ನನ್ನ ಬಾಲ್ಯದ ದಿನಗಳು!!

kundapuradotcom@gmail.com
2 Min Read

ನಾನಿನ್ನು ಪ್ರಾಥಮಿಕ ಹಂತದ ಶಿಕ್ಷಣದಲ್ಲಿದ್ದೆ. ಆಗಲೇ ನನ್ನೊಂದಿಗೆ ನಾಲ್ಕೈದು ಸ್ನೇಹಿತರ ದಂಡು. ಎಲ್ಲಿಗಾದರೂ ಹೋಗೋದಾದ್ರೆ ಒಟ್ಟಿಗೆ ಹೋಗ್ತಾ ಇದ್ವಿ. ಒಟ್ಟಿಗೆ ಬರ್ತಾ ಇದ್ವಿ. ಸುತ್ತ ಮುತ್ತಲ್ಲಿ ಎಲ್ಲಾದರೂ ಯಕ್ಷಗಾನ ನಡೆದರೆ ಎಂಟು ಗಂಟೆಗೆ ಸರಿಯಾಗಿ ಎಲ್ಲರೂ ಒಟ್ಟಿಗೆ ಸೇರಿ ಹೊರಡಲು ರೆಡಿ. ಹಾಗೆ ಒಂದು ದಿನ ಹತ್ತಿರದ ಹಳ್ಳಿಯಲ್ಲಿ ಯಕ್ಷಗಾನ ಬಯಲಾಟ ಇದ್ದಿತ್ತು. ಎಂದಿನಂತೆ ನಾವೆಲ್ಲರೂ ಹೊರಡಲು ತೀರ್ಮಾನಿಸಿದೆವು. ಹೊರಡುವ ಮುಂಚೆ ಒಂದು ಪ್ಯಾಕೆಟ್ ಬೀಡಿ ತೆಗೆದುಕೊಂಡೆವು. ಕತ್ತಲೆಯಾಗಿತ್ತು, ರಸ್ತೆಯಲ್ಲಿ ಯಾರು ಇಲ್ಲದಿರುವುದನ್ನು ಖಾತರಿಪಡಿಸಿಕೊಂಡೆವು.

ನನ್ನೊಂದಿಗಿದ್ದ ಒಬ್ಬ ಸ್ನೇಹಿತ ರಸ್ತೆಯ ಮಧ್ಯ ಭಾಗದಲ್ಲಿ ಮೂತ್ರ ಮಾಡುತ್ತ ಅದರಲ್ಲಿ ಚಿತ್ರ ಬಿಡಿಸುತ್ತಿದ್ದ. ಬೀದಿ ದೀಪಗಳಿಂದ ಥಾರ್ ರಸ್ತೆಯ ಮೂತ್ರದ ಚಿತ್ರ ಕಂಡು ನಕ್ಕು ಬಿಟ್ಟೆವು. ಎಂಥ ಹುಚ್ಚು ಚೇಷ್ಟೆ ನಮ್ಮದು . ಇನ್ನೊಬ್ಬ ನಿಧಾನವಾಗಿ ಜೇಬಿನಿಂದ ಬೀಡಿ ಹಾಗು ಬೆಂಕಿ ಪೊಟ್ಟಣ ತೆಗೆದು ಬೀಡಿ ಹಚ್ಚತೊಡಗಿದ. ಎಲ್ಲರೂ ತೆಗೆದುಕೊಂಡರು. ನಾನು ಒಂದು ಬೀಡಿ ತೆಗೆದುಕೊಂಡು ಕುತೂಹಲದಿಂದ ಹಚ್ಚಿದೆ. ಒಂದೇ ಒಂದು ದಮ್ ಎಳೆದಿದ್ದು. ತುಟಿಯಂಚಿಗೆ ಬೀಡಿಯ ಮೊದಲ ಸ್ಪರ್ಶ. ಏನೋ ಒಂಥರಾ ಆಯ್ತು. ಮನಸ್ಸಿಗೆ ಖುಷಿನೋ ಘಾಸಿನೋ ಗೊತ್ತಿರದ ವಯಸ್ಸದು. ಎಲ್ಲರೂ ಆನಂದಿಸುತ್ತಿದ್ದರು. ಆ ಮೊದಲ ಅನುಭವ ನನ್ನಲ್ಲೇನು ಹೊಸತನ್ನೇನು ಸ್ರಷ್ಟಿಸದಿದ್ದರು ಜೊತೆ ಇರುವ ಗೆಳೆಯರ ಖುಷಿ ಇದರಲ್ಲೇನೋ ಹೊಸತಿದೆ ಎನ್ನುವುದನ್ನು ಮನಸ್ಸಿಗೆ ಹೇಳುತಿತ್ತು. ನಾನು ಅವರ ಜೊತೆ ಒಂದಾಗುವಷ್ಟರಲ್ಲಿ ಹಿಂದಿನಿಂದ ಸೈಕಲ್ ತುಳಿಯುತ್ತ ಒಬ್ಬ ಮನುಷ್ಯ ಬಂದ. ಅವನು ಯಾವಾಗಲು ತುಂಬಾ ಕುಡಿಯುತ್ತಿದ್ದ. ಆ ದಿನವೂ ಕುಡಿದಿದ್ದ. ಆದರು ಸೈಕಲ್ ಸರಿಯಾಗಿಯೇ ತುಳಿದುಕೊಂಡು ತನ್ನಷ್ಟಕ್ಕೆ ತಾನು ಹಾಡುತ್ತಾ ಮಾತನಾಡುತ್ತ ಮನೆಗೆ ಹೋಗೋದು ಪ್ರತಿ ಸಂಜೆಯ ಅವನ ಕಾಯಕ. ಹಾಗೆ ಬಂದವನು ನಮ್ಮ ಬಳಿ ಬಂದು ಸೈಕಲ್ ನಿಂದ ಇಳಿದು ನಮ್ಮನ್ನು ನೋಡಿದ. ಅಷ್ಟರಲ್ಲಾಗಲೇ ನಮ್ಮ ಕೈಯಲ್ಲಿನ ಬೀಡಿ ಬಿಸಾಡಿ ಆಗಿತ್ತು. ಆದರೆ ಹೊಗೆ ಮಾತ್ರ ಬಾಯಿಯ ಒಳಗೆಯೇ ಉಳಿದು ಬಿಟ್ಟಿತ್ತು. ಎಷ್ಟೊತ್ತು ಅಂತ ಅದನ್ನು ತಡೆದುಕೋ ಬಹುದು. ಆಗಲಿಲ್ಲ.. ಹೊರಗೆ ಬಂದೆ ಬಿಟ್ಟಿತು ಹೊಗೆ. ಅವನಿಗೆ ಮೊದಲೇ ಸಂಶಯ ಬಂದಿತ್ತು, ಹಾಗಾಗಿ ಹೊಗೆ ಕಾಣಿಸುವವರೆಗೂ ಕಾದಿದ್ದು ಸುಪ್ರಭಾತ ಪ್ರಾರಂಭಿಸಿದ್ದ. ಚೆನ್ನಾಗಿ ಬೈಗುಳದ ಮಳೆಗರೆದ. ಮನೆಯಲ್ಲಿ ತಂದೆ ತಾಯಿ ಕಷ್ಟ ಪಟ್ಟು ದುಡಿದು ಓದಿಸಿದ್ರೆ ನೀವುಗಳು ಈಗಲೇ ಕೆಟ್ಟ ಅಭ್ಯಾಸ ಮಾಡ್ತಿದ್ದೀರಾ ಅಂತ ಚೆನ್ನಾಗಿ ಬೈದ. ಹೀಗೆ ಬೀಡಿ ಸೇದಿದ್ರೆ ನಾಳೆ ನೀವು ಮಾಡುವ ಉಚ್ಚೆನಲ್ಲಿ ನೀರು ಹೋಗದೆ ರಕ್ತ ಹೋಗುತ್ತೆ ಎಂದು ಹೊಡೆಯಲು ಮುಂದಾದ. ನಾವೆಲ್ಲಾ ಅಲ್ಲಿಂದ ಒಂದೇ ಸಮನೆ ಓಟ ಕಿತ್ತೆವು.

ಕುಡುಕನಾದ್ರು ಅವನಲ್ಲಿ ನಮ್ಮ ಬಗ್ಗೆ ಅಂದ್ರೆ ಬೆಳೆಯುವ ಮಕ್ಕಳ ಬಗ್ಗೆ ಇದ್ದ ಒಳ್ಳೆಯ ಕಾಳಜಿ ನಾನಿನ್ನು ಮರೆತಿಲ್ಲ ಗೆಳೆಯರೆ. ಯಾರಾದರೂ ನನ್ನ ಬಳಿ ಧೂಮಪಾನ ಮಾಡುತ್ತಿದ್ದರೆ ನನಗೆ ತಕ್ಷಣವೇ ಅವರದ್ದೇ ನೆನಪಾಗುವಷ್ಟು ಆ ಕುಡುಕ ದೇವರಾಗಿ ನನ್ನ ಕಣ್ಣಲ್ಲಿ ಕಾಣುತ್ತಾರೆ. ಅವರ ಹೆಸರು ಗೊತ್ತಿಲ್ಲ. ಆದರೆ ಅವರ ಕಾಳಜಿ ಗೊತ್ತು. ಇಷ್ಟೆಲ್ಲಾ ಕಾಳಜಿ ಇರುವ ಆ ವ್ಯಕ್ತಿ ದಿನವೂ ಕುಡಿಯುವ ಚಟಕ್ಕೆ ಬಿದ್ದಿರುವುದು ಮಾತ್ರ ಬೇಸರ. ಹಾಗೇನೆ ಅದೇ ಮೊದಲು ಅದೇ ಕೊನೆ ನನ್ನ ಬದುಕಿನಲ್ಲಿ ಧೂಮಪಾನ ಇಲ್ಲವೇ ಇಲ್ಲ !!

ಮಂಜುನಾಥ್ ನೇರಳಕಟ್ಟೆ, ಕೆನಡಾ

Share This Article
Leave a Comment