು ವಿಕಾರಗೊಳ್ಳುತ್ತದೆ; ಮಾತು ಅಸಹನೀಯಗೊಳ್ಳುತ್ತದೆ. ತಾಳುವ ಗುಣ ಎಲ್ಲರಲ್ಲೂ ಒಂದೇ ರೀತಿಯಲ್ಲಿ ಇರಲಾರದು. ತಣ್ಣೀರಾದರೂ ತಣಿಸಿ ಕುಡಿ ಎಂಬ ಗಾದೆ ಮಾತು ತಾಳ್ಮೆಯ ಕುರಿತಾಗಿಯೇ ಹೇಳಿದ್ದು‌.‌ ಒಂಬತ್ತು ತಿಂಗಳುಗಳ ಕಾಲ, ಕಾಯುವಿಕೆಯ ಫಲವಾಗಿಯೇ ಮಗುವಿಗೆ ಜನ್ಮನೀಡಿ, ಹೆಣ್ಣೊಬ್ಬಳು ತಾಯಿಯೆನಿಸಿಕೊಳ್ಳುತ್ತಾಳೆ; ಒಬ್ಬ ಶಿಲ್ಪಿ ಸಂಯಮದಿಂದ ಶಿಲೆಯನ್ನು ಕೆತ್ತಿದಾಗಲೇ ಮೂರ್ತಿ ರೂಪುಗೊಳ್ಳುವುದು; ರೈತನೊಬ್ಬ ಒಂದು ಬೆಳೆಗಾಗಿ ವರ್ಷಗಟ್ಟಲೆ ಕಾಯಲೇಬೇಕು. ಭೂಮಿಯ ಮೇಲಿನ ಎಲ್ಲಾ ಜೀವಿಗಳಲ್ಲಿ ಸಹಜವಾಗಿ ಇರುವ ತಾಳುವಿಕೆಯ ಗುಣವನ್ನು ಮನುಷ್ಯ ಪ್ರಜ್ಞಾಪೂರ್ವಕವಾಗಿ ಕಲಿಯಬೇಕಾದ ಆವಶ್ಯಕತೆಯಿದೆ.

ಫೈಬರ್ ದೋಣಿಗಳು ಬರುವ ಮೊದಲು ಮೀನುಗಾರಿಕೆಯಲ್ಲಿ ಮರದ ದೋಣಿಗಳನ್ನು ಬಳಸುತ್ತಿದ್ದರು. ಅಂದಿನ ಕಾಲಮಾನದಲ್ಲಿ ತೆಪ್ಪದ ಬಳಿಕ ಮನುಷ್ಯ ಕಂಡುಕೊಂಡ ಅತೀ ದೊಡ್ಡ ಶೋಧನೆಯಿದು. ಗೊತ್ತುಪಡಿಸಿದ ಮರದ ಹಲಗೆಗಳನ್ನು ತಂದು ದೋಣಿಗಳನ್ನು ನಿರ್ಮಿಸಲಾಗುತ್ತಿತ್ತು. ದೋಣಿ ನಿರ್ಮಿಸುವ ಬಡಗಿಗಳೇ ಬೇರೆ; ಮನೆ ನಿರ್ಮಾಣದ ಬಡಗಿಗಳೇ ಬೇರೆ. ಮನೆಯ ನಿರ್ಮಾಣದಲ್ಲಿ ತೊಡಗಿಕೊಳ್ಳುವ ಬಡಗಿಗಳಿಗೆ, ದೋಣಿ ನಿರ್ಮಾಣ ಕಷ್ಟಸಾಧ್ಯ; ಮತ್ತು ದೋಣಿ ನಿರ್ಮಾಣದಲ್ಲಿ ಹೆಚ್ಚಿನ ಶ್ರಮವೂ ಕೌಶಲ್ಯವೂ ಇರಬೇಕು. ಬಳಸುವ ಮರದ ಆಯ್ಕೆಯೂ ಚೆನ್ನಾಗಿರಬೇಕು. ಒಂದು ವೇಳೆ ಗಡಿಬಿಡಿಯಲ್ಲಿ ಮರವನ್ನು ಆಯ್ಕೆ ಮಾಡಿ, ಅದರಿಂದ ದೋಣಿ ನಿರ್ಮಾಣ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ದೋಣಿ ಆಳ ಸಮುದ್ರಕ್ಕೆ ಹೋದಾಗ, ಹೆದ್ದೆರೆಗಳ ಆರ್ಭಟಕ್ಕೆ ದೋಣಿಯ ಹಲಗೆಗಳು ಕಿತ್ತು ಹೋಗಬಹುದು. ಮನೆಯ ಕಿಟಕಿ, ಬಾಗಿಲುಗಳ ನಿರ್ಮಾಣಕ್ಕಾಗಿ ಬಳಸಿದ ಮರ ಕಳಪೆಯಾಗಿದ್ದರೆ, ಬಾಗಿಲು ಮುರಿದು ಹೋಗಬಹುದಷ್ಟೆ. ಆದರೆ, ಸಮುದ್ರ ಮಧ್ಯದಲ್ಲಿ ದೋಣಿಯು ಮುಳುಗಿದರೆ ಹಲವು ಜೀವಗಳು ನಷ್ಟವಾಗಬಹುದು. ಆದ್ದರಿಂದಲೇ ಹಿಂದೆಲ್ಲ ದೋಣಿ ನಿರ್ಮಾಣಕ್ಕಾಗಿ ಬಳಸುವ ಮರದ ಆಯ್ಕೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು. ಬಡಗಿಯ ಆಯ್ಕೆಯೂ ಇಲ್ಲಿ ಅತ್ಯಂತ ಮಹತ್ತ್ವಪೂರ್ಣವಾದದ್ದು. ನಿರ್ಮಾಣದ ಕಾಲಾವಧಿ ಹೆಚ್ಚಿದಷ್ಟು ದೋಣಿ ಸುಂದರವಾಗಿ ಮತ್ತು ಬಲಿಷ್ಠವಾಗಿ ರೂಪುಗೊಳ್ಳುತ್ತಿತ್ತು. ನೀವು ಗೇರು ಬೀಜವನ್ನು ನೋಡಿದ್ದೀರಿ. ಅದರೊಳಗಿಂದ ಗೋಡಂಬಿ ತೆಗೆದ ಮೇಲೆ, ಅದರ ಸಿಪ್ಪೆ ತ್ಯಾಜ್ಯ ವಸ್ತು. ಆದರೆ ಆ ಸಿಪ್ಪೆಯಿಂದಲೂ ಎಣ್ಣೆ ತಯಾರಿಸುತ್ತಾರೆ. ಈ ಎಣ್ಣೆ ಎಷ್ಟು ಅಪಾಯಕಾರಿ ಎಂದರೆ, ಅದು ನಮ್ಮ ಚರ್ಮಕ್ಕೆ ತಾಗಿದರೆ ಅಷ್ಟು ಭಾಗ ಸುಟ್ಟುಹೋಗಿ, ಸುಟ್ಟ ಗಾಯವಾಗುತ್ತದೆ. ಗಾಯ ಮಾಗಿದ ಮೇಲೂ ಅಲ್ಲೊಂದು ಸುಟ್ಟ ಕಲೆ‌ ಉಳಿದುಬಿಡುತ್ತದೆ. ಈ ಎಣ್ಣೆಯನ್ನು ಹೊಸದಾಗಿ ನಿರ್ಮಾಣ ಮಾಡಿದ ದೋಣಿಗೆ ಹಚ್ಚಲೇಬೇಕು. ಐದಾರು ದಿನಗಳಿಗೊಮ್ಮೆ, ಮೂರ್ನಾಲ್ಕು ಬಾರಿ ಹಚ್ಚುತ್ತಾರೆ. ತಿಂಗಳುಗಟ್ಟಲೆ ದೋಣಿಯನ್ನು ಒಣಗಿಸುತ್ತಾರೆ. ಎಷ್ಟು ಎಣ್ಣೆ ದೋಣಿಯ ಹಲಗೆಗಳು ಹೀರುತ್ತದೆಯೋ, ದೋಣಿ ಅಷ್ಟು ಬಲಿಷ್ಟಗೊಳ್ಳುತ್ತದೆ. ಆಗ ತಾನೆ ಕಡೆದ ಬಿಳಿ ಬಣ್ಣದ ಶಿಲೆಯ ಮೂರುತಿಗೆ ಎಣ್ಣೆ ಹಚ್ಚಿದಾಗ, ಕಪ್ಪು ರೂಪ‌ ಪಡೆವಂತೆ, ಬಿಳಿ ಅಥವಾ ಹಳದಿ ಬಣ್ಣದಿಂದ ಗೋಚರಿಸುವ ದೋಣಿ, ಎಣ್ಣೆ ಬಳಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಮರದಿಂದ ನಿರ್ಮಾಣಗೊಂಡ ದೋಣಿ ಸಮುದ್ರಕ್ಕೆ ಇಳಿದಾಗ ಹಲವು ಸಮಸ್ಯೆಗಳ ಜೊತೆಗೆ ಕಾಲಕಳೆಯುತ್ತದೆ. ಈಗಿನ ಫೈಬರ್ ದೋಣಿಯಾದರೆ, ಸಮುದ್ರಕ್ಕೆ ಸೇರಿದ ಮೇಲೆ ಒಳಭಾಗವನ್ನು ಬಟ್ಟೆಯಿಂದ ಒಮ್ಮೆ ಒರಸಿದರೆ ಸಾಕು; ಒಂದೇ ಒಂದು ಹನಿ ನೀರೂ ಒಳಗೆ ಸುಳಿಯದು. ಆದರೆ ಮರದ ದೋಣಿಯಾದರೆ, ಜೋಡಿಸಿದ ಭಾಗಗಳಿಂದ ನೀರು ನಿರಂತರವಾಗಿ ಒಳಗೆ ಬರುತ್ತಿರುತ್ತದೆ‌. ನೀರು ಒಳ ಬರುವ ಪ್ರಮಾಣ, ನಿರ್ಮಾಣ ಮಾಡುವ ಬಡಗಿಯ ಕೌಶಲ್ಯದ ಆಧರಿಸಿರುತ್ತದೆ. ಒಂದೇ ಒಂದು ಹನಿ ನೀರು ಒಳ ನುಸುಳದಂತೆ ದೋಣಿ ನಿರ್ಮಾಣ ಮಾಡುವ ಪರಿಣಿತ ಬಡಗಿಗಳೂ ಇದ್ದಾರೆ. ಆದರೆ ಅಂತವರು ಅತ್ಯಂತ ವಿರಳ. ಹನಿ ಹನಿಯ ಲೆಕ್ಕಾಚಾರದಲ್ಲಿ ಒಳಬರುವ ನೀರು ಒಂದೊಂದು ಗಂಟೆ ಕಳೆಯುವಾಗ ಹತ್ತಾರು ಲೀಟರ್‌ಗಳಷ್ಟಬಹುದು. ಆಗ ಅದನ್ನು ಹೊರ ಚೆಲ್ಲಲೇಬೇಕು. ಸ್ವಲ್ಪ ಉದಾಸೀನ ತೋರಿದರೂ ಹೀಗೆ ತುಂಬಿದ ನೀರಿನಿಂದಲೇ ದೋಣಿ ಮುಳುಗಬಹುದು. ಬಲೆ ಬೀಸಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಾಗ ನೀರನ್ನು ಹೊರಚೆಲ್ಲುವುದೇ ಒಂದು ಸಮಸ್ಯೆಯಾಗುತ್ತದೆ. ಮೀನುಗಾರಿಕೆಯ ತಾಂತ್ರಿಕ ಕೆಲಸ ಅರಿಯದ ಚಿಕ್ಕ ಮಕ್ಕಳು, ಹೊಸದಾಗಿ ಮೀನುಗಾರಿಕೆಯನ್ನು ಕಲಿಯಲು ಬಂದವರಿಗೆ ಈ ಕೆಲಸ ನೀಡುತ್ತಾರೆ. ನೀರು ಹೊರಚೆಲ್ಲುತ್ತಾ ಚೆಲ್ಲುತ್ತಾ ಉಳಿದ ಕೆಲಸವನ್ನು ಕಲಿತು, ಪ್ರಬುದ್ಧ ಮೀನುಗಾರನಾಗುತ್ತಾರೆ. ದೀರ್ಘ ಸಮಯದ ವರೆಗೆ ಮೀನುಗಾರಿಕೆಗೆ ಹೋಗಿಯೂ, ಮೀನುಗಾರಿಕೆಯನ್ನು ಸರಿಯಾಗಿ ಕಲಿಯದವನನ್ನು “ಅವನಿಗೆ ದೋಣಿಯ ನೀರು ತೆಗೆದು ಬಿಸಾಡುವ ಕೆಲಸ ಮಾತ್ರ ಗೊತ್ತು” ಎಂದು ಹೇಳುತ್ತಾರೆ. ಅದರಷ್ಟು ದೊಡ್ಡ ಅವಮಾನ ಬೇರೊಂದಿಲ್ಲ. ಮರದ ದೋಣಿಯಲ್ಲಿ ಕೆಲಸ ಮಾಡುವವರು ಹೆಚ್ಚಿನ ತಾಳ್ಮೆ ಹೊಂದಿರಲೇಬೇಕಿತ್ತು.

ಕೆಲವು ಬಾರಿ ಬಲೆ ಎಳೆದುಕೊಳ್ಳುವ ಜಾಗದಲ್ಲಿ ಮರದ ಸಣ್ಣ ಸಣ್ಣ ಸಿಗುರು ಎದ್ದಿರುತ್ತದೆ. ಆ‌ ಸಿಗುರಿಗೆ ಬಲೆ ತಾಗಿದರೆ ಬಲೆ ಹರಿದು ಹೋಗುತ್ತದೆ. ಅಂತಹ ಸಿಗುರಿಗೆ ತಾಗದಂತೆ, ತಾಗಿದರೂ ಬಲೆ ಹರಿಯದಂತೆ ಬಿಡಿಸಿ ಎಳೆದುಕೊಳ್ಳುವುದು ಒಂದು ತಪಸ್ಸಿನ ಹಾಗೆ. ಬಲೆ ಬಿಟ್ಟ ನಂತರ ಎಳೆದುಕೊಳ್ಳುವವನಿಗೆ ತಾಳ್ಮೆಯೂ ಬೇಕು, ಚುರುಕುತನವೂ ಬೇಕು. ಸಮುದ್ರದ ಆಳದಲ್ಲಿರುವ ಬಂಡೆಗೆ ಬಲೆ‌ ಸಿಕ್ಕಿಹಾಕಿಕೊಂಡಾಗ ಗಂಟೆಗಟ್ಟಲೆ ಬಲೆ ಎಳೆದರೂ ಬಾರದು. ಬೇರೆ ಬೇರೆ ದಿಕ್ಕಿನಿಂದ ಎಳೆಯಬೇಕಾದ ಚಾಣಾಕ್ಷತನ ಬೇಕು. ಅಷ್ಟು ಹೊತ್ತು ಕಾಯುವ ಸಂಯಮವಂತೂ ಇರಲೇಬೇಕು. ಈಗ ಮರದ ದೋಣಿ, ಬೋಟ್‌ಗಳ ಬದಲಿಗೆ ಫೈಬರ್ ದೋಣಿಗಳು, ಕಬ್ಬಿಣದ ಬೋಟ್‌ಗಳು ಬಂದಿವೆ. ಇವುಗಳಿಗೆ ವರ್ಷ ವರ್ಷ ಗೇರು ಬೀಜದ ಎಣ್ಣೆಯನ್ನು ಹಚ್ಚಬೇಕಾಗಿಲ್ಲ; ಹೆದ್ದರೆಯ ಆರ್ಭಟಕ್ಕೆ ಹಲಗೆ ಕಿತ್ತು ಹೋಗಬಹುದೆಂದು ಭಯಪಡಬೇಕಾಗಿಲ್ಲ; ನೀರು ಒಳಗೆ ಬರುವುದೆಂದು ಬೇಸರಿಸಬೇಕೆಂದಿಲ್ಲ. ಕಾಲಚಕ್ರ ಚಲಿಸಿದಂತೆ ಒಂದೊಂದೇ ಆವಿಷ್ಕಾರದೊಂದಿಗೆ ಜಗತ್ತು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಕೆಲವು ವಿಚಾರಗಳನ್ನು ನೋಡಿದಾಗ ಹಿಂದೆ ಇದ್ದ ವಸ್ತುಗಳೇ ಉತ್ತಮ ಎಂದು ಕೆಲವು ಬಾರಿ ಅನ್ನಿಸುತ್ತದೆ. ಈಗೀಗ ಕಬ್ಬಿಣದಿಂದಲೋ, ಫೈಬರ್ ನಿಂದಲೋ ಮಾಡಿದ ಬೋಟುಗಳು ಮುಳುಗಿದಾಗ ಸಮುದ್ರದ ತಳ ಸೇರಿದ ಉದಾಹರಣೆಗಳು ತುಂಬ ಸಿಗುತ್ತವೆ. ಆದರೆ ಮರದ ದೋಣಿಗಳು, ಬೋಟ್‌ಗಳು ಸಮುದ್ರದಲ್ಲಿ ಮುಳುಗಿದರೂ ಸಮುದ್ರದ ತಳಕ್ಕೆ ಹೋಗದು. ಮರದಿಂದ ನಿರ್ಮಾಣ ಮಾಡಿದ ಕಾರಣ ತೇಲುತ್ತಿರುತ್ತದೆ. ಮುಳುಗಿದ ದೋಣಿಯಾದರೂ ಅವಶೇಷವನ್ನು ಸುಲಭವಾಗಿ ಕಂಡುಹಿಡಿಯಬಹುದು. ಇಲ್ಲ ಅವುಗಳು ತೇಲಿಕೊಂಡು ದಡಕ್ಕೆ ಬಂದು ಬೀಳುತ್ತವೆ; ಮಣ್ಣಲ್ಲಿ ಮಣ್ಣಾಗಿ ಹೋಗುತ್ತವೆ. ಅದೇ ಫೈಬರ್ ದೋಣಿಗಳು, ಕಬ್ಬಿಣದ ಬೋಟುಗಳು ಹಡಗುಗಳು ಮುಳುಗಿದರೆ ಶತ ಶತಮಾನಗಳವರೆಗೆ ಅದು ನಾಶವಾಗದ ಕಸವಾಗಿ ಸಮುದ್ರ ತಳಭಾಗದಲ್ಲಿ ಉಳಿದು ಬಿಡುತ್ತದೆ. ಅದಕ್ಕೆ ಹೇಳೋದು ಓಲ್ಡ್ ಈಸ್ ಗೋಲ್ಡ್ ಎಂದು. ಆದರೆ ಬದಲಾದ ಜಗತ್ತು ನಾಗಾಲೋಟದಿಂದ ಸಾಗುವಾಗ, ಮರದ ದೋಣಿಯನ್ನು ಹಿಡಿದುಕೊಂಡು ಬರುವೆ ಎಂದು ಹೊರಟರೆ ನಗೆಗೀಡಾಗಬಹುದು. ಕಾಲಕ್ಕೆ ತಕ್ಕ ಕೋಲ ಎಂಬಂತೆ, ಆಯಾಯ ಕಾಲಕ್ಕೆ ತಕ್ಕಂತೆ ನಾವೂ ಬದುಕಲೇಬೇಕು.

ನಾಗರಾಜ ಖಾರ್ವಿ ಕಂಚುಗೋಡು

Share This Article
Leave a Comment