ಮಳೆಗಾಲ ಇನ್ನೂ ಮುಗಿದಿಲ್ಲ ಸಮುದ್ರ ಅಲೆಗಳ ರೌದ್ರತೆ ಇನ್ನೂ ಕಡಿಮೆಯಾಗಿಲ್ಲ ಪಡುವಣದಿಂದ ಬೀಸಿ ಬರುವ ಗಾಳಿ ಕ್ಷಣಮಾತ್ರದಲ್ಲಿ ಕಡಲಿನ ಸ್ವರೂಪವನ್ನೇ ಬದಲಾಯಿಸಿ ಬಿಡುವುದರಿಂದ ಯಾವ ಕ್ಷಣದಲ್ಲಿ ಸಮುದ್ರ ಪರಿಸರ ಪ್ರಕ್ಷುಬ್ಧಗೊಳ್ಳುವುದು ಎಂದು ಹೇಳಲು ಬರುವುದಿಲ್ಲ.
ಸಮುದ್ರ ಪರಿಸರದ ಬಗ್ಗೆ ಇಂಚಿಂಚೂ ಮಾಹಿತಿ ಇರುವ ಮೀನುಗಾರರೇ ಇಂತಹ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯಲು ಹಿಂಜರಿಯುತ್ತಾರೆ ಆದರೆ ಏಲ್ಲಿಂದಲೋ ಬಂದ ಪ್ರವಾಸಿಗಳು ಯಾವುದನ್ನೇ ಗಣನೆಗೆ ತೆಗೆದುಕೊಳ್ಳದೇ ಸಮುದ್ರದಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗೋಪಾಡಿ ಬೀಚಿನಲ್ಲಿ ನಿನ್ನೆ ಈಜಲು ತೆರಳಿದ್ದ ನಾಲ್ವರ ಪೈಕಿ ಮೂರು ಜನ ಸಮುದ್ರದಲೆಗಳಿಗೆ ಸಿಕ್ಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಜರುಗಿದ್ದು ಸ್ಥಳೀಯ ಜನರಿಂದ ರಕ್ಷಿಸಲ್ಪಟ್ಟ ಯುವಕ ಕೂಡಾ ಜೀವನ್ಮರಣ ಪರಿಸ್ಥಿತಿಯಲ್ಲಿದ್ದಾನೆ.
ಕಳೆದ ಎರಡು ಮೂರು ವರ್ಷಗಳ ಅವಧಿಯಲ್ಲಿ ಬೀಜಾಡಿ, ಗೋಪಾಡಿ, ಕೋಡಿಯ ಬೀಚಿನಲ್ಲಿ ಈಜಲು ತೆರಳಿ ಪ್ರಾಣ ಕಳೆದುಕೊಂಡವರ ಐದನೇ ಪ್ರಕರಣ ಇದಾಗಿದ್ದು, ಪದೇ ಪದೇ ಇಂತಹ ದುರ್ಘಟನೆಗಳು ಸಂಭವಿಸುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಸ್ಥಳೀಯ ಮೀನುಗಾರರು ಸಮುದ್ರದಲ್ಲಿ ಇಳಿಯದಂತೆ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ, ಒಮ್ಮೆ ಈಜಿದ್ದು ಸಾಲದೇ ಮತ್ತೆ ಈಜಲು ತೆರಳಿ ಹದಿ ಹರೆಯದ ಯುವಕರು ತಮ್ಮ ಜೀವ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರದಾಳದಲ್ಲಿ ತೀಕ್ಷ್ಣವಾದ ಅಂಡರ್ ವಾಟರ್ ಕರೆಂಟ್ ಹರಿಯುತ್ತದೆ
ನೀರಿನಲ್ಲಿ ಕಾಲು ಜಾರಿ ಈ ಸುಳಿಗೆ ಸಿಲುಕಿದರೆ ಮತ್ತೆ ಬಚಾವ್ ಆಗಲು ಸಾಧ್ಯತೆ ಬಹಳ ಕಡಿಮೆ. ಈ ಅಂಡರ್ ವಾಟರ್ ಕರೆಂಟ್ ಮನುಷ್ಯನನ್ನು ಕ್ಷಣಮಾತ್ರದಲ್ಲಿ ನಿಶ್ಚೇಷ್ಟಿತನನ್ನಾಗಿ ಮಾಡುತ್ತದೆ. ಕರಾವಳಿಯ ಸೌಂದರ್ಯ ಸವಿಯಲು ರಾಜ್ಯ ಪರರಾಜ್ಯಗಳಿಂದಲೂ ಜನ ಬರುತ್ತಾರೆ ಮುಖ್ಯವಾಗಿ ಕರಾವಳಿಯ ಬೀಚ್ ಗಳು ಅವರ ಆಕರ್ಷಣೆಯ ಕೇಂದ್ರ ಬಿಂದು ಒಂದು ಲೆಕ್ಕದ ಪ್ರಕಾರ ಮಂಗಳೂರಿನಿಂದ ಹಿಡಿದು ಕಾರವಾರದ ತನಕದ ಕರಾವಳಿಯ ಬೀಚ್ ನಲ್ಲಿ ಪ್ರತಿವರ್ಷ ಪ್ರವಾಸಿಗಳು ಈಜಲು ಹೋಗಿ ಜೀವ ಕಳೆದುಕೊಳ್ಳುತ್ತಾರೆ ಹೀಗೆ ಸಾಯುವವರ ಸಂಖ್ಯೆ ವರ್ಷಕ್ಕೆ ನೂರಕ್ಕೂ ಹೆಚ್ಚು.ಅದರಲ್ಲೂ ವಿಶ್ವವಿಖ್ಯಾತ ಮುರುಡೇಶ್ವರ ಬೀಚಿನಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚು.
ಮುರುಡೇಶ್ವರ ಮತ್ತು ತ್ರಾಸಿ, ಮರವಂತೆ ಬೀಚಿನಲ್ಲಿ ಪ್ರಸ್ತುತ ನಿರ್ಬಂಧ ಇರುವುದರಿಂದ ಪ್ರವಾಸಿಗಳು ಇತರೆಡೆ ಲಗ್ಗೆ ಇಡುತ್ತಾರೆ ತ್ರಾಸಿ ಬೀಚ್ ಅತ್ಯಂತ ಅಪಾಯಕಾರಿಯಾಗಿದ್ದು, ಕಾಲಬುಡದಲ್ಲೇ ಆಳವಿದ್ದು,ತಕ್ಷಣವೇ ನೀರಿನಾಳಕ್ಕೆ ಎಳೆದುಕೊಂಡು ಹೋಗುತ್ತದೆ. ಇಲ್ಲಿ ಟೆಟ್ರಾಪೋಡ್ ಅಡಿಪಾಯದಲ್ಲಿ T ಆಕಾರದ ಸುಮಾರು 28 ತಡೆಗೋಡೆ ನಿರ್ಮಾಣ ಮಾಡಲಾಗಿದ್ದು,ಪ್ರವಾಸಿಗಳು ಇದರ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಇಚ್ಚಿಸುತ್ತಾರೆ ಕಳೆದ ಮೂರು ವರ್ಷಗಳ ಹಿಂದೆ ಗದಗ ಮೂಲದ ಯುವಕನೊಬ್ಬ ಇಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟ ದಾರುಣ ಘಟನೆ ನಡೆದಿತ್ತು.
ಸಮುದ್ರ ಪರಿಸರ ನೋಡಲು ಬಲು ಚಂದ ಆದರೆ ಅಷ್ಟೇ ಘನಘೋರ ನಮ್ಮ ಜಾಗತ್ರೆಯಲ್ಲಿ ನಾವು ಇದ್ದರೆ ನಾವು ಇದ್ದಲ್ಲಿ ಯಾವ ದುರಂತಗಳು ಸಂಭವಿಸುವುದಿಲ್ಲ ಪ್ರವಾಸಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಪ್ರತಿಯೊಬ್ಬರ ಜೀವ ಅಮೂಲ್ಯವಾಗಿದೆ ಕ್ಷಣಿಕ ಸಮಯದ ಮೋಜುಮಸ್ತಿಗಾಗಿ ತಮ್ಮ ಜೀವನವನ್ನೇ ಬಲಿಕೊಡುವುದರಲ್ಲಿ ಅರ್ಥವೇ ಇಲ್ಲ ದೂರದೂರಿಗೆ ಪ್ರವಾಸಕ್ಕೆ ತೆರಳಿದ ನಮ್ಮ ಬರುವಿಕೆಗಾಗಿ ನಮ್ಮ ಮನೆಯವರು ಕಾಯುತ್ತಿರುತ್ತಾರೆ ಎಂಬ ಪರಿಜ್ಞಾನ ಪ್ರವಾಸಿಗರಿಗೆ ಇದ್ದಲ್ಲಿ ಇಂತಹ ದುರಂತಗಳು ಸಂಭವಿಸುವುದಿಲ್ಲ.
ವರದಿ: ಉಮಾಕಾಂತ ಖಾರ್ವಿ ಕುಂದಾಪುರ









