ನಂದನವಾಗಲಿ ಬಾಳು

kundapuradotcom@gmail.com
2 Min Read

ಜಿ.ಎಸ್.ಶಿವರುದ್ರಪ್ಪ ರವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಕಾಣದಾದೆವು ನಮ್ಮೊಳಗೆ.

ಎಂತಹ ಅದ್ಭುತ ಸಾಲುಗಳು; ಸಾರ್ವಕಾಲಿಕ ಸತ್ಯವೂ ಹೌದು. ಹಾಗಾದರೆ ಅದರ ಭಾವ ಅರ್ಥವಾದರೆ ಸಾಕೆ? ಅಳವಡಿಕೆ ಅಥವಾ ಅನುಸರಣೆ ಯಾವಾಗ?

ನಾಗರಿಕತೆಗಳು ಬೆಳೆದು ಬಂದಂತೆ ಸಂಘಜೀವನ ಪ್ರಾರಂಭವಾಯಿತು. ಆಗೆಲ್ಲ ನಮ್ಮ ನಿರೀಕ್ಷೆಗಳು; ಅಪೇಕ್ಷೆಗಳು ಹಾಗೂ ಬಯಕೆಗಳ ಲಗ್ಗೇಜ್ ಕಡಿಮೆಯೂ ಹಗೂರವೂ ಆಗಿತ್ತು. ಬರುಬರುತ್ತಾ ನಮ್ಮಗಳ ಆಸಕ್ತಿಯ ವಿಷಯಗಳು, ಬಯಕೆಗಳ ಭಾರವು ಹೆಚ್ಚಾಗತೊಡಗಿತು. ಹೊತ್ತು ನಡೆಯಲಾರದಷ್ಟು ಹೊರೆಯೆನಿಸಿತು. ಅದರ ಜೊತೆಜೊತೆಯಲ್ಲಿ ತಾನು ಎಂಬ ಈರ್ಷೇಯೂ ಪುಟಿಯತೊಡಗಿತು.

ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದುನಾಲ್ಕು ದಿನದ ಈ ಬದುಕಿನಲಿ ಸಮಾಜದಲ್ಲಿ ತಾನು ಹಾಗೂ ತನ್ನನ್ನು ಗುರುತಿಸಬೇಕು; ತನ್ನಿಂದನೇ ಎಲ್ಲ ಆಗಿದೆ ಎಂದು ಹೇಳಬೇಕು, ಅಧಿಕಾರ ನಮ್ಮ ಬಗಲಲ್ಲೇ ಇರಬೇಕು ಎಂಬ ಹಪಾಹಪಿತನ ನಮ್ಮನ್ನು ನೈತಿಕ ದಿವಾಳಿಯತ್ತ ಕೊಂಡೊಯ್ಯತೊಡಗಿತು.

ತನ್ನ ದಂಡಯಾತ್ರೆಯ ಹಾದಿಯಲ್ಲಿ ಯಾರೆಲ್ಲ ತನ್ನ ವಿರುದ್ಧವೋ ಅವರನ್ನೆಲ್ಲರನ್ನೂ ಬದಿಗೆ ಸರಿಸುತ್ತಾ ಸಾಗತೊಡಗಿದ. ತಾನು ಮತ್ತು ತನ್ನದು ಮಾತ್ರ ಸರಿ ಎಂಬ ಸಂಕುಚಿತತೆಯ ಸರ್ವಾಧಿಕಾರಿ ಮನೋಭಾವ ಬೆಳೆಯತೊಡಗಿತು. ಇದಕ್ಕೆ ವಿರುದ್ಧವಾಗಿ ಇರುವವರನ್ನೆಲ್ಲ ಹೆದರಿಸುತ್ತಾ, ಅಪಪ್ರಚಾರ ಮಾಡುತ್ತ ತನ್ನವರ ಎದುರು ಶತ್ರುಗಳು ಎಂಬಂತೆ ಬಿಂಬಿಸತೊಡಗಿದರು.

ಊರು ಕೇರಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದಲ್ಲಿ ಏನೇ ಆದರೂ ಅದನ್ನು ಚರ್ವಿತಚವರ್ಣವಾಗಿ ಶೃಂಗರಿಸಿ ಜನರನ್ನು ತಪ್ಪು ದಾರಿಗೆ ಎಳೆಯತೊಡಗಿದರು. ಅಲ್ಪಮತಿಗಳಾದ ನಾವು ಪೂರ್ವಗ್ರಹ ಪೀಡಿತರಾಗಿ ಯಾವುದು ಸರಿ ಯಾವುದು ತಪ್ಪು ಎಂದು ವಿಮರ್ಶಿಸದೇ ಅದನ್ನೇ ಸತ್ಯವೆಂದು ನಂಬತೊಡಗಿದೆವು. ಯಾವುದೇ ವಿಷಯಗಳನ್ನು ಪೂರ್ವಾಪರ ವಿಮರ್ಶಿಸದೇ ಯಾರ ಬಗ್ಗೆಯಾಗಲಿ ಹಗುರವಾಗಿ ಮಾತನಾಡುವುದಾಗಲಿ; ಅವರ ಬಗ್ಗೆ ತಪ್ಪಾಗಿ ವದಂತಿಗಳಾಗಲಿ; ಮಾಹಿತಿಗಳಾಗಲಿ ಪಸರಿಸಬಾರದು.

ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ ನಮ್ಮ.ಪೈಪೋಟಿ ಎಂದೂ ಆರೋಗ್ಯಕರವಾಗಿ ನಡೆಯಲಿ, ಸಮಾಜದ ಅಭಿವೃದ್ಧಿ ಪರವಾಗಿರಲಿ. ಬರೀ ಹೆಸರು ಮಾಡಲಷ್ಟೇ ಸೀಮಿತವಾಗದಿರಲಿ. ತಾನು ಕಳ್ಳ ಪರರ ನಂಬ ಎಂಬಂತೆ ಎಲ್ಲದರಲ್ಲೂ, ಎಲ್ಲರಲ್ಲೂ ಹುಳುಕು ಹುಡುಕಲೇ ಬೇಕಿಲ್ಲ. ಪ್ರತೀ ವ್ಯಕ್ತಿ, ಪ್ರತಿ ಮಾತು, ಪ್ರತೀ ನಡೆ, ಪ್ರತೀ ಫೋಟೋ, ಪ್ರತೀ ಕೆಲಸಗಳನ್ನು ಪಕ್ಷ; ರಾಜಕೀಯ ಎಂದು ಬಿಂಬಿಸಿ ಹೊಲಸುಗೊಳಿಸಬೇಡಿ. ಬಸವಣ್ಣನವರ ಮಾತಂತೆ ‘ಲೋಕದ ಡೊಂಕು ನೀವೇಕೆ ತಿದ್ದುವಿರಿ’? ಸಮಯ ಬಂದಾಗ ಸತ್ಯದ ಅನಾವರಣಗೊಳ್ಳುತ್ತದೆ ಅಂತೆಯೇ ಅದನ್ನು ಒಪ್ಪಕೊಳ್ಳುವ ಛಾತಿ ಇರಬೇಕಷ್ಟೇ.

“ನಗ್ನ ಸತ್ಯ”:- ಇತ್ತೀಚೆಗೆ ಎಲ್ಲ ಕಡೆ ಕಲ್ಲು ಹಾಕುವವರೇ ಹೆಚ್ಚಾಗಿದ್ದಾರೆ ಆದರೆ ವ್ಯವಸ್ಥಿತವಾಗಿ ಹಾಕಲಿ ಎಂಬುವುದೇ ಆಶಯ.

ನಾ_ಅಭಿಸಾರಿಕೆ

Share This Article
Leave a Comment