ಸಾಧಾರಣ 14ನೇ ಶತಮಾನದಲ್ಲಿ ಗೋವಾ ಪ್ರಾಂತ್ಯದಲ್ಲಿ ಕೊಂಕಣಿ ಹಿಂದೂ ಜನರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಮತಾಂತರದ ಭೀತಿಗೆ ಒಳಗಾಗಿ ಅಲ್ಲಿಂದ ದಕ್ಷಿಣಕ್ಕೆ ಮನೆ, ಮಠ, ಮಂದಿರಗಳನ್ನು ಬಿಟ್ಟು ಕುಟುಂಬ ಸಹಿತ ಓಡಿ ಬಂದರು. ಹಾಗೆ ಓಡಿ ಬಂದವರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕರ್ನಾಟಕದ ಕಾರವಾರ ಮೂಲಕ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕೇರಳದ ಕೊಚ್ಚಿನ್ ತನಕ ಹೋಗಿ ನೆಲೆನಿಂತರು. ಅಂತಹ ಒಂದು ಸಮೂಹದಲ್ಲಿ ಬಂದ ಅನೇಕ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಬಸ್ರೂರು, ಕುಂದಾಪುರಗಳಲ್ಲಿ ನೆಲೆನಿಂತರು. ಬಸ್ರೂರು ದೊಡ್ಡ ವ್ಯಾಪಾರ ಕೇಂದ್ರವಾಗಿ ತುಂಡರಸರು ಇದನ್ನು ಆಳುತ್ತಿದ್ದರು. ಕುಂದಾಪುರ ಸಾಮಾನ್ಯ ಹಳ್ಳಿಯಾಗಿದ್ದು, ಖೇಟ, ಕುಬ್ಜಾ, ವಾರಾಹಿ, ಸೌಪರ್ಣಿಕಾ(ಸೂಕ್ತಮತಿ) ಮತ್ತು ಚಕ್ರ ಎಂಬ ಪಂಚನದಿಗಳು ಒಟ್ಟು ಸೇರಿ ಪಂಚಗಂಗಾವಳಿಯಾಗಿ ಪರಿವರ್ತಿತವಾದ ನದಿಯ ತಟದಲ್ಲಿತ್ತು. ಒಳ್ಳೆಯ ಜಲಸಂಪತ್ತು, ಉತ್ತಮ ಹವಾಮಾನವಿರುವ ಈ ಪ್ರದೇಶದಲ್ಲಿ ಸಾಧಾರಣ 17ರ ಶತಮಾನದ ಮಧ್ಯದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ‘ಪೈ’ ಬಡಕುಟುಂಬ ವಾಸವಾಗಿತ್ತು. ಶುದ್ಧ ಸಾತ್ವಿಕ, ಸದಾಸಂಪನ್ನ, ದೈವಭಕ್ತ ಕೌಶಿಕ ಗೋತ್ರದ ಋಗ್ವೇದಿ ಸುಬ್ರಾಯ ಪೈ ಎಂಬುವವರು ತಮ್ಮ ಗುಡಿಸಲು ಮನೆಯಲ್ಲಿ ಕಡಲೆಕಾಯಿ ಬೇಯಿಸಿ ಮಾರಾಟ ಮಾಡಿ ಜೀವಿಸುತ್ತಿದ್ದರು. ತಮ್ಮ ಬಡತನದ ಜೀವನದಲ್ಲಿ ಪೈಯವರಿಗೆ ತಿರುಪತಿ ಶ್ರೀ ವೆಂಕಟರಮಣ ದೇವರ ದರ್ಶನ ಮಾಡಬೇಕೆಂಬ ಮಹದಾಶೆಯಾಯಿತು. ಈಗಿನಂತೆ ಸಂಚಾರಕ್ಕೆ ಯೋಗ್ಯವಾದ ವಾಹನ ಸೌರ‍್ಯ ಆ ಕಾಲದಲ್ಲಿ ಇರಲಿಲ್ಲ. ಕಾಶೀ, ರಾಮೇಶ್ವರ, ತಿರುಪತಿ ಎಂಬಿತ್ಯಾದಿ ಯಾತ್ರೆಗಳು ಕಬ್ಬಿಣದ ಕಡಲೆಯಂತೆ ತುಂಬಾ ಕಠಿಣವಾಗಿತ್ತು.
ತಿರುಪತಿ ದೇವರ ಸಂದರ್ಶಿಸುವ ಇವರ ಇಚ್ಛೆಗೆ ಪ್ರತಿಯಾಗಿ ಹತ್ತಿರದ ಊರಿನ ಜಿ.ಎಸ್.ಬಿ. ಸಮಾಜದ ಧನಿಕ ಕುಟುಂಬವೊಂದು ತಿರುಪತಿಗೆ ಹೊರಟಿತ್ತು. ಆ ಕುಟುಂಬಕ್ಕೆ ಮಾರ್ಗ ಮಧ್ಯದಲ್ಲಿ ಬೇಕಾಗುವ ಊಟೋಪಚಾರದ ವ್ಯವಸ್ಥೆ ಮಾಡಲು ಬೇಕಾಗುವ ಅಡುಗೆ ಭಟ್ಟರ ಅವಶ್ಯಕತೆ ಇತ್ತು. ಅವರು ಅದರ ಹುಡುಕಾಟದಲ್ಲಿದ್ದರು. ತನ್ನ ಇಚ್ಛೆಯನ್ನು ನೆರವೇರಿಸಿಕೊಳ್ಳಲು ಸುಬ್ರಾಯ (ಸುಬ್ಬ) ಪೈಯವರು ಅಡುಗೆ ಭಟ್ಟರಾಗಿ ಧನಿಕ ಕುಟುಂಬದೊಂದಿಗೆ ತಿರುಪತಿ ಯಾತ್ರೆಗೆ ಹೊರಟರು. ತಿರುಪತಿ ಕ್ಷೇತ್ರವನ್ನು ತಲುಪಿದರು. ಧನಿಕ ಯಾತ್ರಿಕರು ಶ್ರೀ ವೆಂಕಟೇಶನ ದರ್ಶನ ಭಾಗ್ಯವನ್ನು ಪಡೆದು ಹರ್ಷಿತರಾದರು. ಆದರೆ ಸುಬ್ರಾಯ ಪೈಯವರಿಗೆ ಅಡುಗೆ ಕೆಲಸವೇ ಗತಿಯಾಯಿತೆ ವಿನಃ ಶ್ರೀ ವೆಂಕಟರಮಣ ಸ್ವಾಮಿಯ ದರ್ಶನ ಭಾಗ್ಯವಾಗಲಿಲ್ಲ. ನಾಳೆ ಊರಿಗೆ ಹಿಂದಿರುಗಬೇಕು ಎನ್ನುವಾಗ ರಾತ್ರಿ ಮನಸ್ಸಿನಲ್ಲಿ ತುಂಬಾ ದುಃಖ ಆಯಿತು. “ಹೇ ದೇವ ನಾನು ಇಲ್ಲಿಯ ತನಕ ಬಂದು ನಿನ್ನ ದರ್ಶನ ಪಡೆಯುವ ಭಾಗ್ಯ ನನಗಿಲ್ಲವಾಯಿತೆ? ಅಲ್ಲದೇ ಬಡವನಾದ ನಾನು ತನ್ನಿಂದ ಯಾವುದೇ ವಿಧದ ಕಾಣಿಕೆ ಸೇವೆ ಅರ್ಪಿಸಿ ಕೃತಾರ್ಥನಾಗಲು ಸಾಧ್ಯವಾಗದೆ ಹೋಯಿತಲ್ಲಾ” ಎಂದು ನೊಂದುಕೊಂಡರು. ಭಗವಂತನಿಗೆ ಅವರ ಮೇಲೆ ಕರುಣೆ ಹುಟ್ಟಿ ಅನುಗ್ರಹ ಮಾಡಬೇಕೆಂಬ ಇಚ್ಚೇ ಆಯಿತೋ ಏನೋ ಎಂಬಂತೆ ಸ್ವಪ್ನದಲ್ಲಿ ಬಂದು “ನೀನು ಯೋಚಿಸಬೇಡ! ನೀನು ಸ್ನಾನ ಮಾಡುವ ಪುಷ್ಕರಣಿಯಲ್ಲಿ ನಾಳೆ ನನ್ನ ಪ್ರತೀಕ ರೂಪವಾದ ಚಂದನದ ಮೂರ್ತಿಯು ನಿನಗೆ ಸಿಗುವುದು. ಅದೇ ನನ್ನ ಪ್ರಸಾದವೆಂದು ತಿಳಿದು ಅದನ್ನು ನಿನ್ನೂರಿಗೆ ತೆಗೆದುಕೊಂಡು ಹೋಗಿ ಭಜಿಸು” ಎಂದು ಹೇಳಿದಂತಾಯಿತು.


ಅದರಂತೆ ಮರುದಿನ ಸುಬ್ಬ ಪೈಯವರು ಪುಷ್ಕರಣಿಗೆ ಸ್ನಾನಕ್ಕೆ ಹೋದಾಗ ಶ್ರೀ ವೆಂಕಟರಮಣ ಸ್ವಾಮಿಯ ರಕ್ತ ಚಂದನದ ದಿವ್ಯ ಮೂರ್ತಿಯು ಪ್ರತ್ಯಕ್ಷವಾಗಿ ದೊರೆಯಿತು. ಅದನ್ನು ತನ್ನ ಎರಡೂ ಕೈಗಳಿಂದ ಎತ್ತಿ ತಲೆಯ ಮೇಲಿರಿಸಿಕೊಂಡು ಮೆಲ್ಲಗೆ ಮೇಲೆ ಬಂದು ಆನಂದದಿಂದ ಅದನ್ನು ಜೋಪಾನವಾಗಿರಿಸಿಕೊಂಡು ತಿರುಪತಿಯಿಂದ ಧನಿಕ ಯಾತ್ರಿಕರೊಡಗೂಡಿ ಕುಂದಾಪುರಕ್ಕೆ ಬಂದರು. ತನಗೆ ಅನುಗ್ರಹರೂಪವಾಗಿ ದೊರೆತ ರಕ್ತ ಚಂದನದ ಮೂರ್ತಿಯನ್ನು ತನ್ನ ಮನೆಯ ಗೋಡೆಯ ಚಿಕ್ಕ ಪೊಟರೆಯಲ್ಲಿಟ್ಟು ನಿತ್ಯ ಪೂಜೆ ಮಾಡುತ್ತಿದ್ದರು. ಜೀವನ ವೃತ್ತಿಗಾಗಿ ಬೇಯಿಸಿದ ಕಡಲೆಕಾಯಿಯ ಚಿಕ್ಕ ವ್ಯಾಪಾರವು ಶ್ರೀ ದೇವರ ಅನುಗ್ರಹದಿಂದ ಒಳ್ಳೆಯ ರೀತಿಯಲ್ಲಿ ನಡೆದು ಕಡಲೆಕಾಯಿಯ ಬೇಡಿಕೆ ಹೆಚ್ಚಾಯಿತು. ಶ್ರೀ ದೇವರ ಹತ್ತಿರ ಬೇಡಿ ಇವರು ಹೇಳಿದವರಿಗೆಲ್ಲಾ ಅವರವರ ಕಷ್ಟಗಳು ನಿವಾರಣೆಯಾಗುತ್ತಾ ಹೋಯಿತು. ಇದರಿಂದ ಈ ವಿಷಯ ಸುತ್ತ ಮುತ್ತಲೂ ಹರಡಿ ಬಹಳ ಮಂದಿ ತಮ್ಮ ತಮ್ಮ ಕಷ್ಟಗಳನ್ನು ಅರುಹಿ ಇಷ್ಟಾರ್ಥಗಳನ್ನು ಪಡೆಯತೊಡಗಿದರು. ಗುಡಿಯು ಚಿಕ್ಕದಾಗಿ ಭಜಕ ವೃಂದವು ವೃದ್ಧಿಯಾಗತೊಡಗಿತು. ಸುಬ್ಬ ಪೈಯವರಿಗೆ ಮಕ್ಕಳಿಲ್ಲದ ಕಾರಣ ಅವರ ಕುಟುಂಬದ ಸದಸ್ಯರು ವೈದಿಕ ವೃತ್ತಿಯನ್ನು ಸ್ವೀಕರಿಸಿ, ಶ್ರೀ ದೇವರ ಪೂಜಾ ಕೈಂಕರ್ಯಕ್ಕೆ ಬದ್ಧರಾದರು. ಶ್ರೀ ದೇವರ ಭಜಕ ವೃಂದವು ಒಂದು ಸಣ್ಣ ದೇವಸ್ಥಾನವನ್ನು ಕಟ್ಟಿಸುವ ಆಲೋಚನೆ ಮಾಡಿ ಅದಕ್ಕೆ ಬೇಕಾದ ತಯಾರಿ ನಡೆಸಿ, ದೇವಸ್ಥಾನವನ್ನು ಕಟ್ಟಿಸಿದರು. ಶಾಲಿವಾಹನ ಶಕ ವರ್ಷ 1737ನೇ ಯುವ ನಾಮ ಸಂವತ್ಸರದ ವೈಶಾಖ ಶುದ್ಧ ತೃಯೋದಶಿಯ ಗುರುವಾರ ಅಭಿಜಿತ್ ಮುಹೂರ್ತದಲ್ಲಿ (20/05/1815) ಶ್ರೀ ದೇವರ ವಿಗ್ರಹವನ್ನು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮತ್ ಸುರೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಅನಂತರ ಸರ್ವವಿಧದ ಸೇವೆಗೆ ಶ್ರೀ ದೇವರು ಪಾತ್ರವಾಯಿತು.
ಶ್ರೀ ದೇವರ ಉತ್ಸವಾದಿಗಳಿಗೆ ಯಾತ್ರಬಿಂಬ (ಉತ್ಸವಮೂರ್ತಿ) ಅಗತ್ಯವೆಂದು ತಿಳಿದು ಆ ಬಗ್ಗೆ ಪ್ರಯತ್ನಿಸುತ್ತಿರುವಾಗ ಶ್ರೀ ದೇವರು ಆಗಿನ ತನ್ನ ಭಕ್ತರಿಗೆ ಕನಸಿನಲ್ಲಿ ಬಂದು “ನಾಳೆ ನಗರ ಸಂಸ್ಥಾನದ ಭಕ್ತ ಜನರು ನನ್ನಿಚ್ಛೆಯಂತೆ ವಿಗ್ರಹ ನಿಮಗೆ ಒಪ್ಪಿಸುತ್ತಾರೆ ನೀವು ಸ್ವೀಕರಿಸಿರಿ” ಎಂದು ಸೂಚಿಸಿದಂತಾಯಿತು”. ನಗರ ಸಂಸ್ಥಾನದ ಜನರಿಗೂ ಒಪ್ಪಿಸಿಕೊಡುವಂತೆ ಸೂಚನೆಯಾಯಿತು. ಹೀಗೆ ಪರಸ್ಪರ ಸೂಚನೆಯಂತೆ ವಾದ್ಯ ವೈಭವ ಸಮೇತ ಕಂಡ್ಲೂರು ಗ್ರಾಮದಲ್ಲಿ ಶ್ರೀ ದೇವರನ್ನು ಪಲ್ಲಕ್ಕಿ ಉತ್ಸವದೊಂದಿಗೆ ನಗರದವರನ್ನು ಎದುರುಗೊಂಡು ಭಕ್ತಿಯಿಂದ ಅವರು ಕುಂದಾಪುರ ದೇವಳದ ಹತ್ತು ಸಮಸ್ತರಿಗೆ ಅರ್ಪಿಸಿ ಕೃತಾರ್ಥರಾದರು. ಇದು ಸಹ ರಕ್ತ ಚಂದನದ ಬಿಂಬ ಹೊಂದಿರುವ ಮೂರ್ತಿ ಆಗಿರುತ್ತದೆ. ಅನಂತರದ ದಿನಗಳಲ್ಲಿ ರಥೋತ್ಸವ ಸಹಿತ ಪಂಚಪರ್ವ ಉತ್ಸವಾದಿಗಳು ನೇರವೇರಲ್ಪಟ್ಟವು.




ಶ್ರೀ ದೇವರ ಮಹಿಮೆಯಿಂದ ನಡೆದ ದೃಷ್ಠಾಂತಗಳು
1. ಸುಬ್ಬ ಪೈಯವರ ಗೋಡೆ ಕಪಾಟಿನಲ್ಲಿ ನೆಲೆನಿಂತ ಚಿಕ್ಕ ಮೂರ್ತಿಯ ಮಹಿಮೆ ಊರಿನಲ್ಲೆಲ್ಲಾ ಹಬ್ಬಿ ಭಕ್ತ ಸಮೂಹದ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ತಮ್ಮ ತಮ್ಮ ಬೇಡಿಕೆಗಳನ್ನು ಮೂರ್ತಿಯ ಮುಂದೆ ನಿಂತು ಬೇಡಿ ಕೃತಾರ್ಥರಾಗಿ ತಮ್ಮ ಮನದಾಳದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ವಿಷಯ ಆಗ ನಮ್ಮನ್ನು ಆಳುತ್ತಿದ್ದ ಬ್ರಿಟಿಷರ ಕಿವಿಗೂ ಬಿತ್ತು. ಆಗ ಕುಂದಾಪುರದ ಬ್ರಿಟಿಷ್ ಕಲೆಕ್ಟರ್ ಸುಬ್ಬ ಪೈಯವರನ್ನು ತಮ್ಮ ಕಛೇರಿಗೆ ಕರೆಯಿಸಿ, ನಿನ್ನ ದೇವರು ಬೇಡಿದನ್ನು ಕೊಡುತ್ತಾನಂತೆ ಹಾಗಾದರೆ ನಾಳೆ ಮಳೆ ಬರುವ ಹಾಗೆ ಮಾಡು ಎಂದು ಗೇಲಿ ಮಾಡಿದನು. ಅದಕ್ಕೆ ಸುಬ್ಬ ಪೈಯವರು ಅದು ದೈವಿಚ್ಛೆ ಎಂದರು. ಅಂದು ಶುಕ್ರವಾರವಾಗಿದ್ದು ಶನಿವಾರ ಮಳೆ ಬರುವುದಕ್ಕಾಗಿ ಇವರು ಶ್ರೀ ದೇವರಲ್ಲಿ ಬೇಡಿ ಉಪವಾಸ ವ್ರತವನ್ನು ಕೈಗೊಂಡರು. ಕಾರಣ ಅದು ಮಳೆ ಬಾರದ ಮಾಸವಾಗಿತ್ತು. ಶನಿವಾರ ಸಂತೆ ದಿನ ಮುಂಜಾನೆ ಮಳೆ ಬರಲಾರಂಭಿಸಿತು. ಜನರು ಬೆರಗಾದರು. ಕುಂದಾಪುರ ಸುತ್ತಲೂ ಧಾರಾಕಾರ ಮಳೆ, ಬ್ರಿಟಿಷ್ ಕಲೆಕ್ಟರ್‌ಗೆ ಬೆನ್ನಿನ ಮೇಲೆ ಬೆತ್ತದಿಂದ ಬಡಿದ ಅನುಭವ. ಇದನ್ನು ನೋಡಿ ಬ್ರಿಟಿಷ್ ಅಧಿಕಾರಿ ತಬ್ಬಿಬ್ಬಾಗಿ ಸುಬ್ಬ ಪೈಯವರನ್ನು ಕರೆಸಿ, ಮಳೆ ನಿಲ್ಲುವಂತೆ ಪ್ರಾರ್ಥಿಸಿದ ಹಾಗೂ ನಿನ್ನ ದೇವರಿಗೆ ಇಷ್ಟವಾದುದನ್ನು ಕೇಳು ಎಂದು ಬೇಡಿಕೊಂಡ. ಅದಕ್ಕೆ ಪ್ರತಿಯಾಗಿ ಶ್ರೀ ದೇವರಿಗೆ ಇಷ್ಟವಾದ ನೈವೇದ್ಯ ಕಡಲೆಕಾಳಿನ ಪಂಚಕಜ್ಜಾಯ ಮಾಡುತ್ತೇವೆ ಎಂದರು. ಅದನ್ನು ಒಂದು ಸಣ್ಣ ದೋಣಿಯಷ್ಟು ಮಾಡಿ ಹಂಚು ಎಂದು ಆಜ್ಞಾಪಿಸಿದ ಅದರಂತೆ ಸುಬ್ಬ ಪೈಯವರು ಪಂಚಕಜ್ಜಾಯ ಮಾಡಿ ಹಂಚಿದರು. ಸಾಧಾರಣ ಬೆಳಿಗ್ಗೆ10-12 ಗಂಟೆಯ ಹತ್ತಿರ ಮಳೆ ಸಂಪೂರ್ಣವಾಗಿ ನಿಂತಿತು. ಸಂತೆಗೆ ಬಂದ ಜನರು ಸಹ ಅದನ್ನು ಸ್ವೀಕರಿಸಿ ಕೃತಾರ್ಥರಾದರು. ಹಾಗಾಗಿ ಹಿಂದೆ ಮಳೆಗಾಲದಲ್ಲಿ ಮಳೆ ಶುಕ್ರವಾರ ಸಾಯಂಕಾಲ ಶುರು ಆದರೆ ಆದಿತ್ಯವಾರ ಬೆಳಿಗ್ಗೆ ನಿಲ್ಲುವ ರೂಢಿ ಕುಂದಾಪುರ ಹಾಗೂ ಆಸುಪಾಸಿನಲ್ಲಿತ್ತು.
2. 1926 ರಲ್ಲಿ ದೇವಸ್ಥಾನದಲ್ಲಿ ಉಪದೇವರ ಪ್ರತಿಷ್ಠೆ, ವಸಂತ ಮಂಟಪ, ಯಜ್ಞ ಮಂಟಪ, ಮುಖ್ಯ ದ್ವಾರ, ಕಛೇರಿ ಕೋಣೆ, ಅಂಗಡಿಕೋಣೆಗಳನ್ನು ಕಟ್ಟುವಾಗ ತುಂಬಾ ಉತ್ತಮ ಮರಗಳ ಹಲಗೆಗಳ, ಕಂಬಗಳ, ಹೆಬ್ಬಾಗಿಲು, ಬಾಗಿಲುಗಳ ಅಗತ್ಯವಿತ್ತು. ಅದಕ್ಕಾಗಿ ದೇವಳದ ಮೊಕ್ತೇಸರರು, ಪ್ರಮುಖ ಅರ್ಚಕರು ಹಳ್ಳಿಗಳಿಗೆ ಹೋಗಿ ತಮಗೆ ಬೇಕಾದ ಹಲಸು, ಭೋಗಿ, ಹೆಬ್ಬೆಲಸು, ಸಾಗುವಾನಿ ಮರಗಳನ್ನು ನೋಡಿ ಇಷ್ಟಪಟ್ಟು ಅದರ ಯಜಮಾನನನ್ನು ಕೇಳಿದರು. ಇವರ ಬೇಡಿಕೆಯನ್ನು ಯಜಮಾನರು ತಿರಸ್ಕರಿಸಿದರು. ಇದರಿಂದ ನೊಂದು ಮೊಕ್ತೇಸರರು ಹಾಗೂ ಅರ್ಚಕರು ಶ್ರೀ ದೇವರ ಮೊರೆ ಹೋದರು. ಮರ ಕೊಡದ ಯಜಮಾನರ ಕನಸಿನಲ್ಲಿ ಶ್ರೀ ದೇವರು ಬಂದು, ಮರವನ್ನು ದೇವಸ್ಥಾನಕ್ಕೆ ಕೊಡು ಎಂದು ಆಜ್ಞೆಯಾಯಿತು. ಇದರಿಂದ ಯಜಮಾನರು ಸಂತೋಷದಿಂದ ತಮ್ಮಲ್ಲಿದ್ದ ಮರಗಳನ್ನು ಕೊಟ್ಟು ಕೃತಾರ್ಥರಾದರು.
3. 80-90 ವರ್ಷಗಳ ಹಿಂದೆ ಕೋಟದ ನಾಯಕ್ ಕುಟುಂಬದವರಿಗೂ, ಪ್ರತಿಷ್ಠಿತ ಬಂಟ ಕುಟುಂಬದವರಿಗೂ ಒಂದು ಸಣ್ಣ ವಿಚಾರಕ್ಕೆ ವಾದ-ವಿವಾದ ಏರ್ಪಟ್ಟು, ಉಡುಪಿ ನ್ಯಾಯಾಲಯದ ತನಕ ಅದು ಹೋಯಿತು. ನಾಯಕ್ ಕುಟುಂಬದವರಿಗೆ ತೀರ್ಪು ಅವಗುಣವಾಗುವಂತಿತ್ತು. ಯಕ್ಷಗಾನ ದಿಗ್ಗಜ ಪಂಡಿತರೊಬ್ಬರ ಬಳಿ ಕೋಟ ನಾಯಕ್ ಕುಟುಂಬದ ಮುಖ್ಯಸ್ಥರೊಬ್ಬರು ತಮ್ಮ ಅಳಲನ್ನು ನಿವೇದಿಸಿಕೊಂಡರು. ಅದಕ್ಕೆ ಯಕ್ಷಗಾನ ಪಂಡಿತರು ಹೇಳಿದರು. “ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಆಷಾಢ ಶುದ್ಧ ಏಕಾದಶಿ ರಾತ್ರಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಮಾಡುತ್ತೇನೆಂದು” ಶ್ರೀ ದೇವರಿಗೆ ಹರಕೆ ಕೊಡು ನಿನಗೆ ನ್ಯಾಯಾಲಯದಲ್ಲಿ ತೀರ್ಪು ನಿನ್ನ ಪರವಾಗಿ ಬರುತ್ತದೆ ಎಂದು ಹೇಳಿದರು. ಅದೇ ರೀತಿ ಹರಕೆ ಹೊತ್ತ ನಾಯಕ್ ಕುಟುಂಬದ ಮುಖ್ಯಸ್ಥರಿಗೆ ತೀರ್ಪು ಇವರ ಕಡೆಗೆ ಬಂತು, ನ್ಯಾಯಾಲಯದಲ್ಲಿ ಗೆಲುವಾಯಿತು. ಹರಕೆಯಂತೆ ವರ್ಷಂಪ್ರತಿ ಯಕ್ಷಗಾನ ತಾಳಮದ್ದಳೆ ನಡೆಯುತ್ತಾ ಇದೆ.
ಹೀಗೆ ಶ್ರೀ ದೇವರ ಮಹಿಮೆ ಹೇಳುತ್ತಾ ಹೋದರೆ ನೂರಾರು ದೃಷ್ಟಾಂತಗಳಿವೆ. ಸಂತಾನಹೀನರಿಗೆ ಸಂತಾನ, ವಿವಾಹ ಆಗದವರಿಗೆ ವಿವಾಹ, ಆಸ್ತಿ ಜಗಳಗಳಲ್ಲಿ ಮಾತುಕತೆಗಳಿಂದ ವಾದ-ವಿವಾದ ತೀರ್ಮಾನ ಜಟಿಲ ಸಮಸ್ಯೆಗಳನ್ನು ಶ್ರೀ ದೇವರಲ್ಲಿ ಕೋರಿಕೊಂಡರೆ ಪರಿಹಾರ.
1987ರಲ್ಲಿ ನಡೆದ ಸಹಸ್ರ ಕುಂಭಾಭಿಷೇಕ ದಿನ ಕುಂದಾಪುರದ ಆಸುಪಾಸಿನಲ್ಲಿ ಭಾರಿ ಮಳೆ. ಶ್ರೀ ದೇವಸ್ಥಾನದ ಪರಿಸರದಲ್ಲಿ ಮಳೆಯಿಲ್ಲದೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಅದೇ ರೀತಿ 1991ರಲ್ಲಿ ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ದಿಗ್ವಿಜಯೋತ್ಸವದ ಸಂದರ್ಭದಲ್ಲಿ ಕುಂದಾಪುರದ ಆಸುಪಾಸಿನಲ್ಲಿ ಭಾರಿಮಳೆ, ಆದರೆ ದೇವಸ್ಥಾನದ ಪರಿಸರದಲ್ಲಿ ಮಳೆಯೇ ಇರಲಿಲ್ಲ. ಪರವೂರಿನಿಂದ ಬಂದ ಭಕ್ತ ಜನರು ತೀವ್ರ ಕುತೂಹಲ ಹಾಗೂ ಅಶ್ಚರ್ಯಚಕಿತರಾದರು.
ಎಚ್. ಜ್ಞಾನದೇವ ಮಲ್ಯ, ಕುಂದಾಪುರ
