ಆಷಾಡ ಅಮಾವಾಸ್ಯೆಯ ಚಿಣಿಕಾರ

kundapuradotcom@gmail.com
4 Min Read

ಎಳೆರಣ್ಣ ಎಳೆರೋ ದಿಮ್ಸೋಲ್ ಚಿಣಿಕಾರ ಬಂದಾನೋ ದಿಮ್ಸೋಲ್ ಇದು ಗಂಗೊಳ್ಳಿ ಕಡಲ ಕಿನಾರೆಯಲ್ಲಿ ಕೈರಂಪಣಿ ಬಲೆ ಎಳೆಯುವಾಗ ಮೀನುಗಾರರು ಹಾಡುತ್ತಿದ್ದ ಹಾಡಿನ ಸೊಲ್ಲು ಹಾಗಾದರೆ ಈ ಚಿಣಿಕಾರ ಯಾರು ಏಲಿಯನ್ಸಗಳಿಗೂ ಸಂಬಂಧ ಇರಬಹುದೇ ಎಂಬ ಜಿಜ್ಞಾಸೆಯೊಂದಿಗೆ ಇಲ್ಲಿ ಕೂತೂಹಲಕಾರಿ ವಿಷಯಗಳು ಪ್ರಸ್ತುತಗೊಳ್ಳಲಿದೆ.

ನನ್ನ ಅಜ್ಜನಾದ ಗಂಗೊಳ್ಳಿ ಯಾರ್ಡ್ ಕೃಷ್ಣ ಖಾರ್ವಿ ಸಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕಂಪನಿ ಸರ್ಕಾರದ ಉಪ್ಪಿನ ಸಂಗ್ರಹಣಾ ಗೋದಾಮಿನಲ್ಲಿ ಕಾರಕೂನನಾಗಿ ಕೆಲಸ ಮಾಡುತ್ತಿದ್ದರು ಈ ಉಪ್ಪಿನ ಗೋದಾಮನ್ನು ಯಾರ್ಡ್ ಎಂದು ಕರೆಯಲಾಗುತ್ತಿತ್ತು ಹಾಗಾಗಿ ಅಜ್ಜನಿಗೆ ಯಾರ್ಡ್ ಕೃಷ್ಣ ಖಾರ್ವಿ ಎಂದು ಹೆಸರು ಖಾಯಂ ಆಯಿತು ಆಗಿನ ಕಾಲದಲ್ಲಿ ಉಪ್ಪನ್ನು ಸರ್ಕಾರದ ಸುರ್ಪದಿಯಲ್ಲಿ ತಯಾರಿಸಲಾಗುತ್ತಿತ್ತು ಖಾಸಗಿಯವರಿಗೆ ಅನುಮತಿ ಇರಲಿಲ್ಲ ಸಾಮಾನ್ಯ ವಾಗಿ ಮಳೆಗಾಲದಲ್ಲಿ ಅಜ್ಜ ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವಾಗ ತುಂಬಾ ಹೆದರುತ್ತಿದ್ದರು ಗಂಗೊಳ್ಳಿ ಬಂದರು ಪ್ರದೇಶದಲ್ಲಿದ್ದ ಉಪ್ಪಿನ ಗೋದಾಮಿಗೂ ಜವುಗು ಪ್ರದೇಶದ ಕೆರೆಯ ಉತ್ತರ ದಿಕ್ಕಿನಲ್ಲಿ ಇರುವ ಮನೆಗೂ ಹೆಚ್ಚು ದೂರವಿಲ್ಲದಿದ್ದರೂ ಅಜ್ಜ ಸುತ್ತು ಬಳಸಿ ರಾಮರಾಯ ಕಾಮ್ತಿಗಳ ಮನೆಯ ಪ್ರದೇಶದಿಂದ ಮನೆಗೆ ಬರುತ್ತಿದ್ದರು ಹಾಗೆ ಬರಲು ಮುಖ್ಯ ಕಾರಣ ಚಿಣಿಕಾರರ ಭಯ ಸಮುದ್ರ ಮರಳಿನ ಬಂದರು ಪ್ರದೇಶದಿಂದ ಮಳೆಗಾಲದ ರಾತ್ರಿ ವೇಳೆ ನಡೆದುಕೊಂಡು ಬರುವಾಗ ಚಿಣಿಕಾರರು ಅಜ್ಜನನ್ನು ಅಟ್ಟಿಸಿಕೊಂಡು ಬಂದ ಉದಾಹರಣೆಗಳು ಉಂಟಂತೆ.

ಪ್ರತೀತಿಗಳ ಪ್ರಕಾರ ಚಿಣಿಕಾರರು ಆಕಾಶ ಮಾರ್ಗ ವಾಗಿ ಭೂಮಿಗೆ ಬರುತ್ತಿದ್ದರು ಮಳೆಗಾಲದ ಆಷಾಡ ಅಮಾವಾಸ್ಯೆ ದಿನ ಆಕಾಶದಿಂದ ಇಳಿದು ಬರುವ ಚಿಣಿಕಾರರು ಮಳೆಗಾಲ ಮುಗಿಯುವ ತನಕ ಗಂಗೊಳ್ಳಿ ಕುಂದಾಪುರ ತ್ರಾಸಿ, ಬಬ್ಬುಕುದ್ರು ಮುಂತಾದ ಕಡೆ ವಾಸ್ತ್ಯವಿಸಿಕೊಳ್ಳುತ್ತಿದ್ದರು ಈ ಚಿಣಿಕಾರರ ಮುಖ್ಯ ವಾಸ್ತ್ಯವ ಕೇಂದ್ರ ಬಬ್ಬುಕುದ್ರು ಆಗಿತ್ತು.

ಹಗಲಿಡಿ ಬಬ್ಬುಕುದ್ರು ವಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಈ ಚಿಣಿಕಾರರು ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದರು ಮಳೆಗಾಲ ಮುಗಿದ ಬಳಿಕ ಚಿಣಿಕಾರರು ಆಕಾಶ ಮಾರ್ಗ ವಾಗಿ ತಮ್ಮ ಲೋಕಕ್ಕೆ ವಾಪಸ್ಸು ಹೋಗುತ್ತಿದ್ದವು ಅವರು ಭೂಮಿಗೆ ಬಂದು ಹೋಗಲು ವಿಶಿಷ್ಟ ರೀತಿಯ ಪೆಟ್ಟಿಗೆ ಮಾದರಿಯ ಯಂತ್ರವನ್ನು ಬಳಸುತ್ತಿದ್ದರು ಭಜನಾ ಪ್ರಿಯರಾದ ನನ್ನ ಅಜ್ಜ ತನ್ನ ಸಮವಯಸ್ಕರ ಭಜನಾ ಮಂಡಳಿಯೊಂದನ್ನು ಕಟ್ಟಿ ಕೊಂಡು ಹೋಗುತ್ತಿದ್ದರು ಒಂದು ಸಲ ಕಿರಿಮಂಜೇಶ್ವರದಲ್ಲಿ ಭಜನೆ ಮುಗಿಸಿ ವಾಪಾಸು ನಡೆದುಕೊಂಡು ಗಂಗೊಳ್ಳಿಗೆ ಬರುವಾಗ ದಾರಿ ಮಧ್ಯೆ ತ್ರಾಸಿ ಕಡಲ ಕಿನಾರೆಯಲ್ಲಿ ಚಿಣಿಕಾರರ ಗುಂಪೊಂದು ನೃತ್ಯ ದಲ್ಲಿ ತಲ್ಲೀನವಾಗಿತ್ತು ಅವರ ಕೈ ವಿದ್ಯುತ್ ದೀಪಗಳಿಗಿಂತಲೂ ಪ್ರಕಾಶಮಾನವಾಗಿ ಕಣ್ಣು ಗಳಿಗೆ ಕೋರೈಸುತ್ತಿತ್ತು ಭಯಗೊಂಡ ನನ್ನ ಅಜ್ಜನ ಭಜನಾ ತಂಡ ದಾರಿ ಬದಿಯ ಕ್ರೈಸ್ತ ಸಮುದಾಯದ ವ್ಯಕ್ತಿ ಯೊಬ್ಬನ ಮನೆಯಲ್ಲಿ ಆಶ್ರಯ ಪಡೆದಿತ್ತು.

ಇನ್ನೊಮ್ಮೆ ಬಸ್ರೂರಿನಲ್ಲಿ ಭಜನೆ ಮುಗಿಸಿ ದೋಣಿಯಲ್ಲಿ ಗಂಗೊಳ್ಳಿ ಬರುವಾಗ ದಾರಿ ಮಧ್ಯೆ ಚಿಣಿಕಾರರ ಬಗ್ಗೆ ಭಜನಾ ತಂಡದ ಸದಸ್ಯ ನೊಬ್ಬ ಕೆಟ್ಟ ದಾಗಿ ಮಾತನಾಡಿದ ಪರಿಣಾಮ ಚಿಣಿಕಾರರ ಗುಂಪು ರಾತ್ರಿ ವೇಳೆ ಅಜ್ಜನ ದೋಣಿಯನ್ನು ಸುತ್ತು ವರಿದಿತ್ತು ಭಯಭೀತರಾದ ಅಜ್ಜನ ಭಜನಾ ತಂಡ ಅಂಗಾತವಾಗಿ ದೇವರ ನಾಮ ಸ್ಮರಣೆ ಮಾಡುತ್ತಾ ದೋಣಿಯಲ್ಲಿ ಮಲಗಿ ಬಿಟ್ಟಿತ್ತು ಚಿಣಿಕಾರರು ಎಷ್ಟು ಹೊತ್ತಿಗೆ ಅವರ ದೋಣಿಯನ್ನು ಬಿಟ್ಟು ಹೋಯಿತು ಗೊತ್ತಿಲ್ಲ ಅವರೆಲ್ಲರೂ ಕಣ್ಣು ತೆರೆದು ನೋಡಿದಾಗ ದೋಣಿ ಕೋಡಿಯ ಹೀನ್ನೀರು ಪ್ರದೇಶದಲ್ಲಿತ್ತು ಹೀಗೆ ಅಜ್ಜ ಚಿಣಿಕಾರರ ಬಗ್ಗೆ ನಮಗೆ ಕಥೆ ಹೇಳುವಾಗ ಭಯಭೀತರಾಗುತ್ತಿದ್ದೆವು ಆದರೆ ಕಾಲಕ್ರಮೇಣ ದೊಡ್ಡವರಾದಂತೆ ಅಂಥ ಕಥೆಗಳೆಲ್ಲ ಅಜ್ಜ ಕಾಗೆ ಹಾರಿಸುತ್ತಿದ್ದ ಕಟ್ಟುಕಥೆಗಳೆಂಬ ಅಭಿಪ್ರಾಯ ಪಡುತ್ತಿದ್ದೆವು ಏಲಿಯನ್ಸಗಳೆಂದು ಕರೆಯಲ್ಪಡುವ ಅನ್ಯಗ್ರಹ ಜೀವಿಗಳ ಬಗ್ಗೆ ಅನೇಕ ಕಥೆ ಊಹಾಪೋಹಗಳನ್ನು ಗಮನಿಸಿದಾಗ ಅಜ್ಜ ಹೇಳುತ್ತಿದ್ದ ಚಿಣಿಕಾರರೇ ಏಲಿಯನ್ಸಗಳು ಆಗಿರಬಹುದು ಎಂದು ಮನಸ್ಸಿನಲ್ಲಿ ಜಿಜ್ಞಾಸೆ ಉಂಟಾಗುತ್ತದೆ.

ಅಜ್ಜ ಹೇಳುತ್ತಿದ್ದ ಹಾಗೆ ಚಿಣಿಕಾರರ ಕೈಯಲ್ಲಿ ಹೊಳೆಯುವ ವಿದ್ಯುತ್ ದೀಪಗಳ ಬೆಳಕು ಆಕಾಶ ಮಾರ್ಗ ದಿಂದ ಬರುವಾಗ ಅವರು ಉಪಯೋಗಿಸುತ್ತಿದ್ದ ಪೆಟ್ಟಿಗೆ ಆಕಾರದ ವಾಹನ ಇತ್ಯಾದಿ ಒಂದಕ್ಕೊಂದು ಪರಸ್ಪರ ತಾಳೆಯಾಗುವುದರಿಂದ ಚಿಣಿಕಾರರೇ ಏಲಿಯನ್ಸಗಳು ಎಂದು ಅಭಿಪ್ರಾಯಪಟ್ಟರೆ ಅದರಲ್ಲಿ ಉಪೇಕ್ಷೆಯೇನಿಲ್ಲ. ಜಗತ್ತು ಏಲಿಯನ್ಸ್ ಗಳ ಇರುವಿಕೆ ಅವರು ಉಪಯೋಗಿಸುವ ಹಾರುವ ತಟ್ಟೆಯ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸುತ್ತಿದೆ ಆದರೆ ಇದುವರೆಗೂ ಊಹಾಪೋಹ ಬಿಟ್ಟರೆ ನಿಖರವಾಗಿ ಏಲಿಯನ್ಸ್ಗಳ ಬಗ್ಗೆ ಮಾಹಿತಿ ಸ್ಪಷ್ಟ ವಾಗಿ ತಿಳಿದುಬಂದಿಲ್ಲ.

ಕೊಂಕಣಿ ಭಾಷೆಯಲ್ಲಿ ಚಿನ್ಬೂತ್ ಎಂದು ಕರೆಯಲ್ಪಡುತ್ತಿದ್ದ ಚಿಣಿಕಾರರು ಸೂಕ್ಷ್ಮ ಜೀವಿಗಳಾಗಿದ್ದು ಮಳೆಗಾಲದ ನೆರೆ ನೀರಿನಲ್ಲಿ ಕಸಕಡ್ಡಿ, ಉಂಡಿ ಪೋಳ್, ಮಮ್ಮಾಯಿ ದೇವ್ ಕಾಡುಜಾತಿಯ ಮರದ ಸಣ್ಣಪುಟ್ಟ ಹಣ್ಣುಗಳ ಜೊತೆಗೆ ವಿಶಿಷ್ಟ ಜಾತಿಯ ಎಲೆಯೊಂದು ತೇಲಿ ಬರುತ್ತಿತ್ತು ಈ ಎಲೆಯನ್ನೇ ಚಿಣಿಕಾರರು ಸಮುದ್ರ ಮತ್ತು ನದಿನೀರಿನಲ್ಲಿ ಸಂಚರಿಸಲು ದೋಣಿಯನ್ನಾಗಿ ಬಳಸುತ್ತಿದ್ದರು ಎಂಬ ಜನಜನಿತವಾದ ನಂಬಿಕೆ ಮನೆಮಾಡಿತ್ತು ಹಾಗಾಗಿ ನದಿ ಅಥವಾ ಸಮುದ್ರದ ತೀರ ಪ್ರದೇಶದಲ್ಲಿ ಕಂಡುಬರುತ್ತಿದ್ದ ಈ ಎಲೆಗಳನ್ನು ಕಂಡರೆ ಜನ ಚಿಣಿಕಾರನನ್ನು ನೆನಪಿಸಿಕೊಂಡು ಹೆದರುತ್ತಿದ್ದರು.

ಚಿಣಿಕಾರರ ಬಗ್ಗೆ ಮತ್ತೊಂದು ಮಾಹಿತಿಯೆಂದರೆ ಕುಂದಾಪುರ ಹೇರಿಕುದ್ರು ದೈವಸ್ಥಾನದಲ್ಲಿ ಚಿಣಿಕಾರನನ್ನು ಕಟ್ಟಿಹಾಕಲಾಗಿ ಬಂಧಿಸಲಾಗಿತ್ತು ಕಟ್ಟಿ ಹಾಕಿ ಬಂಧಿಸಲಾದ ಸ್ಥಿತಿಯಲ್ಲಿ ಅಲ್ಲಿ ಚಿಣಿಕಾರನ ಮೂರ್ತಿ ಇದೆ ಜನರಿಗೆ ತೊಂದರೆ ನೀಡುತ್ತಿದ್ದ ಚಿಣಿಕಾರನನ್ನು ದೈವಗಳೇ ಬಂಧಿಸಿ ಕಟ್ಟಿ ಹಾಕಿದ್ದು ಎಂಬ ಪ್ರತೀತಿ ಇದೆ. ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮಾತ್ರ ಏಲಿಯನ್ಸ್ ಗಳು ಇರುವಿಕೆಯನ್ನು ದೃಡಪಡಿಸಿದ್ದಾರೆ ಅವರ ತಂಟೆಗೆ ಹೋಗದಂತೆ ಮನುಕುಲವನ್ನು ಎಚ್ಚರಿಸಿರುತ್ತಾರೆ ವಿಸ್ಮಯಗಳ ಆಗರವಾದ ಈ ಜಗತ್ತಿನ ವಿಷಯಗಳನ್ನು ಕೆದುಕುತ್ತಾ ಹೋದರೆ ಅದಕ್ಕೆ ಅಂತ್ಯ ವೆಂಬುದೇ ಇಲ್ಲ ನಮ್ಮ ವಿಚಾರ ಶಕ್ತಿಗಳನ್ನು ಉದ್ದೀಪನಗೊಳಿಸುವ ಕೌತುಕದ ಅನೇಕ ವಸ್ತು ವಿಷಯಗಳು ನಮ್ಮ ಮನಸ್ಸನ್ನು ಮಥಿಸುತ್ತಲೇ ಇರುತ್ತದೆ ಮಳೆಗಾಲದ ಆಷಾಡ ಅಮಾವಾಸ್ಯೆ ಬಂದಾಗ ಚಿಣಿಕಾರರ ನೆನಪು ಇನ್ನಿಲ್ಲದಂತೆ ನಮ್ಮನ್ನು ಕಾಡುತ್ತದೆ.

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment