ಪೂರ್ವದಲ್ಲಿ ಪಶ್ಚಿಮ ಘಟ್ಟಗಳ ಸಾಲು,ಪಶ್ಚಿಮದಲ್ಲಿ ಅರಬ್ಬೀ ಸಮುದ್ರ,ನಡುಮಧ್ಯೆ ವಾರಾಹಿ,ಸೌಪರ್ಣಿಕಾ,ಚಕ್ರಾ,ಕುಬ್ಜಾ ಮತ್ತು ಖೇಟಕಾ ನದಿಗಳ ಸಂಗಮದಿಂದ ಪಂಚಗಂಗಾವಳಿ ಎಂದು ಕರೆಸಿಕೊಂಡ ಪವಿತ್ರ ನದಿಯ ತಟದಲ್ಲಿ ವಿರಾಜಮಾನವಾಗಿದೆ ಕುಂದಾಪುರ. ಕುಂದವರ್ಮ ರಾಜನಿಂದ ನಿರ್ಮಿಸಲ್ಪಟ್ಟ ಕುಂದಾಪುರ ಬದಲಾದ ಕಾಲಘಟ್ಟದಲ್ಲಿ ಹಲವು ಸ್ಥಿತ್ಯಂತರಗಳನ್ನು ಕಂಡಿದ್ದು,ಪ್ರಥಮ , ಅಂತ್ಯಗಳ ಪರಿಗಣನೆಯಲ್ಲಿ ಕುಂದಾಪುರದಲ್ಲಿ ಪ್ರಥಮವಾಗಿ ಸ್ಥಾಪನೆಗೊಂಡ,ಹೋಟೆಲ್ ಗಳು, ಟಾಕೀಸ್, ಸ್ಟುಡಿಯೋ, ವಸತಿ ಗೃಹ, ಪ್ರಿಂಟಿಂಗ್ ಪ್ರೆಸ್, ಪತ್ರಿಕೆ, ಪೆಟ್ರೋಲ್ ಬಂಕ್, ಸಾರಿಗೆ ವ್ಯವಸ್ಥೆ ಮುಂತಾದವುಗಳನ್ನು ಇಲ್ಲಿ ಒಂದೊಂದಾಗಿ ಅವಲೋಕಿಸೋಣ.
ಪ್ರಥಮ ಟಾಕೀಸ್
ಮೊದಲು ಕುಂದಾಪುರದಲ್ಲಿ ಟೂರಿಂಗ್ ಟಾಕೀಸ್ ಗಳಲ್ಲಿ ಸಿನಿಮಾಗಳು ಪ್ರದರ್ಶಿತಗೊಳ್ಳುತ್ತಿದ್ದವು.ಆಮೇಲೆ ಟೆಂಟ್ ಗಳಲ್ಲಿ,ಹುಲ್ಲು ಮಾಡಿನಲ್ಲಿ ಸಿನಿಮಾಗಳ ಸರದಿ.ನಂತರ 1957 ರಲ್ಲಿ ದಿ.ಗಣಪತಿ ಶೇಟ್ ರವರು ಪೂರ್ಣಿಮಾ ಟಾಕೀಸ್ ನ್ನು ಕಟ್ಟಿಸಿದರು.ತದ ನಂತರ ಗೀತಾಂಜಲಿ ಟಾಕೀಸ್ ಪ್ರಾರಂಭವಾಯಿತು ಈಗ ಇವೆರಡೂ ಟಾಕೀಸ್ ಗಳು ಕೇವಲ ನೆನಪು ಮಾತ್ರ.
ಪ್ರಥಮ ಖಾಸಗಿ ಆಸ್ಪತ್ರೆ
ಕುಂದಾಪುರದ ಪ್ರಥಮ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾರಿಜಾತದ ಬಳಿ ಇರುವ ವಿನಯ ಆಸ್ಪತ್ರೆ ಪಾತ್ರವಾಗಿದೆ.ಅಲ್ಲಲ್ಲಿ ಸಣ್ಣಪುಟ್ಟ ಡಾಕ್ಟರ್ ಗಳು,ನಾಟಿ ವೈದ್ಯರು ಸಣ್ಣ ಸಣ್ಣ ಕ್ಲಿನಿಕ್ ಹಾಕಿಕೊಂಡಿದ್ದು ಬಿಟ್ಟರೆ ವ್ಯವಸ್ಥಿತವಾದ ಖಾಸಗಿ ಆಸ್ಪತ್ರೆ ಇರಲಿಲ್ಲ
ವಿನಯ ಆಸ್ಪತ್ರೆ ಆ ಕೊರತೆ ನೀಗಿಸಿ ಅದೆಷ್ಟೋ ರೋಗಿಗಳ ಪಾಲಿಗೆ ವರದಾನವಾಯಿತು ಈ ಆಸ್ಪತ್ರೆ ಕುಂದಾಪುರದ ಪ್ರಥಮ ಕಾಂಕ್ರೀಟ್ ಕಟ್ಟಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ
ಮನೆಯ ಗೃಹ ಪ್ರವೇಶವಾಗಲಿ,ಮದುವೆಯ ಶುಭಕಾರ್ಯವಾಗಿರಲಿ,ದೇವರ ಕೆಲಸವಿರಲಿ ಮೊದಲ ದಿನ ಸಂಜೆ ಶುಕ್ಲಭರಧರಂ ಶಶಿವರ್ಣಂ ಶ್ಲೋಕದೊಂದಿಗೆ ಪ್ರಾರಂಭವಾಗುವ ಗಜಮುಖನೇ ಗಣಪತಿಯೇ ನಿನಗೆ ವಂದನೆ ಎಂಬ ಭಕ್ತಿಗೀತೆ ಮೈಕ್ ಸೆಟ್ ನಲ್ಲಿ ಕೇಳಿ ಬರುವ ಕಾಲವೊಂದಿತ್ತು.ಆ ಕಾಲದಲ್ಲಿ ಕುಂದಾಪುರದಲ್ಲಿ ರಾಮದಾಸ್ ಸೌಂಡ್ ಸಿಸ್ಟಮ್ ಏಕಮಾತ್ರ ಸೌಂಡ್ ಸಿಸ್ಟಮ್ ಆಗಿತ್ತು. ಅದು 1953 ರಲ್ಲಿ ಸ್ಥಾಪನೆಯಾಗಿತ್ತು.ಕೇವಲ ಮದುವೆ,ಗೃಹ ಪ್ರವೇಶ ಸಮಾರಂಭ ಮಾತ್ರವಲ್ಲ,ಚುನಾವಣಾ ಪ್ರಚಾರ ಕಾರ್ಯಕ್ಕೂ ರಾಮದಾಸ್ ಸೌಂಡ್ ಸಿಸ್ಟಮ್ ಪ್ರಸಿದ್ಧಿ ಪಡೆದಿತ್ತು.
ಪ್ರಥಮ ಬಸ್ಸು
ಕುಂದಾಪುರ ತಾಲೂಕಿನ ಪ್ರಥಮ ಬಸ್ಸು ಸಿ.ಪಿ.ಸಿ ಬಸ್ಸು.ಜನರ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿ ಸಿ.ಪಿ.ಸಿ ಸಾರಿಗೆ ಬಸ್ಸು ಜನಪ್ರಿಯವಾಗಿತ್ತು.ತದ ನಂತರ ಶಂಕರ್ ವಿಠಲ್ ಬಸ್ಸು ಪ್ರಾರಂಭವಾಯಿತು.90 ರ ದಶಕದ ಪ್ರಥಮಾರ್ಧ ತನಕವೂ ಇವೆರಡೂ ಬಸ್ಸು ವ್ಯವಸ್ಥೆ ಚಾಲ್ತಿಯಲ್ಲಿತ್ತು
ಪ್ರಪ್ರಥಮ ಪ್ರಥಮ ದರ್ಜೆ ಕಾಲೇಜು
1963 ರಲ್ಲಿ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ತರಗತಿಗಳ ಉದ್ಘಾಟನೆಯಾಗಿ,ಫೆಬ್ರವರಿ 20,1964 ರಂದು ಜಯಚಾಮರಾಜೇಂದ್ರ ಒಡೆಯರ್ ಕಟ್ಟಡದ ಉದ್ಘಾಟನೆ ನೇರವೇರಿಸಿದರು
ಪ್ರಥಮ ಬ್ಯಾಂಕ್, ವ್ಯವಸಾಯ ಮತ್ತು ಕೈಗಾರಿಕಾ ಬ್ಯಾಂಕ್ ಕುಂದಾಪುರದ ಪ್ರಥಮ ಬ್ಯಾಂಕ್ ಆಗಿತ್ತು.
ಪ್ರಥಮ ಪೆಟ್ರೋಲ್ ಬಂಕ್, ಸರಕಾರಿ ಆಸ್ಪತ್ರೆ ಬಳಿ ಇರುವ ಬರ್ಮಾ ಶೆಲ್ ಪ್ರಥಮ ಪೆಟ್ರೋಲ್ ಬಂಕ್
ಪ್ರಥಮ ಹಂಚಿನ ಕಾರ್ಖಾನೆ
ತೋಪಿ ಅವರ ಹೆಂಚಿನ ಕಾರ್ಖಾನೆ,ಮಂಗಳೂರು ಟೈಲ್ಸ್ ಪ್ರಪ್ರಥಮ ಹಂಚಿನ ಕಾರ್ಖಾನೆ.
ಪ್ರಥಮ ಊಟದ ಹೋಟೆಲ್, ಆನಗಳ್ಳಿ ಹೆಬ್ಬಾರ್ ರವರ ಊಟದ ಹೋಟೆಲ್ ಕುಂದಾಪುರದ ಪ್ರಥಮ ಊಟದ ಹೋಟೆಲ್
ಪ್ರಥಮ ಸ್ಟುಡಿಯೋ
ಜಂಗ್ಲಿ ದೇವರಾಯ ನಾಯಕರ ಸ್ಟುಡಿಯೋ ಕುಂದಾಪುರದ ಪ್ರಥಮ ಸ್ಟುಡಿಯೋ ಯಾದರೆ,ಕಾಶ್ಮೀರ್ ಡೇಸ್ ಎಂಬುವರು ತಮ್ಮ ಮನೆಯಲ್ಲಿ ಪೋಟೊಗ್ರಾಫಿ ಉದ್ಯೋಗ ಮಾಡುತ್ತಿದ್ದರು
ಕುಂದಾಪುರದ ಪ್ರಥಮ ಜೆರಾಕ್ಸ್ ಕೇಂದ್ರ ಮತ್ತು ಸೈಬರ್ ಕೇಂದ್ರ
ಕುಂದಾಪುರ ಮಾಸ್ತಿಕಟ್ಟೆ ಬಳಿ ಶೆಣೈಯವರ ಜೆರಾಕ್ಸ್ ಅಂಗಡಿ ಪ್ರಥಮ ಜೆರಾಕ್ಸ್ ಅಂಗಡಿಯಾದರೆ,ಭಂಡಾರ್ ಕಾರ್ಸ್ ಕಾಲೇಜು ಬಳಿ ಬರುವ ಲಿಪಿ ಸೈಬರ್ ಸೆಂಟರ್ ಪ್ರಥಮ ಸೈಬರ್ ಕೇಂದ್ರ
ಪ್ರಥಮ ಅಟೋರಿಕ್ಷಾ ರಾಮದಾಸ್ ಭಟ್ಟರ ಮಾಲೀಕತ್ವದ ಅಟೋರಿಕ್ಷಾ ಇದರ ಚಾಲಕರು ಡ್ರೈವರ್ ದತ್ತಾರವರು
ದೂರದ ಊರಿನಿಂದ ಬರುವ ಜನರಿಗೆ ಉಳಿದುಕೊಳ್ಳಲು ಸ್ಥಾಪಿಸಲ್ಪಟ್ಟ ಮೊದಲ ವಸತಿ ಗೃಹ ಅನ್ನಪೂರ್ಣ ಇದು ಕುಂದಾಪುರ ಗೀತಾಂಜಲಿ ಟಾಕೀಸ್ ಬಳಿ ಇತ್ತು ಮಹಾಲಕ್ಷ್ಮಿ ಪ್ರಿಂಟಿಂಗ್ ಪ್ರೆಸ್ ಕುಂದಾಪುರದ ಮೊದಲ ಯಾಂತ್ರಿಕೃತ ಮುದ್ರಣಾಲಯವಾಗಿದೆ
ಕೋಟ ಶಿವರಾಮ ಕಾರಂತರ ಸಂಪಾದಕತ್ವದಲ್ಲಿ ಕುಂದಾಪುರದಲ್ಲಿ ವಸಂತ ಪತ್ರಿಕೆ ಪ್ರಕಟವಾಗಿತ್ತು ಇದು ಕುಂದಾಪುರದ ಪ್ರಥಮ ಪತ್ರಿಕೆಯಾಗಿದೆ.
ಕಾಲಘಟ್ಟದ ಸ್ಥಿತ್ಯಂತರಗಳಲ್ಲಿ ಹಿಂದೆ ಇದ್ದ ಅದೆಷ್ಟೋ ಕಟ್ಟಡಗಳು,ಹೋಟೆಲ್ ಗಳು, ಸ್ಟುಡಿಯೋಗಳು ನವೀಕರಣಗೊಂಡು ಹೊಸ ನಾಮಕರಣಗೊಂಡು ಈಗಲೂ ಇವೆ.ಮತ್ತೆ ಕೆಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿವೆ
ಕುಂದಾಪುರ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಭೂತಪೂರ್ವ ಪ್ರಗತಿಯ ದಾಪುಗಾಲು ಇಡುತ್ತಿದೆ.ಇಂತಹ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು ವಿರಳವಾಗಿದ್ದ ಕಾಲಘಟ್ಟಗಳಲ್ಲಿ ಕುಂದಾಪುರವನ್ನು ಕಟ್ಟಿ ಬೆಳಿಸಿದ ನಮ್ಮ ಹಿರಿಯರ ಶ್ರಮ,ಸಾಧನೆಗಳನ್ನು ಸ್ಮರಿಸಿಕೊಳ್ಳುವುದು ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ

