ನೀರಿನೊಳಗಿನ ಅದ್ಭುತ ಜಗತ್ತು ಎಂಬ ಖ್ಯಾತಿಗೆ ಪಾತ್ರವಾಗಿರುವ ನೇತ್ರಾಣಿ ದ್ವೀಪ ಹಲವು ವಿಸ್ಮಯಗಳ ಆಗರ ಅಂತದೊಂದು ವಿಸ್ಮಯಕಾರಿ ವಿಷಯವೊಂದು ಇಲ್ಲಿ ಪಡಿಮೂಡಿದ್ದು, ಕೌತುಕದ ಕುರುಹಾಗಿ ಅನಾವರಣಗೊಂಡಿದೆ ನೇತ್ರಾಣಿ ದ್ವೀಪದ ಎಡಪ್ವಾರ್ಶದಲ್ಲಿ ನಡೆದುಕೊಂಡು ಹೋಗಬಹುದಾದ ಇಳಿಜಾರಿನ ಕಾಲುದಾರಿ ಇದೆ ಇಲ್ಲಿ ಬಂಡೆಗಳ ಎಡೆಯಲ್ಲಿ ಒತ್ತೊತ್ತಾಗಿ ಬೆಳೆದು ನಿಂತಿರುವ ಕೇದಗೆ ವೃಕ್ಷಗಳ ಸಮೂಹವೇ ವಿಸ್ಮಯಕಾರಿ ಸಂಗತಿಯ ಕೇಂದ್ರ ಬಿಂದು.
ನೇತ್ರಾಣಿಗೆ ಹೋದವರು ಕೇದಗೆ ವೃಕ್ಷಗಳ ಕಡೆ ಹೋಗಲು ಭಯಪಡುತ್ತಾರೆ.ಕಾರಣ ಕೇಳಿದರೆ ಮೈ ಜುಂ ಅನ್ನುವುದು ಖಂಡಿತಾ. ಈ ಕೇದಗೆ ವೃಕ್ಷಗಳ ಬಂಡೆಗಳ ಎಡೆಗಳಲ್ಲಿ ಭಯಾನಕ ಸುರಂಗ ಮಾರ್ಗಗಳಿರುವುದರಿಂದ ಇಲ್ಲಿರುವ ಕೇದಗೆ ವೃಕ್ಷಗಳ ಕೇದಗೆ ಹೂವಿಗೆ ಸುರಂಗ ಕೇದಗೆ ಎಂಬ ಹೆಸರಿದೆ ಈ ಕೇದಗೆ ಪುಷ್ಪವು ಭೂಭಾಗದಲ್ಲಿ ಇರುವ ಕೇದಗೆ ಹೂವಿನಕ್ಕಿಂತ ದೊಡ್ಡ ಗಾತ್ರದಲ್ಲಿ ಇರುತ್ತಿದ್ದು, ತುಂಬಾ ಸುವಾಸನೆ ಬರುತ್ತದೆ ಈ ಕೇದಗೆ ವೃಕ್ಷಗಳ ಸಮೂಹದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪಗಳು ವಾಸವಾಗಿದ್ದು, ಅಪ್ಪಿತಪ್ಪಿ ಯಾರಾದರೂ ಕೇದಗೆ ವೃಕ್ಷಗಳ ಕಡೆ ಹೋದರೆ ಅಟ್ಟಿಸಿಕೊಂಡು ಬರುತ್ತದೆ ಎಂದು ಬಲ್ಲವರು ಹೇಳುತ್ತಾರೆ ಅಂತ ಕೆಲವು ಘಟನೆಗಳು ಇಲ್ಲಿ ನಡೆದಿರುವುದರಿಂದ ಕೇದಗೆ ವೃಕ್ಷಗಳ ಕಡೆ ಹೋಗಲು ಜನರು ಹೆದರುತ್ತಾರೆ.
ಈ ಪ್ರದೇಶಕ್ಕೆ ಹೋದರೆ ಮಾತ್ರ ಈ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತದೆ ಎಂಬ ಪ್ರತೀತಿ ಇದ್ದು, ಅವುಗಳು ಉಳಿದಂತೆ ದ್ವೀಪದ ಇತರ ಭಾಗದಲ್ಲಿ ಕಾಣಿಸದೇ ಕೇದಗೆ ವೃಕ್ಷಗಳ ಸಮೂಹದಲ್ಲಿ ಯಾರಿಗೂ ತೊಂದರೆ ಕೊಡದೇ ತಮ್ಮಷ್ಟಕ್ಕೆ ತಾವು ಇರುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಈ ಕಾಳಿಂಗ ಸರ್ಪಗಳು ಇಲ್ಲಿಗೆ ಹೇಗೆ ಬಂದವು ಎಂಬುದಕ್ಕೆ ಜನಜನಿತ ಕಥೆಯೊಂದು ಹೀಗೆ ಪ್ರಸ್ತುತವಾಗುತ್ತದೆ ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಭಟ್ಕಳದ ಹೊನ್ನೆಗದ್ದೆ ಕಡಲತೀರದ ಬಂಡೆಕಲ್ಲುಗಳ ಮೇಲೆ ಹಲವಾರು ವರ್ಷಗಳ ಹಿಂದೆ ಹರಿದು ಹೋದ ಕಾಳಿಂಗ ಸರ್ಪದ ದೇಹದ ಗುರುತುಗಳನ್ನು ಹಿರಿಯ ಮೀನುಗಾರರು ತೋರಿಸುತ್ತಾರೆ ಇಲ್ಲಿನ ಜಟಗ ದೇವಸ್ಥಾನದ ಬಲ್ಲೆಯ ಕಡೆಯಿಂದ ಬೃಹತ್ ಕಾಳಿಂಗ ಸರ್ಪ ಸಮುದ್ರದಲ್ಲಿ ಸಾಗಿ ನೇತ್ರಾಣಿ ದ್ವೀಪವನ್ನು ಸೇರಿತ್ತು ಎಂದು ಅವರು ಕಥಾನಕವನ್ನು ಬಿಚ್ಚಿಡುತ್ತಾರೆ.
ಮೀನುಗಾರರಿಗೆ ಕೇದಗೆ ವೃಕ್ಷ ಸಮೂಹದ ಕಾಳಿಂಗ ಸರ್ಪದ ಕಥೆ ಗೊತ್ತಿರುವುದರಿಂದ ಆ ಕಡೆ ಹೋಗದಂತೆ ಜನರನ್ನು ಎಚ್ಚರಿಸುತ್ತಾರೆ ವರ್ಷಕೊಮ್ಮೆ ನೇತ್ರಾಣಿ ದ್ವೀಪಕ್ಕೆ ಹೋಗಲು ಜನರಿಗೆ ಅವಕಾಶವಿದೆ ಇಲ್ಲಿರುವ ಜಟ್ಟೀಗೇಶ್ವರ ಮತ್ತು ಪರಿವಾರ ದೈವಗಳಿಗೆ ಮಾಘ ಮಾಸದ ಹುಣ್ಣಿಮೆಯ ದಿನ ಪೂಜೆ ಸಲ್ಲಿಸುವ ಸಂಪ್ರದಾಯವಿದೆ ಆ ಸಮಯದಲ್ಲಿ ಜನರನ್ನು ಬೋಟ್ ನವರು ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ.ಹಾಗೆ ಬಂದ ಜನರಿಗೆ ಸುರಂಗ ಕೇದಗೆ ವೃಕ್ಷ ಸಮೂಹದ ಕಡೆ ಹೋಗದಂತೆ ಎಚ್ಚರಿಕೆ ನೀಡುತ್ತಾರೆ.
ಪ್ರಕೃತಿಯ ಪ್ರತಿಯೊಂದು ವಿಷಯಗಳು ವಿಸ್ಮಯಕಾರಿ ಕೌತುಕಗಳ ಭಂಡಾರವಾಗಿರುವ ಜಗತ್ತಿನ ಜೀವರಾಶಿಗಳು ಪ್ರಕೃತಿಯ ವಿಸ್ಮಯದೊಂದಿಗೆ ತಮ್ಮನ್ನು ವಿಧೇಯಿಸಿಕೊಂಡಿರುವುದು ಕೂಡಾ ಅಷ್ಟೇ ಸತ್ಯ
ಅದಕ್ಕೆ ನೇತ್ರಾಣಿ ದ್ವೀಪದ ಸುರಂಗ ಕೇದಗೆ ವೃಕ್ಷಗಳ ರೋಮಾಂಚನಕಾರಿ ಕಥನವೇ ಸಾಕ್ಷಿ.
ಉಮಾಕಾಂತ ಖಾರ್ವಿ ಕುಂದಾಪುರ


