ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ
ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಪೀಠವೇ ಶ್ರೀ ಶಾರದಾ ಪೀಠ ಶೃಂಗೇರಿ. ಈ ಪುಣ್ಯಪ್ರದ ಶಾರದಾ ಪೀಠದಲ್ಲಿ ವಿರಾಜಮಾನರಾದ ಗುರುಪರಂಪರೆಯ ಪಂಚರತ್ನಗಳಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಪ್ರಮುಖರಾಗಿರುತ್ತಾರೆ.
ಶ್ರೀ ವಿದ್ಯಾತೀರ್ಥ ಮಹಾಸ್ವಾಮಿಗಳ ಗುರುಗಳಾದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರು ತುಂಗಾನದಿಯ ದಕ್ಷಿಣಕಾಡಿನಲ್ಲಿ ನಿರ್ಮಿಸಿದ ನರಸಿಂಹ ವನದಲ್ಲಿ ಮಳೆಗಾಲ ಹೊರತುಪಡಿಸಿ ಉಳಿದ ಸಮಯದಲ್ಲಿ ಇರುತ್ತಿದ್ದರು.
ಶೃಂಗೇರಿ ದೇವಸ್ಥಾನದಿಂದ ನರಸಿಂಹ ವನಕ್ಕೆ ಹೋಗಲು ಆ ಕಾಲದಲ್ಲಿ ಬೇಸಿಗೆಯಲ್ಲಿ ಸಾರುವೆ ಮರದ ಕಾಲುಸಂಕದ ತಾತ್ಕಾಲಿಕ ಸೇತುವೆಯಾದರೆ,ಮಳೆಗಾಲದಲ್ಲಿ ದೋಣಿಯಲ್ಲಿ ಹೋಗುತ್ತಿದ್ದರು, ಚಂದ್ರಶೇಖರ ಸ್ವಾಮಿಗಳ ಕಾಲದಲ್ಲಿ ಗುರುಗಳನ್ನು ಕಾಣಲು ಬರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಆಗ ಜನರ ಸೌಕರ್ಯಕ್ಕಾಗಿ ತುಂಗಾನದಿಗೆ ವ್ಯವಸ್ಥಿತವಾದ ಸೇತುವೆ ನಿರ್ಮಾಣ ಮಾಡುವ ಪ್ರಸ್ತಾಪನೆ ಮುನ್ನಲೆಗೆ ಬಂತು
ಆಗಿನ ಮಠಾಧಿಕಾರಿ ಶ್ರೀಕಂಠ ಶಾಸ್ತ್ರಿಗಳು ತಜ್ಞ ಇಂಜಿನಿಯರನ್ನು ಕರೆಸಿ ವಿಚಾರಿಸಿದಾಗ ಸೇತುವೆ ವೆಚ್ಚ ಎಪ್ಪತ್ತೈದು ಸಾವಿರ ತಗಲುತ್ತದೆ ಎಂದು ಅಂದಾಜು ಪಟ್ಟಿ ತಯಾರಿಸಲಾಯಿತು.
ಆ ಸಮಯದಲ್ಲಿ ಅಷ್ಟು ಹಣ ಮಠದಲ್ಲಿ ಇರದ ಕಾರಣ ಸೇತುವೆ ನಿರ್ಮಾಣ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು ಮುಂದೆ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ತಮ್ಮ ಗುರು ಶ್ರೀ ಚಂದ್ರಶೇಖರ ಭಾರತೀಯವರ ಸಮಾಧಿಯನ್ನು ನರಸಿಂಹ ವನದಲ್ಲಿ ನಿರ್ಮಾಣ ಮಾಡಿದ್ದರಿಂದ ನರಸಿಂಹವನಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವಾಯಿತು.ತುಂಗಾ ನದಿಗೆ ಮೆಣಸೆ ಗ್ರಾಮದ ಬಳಿ ಸೇತುವೆ ಕಟ್ಟಿದ ನಂತರ,ಮೆಣಸೆಯಿಂದ ಕಾಲಬೈರವನ ಬೆಟ್ಟವನ್ನು ಬಳಸಿಕೊಂಡು ನರಸಿಂಹ ವನಕ್ಕೆ ರಸ್ತೆ ನಿರ್ಮಾಣವಾಯಿತು.ಆದರೆ ಶೃಂಗೇರಿ ಮಠ ಮತ್ತು ನರಸಿಂಹವನದ ಮಧ್ಯದ ತುಂಗಾ ಸೇತುವೆಯ ವಿಚಾರ ಹಾಗೆಯೇ ಇತ್ತು ಶ್ರೀ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸರ್ಕಾರವೇ ಸೇತುವೆ ಕಟ್ಟಲು ಮುಂದಾದರೂ,ಶ್ರೀ ವಿದ್ಯಾತೀರ್ಥ ಸ್ವಾಮಿಗಳು ಅದನ್ನು ಒಪ್ಪಲಿಲ್ಲ.ಸೇತುವೆ ನಿರ್ಮಾಣ ಮಠದಿಂದಲೇ ಆಗಬೇಕು ವಿನಹಾ ಸರ್ಕಾರದ ಅಂಕೆ ಅಕುಂಶದಿಂದ ಆಗಬಾರದು ಎಂದು ಶ್ರೀ ವಿದ್ಯಾತೀರ್ಥರು ಸರ್ಕಾರದ ಪ್ರಸ್ತಾಪನೆಯನ್ನು ನಯವಾಗಿ ತಿರಸ್ಕರಿಸಿದರು.
ಆ ಸಮಯದಲ್ಲೊಮ್ಮೆ 1981 ರಲ್ಲಿ ತುಂಗಾ ನದಿಯಲ್ಲಿ ಭೀಕರ ಪ್ರವಾಹ ಬಂದು ದೋಣಿ ಮಗುಚಿಕೊಂಡು,ಇಬ್ಬರು ಭಕ್ತರು ತುಂಗಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡರು. ಇದರಿಂದ ತೀವ್ರ ನೊಂದ ವಿದ್ಯಾತೀರ್ಥ ಗುರುಗಳು ತಮ್ಮ ದರ್ಶನಕ್ಕಾಗಿ ಬರುವ ಭಕ್ತರು ಇಂತಹ ದುರ್ಘಟನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಮಠದಿಂದಲೇ ಸೇತುವೆ ನಿರ್ಮಾಣ ಯೋಜನೆ ಕೈಗೊಂಡರು
ಇದಕ್ಕಾಗಿ ದಕ್ಷ ಇಂಜಿನಿಯರ್ ಗಳನ್ನು.ವಾಸ್ತುತಜ್ಞರನ್ನು ಕರೆಸಿ,ಸೇತುವೆ ನಿರ್ಮಾಣ ಕೆಲಸಕ್ಕೆ ನಿರ್ದೇಶನವಿತ್ತರು.
ಆ ಕೆಲಸವನ್ನು ಗಾಮನ್ ಎಂಬ ಪ್ರಸಿದ್ಧ ಸೇತುವೆ ಶಿಲ್ಪಿಗಳಿಗೆ ವಹಿಸಿದರು ಸೇತುವೆಯ ಅಂದಾಜು ವೆಚ್ಚ ಮುವತೈದು ಲಕ್ಷ ಮೀರಿತ್ತು. ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿ ಪೂರ್ಣವಾಗುತ್ತಿದ್ದಾಗಲೇ ಶ್ರೀ ವಿದ್ಯಾತೀರ್ಥ ಗುರುಗಳು ವಿದೇಹ ಕೈವಲ್ಯ ಪಡೆದರು. ಅಭಿನವ ವಿದ್ಯಾತೀರ್ಥರ ಶಿಷ್ಯರಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಯವರು ಪೀಠಾಧಿಪತಿಯಾದ ಕೂಡಲೇ ಈ ಸೇತುವೆಯ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಿ ಪೂರ್ಣಗೊಳಿಸಿದರು 1990 ಮೇ 21 ರಂದು ಅಂದಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ರವರು ಈ ಸೇತುವೆಯನ್ನು ಶ್ರೀ ಗುರುಗಳ ಸಮ್ಮಖದಲ್ಲಿ ಉಧ್ಘಾಟಿಸಿದರು.
ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಪೇಕ್ಷೆಯಂತೆ ಈ ಸೇತುವೆಯ ನಿರ್ಮಾಣಕ್ಕೆ ಕಾರಣರಾದ ಶ್ರೀ ವಿದ್ಯಾತೀರ್ಥರ ಹೆಸರನ್ನೇ ಸೇತುವೆಗೆ ಇಟ್ಟು ಲೋಕಾರ್ಪಣೆ ಮಾಡಲಾಯಿತು
ಅಂದಿನಿಂದ ಈ ಸೇತುವೆ ಶ್ರೀ ವಿದ್ಯಾತೀರ್ಥ ಸೇತು ಎಂದು ಕರೆಯಲ್ಪಡುತ್ತಿದೆ ತುಂಗೆಯ ಅಲೆಯ ತಳಸ್ಪರ್ಶದಿಂದ ಹಲವು ಮೀಟರ್ ಎತ್ತರದಲ್ಲಿರುವ ಈ ವಿದ್ಯಾತೀರ್ಥ ಸೇತುವೆ ಶೃಂಗೇರಿ ದೇಗುಲಕ್ಕೂ,ನರಸಿಂಹವನಕ್ಕೂ,ಕಾಲಬೈರವನ ಬೆಟ್ಟಕ್ಕೂ ಶಾಶ್ವತವಾಗಿ ಸಂಪರ್ಕವನ್ನು ಕಲ್ಪಿಸಿಕೊಟ್ಟಿತ್ತು.
ವರದಿ:
www.kundapura.com



