ಪ್ರಕೃತಿಯ ಆರಾಧನೆ ಮೇರಿಮಾತೆಯ ಉಪಾಸನೆ ಕ್ರೈಸ್ತರ ತೆನೆಹಬ್ಬ

kundapuradotcom@gmail.com
3 Min Read

ಏಸುಕ್ರಿಸ್ತರ ಜನನ, ಜೀವನ, ಮರಣ ಮತ್ತು ಪುನುರುಥ್ಥಾನದ ಕ್ರೈಸ್ತಧರ್ಮೀಯರ ಆಚರಣೆಗಳನ್ನು ದೈವ ಆರಾಧನಾ ವರ್ಷದಲ್ಲಿ ಕಾಲಕಾಲಕ್ಕೆ ಆಚರಿಸಿಕೊಂಡು ಬರಲಾಗುತ್ತಿದೆ.ಇದನ್ನು ಹೊರತುಪಡಿಸಿ ಕ್ರೈಸ್ತರು ಮಾತೆ ಮರಿಯಮ್ಮ ಹಾಗೂ ಇತರ ಸಂತರ ಕೆಲವೊಂದು ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ.ಅವುಗಳಲ್ಲಿ ಮಾತೆ ಮರಿಯಮ್ಮನ ಜನ್ಮ ದಿನವನ್ನು ಹೊಸತು ಊಟ ಮಾಡುವ ತೆನೆಹಬ್ಬವನ್ನಾಗಿ ಆಚರಿಸುವ ಸಂಪ್ರದಾಯವಿದೆ.ಸ್ಥಳೀಯ ಮಣ್ಣಿನ ಸಂಸ್ಕೃತಿಯನ್ನು ಧಾರ್ಮಿಕತೆಯ ಉಪಾಸನೆಯೊಂದಿಗೆ ಮಿಳಿತಗೊಳಿಸುವ ಈ ತೆನೆಹಬ್ಬದ ಆಚರಣೆಯನ್ನು ಕರ್ನಾಟಕ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಯ ಕೊಂಕಣಿ ಮಾತೃಭಾಷೆಯ ಕ್ರೈಸ್ತ ಧರ್ಮೀಯರು ನಡೆಸಿಕೊಂಡು ಬಂದಿದ್ದಾರೆ.

ಕರಾವಳಿ ಕ್ರೈಸ್ತರು ಪ್ರಕೃತಿಯ ಆರಾಧನೆಯೊಂದಿಗೆ ಏಸುಕ್ರಿಸ್ತರ ತಾಯಿ ಮಾತೆ ಮೇರಿಯಮ್ಮನ ಉಪಾಸನೆ ಮಾಡುವ ಪವಿತ್ರ ದಿನವನ್ನು ಮೊಂತಿ ಫೆಸ್ತಾ ಅಥವಾ ತೆನೆಹಬ್ಬ ಎಂದು ಕರೆಯುತ್ತಾರೆ.ಈ ತೆನೆಹಬ್ಬವನ್ನು ಮಾತೆಮೇರಿಯಮ್ಮನ ಜನ್ಮದಿನವಾದ ಸೆಪ್ಟೆಂಬರ್ 8 ರಂದು ಬಹಳ ಶ್ರಧ್ದೆ ಭಕ್ತಿಯಿಂದ ಆಚರಿಸುತ್ತಾರೆ.

ಈ ತೆನೆಹಬ್ಬದ ಆಚರಣೆ ಹಿಂದೂ ಧರ್ಮೀಯರು ಆಚರಿಸುವ ಹೊಸ್ತುಹಬ್ಬದ ಸಾಮತ್ಯೆಯನ್ನು ಹೊಂದಿದ್ದು,ಧರ್ಮಗಳು ಪ್ರಕೃತಿಯನ್ನು ಗೌರವಿಸುವ ಪರಂಪರೆಯನ್ನು ಸೂಚಿಸುತ್ತದೆ. ಗದ್ದೆಗಳಲ್ಲಿ ಭತ್ತದ ತೆನೆಗಳು ಕದಿರು ರೂಪದಲ್ಲಿ ಹಾಲುಗಟ್ಟಿ ಹಚ್ಚಹಸುರಾಗಿ ನಳನಳಿಸುವ ಸಮಯ. ಈ ಭತ್ತದ ತೆನೆಗಳನ್ನು ಗದ್ದೆಯಿಂದ ಚರ್ಚ್ ಗಳಿಗೆ ಕೊಂಡುಹೋಗಿ ಹೊಸ ಫಸಲಿಗಾಗಿ ದೇವರಿಗೆ ಕೃತಜ್ಞತೆಯನ್ನು ಸಮರ್ಪಿಸಿ ಹೊಸತೆನೆಯನ್ನು ಧರ್ಮಗುರುಗಳು ಪವಿತ್ರೀಕರಿಸಿದ ಬಳಿಕ ಎಲ್ಲರಿಗೂ ಹಂಚಲಾಗುತ್ತದೆ.

ಪವಿತ್ರೀಕರಿಸಿದ ಹೊಸತೆನೆಯನ್ನು ಮನೆಗೆ ಒಯ್ದು,ಅದರಲ್ಲಿ ಸ್ವಲ್ಪ ಪ್ರಮಾಣದ ಭತ್ತವನ್ನು ತೆಗೆದುಕೊಂಡು ಹೊಸಕ್ಕಿ ಅನ್ನ ತಯಾರಿಸಲಾಗುತ್ತದೆ. ಬಳಿಕ ವಿಧವಿಧವಾದ ತರಕಾರಿಯಿಂದ ಮಾಡಲಾದ ಸಸ್ಯಹಾರ ಊಟವನ್ನು ಕುಟುಂಬದ ಸದಸ್ಯರು ಮಾಡುತ್ತಾರೆ. ಹಾಗಾಗಿ ಈ ತೆನೆಹಬ್ಬಕ್ಕೆ ಕುಟುಂಬದ ಹಬ್ಬ ಎಂದೂ ಕರೆಯುತ್ತಾರೆ.

ಒಂದು ವೇಳೆ ಕುಟುಂಬ ಸದಸ್ಯರು ದೂರದ ಊರಿನಲ್ಲಿ ಇದ್ದರೆ,ಅಂಚೆ ಅಥವಾ ಕೊರಿಯರ್ ಮೂಲಕ ಭತ್ತದ ಹೊಸತೆನೆಗಳನ್ನು ಕಳುಹಿಸುವ ಪದ್ಧತಿಯೂ ಉಂಟು. ಈ ತೆನೆಹಬ್ಬದ ಪೂರ್ವಭಾವಿಯಾಗಿ 9 ದಿನಗಳ ಆಧ್ಯಾತ್ಮಿಕ ಉಪಾಸನೆಯಂತೆ ಬಾಲೆ ಮೇರಿಯಮ್ಮನ ಪ್ರತಿಮೆಗೆ ವಿಧವಿಧವಾದ ಹೂಗಳ ಪುಷ್ಪಾರ್ಚನೆ ಇರುತ್ತದೆ.ಇದರಲ್ಲಿ ಮಕ್ಕಳಿಗೆ ಪ್ರಥಮ ಪ್ರಾಶಸ್ತ್ಯವಿದ್ದು,ಮಕ್ಕಳು ಪ್ರತಿದಿನ ವಿಧವಾದ ಪುಷ್ಪಗಳನ್ನು ಸಂಗ್ರಹಿಸಿ ತಂದು ಬಾಲೆ ಮೇರಿಯಮ್ಮನಿಗೆ ಅರ್ಪಿಸಿ ಸಂಭ್ರಮಿಸುತ್ತಾರೆ.ಹಿರಿಯರು ಈ ಸಂಭ್ರಮದಲ್ಲಿ ಶ್ರದ್ಧೆ ಭಕ್ತಿಯಿಂದ ಇದರಲ್ಲಿ ಪಾಲ್ಗೊಂಡು ಪುಷ್ಪಾರ್ಚನೆಯ ಸೊಬಗು ಸವಿಯುತ್ತಾರೆ.

ಕರಾವಳಿ ಕ್ರೈಸ್ತರ ಈ ತೆನೆಹಬ್ಬಕ್ಕೆ 250 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದ್ದು,ಮಂಗಳೂರು ಫರಂಗಿಪೇಟೆಯ Monte Mariano ಇಗರ್ಜಿ ಅದಕ್ಕೆ ಸಾಕ್ಷಿಯಾಗಿದೆ. ಆ ಕಾಲಘಟ್ಟದಲ್ಲಿ ಈ ಪ್ರದೇಶದಲ್ಲಿ ಧರ್ಮ ಪ್ರಚಾರಕರಾಗಿ ಆಗಮಿಸಿದ ಕ್ರೈಸ್ತ ಧರ್ಮಗುರುಗಳಾದ ಜೋಚಿನ್ ಮಿರಾಂಡಾ ಎಂಬುವರು ಈ ಪದ್ಧತಿಯನ್ನು ಪ್ರಾರಂಭಿಸಿದರು ಎಂಬ ಉಲ್ಲೇಖವಿದೆ.ಮಂಗಳೂರು ನಗರದ ಹೊರವಲಯದ ನೇತ್ರಾವತಿ ನದಿ ತೀರದ ಎತ್ತರದ ಗುಡ್ಡ ಪ್ರದೇಶದಲ್ಲಿ ಮಾಂಟೆ ಮರಿಯಾನೋ ಎಂಬ ಸ್ಥಳವಿದೆ. ಚರ್ಚ್ ವಾರ್ಷಿಕ ಹಬ್ಬಕ್ಕೆ ಹೊಂದಿಕೆಯಾಗುವಂತೆ ಈ ಸ್ಥಳದಲ್ಲಿ ಮೊಂತಿ ಫೆಸ್ತಾ ಪ್ರಾರಂಭಿಸಲು ನಾಂದಿ ಹಾಡಿದರು ಎಂಬ ಉಲ್ಲೇಖವಿದೆ. ಈ ಹಬ್ಬವನ್ನು ನೇಟಿವೇಟಿ ಆಫ್ ಮೇರಿ ಎಂದೂ ಕರೆಯುತ್ತಾರೆ. ಒಂಬತ್ತು ದಿನಗಳ ಮೇರಿಯಮ್ಮನ ನೊವೆನ್ನಾ ಆರಾಧನೆಯ ಬಳಿಕ ಚರ್ಚ್ ನಲ್ಲಿ ತೆನೆಹಬ್ಬದ ದಿನ ವಿಶೇಷ ಬಲಿಪೂಜೆ,ಹೊಸ ಭತ್ತದ ತೆನೆಗಳ ಪವಿತ್ರೀಕರಣ,ವಿತರಣೆ,ಧರ್ಮಗುರುಗಳಿಂದ ವಿಶೇಷ ಆಶೀರ್ವಚನ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತದೆ.

ಹಬ್ಬದ ಶುಭಾಶಯಗಳ ವಿನಿಮಯದ ಜೊತೆಗೆ ಸಿಹಿತಿಂಡಿ ಮತ್ತು ಕಬ್ಬುಗಳನ್ನು ಕೂಡಾ ವಿತರಿಸಲಾಗುತ್ತದೆ. ಮನುಷ್ಯನನ್ನು ಪ್ರಕೃತಿಯ ರಕ್ಷಣೆಯ ಜವಾಬ್ದಾರರನ್ನಾಗಿಸುವ ತಿರುಳು ತೆನೆಹಬ್ಬದಲ್ಲಿ ಅಡಕವಾಗಿದೆ. ಈ ಸದ್ದುದೇಶದಿಂದ ಪ್ರಕೃತಿಯ ಫಲವತ್ತತೆಯನ್ನು ಮುಂದಿನ ಪೀಳಿಗೆಗೆ ಉಳಿಸುವಂತೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಪ್ರಕೃತಿಯ ಕೊಡುಗೆಯ ಎಲ್ಲಾ ವರದಾನಗಳನ್ನು ಕರುಣಿಸುವಂತೆ ಮೇರಿಮಾತೆಯಲ್ಲಿ ವಿಶೇಷ ಪ್ರಾರ್ಥನೆಯನ್ನು ತೆನೆಹಬ್ಬದ ಪರ್ವಕಾಲದಲ್ಲಿ ಮಾಡಲಾಗುತ್ತದೆ. ಕುಟುಂಬದ ಏಕತೆ, ಪ್ರಕೃತಿಯ ಆರಾಧನೆ,ಆಧ್ಯಾತ್ಮಿಕ ಉಪಾಸನೆ ಮತ್ತು ಹೆಣ್ಣುಮಕ್ಕಳಿಗೆ ಗೌರವ ನೀಡುವ ಉದಾತ್ತ ಸಂದೇಶ ತೆನೆಹಬ್ಬದಲ್ಲಿ ಅಡಕವಾಗಿದೆ.ಸಂಕೀರ್ಣಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಸಡಿಲಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ತೆನೆಹಬ್ಬ ಸಹಕಾರಿಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment