ಕುಂದಾಪುರ ತಾಲೂಕಿನ ಹಲವು ಶಕ್ತಿದೇವತೆಗಳ ದೇವಾಲಯಗಳಲ್ಲಿ ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನವೂ ಒಂದು. ವಾರಾಹಿ ಮತ್ತು ಕುಬ್ಜಾ ನದಿಗಳ ಸಂಗಮ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ಧವಾದ ಈ ದೇಗುಲವಿದೆ ಈ ದೇಗುಲದ ವೈಶಿಷ್ಟ್ಯತೆಯೆಂದರೆ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರು ಇಲ್ಲಿ ಲಕ್ಷ್ಮೀ, ಪಾರ್ವತಿ ಮತ್ತು ಸರಸ್ವತಿ ಮೂರು ದೇವಿಯರ ಸ್ವರೂಪದಲ್ಲಿ ವಿರಾಜಮಾನರಾಗಿ ಮೂರು ದೇವತೆಗಳ ಬಿಂಬರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ದೇಗುಲದಲ್ಲಿ ಆಗಸ್ಟ್ 13 ರಂದು ಅತ್ಯಂತ ವೈಭವದಿಂದ ಮಾರಿಜಾತ್ರೆಯು ನಡೆಯಲಿದೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಂಧುಗಳ ಸರ್ವಧರ್ಮೀಯರ ಸಹಭಾಗಿತ್ವದಲ್ಲಿ ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಾರಿಜಾತ್ರೆಯು ನಡೆಯುವುದು ವಿಶೇಷ ಸಂಗತಿಯಾಗಿದೆ.
ಹಿಂದೂ ಮತ್ತು ಮುಸ್ಲಿಂ ಧರ್ಮದ ಭಾವೈಕತೆಗೆ ಉತ್ತಮ ನಿದರ್ಶನವಾಗಿರುವ ಈ ಮಾರಿಜಾತ್ರೆಯಲ್ಲಿ ಇತಿಹಾಸದಲ್ಲಿ ಇದುವರೆಗೂ ಯಾವುದೇ ರೀತಿಯ ಗಲಭೆಗಳು ನಡೆದ ಉದಾಹರಣೆಗಳಿಲ್ಲ. ಊರಿನ ಅನಿಷ್ಠಗಳನ್ನು ದೂರ ಮಾಡಲು ಪ್ರತಿಯೊಂದು ದೈವ ದೇವಸ್ಥಾನಗಳಲ್ಲಿ ಮಾರಿಜಾತ್ರೆ ನಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಮಾರಿಜಾತ್ರೆಗೆ ಪೌರಾಣಿಕ ಇತಿಹಾಸವಿದ್ದು, ಕಂಡ್ಲೂರಿನಲ್ಲಿ ಪ್ರಾಚೀನ ಕಾಲಘಟ್ಟದಲ್ಲಿ ಮಾರಿಯಮ್ಮ ಎಂದು ಕರೆಯಲ್ಪಡುವ ಶ್ರೀ ದುರ್ಗಾದೇವಿ ಊರಿನಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಕಾಕಾಸುರ ಎಂಬ ರಾಕ್ಷಸನನ್ನು ಸಂಹರಿಸುತ್ತಾಳೆ. ರಾಕ್ಷಸ ಸಾಯುವ ಅಂತಿಮ ಕ್ಷಣದಲ್ಲಿ ಊರಿನ ದೇವರಿಗೆ ವರ್ಷಂಪ್ರತಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತನಗೂ ರಕ್ತಹಾರ ನೀಡಬೇಕೆಂದು ಭಿನ್ನವಿಸಿಕೊಳ್ಳುತ್ತಾನೆ. ರಾಕ್ಷಸನ ಅಂತಿಮ ಕೋರಿಕೆಗೆ ದೇವಿ ತಥಾಸ್ತು ಎನ್ನುತ್ತಾಳೆ. ಹಾಗಾಗಿ ಮಾರಿಜಾತ್ರೆಯ ದಿನ ಕುರಿ, ಕೋಳಿ ಬಲಿ ನೀಡುವ ಸಂಪ್ರದಾಯ ಬೆಳೆದು ಬಂತು.

ಮಾರಿಜಾತ್ರೆಗೆ ಎಂಟುದಿನ ಮೊದಲೇ ಜಾತ್ರೆಗೆ ದಿನ ನಿಗದಿಪಡಿಸುವ ಅಂಕೆ ಹಾಕುವುದು ಎಂಬ ಸಂಪ್ರದಾಯ ಜಾರಿಯಾಗುತ್ತದೆ. ಅಂಕೆ ಹಾಕಿದ ಮೇಲೆ ಊರಿನ ಗ್ರಾಮಸ್ಥರು ಊರು ಬಿಟ್ಟು ಹೋಗುವಂತಿಲ್ಲ, ಒಂದು ವೇಳೆ ಹೋದರೂ ಜಾತ್ರೆ ದಿನ ಇರಲೇಬೇಕು ಮತ್ತು ಮಾರಿಜಾತ್ರೆಯಲ್ಲಿ ಭಾಗವಹಿಸಬೇಕು ಎಂಬ ನಿಯಮವಿದೆ.
ಮಾರಿಜಾತ್ರೆಗೆ ಮಾರಿಮೂರ್ತಿಯನ್ನು ಊರಿನ ಗುಡಿಗಾರ ಕುಟುಂಬದವರು ನಿರ್ಮಿಸುತ್ತಾರೆ ಔಷಧೀಯ ಗುಣವುಳ್ಳ ಮತ್ತು ದೈವಿಕ ಫ್ರಭೆಯುಳ್ಳ ಹೊಂಗೆ ಮರವನ್ನು ಮಾರಿಮೂರ್ತಿ ರಚನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಜಾತ್ರೆಯ ಹಿಂದಿನ ದಿನ ಮಾರಿಯಮ್ಮ ಗದ್ದುಗೆ ಏರುವ ಮೊದಲು ರಥದ ಮೇಲೆ ಮೂರ್ತಿಯನ್ನು ಇಟ್ಟು ಅಲಂಕಾರ ಮಾಡಿ ಗುಡಿಗಾರ ಕುಟುಂಬದವರು ಮೊದಲ ಪೂಜೆ ನೇರವೇರಿಸಿಕೊಡುತ್ತಾರೆ.
ಮರುದಿನ ಬೆಳಿಗ್ಗೆ ಜಾತ್ರೆಯ ದಿನ ಪ್ರಾತಃಕಾಲ ಐದು ಗಂಟೆಗೆ ಮಾರಿಯಮ್ಮ ವಿರಾಜಮಾನಳಾದ ರಥವನ್ನು ಊರಿನ ಮೊಗವೀರ ಬಂಧುಗಳು ಎಳೆದುಕೊಂಡು ಒಂದು ಕೀಮಿ ದೂರದ ಮಾರಿಗದ್ದುಗೆಗೆ ತೆಗೆದುಕೊಂಡು ಹೋಗುತ್ತಾರೆ
ಕಂಡ್ಲೂರು ಮಸೀದಿಯ ಮುಂಭಾಗದಲ್ಲಿ ಮಾರಿಜಾತ್ರೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಸ್ಥಳೀಯ ಮುಸ್ಲಿಂ ಬಂಧುಗಳ ಉಪಸ್ಥಿತಿ ಮತ್ತು ಸಹಯೋಗದಲ್ಲಿ ಜಾತ್ರೆ ನಡೆಯುತ್ತದೆ ಇದು ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಯಾಗಿದೆ.
ಜಾತ್ರೆಯ ಇಡೀದಿನ ಮಾರಿಯಮ್ಮನ ಗದ್ದುಗೆಯಲ್ಲಿ ವಿವಿಧ ಪೂಜೆ ಕೈಂಕರ್ಯಗಳು ನಡೆಯುತ್ತದೆ ವಿಶೇಷವೆಂದರೆ ದೇವಸ್ಥಾನದಲ್ಲಿ ಹರಕೆ ಹೊತ್ತ ಭಕ್ತಧಿಗಳಿಗೆ ಬೇವು ಉಡಿಸಿ ಮಾರಿಗುಡಿಗೆ ಕರೆದುಕೊಂಡು ಹೋಗುತ್ತಾರೆ.
ಸಂಜೆ 6.30 ಕ್ಕೆ ಶ್ರೀ ಮಾರಿಯಮ್ಮನಿಗೆ ಮಂಗಳಾರತಿ ಮಹಾಪೂಜೆ ನಡೆದ ಬಳಿಕ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಮೊಗವೀರ ಬಂಧುಗಳು ಮಾರಿಮೂರ್ತಿಯನ್ನು ರಥದಲ್ಲಿ ತೆಗೆದುಕೊಂಡು ಹೋಗಿ ಊರಿನ ಗಡಿಭಾಗದ ನದಿಯಲ್ಲಿ ವಿಸರ್ಜಿಸುತ್ತಾರೆ. ಜಾತ್ರೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಊರಿನ ಮುಸ್ಲಿಂ ಬಂಧುಗಳು ಸಾವಿರಾರು ಭಕ್ತಾದಿಗಳಿಗೆ ತಂಪು ಪಾನೀಯ ಮತ್ತು ಚಾ ವ್ಯವಸ್ಥೆ ಕಲ್ಪಿಸುವ ಮೂಲಕ ಧಾರ್ಮಿಕ ಸಾಮರಸ್ಯ ಮೆರೆಯುತ್ತಾರೆ.
ಮಾರಿಮೂರ್ತಿಯನ್ನು ವಿಸರ್ಜನೆ ಮಾಡಿದ ಬಳಿಕ ಮೊಗವೀರ ಬಂಧುಗಳು ಶ್ರೀ ದೇವರ ರಥವನ್ನು ಎಳೆದುಕೊಂಡು ಬಂದು ದೇವಸ್ಥಾನದಲ್ಲಿ ಇರಿಸುವ ಮೂಲಕ ಮಾರಿಜಾತ್ರೆ ಸಂಪನ್ನಗೊಳ್ಳುತ್ತದೆ.


ನಾಥ ಪಂಥಕ್ಕೆ ಸೇರಿದ ಜೋಗಿ ಮನೆತನದವರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮತ್ತು ಮಾರಿಗದ್ದುಗೆಯಲ್ಲಿ ಪೂಜೆ ಸಲ್ಲಿಸುವ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಈ ಮಾರಿಜಾತ್ರೆ ಸಮಾಜದ ಎಲ್ಲಾ ವರ್ಗದ ಜನರ ಸಹಭಾಗಿತ್ವದಲ್ಲಿ ಅತ್ಯಂತ ಶ್ರಧ್ದೆ ಭಕ್ತಿಗಳಿಂದ ಸಂಪನ್ನಗೊಳ್ಳುತ್ತದೆ. ಅರ್ಚಕರು, ನಾಥಪಂಥದ ಜೋಗಿ ಸಮಾಜದವರು, ಮಡಿವಾಳರು, ಬ್ರಾಹ್ಮಣರು, ಮೊಗವೀರರು, ಆಚಾರ್ಯರು, ಗುಡಿಗಾರರು, ಕುಂಬಾರರು, ಅಮಾಸೆಬೈಲಿನಲ್ಲಿನ ಒಂದು ಕುಟುಂಬದವರು ಮತ್ತು ಇತರ ಸಮಾಜ ಭಾಂಧವರು ಮತ್ತು ಮುಖ್ಯವಾಗಿ ಊರಿನ ಮುಸಲ್ಮಾನ ಬಂಧುಗಳು ತಮ್ಮದೇ ಊರಿನ ಹಬ್ಬವೆಂದು ಸಂಭ್ರಮಿಸಿ ಪಾಲ್ಗೊಳ್ಳುತ್ತಾರೆ.
ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಧರ್ಮಧರ್ಶಿಗಳಾದ ಕೆ.ಎನ್.ಚಂದ್ರಶೇಖರ್ ಜೋಗಿಯವರ ಸಾರಥ್ಯದಲ್ಲಿ ದೇವಸ್ಥಾನ ಅಭಿವೃದ್ಧಿ ಪಥದಲ್ಲಿ ಸಾಗಿದ್ದು ಶ್ರೀ ಕನ್ನಿಕಾ ಪರಮೇಶ್ವರಿಯ ದರ್ಶನಕ್ಕಾಗಿ ನಾಡಿನಾದ್ಯಂತಿಂದ ಜನರು ಬರುತ್ತಾರೆ ಒಟ್ಟಿನಲ್ಲಿ ಕಂಡ್ಲೂರಿನ ಕನ್ನಿಕಾ ಪರಮೇಶ್ವರಿಯ ದೇಗುಲ ಮತ್ತು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ ರೂಪದಲ್ಲಿ ಆವಿರ್ಭವಿಸಿರುವ ಶ್ರೀ ಕನ್ನಿಕಾ ಪರಮೇಶ್ವರಿಯ ವಿಶಿಷ್ಟ ಶಕ್ತಿ ಅತ್ಯಂತ ಕಾರಣಿಕವಾಗಿದೆ. ಇಲ್ಲಿ ಜನರು ಅಪಾರ ಶ್ರದ್ಧಾಭಕ್ತಿಯನ್ನಿಟ್ಟುಕೊಂಡಿದ್ದು, ಸರ್ವಧರ್ಮಿಯರ ಅಪೂರ್ವ ಭಾವನಾತ್ಮಕ ನಂಬಿಕೆಯ ದೇಗುಲವಾಗಿದೆ.
ದೇವಸ್ಥಾನದ ಮಾರಿಜಾತ್ರೆಯ ಬಗ್ಗೆ ಮಾಹಿತಿ ನೀಡಿದ ಶ್ರೀಧರ ಮಾಸ್ಟರ್ ಮತ್ತು ಮಾರಿಯಮ್ಮನ ಮೂರ್ತಿಗೆ ಪ್ರತಿವರ್ಷ ಬಣ್ಣದ ಮೂಲಕ ಅಲಂಕೃತಗೊಳಿಸುವ ಪೃತೀಕ್ ಗುಡಿಗಾರ್ ರವರಿಗೆ ಧನ್ಯವಾದಗಳು.
ವರದಿ: ಸುಧಾಕರ್ ಕುಂದಾಪುರ
ಕುಂದಾಪುರ.ಕಾಂ





