ಜವಗು ಪ್ರದೇಶ,ನೀರಿನಾಶ್ರಯವಿರುವ ತೋಡು ಮತ್ತು ಹೊಳೆಯಂಚಿನಲ್ಲಿ ಬೆಳೆಯುವ ವಿಶಿಷ್ಟ ಸಸ್ಯ ಪ್ರಭೇದವೇ ಮುಂಡಕನ ಸಸ್ಯ ಇದರ ಉದ್ದನೆಯ ಎಲೆಯನ್ನು ಓಲೆ ಎಂದು ಕರೆಯುತ್ತಾರೆ ಎಣ್ಣೆಯ ಅಂಶ ಮತ್ತು ಪರಿಮಳ ಇರುವ ಮುಂಡಕನ ಓಲೆಯ ಹಿಂಬದಿಯಲ್ಲಿ ಮುಳ್ಳುಗಳು ಇರುತ್ತದೆ ಕರಾವಳಿಯ ರೈತರು ಶ್ರಾವಣ ಮಾಸದ ಬೆಚ್ಚನೆಯ ಸಂಕ್ರಾಂತಿಯ ದಿನ ಮುಂಡಕನ ಹಬ್ಬ ಆಚರಿಸುವ ಸಂಪ್ರದಾಯವಿದೆ ಈ ಹಬ್ಬಕ್ಕೆ ಗದ್ದೆಯ ಗಂಡ ಬರುವ ಹಬ್ಬ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ, ಮಲೆನಾಡು ಪ್ರಾಂತ್ಯದಲ್ಲಿ ಗದ್ದೆಯಲ್ಲಿ ಮುಂಡಕನ ಗಿಡ ನೆಡುವ ಸಂಪ್ರದಾಯವನ್ನು ಮಘೆ ಮುಂಡಕ ಎಂದು ಕರೆಯುತ್ತಾರೆ ಮಘೆ ಮಳೆಯಲ್ಲಿ ಮುಂಡಕನ ಗಿಡ ನೆಡುವ ಈ ಸಂಪ್ರದಾಯದ ಮೂಲ ಉದ್ದೇಶ ಗದ್ದೆಯ ಕೀಟಗಳ ಹಾವಳಿಯನ್ನು ನಿಯಂತ್ರಿಸುವುದು ಮುಂಡಕನ ಗಿಡವು ಸುಗಂಧ ಭರಿತ ಸಸ್ಯವಾಗಿದ್ದು, ಇದು ಕೀಟಗಳನ್ನು ದೂರ ಓಡಿಸುತ್ತದೆ. ಈಗ ನೆಟ್ಟ ಮುಂಡಕನ ಗಿಡಗಳನ್ನು ಗದ್ದೆ ಕೊಯ್ಲು ಸಮಯದಲ್ಲಿ ತೆಗೆಯುತ್ತಾರೆ. ಮೊದಲನೇ ದಿನ ಸಂಜೆ ಮುಂಡಕನ ಗಿಡವನ್ನು ಕಡಿದಿಟ್ಟುಕೊಂಡು ಮಾರನೇ ದಿನ ಬೆಳಿಗ್ಗೆ ಸೂರ್ಯೋದಯದ ಪೂರ್ವದಲ್ಲಿ ಗದ್ದೆಯಲ್ಲಿ ನೆಡುವ ಸಂಪ್ರದಾಯವಿದೆ.
ಮುಂಡಕನ ಗಿಡವನ್ನು ಗದ್ದೆಯ ಗಂಡ ಎಂದು ಪರಿಭಾವಿಸುವ ರೈತರು ಈ ವಿಧಿ ವಿಧಾನವನ್ನು ಶ್ರದ್ಧೆಯಿಂದ ಮಾಡುತ್ತಾರೆ ಈ ಬಾರಿ ಕೃಷ್ಣಾಷ್ಟಮಿಯ ಮರುದಿನವೇ ಬೆಚ್ಚನೆಯ ಸಂಕ್ರಾಂತಿ ಬಂದಿರುವುದರಿಂದ ಮುಂಡಕನ ಹಬ್ಬ ಮಹತ್ವ ಪಡೆದುಕೊಂಡಿದೆ ಮುಂಡಕನ ಓಲೆಯಲ್ಲಿ ಕೊಟ್ಟೆ ಮತ್ತು ಕಡಬು ಮಾಡುವ ವಿಧಾನ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ ಮುಂಡಕನ ಓಲೆಯಲ್ಲಿ ಮಾಡುವ ಕೊಟ್ಟೆ ಮತ್ತು ಕಡಬು ಪರಿಮಳಯುಕ್ತ, ಸ್ವಾದಿಷ್ಟಕರ ಮತ್ತು ಆರೋಗ್ಯಕರವಾಗಿರುತ್ತದೆ.
ಈ ಮುಂಡಕನ ಗಿಡದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವಿಧಗಳಿವೆ ಗಂಡು ಮುಂಡಕನ ಗಿಡ ಕೇದಿಗೆ ಮರದ ಹಾಗೆ ಇದ್ದು, ಮುಳ್ಳುಗಳು ದಪ್ಪವಾಗಿರುತ್ತದೆ ಮತ್ತು ಓಲೆಗಳ ಉದ್ದವೂ ಕಡಿಮೆಯಾಗಿರುತ್ತದೆ ಆದರೆ ಹೆಣ್ಣು ಮುಂಡಕನ ಗಿಡದ ಓಲೆಗಳು ಉದ್ದವಾಗಿ, ದಪ್ಪವಾಗಿರುತ್ತದೆ ಮತ್ತು ಮುಳ್ಳುಗಳು ಸಣ್ಣದಾಗಿರುತ್ತದೆ
ಹಾಗಾಗಿ ಹೆಣ್ಣು ಮುಂಡಕನ ಗಿಡದ ಓಲೆಗಳು ಕೊಟ್ಟೆ ಮತ್ತು ಕಡಬು ಮಾಡಲು ಹೆಚ್ಚು ಸೂಕ್ತವಾಗಿರುತ್ತದೆ.
ಪ್ರಸ್ತುತ ದಿನಗಳಲ್ಲಿ ಹೈಬ್ರೀಡ್ ತಂತ್ರಜ್ಞಾನಲ್ಲಿ ಅಭಿವೃದ್ಧಿಪಡಿಸಿ ಬೆಳೆಸಲಾದ ಮುಂಡಕನ ಗಿಡಗಳನ್ನು ತಂದು ಬೆಳೆಸುವ ಪರಿಪಾಠ ಆರಂಭವಾಗಿದೆ ಆದರೆ ಇದರಲ್ಲಿ ಮಾಡಿದ ಕೊಟ್ಟೆ, ಕಡಬುಗಳು ನೈಸರ್ಗಿಕ ಮುಂಡಕನ ಗಿಡದ ಓಲೆಗಳ ರುಚಿಯನ್ನು ಕೊಡುವುದಿಲ್ಲ.
ಗ್ರಾಮಾಂತರ ಪ್ರದೇಶಗಳ ಗದ್ದೆ, ಜವಗು ಪ್ರದೇಶಗಳು ಮನೆ ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮುಂಡಕನ ಗಿಡದ ಸಂತತಿಯು ಗಣನೀಯ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆಯಾದ್ದರಿಂದ ಜನರು ಕೃತಕವಾಗಿ ಬೆಳೆಸಲಾದ ಮುಂಡಕನ ಗಿಡದ ಓಲೆಗಳಿಗೆ ಮತ್ತು ಹಲಸಿನ ಎಲೆಯ ಕೊಟ್ಟೆಗಳಿಗೆ ಹೊಂದಿಕೊಂಡಿದ್ದಾರೆ ದೇವರಿಗೂ ನೈವೇದ್ಯದ ರೂಪದಲ್ಲಿ ಸಲ್ಲುವ ಕೊಟ್ಟೆಕಡಬು ಕಾಲಕ್ರಮೇಣ ಹೋಟೆಲ್ ತಿಂಡಿಗಳ ಸ್ಥಾನ ಪಡೆದುಕೊಂಡಿತ್ತು.
ಕುಂದಾಪುರ ಕುಂಭಾಶಿಯ ಬಾಲಕೃಷ್ಣ ಉಪಾಧ್ಯಾಯರ ಹೋಟೆಲ್ ಮೀನಾಕ್ಷಿ ಭವನ ಈ ಕೊಟ್ಟೆಕಡಬುಗಳಿಗೆ ಜನಪ್ರಿಯವಾಗಿದೆ. ನಮ್ಮ ಪೂರ್ವಿಕರಿಗೆ ಗಿಡಮರಗಳ, ಔಷಧೀಯ ಗುಣಧರ್ಮಗಳ ಬಗ್ಗೆ ಸಂಪೂರ್ಣ ಜ್ಞಾನವಿದ್ದದರಿಂದ ಮುಂಡಕನ ಓಲೆ , ಹಲಸಿನ ಎಲೆಗಳಲ್ಲಿ ಕೊಟ್ಟೆಕಡಬುಗಳನ್ನು ಮಾಡುವ ಪರಂಪರೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.ಆಯಾ ಋತುಮಾನಗಳಿಗೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯೂ ಚಾಲ್ತಿಗೆ ಬಂತು ಕಾಲಚಕ್ರದ ನಾಗಾಲೋಟದಲ್ಲಿ ಕೆಲವೊಂದು ಬದಲಾವಣೆ ಕಂಡುಬಂದರೂ ಪರಂಪರೆಯ ಆಹಾರ ಪದ್ಧತಿಗಳು ಇಂದಿಗೂ ಮುಂದುವರಿಯುತ್ತಿರುವುದು ಸಂತಸದ ಸಂಗತಿಯಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ


