ಚಾರಿತ್ರಿಕ ಕಥಾನಕದ ಪುಣ್ಯಸ್ಥಳ ಕುಂದಾಪುರದ ಮಾಸ್ತಿಕಟ್ಟೆ

kundapuradotcom@gmail.com
4 Min Read

ನಮ್ಮ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಸ್ಥಾಪಿಸಲ್ಪಟ್ಟ ಮಾಸ್ತಿಕಲ್ಲುಗಳಿಗೂ ವೀರತ್ವ, ತ್ಯಾಗ, ಬಲಿದಾನಗಳ ಪರಮಶ್ರೇಷ್ಠ ಚಾರಿತ್ರಿಕ ಕಥನಗಳಿವೆ ಬಹುತೇಕ ಮಾಸ್ತಿಕಲ್ಲುಗಳು ದೈವಗಳಾಗಿ, ದೇವಿಯರಾಗಿ ಗುಡಿಗಳಲ್ಲಿ ಆರಾಧನೆಗೊಳ್ಳುತ್ತಿದ್ದಾರೆ ಮಾಸ್ತಿಕಲ್ಲು ಎನ್ನುವುದು ಮಹಾಸತಿ ಕಲ್ಲು ಎನ್ನುವುದರ ರೂಪಾಂತರ ಗಂಡನನ್ನೇ ನಂಬಿ ಅವನಿಗಾಗಿ ಬದುಕನ್ನು ಮುಡುಪಾಗಿಡುವ, ಊರಿನ ಹಿತಕ್ಕಾಗಿ ತಮ್ಮ ಬದುಕನ್ನೇ ಬಲಿಕೊಡುವ, ಸದ್ಗುಣಶೀಲೆ, ತ್ಯಾಗಮಯಿ, ಸಾಹಸವಂತೆ ಹೆಂಡತಿಯೇ ಮಹಾಸತಿ ಇಂತವರ ನೆನಪನ್ನು ಶಾಶ್ವತವಾಗಿ ಅಮರವಾಗಿಸುವ ಸ್ಮಾರಕ ರೂಪದ ಕಲ್ಲು ಮಾಸ್ತಿಕಲ್ಲು. ಕುಂದಾಪುರ ಹೃದಯಭಾಗದ ಮಾಸ್ತಿಕಟ್ಟೆ ಇಂತಹ ವೀರವನಿತೆಯ ಚಾರಿತ್ರಿಕ ಕಥನಗಳು ಮೈದಾಳಿ ನಿಂತ ದಿವ್ಯ ಸಾನ್ನಿಧ್ಯವಾಗಿ ಕುಂದಾಪುರದ ಇತಿಹಾಸದಲ್ಲಿ ಅಜರಾಮರವಾಗಿದೆ.

ಅಶ್ವತ ವೃಕ್ಷದ ಅಡಿಯಲ್ಲಿ ನೆಲೆನಿಂತಿರುವ ಮಾಸ್ತಿಯಮ್ಮನ ಸಾನ್ನಿಧ್ಯ ಬಹಳ ಕಾರಣಿಕ ಸ್ಥಳವಾಗಿದ್ದು, ಇದಕ್ಕೆ ಶತಶತಮಾನಗಳ ಅಭೂತಪೂರ್ವ ಇತಿಹಾಸವಿದೆ ಚರಿತ್ರೆಯ ಕಾಲಘಟ್ಟದಲ್ಲಿ ಕುಂದಾಪುರ ಪ್ರಾಂತ್ಯವನ್ನು ಇಕ್ಕೇರಿ, ಕೆಳದಿ ಅರಸರು, ಹೊಸಂಗಡಿಯ ಹೊನ್ನೆಕಂಬಳಿ ಅರಸರು ಆಳುತ್ತಿದ್ದಾಗ ಸಮುದ್ರ ಮಾರ್ಗದಿಂದ ದಂಡೆತ್ತಿ ಬರುವ ಶತ್ರುಗಳ ಮೇಲೆ ಕಣ್ಣಿಡಲು ಪಂಚಗಂಗಾವಳಿ ನದಿಯ ಪಶ್ಚಿಮ ಭಾಗದಲ್ಲಿ ಸೇನಾನೆಲೆಯನ್ನು ಸ್ಥಾಪಿಸಿದ್ದರು. ಸಮುದ್ರತೀರದ ಸಂಪೂರ್ಣ ನೋಟ ಲಭಿಸಲು ಅರಸರ ಕಾಲದಲ್ಲಿ ಕುಂದಾಪುರದ ಪಡುಭಾಗದ ಎತ್ತರದ ಪ್ರದೇಶದಲ್ಲಿ ಸೇನೆಯ ಒಂಬತ್ತು ದಂಡಿಗೆಗಳನ್ನು ಅಂದರೆ ಸೇನಾ ಬೆಟಾಲಿಯನ್ ಗಳನ್ನು ನೆಲೆಗೊಳಿಸಿದ್ದರು. 18 ನೇ ಶತಮಾನದ ಕಾಲದಲ್ಲಿ ಮರಾಠರು ಶೃಂಗೇರಿ ದೇವಸ್ಥಾನ ಮತ್ತು ಕೊಲ್ಲೂರು ದೇವಸ್ಥಾನದ ಮೇಲೆ ದಾಳಿ ಮಾಡಿ ಅಪಾರ ಸಂಪತ್ತನ್ನು ದೋಚಿದ್ದರು. ಈ ಸಮಯದಲ್ಲಿ ಕುಂದಾಪುರ ನೆಲೆಯಲ್ಲಿದ್ದ ಒಂಬತ್ತು ದಂಡಿಗೆಗಳ ಸೈನಿಕರು ಮರಾಠ ವಿರುದ್ಧ ವೀರಾವೇಶದಿಂದ ಹೋರಾಡಿ ಅವರನ್ನು ಹೊಡೆದೋಡಿಸಿದರು. ಈ ಹೋರಾಟದಲ್ಲಿ ಕುಂದಾಪುರ ಒಂಬತ್ತು ದಂಡಿಗೆಗಳ ಸೇನಾ ನೆಲೆಯ ಸೈನಿಕನೊಬ್ಬ ವೀರಮರಣವೊಪ್ಪುತ್ತಾನೆ. ಆತನ ಶವದ ಸಂಸ್ಕಾರವನ್ನು ಸೇನಾನೆಲೆಯ ಪೂರ್ವದಿಕ್ಕಿನಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಆತನ ಪತ್ನಿ ಗಂಡನ ಚಿತೆಯನ್ನೇರಿ ಪ್ರಾಣಾರ್ಪಣೆ ಮಾಡಿದಳು ಪತಿಯ ಅಗಲಿಕೆಯ ನೋವಿನಿಂದ ಅಂದಿನ ಕಾಲದ ಸತಿಸಹಗಮನ ಪದ್ಧತಿಯಂತೆ ವೀರಯೋಧನ ಪತ್ನಿ ಗಂಡನ ಚಿತೆಯನ್ನೇರಿ ಪ್ರಾಣಾರ್ಪಣೆ ಮಾಡುತ್ತಾಳೆ ಆಕೆ ಬಲಿದಾನಗೈದ ಸ್ಥಳ ಇಂದಿನ ಮಾಸ್ತಿಯಮ್ಮನ ಗುಡಿ ಇರುವ ಮಾಸ್ತಿಕಟ್ಟೆ ಪತಿಯ ಮೇಲಿನ ಅಪಾರವಾದ ಪ್ರೀತಿ ಮತ್ತು ಮನೆತನದ ಗೌರವ, ರಾಜ್ಯಾಭಿಮಾನದಿಂದ ಆತ್ಮಾರ್ಪಣೆಗೈದ ಈ ಮಹಾಸತಿಯ ನೆನಪನ್ನು ಇತಿಹಾಸದ ಪುಟಗಳಲ್ಲಿ ಅಜರಾಮರಗೊಳಿಸಲು, ರಾಜಾಜ್ಞೆಯಂತೆ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಮಹಾಸತಿ ಕಲ್ಲನ್ನು ಸ್ಥಾಪಿಸಲಾಯಿತು.

ಕಾಲಕ್ರಮೇಣ ಈ ಭಾಗದಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ಸಮಯದಲ್ಲಿ ಮಾಸ್ತಿಕಲ್ಲನ್ನು ಸ್ಥಳಾಂತರಿಸುವ ಪರಿಸ್ಥಿತಿ ಒದಗಿ ಬಂತು ಅಂತಿಮವಾಗಿ ಊರಿನವರ ತೀರ್ಮಾನದಂತೆ ಈ ಮಾಸ್ತಿಕಲ್ಲನ್ನು ಸಮೀಪದ ಅಶ್ವತಕಟ್ಟೆಯ ಕೆಳಗೆ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಮಾಸ್ತಿಕಟ್ಟೆಯ ಪಶ್ಚಿಮ ಭಾಗದಲ್ಲಿ ಊರಿನ ರಕ್ಷಣೆಗಾಗಿ ನೆಲೆಗೊಳಿಸಿದ್ದ ಒಂಬತ್ತುದಂಡಿಗೆಗಳ ಸೇನಾನೆಲೆಯು ಮುಂದೆ ಒಂಬತ್ತು ದಂಡಿಗೆ ಎಂಬ ಪ್ರದೇಶಕ್ಕೆ ನಾಮಾಂಕಿತವಾಯಿತು. ಪ್ರಸ್ತುತ ಈ ಪ್ರದೇಶವನ್ನು ಜನರು ಉಚ್ಚರಿಸುವಾಗ ತ್ತು ಎಂಬ ಶಬ್ದ ಲೋಪವಾಗಿ ಒಂಬದಂಡಿಗೆ ಎಂದು ಕರೆಯುತ್ತಾರೆ. ಅಶ್ವತಕಟ್ಟೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮಹಾಸತಿಯಮ್ಮನ ಸಾನ್ನಿಧ್ಯವನ್ನು ಮೊದಲಿಗೆ ಶ್ರೀ ನಾರಾಯಣ ಪೈ, ಗೋಪಾಲ ಪೈ ನಂತರ ಶ್ರೀನಿವಾಸ ಪೈ ಅಭಿವೃದ್ಧಿ ಪಡಿಸಿದ್ದರು.

ಶ್ರೀ ಮಹಾಸತಿ ಅಮ್ಮನವ ಪರಮ ಭಕ್ತರಾದ ಈ ಮಹಾನುಭಾವರಿಗೆ ಶ್ರೀ ಮಹಾಸತಿ ಅಮ್ಮನವರು ಕನಸಿನ ರೂಪದಲ್ಲಿ ದರ್ಶನ ನೀಡಿ, ಪ್ರಶ್ನಾಮಾರ್ಗದಲ್ಲಿ ಸೂಚನೆ ನೀಡಿ ಕಾಲಕಾಲಕ್ಕೆ ತನ್ನ ಸಾನ್ನಿಧ್ಯವನ್ನು ಊರ್ಜಿತಗೊಳಿಸಿಕೊಂಡಿದ್ದಾಳೆ. ಬಹಳ ಕಾರಣಿಕ ಶಕ್ತಿಯಾದ ಶ್ರೀ ಮಹಾಸತಿ ಅಮ್ಮನವರು ಭಕ್ತರು ಬೇಡಿಕೊಂಡ ಕೋರಿಕೆಯನ್ನು ಕ್ಷಿಪ್ರಗತಿಯಲ್ಲಿ ನೇರವೇರಿಸಿಕೊಡುತ್ತಾರೆ ಮತ್ತು ಅಷ್ಟೇ ಕ್ಷಿಪ್ರವಾಗಿ ಭಕ್ತರಿಂದ ಹರಕೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಪ್ರಸ್ತುತ ಪೂಜಾ ಕೈಂಕರ್ಯ ಮಾಡುತ್ತಿರುವ ಅರ್ಚಕರು ಭಾವಪರವಶರಾಗಿ ಹೇಳುತ್ತಾರೆ.

ನಾಡಿನಾದ್ಯಂತ ಅಸಂಖ್ಯಾತ ಭಕ್ತರು ಶ್ರೀ ಮಾಸ್ತಿಯಮ್ಮನವರ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತಾರೆ. ಮುಂಬೈ, ಬೆಂಗಳೂರು ಮೈಸೂರು, ಮಂಗಳೂರು, ಧಾರವಾಡದ ಮುಂತಾದ ಕಡೆಯಿಂದ ಭಕ್ತರು ಶ್ರೀ ಮಾಸ್ತಿಯಮ್ಮನವರ ದರ್ಶನಕ್ಕಾಗಿ ಬರುತ್ತಾರೆ ಇಲ್ಲಿ ಪ್ರತಿನಿತ್ಯವೂ ಶ್ರೀ ಅಮ್ಮನವರಿಗೆ ಪೂಜೆ ನಡೆಯುತ್ತಿದ್ದು, ಶುಕ್ರವಾರದಂದು ಬೆಳ್ಳಿ ಮುಖವಾಡವನ್ನು ತೊಡಿಸಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಪ್ರತಿವರ್ಷವೂ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರಸ್ತುತ ಶ್ರೀ ಉದಯ ಪೈ ರವರು ಶ್ರೀ ಮಾಸ್ತಿಯಮ್ಮ ದೇವಿಯ ಪೂಜೆ ಆರಾಧನೆಗಳಿಗೆ ಭಕ್ತರಿಗೆ ಮುತುವರ್ಜಿಯಿಂದ ಅನುಕೂಲ ಕಲ್ಪಿಸಿಕೊಡುತ್ತಾರೆ. ಗಂಗೊಳ್ಳಿ, ಮರವಂತೆ, ಬೈಂದೂರು ಭಾಗದ ಮೀನುಗಾರರು ಶ್ರೀ ದೇವಿಯನ್ನು ಅಪಾರವಾಗಿ ನಂಬಿದ್ದು ಮೀನುಗಾರಿಕಾ ಋತು ಆರಂಭವಾಗುವ ಮೊದಲು ಈ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಹೋಗುತ್ತಾರೆ ಅರ್ಚಕರಾದ ಸುಧೀಂದ್ರ ನಾಯಕ್ ರವರು ಭಾವಪರವಶರಾಗಿ ಹೇಳುತ್ತಾರೆ.

ಕುಂದೇಶ್ವರ ದೀಪೋತ್ಸವ ದಿನದಂದು ಶ್ರೀ ಕುಂದೇಶ್ವರ ದೇವರು ವಿರಾಜಮಾನರಾಗಿ ಪೂಜೆ ಕೈಂಕರ್ಯ ಪಡೆಯುವ ಹದಿನಾರು ಸ್ಥಳಗಳಲ್ಲಿ ಮಾಸ್ತಿಕಟ್ಟೆ ಪ್ರಮುಖವಾಗಿದೆ, ಆ ದಿನ ಬೆಳ್ಳಿ ರಥದಲ್ಲಿ ಪುರಮೆರವಣಿಗೆಯಲ್ಲಿ ಆಗಮಿಸುವ ಶ್ರೀ ಕುಂದೇಶ್ವರ ದೇವರಿಗೆ ಮಾಸ್ತಿಕಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಹಾಗೇಯೇ ಪೇಟೆ ಶ್ರೀ ವೆಂಕಟರಮಣ ದೇವರ ರಥೋತ್ಸವ ದಿನದಂದು ಕೂಡಾ ಮಾಸ್ತಿಕಟ್ಟೆಯಲ್ಲಿ ಶ್ರೀ ವೆಂಕಟರಮಣ ದೇವರಿಗೆ ಕೂಡಾ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ನಾರಾಯಣ ಪೈಯವರಿಂದ ಮೊದಲ್ಗೊಂಡು, ಗೋಪಾಲ ಪೈ, ಶ್ರೀನಿವಾಸ ಪೈ ಮತ್ತು ಪ್ರಸ್ತುತ ಮೊಕ್ತೇಸರರಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಪೈ ಯವರ ಸೇವಾಕೈಂಕರ್ಯ, ಶ್ರದ್ಧಾಭಕ್ತಿ ತುಂಬಾ ಶ್ಲಾಘನೀಯ. ಈ ಸಾನ್ನಿಧ್ಯವನ್ನು ಕಟ್ಟಿ ಬೆಳೆಸುವಲ್ಲಿ ಇವರೆಲ್ಲರ ಶ್ರಮ ಅಪಾರ ಇದರ ಜೊತೆಗೆ ಮಾಸ್ತಿಕಟ್ಟೆ ಫ್ರೆಂಡ್ಸ್ ಮತ್ತಿತರ ಸಂಘ ಸಂಸ್ಥೆಗಳು, ಊರ ಪರವೂರ ಭಕ್ತ ಮಹಾಶಯರು ಮಾಸ್ತಿಯಮ್ಮನ ಸಾನ್ನಿಧ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಕುಂದಾಪುರ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡು ಈ ಸಾನ್ನಿಧ್ಯ ಇರುವುದರಿಂದ ಸ್ಥಳಾವಕಾಶದ ಕೊರತೆಯೂ ಅಭಿವೃದ್ಧಿ ಕಾರ್ಯಕ್ಕೆ ಒಂದಿಷ್ಟು ತೊಡಕಾಗಿದೆ.

ಅಶ್ವತ ಮರದಡಿಯಲ್ಲಿದ್ದ ಮಹಾಸತಿ ಕಲ್ಲು ಇಂದು ಶ್ರೀ ಮಹಾಸತಿ ಅಮ್ಮನವರ ರೂಪದಲ್ಲಿ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ನಿತ್ಯ ಪೂಜೆಯು ನಡೆಯುತ್ತಿದೆ ಆರಾಧನೆಗೆ ಒಳಗಾಗಿ ಶ್ರದ್ಧಾ ಭಕ್ತಿಯ ಕೇಂದ್ರವಾದರೂ, ಚಾರಿತ್ರಿಕ ಘಟನೆಗಳು ವಿಸ್ಮರಣೆಗೆಗೊಳಗಾಗದೇ ಅವಿಸ್ಮರಣೀಯ ಮತ್ತು ಅಭೂತಪೂರ್ವ ಚರಿತ್ರೆಗೆ ಸಾಕ್ಷಿಯಾಗಿ ನಿಂತಿರುವ ಮಾಸ್ತಿಯಮ್ಮನವರ ಮಾಸ್ತಿಕಟ್ಟೆ ಕುಂದಾಪುರ ನಗರದ ಭವ್ಯ ಇತಿಹಾಸದ ಕೀರ್ತಿ ಕಲಶವಾಗಿ ಅಜರಾಮರವಾಗಿದೆ.

ಸುಧಾಕರ್ ಖಾರ್ವಿ
www.kundapura.com

Share This Article
Leave a Comment