ಪ್ರಕೃತಿ ಮತ್ತು ಧಾರ್ಮಿಕ ಸಂಸ್ಕೃತಿ ಜೊತೆ ಜೊತೆಯಾಗಿ ಮೈಳೈಸಿದ ಧರೆಗಿಳಿದ ಸ್ವರ್ಗವೇ ಮೆಟ್ಕಲ್ ಗುಡ್ಡ
ಪಶ್ಚಿಮ ಘಟ್ಟಗಳ ಸಾಲುಗಳನ್ನು ಹೊದಿಕೆಯಾಗಿರಿಸಿಕೊಂಡಿರುವ ಅದ್ಭುತ ಪ್ರಕೃತಿ ರಮ್ಯ ತಾಣವೇ ಮೆಟ್ಕಲ್ ಗುಡ್ಡ ವೈಭವಪೂರ್ಣ ಮತ್ತು ಭಕ್ತಿಪ್ರಧ ಇತಿಹಾಸವನ್ನು ಹೊಂದಿರುವ ಮೆಟ್ಕಲ್ ಗುಡ್ಡ ಭೂಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿದ್ದು, ಮೇರುಭಾಗದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ಗಣಪತಿ ದೇವಾಲಯವಿದೆ ಗಣಪತಿ ದೇವರು ಇಲ್ಲಿ ಉದ್ಭವ ರೂಪಿಯಾಗಿ ಇಲ್ಲಿ ಅವತರಿಸಿದ್ದಾರೆ.
ಒಂದು ಕಡೆ ಹಾಲಾಡಿ ನದಿ, ಇನ್ನೊಂದು ಕಡೆ ಹೊಸಂಗಡಿ ಪಟ್ಟಣ ಮತ್ತು ಎಲ್ಲೆಡೆ ಕಣ್ಮನ ಸೆಳೆಯುವ ಪಶ್ಚಿಮ ಘಟ್ಟಗಳ ಶ್ರೇಣಿಯನ್ನು ನೀವು ನೋಡಬಹುದು ಎರಡು ಕಿ.ಮೀ ಬೆಟ್ಟದ ಮೇಲೆ ನಡೆಯುವ ದಣಿವನ್ನು ಈ ದೃಶ್ಯ ಮತ್ತು ತಂಪಾದ ಗಾಳಿ ಮರೆಸುತ್ತದೆ.
ಇಲ್ಲಿ ಪುಟ್ಟದಾದ ನೀರಿನ ಹೊಂಡವಿದ್ದು ಇದು ಯಾವ ಸಮಯದಲ್ಲಿಯೂ ಬತ್ತುವುದಿಲ್ಲ. ಹಾಗೆಯೇ, ಇಲ್ಲಿ ದೇವಳದ ಘಂಟೆಗಳು ಗಾಳಿಯ ಅಬ್ಬರಕ್ಕೆ ತನ್ನಷ್ಟಕ್ಕೆ ಅಲುಗಾಡಿ ಶಬ್ದವಾಗುವುದು ಈ ದೇವಾಲಯದ ವಿಶೇಷತೆಯಾಗಿದೆ. ಬೆಟ್ಟದ ಮೇಲೆ ನಿಂತರೆ ನಿಮಗೆ ಒಂದು ಬದಿಯಲ್ಲಿ ಹಾಲಾಡಿ ನದಿ, ಇನ್ನೊಂದು ಬದಿಯಲ್ಲಿ ಹೊಸಂಗಡಿ ಪಟ್ಟಣ ಮತ್ತು ಪಶ್ಚಿಮ ಘಟ್ಟಗಳ ವ್ಯಾಪ್ತಿಯನ್ನು ಎಲ್ಲೆಡೆ ನೋಡಬಹುದಾಗಿದೆ.


ಈ ಉಧ್ಭವ ಮೂರ್ತಿ ಗಣಪತಿಯ ಬಗ್ಗೆ ದಂತಕಥೆಯೊಂದಿದೆ ಹಲವು ಶತಮಾನಗಳ ಹಿಂದೆ ಒಬ್ಬ ಬ್ರಾಹ್ಮಣ ಕಲ್ಲು ಬಾಳೆ ಎಲೆಯನ್ನು ತರಲು ಬೆಟ್ಟದ ಮೇಲ್ಭಾಗಕ್ಕೆ ಹೋದಾಗ ಗಣಪತಿ ಮೂರ್ತಿಯನ್ನು ಕಂಡು ಅದನ್ನು ಕಲ್ಲು ಬಾಳೆ ಎಲೆಯಲ್ಲಿ ಕಟ್ಟಿಕೊಂಡು ಮನೆಗೆ ತರುತ್ತಾನೆ ಇದರಿಂದ ಅವನಿಗೆ ನಾನಾ ತರಹದ ತೊಂದರೆ, ತಾಪತ್ರಯಗಳು, ಕಷ್ಟ ನಷ್ಟ ಉಂಟಾಗುತ್ತದೆ ಅವನ ಕನಸಿನಲ್ಲಿ ಗಣಪತಿ ಪ್ರತ್ಯಕ್ಷನಾಗಿ ನಾನು ಮೇಲೆ ಇರಬೇಕಾದವನು, ನನ್ನನ್ನು ಕೆಳಗಡೆ ತಂದು ನೀನು ತಪ್ಪು ಮಾಡಿದೆ ಪುನಃ ನನ್ನನ್ನು ಮೇಲೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸು ಎಂದು ಸೂಚನೆ ನೀಡುತ್ತಾನೆ ಗಣಪತಿ ದೇವರ ಸೂಚನೆಯಂತೆ ಬ್ರಾಹ್ಮಣ ಪುನಃ ಬೆಟ್ಟದ ಮೇಲೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತಾನೆ.
ಮೆಟ್ಕಲ್ ಗುಡ್ಡ ಗತಕಾಲದ ಭವ್ಯ ಇತಿಹಾಸವನ್ನು ಹೊಂದಿರುವ ಕ್ಷೇತ್ರ ಈಗ ಶಿಥಿಲಾವಸ್ಥೆಯಲ್ಲಿರುವ ಕೋಟೆ ಅಂದಿನ ಗತವೈಭವವನ್ನು ಸಾರಿ ಹೇಳುತ್ತದೆ ಕ್ರಿ.ಶಕ 1546 ರಲ್ಲಿ ಹೊನ್ನಕಂಬಳಿ ರಾಜರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿ ಮೆರೆದಿದ್ದ ಮೆಟ್ಕಲ್ ಗುಡ್ಡ ನಂತರ ಕೆಳದಿ ಸಾಮ್ರಾಜ್ಯದ ಶಿವಪ್ಪ ನಾಯಕನ ಕಾಲದಲ್ಲೂ ವೈಭವಯುತವಾಗಿ ಮೆರೆದಿತ್ತು ಗುಡ್ಡದ ತುದಿ ತಲುಪಲು ಶಿವಪ್ಪ ನಾಯಕನ ಕಾಲದಲ್ಲಿ ಮೆಟ್ಟುಗಲ್ಲುಗಳನ್ನು ಹಾಸಿ ದಾರಿ ನಿರ್ಮಾಣ ಮಾಡಿದ್ದರಿಂದ ಮೆಟ್ಕಲ್ ಗುಡ್ಡ ಎಂಬ ಹೆಸರು ಬಂತು.
ಅಲ್ಲಿರುವ ಕೋಟೆ ಸುತ್ತಲಿನ ಸಮಗ್ರ ವೀಕ್ಷಣೆಗೆ ಅನುಕೂಲವಾಗಿದ್ದು, ರಾಜರ ಆಳ್ವಿಕೆಯ ಕಾಲದಲ್ಲಿ ಶತ್ರುಗಳ ಸುಳಿವನ್ನು ಕೊಡುವ ಸೂಚನಾ ಕೇಂದ್ರವಾಗಿತ್ತು.

ಮೆಟ್ಕಲ್ ಗುಡ್ಡದ ಮೇಲೆ ನಿಂತು ಸುತ್ತಲೂ ವೀಕ್ಷಣೆ ಮಾಡಿದರೆ ಸ್ವರ್ಗಸೃದಸ್ಯ ಪ್ರಕೃತಿಯ ದರ್ಶನವಾಗುತ್ತದೆ ಪೂರ್ವದಲ್ಲಿ ಚಂಡಿಕಾಂಬೆ, ಪಕ್ಕದಲ್ಲಿ ವಾರಾಹಿ ನದಿ, ವಾರಾಹಿ ವಿದ್ಯುದಾಗರ, ಉತ್ತರದ ನೋಟದಲ್ಲಿ ಹೊಸಂಗಡಿ ಊರು, ಐತಿಹಾಸಿಕ ಕೋಟೆಕೆರೆ, ಪಶ್ಚಿಮದಲ್ಲಿ ಕರಾವಳಿ ನೋಟ ಕೆಳಗೆ ದೃಷ್ಟಿ ಹಾಯಿಸಿದರೆ ಇರುವೆಗಳಂತೆ ಸಾಗುವ ಜನ, ವಾಹನಗಳು, ಹಸಿರು ಗದ್ದೆಗಳು, ಕಾಡಂಚಿನ ಮನೆಗಳು ಗೋಚರಿಸುತ್ತದೆ. ಪ್ರಕೃತಿಯ ನೋಟದಲ್ಲಿ ತನ್ಮಯತೆಯಿಂದ ಲೀನವಾಗುವ ಕ್ಷಣದಲ್ಲಿ ದೂರದಿಂದ ಬೀಸಿ ಬರುವ ತಂಗಾಳಿ ಗಣಪತಿ ದೇಗುಲದ ಘಂಟೆಗಳ ನಿನಾದವನ್ನು ಬಡಿದೆಬ್ಬಿಸುತ್ತದೆ.
ಮೇರುಭಾಗದಲ್ಲಿ ಯೋಗಮುದ್ರೆಯಲ್ಲಿ ಕುಳಿತಿರುವ ಗಣಪತಿ ದೇವರನ್ನು ನೋಡುವಾಗ ಭಕ್ತಿಪ್ರಧ ಅನುಭೂತಿ ಉಂಟಾಗುತ್ತದೆ ಗಣಪತಿ ಸಾನ್ನಿಧ್ಯದ ಈಶಾನ್ಯ ಭಾಗದಲ್ಲಿ ನಾಗದೇವರ ಸಾನ್ನಿಧ್ಯವಿದೆ.
ಜೊತೆಗೆ ಬ್ರಹ್ಮ ಮತ್ತು ಯಕ್ಷೇಶ್ವರಿ ದೇವರನ್ನು ಕೂಡಾ ಪ್ರತಿಷ್ಠಾಪಿಸಲಾಗಿದೆ ದೇಗುಲದ ಅರ್ಚಕರು ಹೇಳುವಂತೆ ಈ ಸಾನ್ನಿಧ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅಗಸ್ತ್ಯ ಮಹಾಮುನಿಗಳು ಇದೇ ಸ್ಥಳದಲ್ಲಿ ತಪ್ಪಸ್ಸಿನ ಮೂಲಕ ಒಲಿಸಿಕೊಂಡ ಪರಮ ಪವಿತ್ರ ತಪೋಭೂಮಿ ಇದು. ಅಗಸ್ತ್ಯ ಮುನಿಗಳು ಈಶ್ವರ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರು ಎಂದು ಅಷ್ಟಮಂಗಲ ಪ್ರಶ್ನಾಮಾರ್ಗದಲ್ಲಿ ತಿಳಿದುಬಂತು ಕಾಲಕ್ರಮೇಣ ಜೈನರ ಕಾಲದಲ್ಲಿ ಈಶ್ವರ ದೇಗುಲ ನಶಿಸಿತ್ತು ತದ ನಂತರ ರಾಜ್ಯವನ್ನಾಳುತ್ತಿದ್ದ ರಾಜವಂಶಸ್ಥರು ಇಲ್ಲಿ ಗಣಪತಿ ದೇವರನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವಿದೆ. 1992 ರಲ್ಲಿ ಈ ದೇಗುಲದ ಪುನರ್ ಪ್ರತಿಷ್ಠಾಪನೆ ಕಾರ್ಯ ನೇರವೇರಿತ್ತು ಪ್ರತಿವರ್ಷ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಇಲ್ಲಿ ಪ್ರಮುಖ ಉತ್ಸವದ ರೂಪದಲ್ಲಿ ಸಂಪನ್ನಗೊಳ್ಳುತ್ತದೆ.
ಮಂಗಳವಾರ ಮತ್ತು ಗಣೇಶ ಚತುರ್ಥಿ ದಿನ ಇಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇತರ ದಿನಗಳಲ್ಲಿ ಗಣಹೋಮ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯುತ್ತಿರುತ್ತದೆ ಮೆಟ್ಕಲ್ ಗುಡ್ಡ ಏರಲು ಎರಡು ದಾರಿಗಳಿವೆ ಒಂದು ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದ್ದು, ಅದು ಹೊಸಂಗಡಿಯಿಂದ ಹೊರಟು ಭಾಗಿಮನೆಯೆಂಬ ಹಳ್ಳಿಯ ಮೂಲಕ ಹಾದುಹೋಗುತ್ತದೆ. ಇನ್ನೊಂದು short cut ದಾರಿ ಗೆರ್ಸಕಲ್ ಎಂಬ ಊರಿನ ಮೂಲಕ ಸಾಗುತ್ತದೆ.

ಶಿವಪ್ಪ ನಾಯಕನ ಕಾಲದಲ್ಲಿ ಸ್ವರ್ಣಕವಚಗಳನ್ನು ಹೊಂದಿದ್ದ ಮೆಟ್ಟಿಲುಗಳು ಇಂದು ಕೇವಲ ಕಲ್ಲುಗಳ ಮೆಟ್ಟಿಲಾಗಿ ಉಳಿದಿದೆ ಮೆಟ್ಕಲ್ ಗುಡ್ಡ ಪ್ರಕೃತಿ ನಿರ್ಮಿತ ಹಲವು ವಿಸ್ಮಯಗಳ ತಾಣವಾಗಿದ್ದು, ಎರಡು ಸಾವಿರ ಎತ್ತರದದಲ್ಲಿ ಗಣಪತಿ ದೇಗುಲದ ಬಳಿ ಇರುವ ಬಾವಿಯಲ್ಲಿ ಸದಾಕಾಲವೂ ನೀರು ಇರುತ್ತದೆ. ಆಧ್ಯಾತ್ಮಿಕ ತಪೋಭೂಮಿಯಾಗಿರುವ ಮೆಟ್ಕಲ್ ಗುಡ್ಡ ವಿಘ್ನನಾಯಕ ವಿನಾಯಕನ ಪುಣ್ಯಭೂಮಿ. ಧರಣಿ ದೇವಿಯ ಭೂಸ್ವರ್ಗ ಬೆಟ್ಟದ ಮೇಲಿನ ಗಣಪ ಬೆಟ್ಟದಷ್ಟು ದೊಡ್ಡ ಸಮಸ್ಯೆಯನ್ನೂ ಪರಿಹರಿಸುತ್ತಾನೆ ಎಂಬ ಅಚಲವಾದ ನಂಬಿಕೆ ಜನರಲ್ಲಿ ಇರುವುದರಿಂದ ಮೆಟ್ಕಲ್ ಗುಡ್ಡದ ಗಣಪತಿ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬನ್ನಿ ನಾವೆಲ್ಲರೂ ಸೇರಿ ಗಣಪತಿಯ ದರ್ಶನ ಪಡೆದು, ಪ್ರಕೃತಿ ಮತ್ತು ಧಾರ್ಮಿಕ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳೊಣ.
ವರದಿ: ಸುಧಾಕರ ಖಾರ್ವಿ
www.kundapura.com







