ಸಾಮಾನ್ಯರಲ್ಲಿ ಅಸಾಮಾನ್ಯ ಕುಂದಾಪುರದ ಪಾರ್ಸೆಲ್ ಸಿರಾಜ್

kundapuradotcom@gmail.com
3 Min Read

ಜನರು ನಿರ್ದಿಷ್ಟ ಸೇವಾಕ್ಷೇತ್ರದಲ್ಲಿ ಇಡುವ ನಂಬಿಕೆ ಮತ್ತು ವಿಶ್ವಾಸಗಳು ಆ ಸೇವಾಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ವ್ಯಕ್ತಿಗಳ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯ ಮೇಲೆ ಅವಲಂಬಿಸಿರುತ್ತದೆ ವ್ಯಕ್ತಿಗಳು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪರಿ ಮತ್ತು ಜನರಿಗೆ ಕ್ಲಪ್ತಕಾಲಕ್ಕೆ ಅವರಿಂದ ಸಲ್ಲಲ್ಪಡುವ ಸೇವೆ ವಿನಯವಂತಿಕೆ, ಪ್ರಾಮಾಣಿಕತೆ ಹಾಗೂ ವೃತ್ತಿನಿಷ್ಠೆಯ ಕಾರ್ಯಕ್ಷಮತೆಯಿಂದ ಕೂಡಿದರೆ ಆ ಸೇವಾಕ್ಷೇತ್ರದಲ್ಲಿ ದುಡಿಯುತ್ತಿರುವ ವ್ಯಕ್ತಿಗಳು ಜನಮಾನಸದಲ್ಲಿ ದೃಢವಾಗಿ ನೆಲೆ ನಿಲ್ಲುತ್ತಾರೆ ಈ ಕೀರ್ತಿಗೆ ಭಾಜನರಾದವರು ಪಾರ್ಸೆಲ್ ಸಾಯಿಬ್ರು ಎಂದು ಜಿಲ್ಲೆಯಾದಂತ್ಯ ಚಿರಪರಿಚಿತರಾಗಿರುವ ಕುಂದಾಪುರದ ಸಿರಾಜ್ ರವರು.

ಸಿರಾಜ್ ರವರು ಕಳೆದ 41 ವರ್ಷಗಳಿಂದ ಕುಂದಾಪುರ ಬಸ್ ನಿಲ್ದಾಣಕ್ಕೆ ವಿವಿಧ ಬಸ್ಸುಗಳಲ್ಲಿ ಬರುವ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಪಾರ್ಸೆಲ್ ಮತ್ತು ಪತ್ರಗಳನ್ನು ಕರುರುವಕ್ಕಾಗಿ ಸಂಬಂಧಪಟ್ಟವರಿಗೆ ತಲುಪಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಇವರನ್ನು ನಡೆದಾಡುವ ಕೊರಿಯರ್ ಎಂದು ಕೂಡಾ ಪ್ರೀತಿಯಿಂದ ಕರೆಯುತ್ತಾರೆ. ಕೇವಲ ಒಂದು ಪೋನ್ ಕರೆಯ ಮೂಲಕ ಪಾರ್ಸೆಲ್ಗಳನ್ನು ಮತ್ತು ಕಾಗದ ಪತ್ರಗಳನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ತಲುಪಿಸುವ ಸಿರಾಜ್ ರವರ ವೃತ್ತಿನಿಷ್ಠೆಯ ಕಾರ್ಯಕ್ಷಮತೆ ನಿಜಕ್ಕೂ ಶ್ಲಾಘನೀಯ.

ಬಹುಮುಖ್ಯ ಅಗತ್ಯತೆಯ ಮೆಡಿಕಲ್ ಪರಿಕರಗಳು, ಅಂಗಡಿ ಮಳಿಗೆಗಳ ಮನೆಬಳಕೆಯ ವಸ್ತುಗಳು ಸೇರಿದಂತೆ ಅಮೂಲ್ಯವಾದ ಪಾರ್ಸೆಲ್ ಗಳನ್ನು ಗ್ರಾಹಕರ ಮನೆಬಾಗಿಲಿಗೆ, ಅಂಗಡಿ ಬಾಗಿಲಿಗೆ ಕ್ಲಪ್ತಕಾಲಕ್ಕೆ ಯಾವುದೇ ವಿಳಂಬ ಅಥವಾ ಪ್ರಮಾದವಿಲ್ಲದೇ ತಲುಪಿಸುವ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿರಾಜ್ ರವರದು ಜನರ ಪಾಲಿನ ಆದರಣೀಯ ವ್ಯಕ್ತಿತ್ವದ ಕರ್ತವ್ಯ. ಕುಂದಾಪುರದ ಕರೀಂ ಸಾಹೇಬ್ ಮತ್ತು ಜೈನಾಬಿಯವರ ಪುತ್ರನಾಗಿರುವ ಸಿರಾಜ್ ರವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಕುಂದಾಪುರ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದ್ದು, ತಂದೆಯ ಅನಾರೋಗ್ಯದ ಕಾರಣದಿಂದ ತಂದೆ ಮಾಡಿಕೊಂಡು ಬಂದ್ದಿದ ಪಾರ್ಸೆಲ್ ಕಸಬನ್ನು ಅನಿವಾರ್ಯವಾಗಿ ಮುಂದುವರಿಸಿಕೊಂಡು ಬಂದರು.

ತಂದೆಯ ಜೊತೆಗೆ ಪಾರ್ಸೆಲ್ ಕ್ಷೇತ್ರದಲ್ಲಿ ದುಡಿದ ಅನುಭವ, ಸಂಸಾರ ಜವಾಬ್ದಾರಿಯ ತುಡಿತ, ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಸಿರಾಜ್ ರವರನ್ನು ಈ ಕ್ಷೇತ್ರದಲ್ಲಿ ಪಾರ್ಸೆಲ್ ಅಂದರೆ ಸಿರಾಜ್, ಸಿರಾಜ್ ಎಂದರೆ ಪಾರ್ಸೆಲ್ ಎನ್ನುವ ಅನ್ವರ್ಥ ನಾಮ ದೃಢವಾಗಿ ನಿಲ್ಲುವಂತೆ ಮಾಡಿತು ಕುಂದಾಪುರ ಬಸ್ ನಿಲ್ದಾಣಕ್ಕೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಎಷ್ಟು ಗಂಟೆಗೆ ಬರುತ್ತದೆ, ಎಷ್ಟು ಗಂಟೆಗೆ ಹೊರಡುತ್ತದೆ ಎಂಬ ನಿಖರ ಮಾಹಿತಿ ಸಿರಾಜ್ ರವರ ಬಾಯಲ್ಲಿ ಇರುತ್ತದೆ ಯಾರಾದರೂ ಮಾಹಿತಿ ಕೇಳಿದರೆ ತಟ್ಟನೇ ಹೇಳುತ್ತಾರೆ. ಹೀಗಾಗಿ ಸಿರಾಜ್ ಹೆಸರಲ್ಲಿ ದೂರದೂರಿನ ಊರಿನಿಂದ ಪಾರ್ಸೆಲ್ ಕಳುಹಿಸಿಕೊಟ್ಟರೆ ಮಿಸ್ ಆಗುವ ಚಾನ್ಸೇ ಇಲ್ಲ. ಸಿರಾಜ್ ರವರ ಸಂಪರ್ಕವಿಲ್ಲದೇ ಕೆಲವು ಗ್ರಾಹಕರು ಕುಂದಾಪುರದ ತಮ್ಮ ಪರಿಚಿತರಿಗೆ ನೇರವಾಗಿ ಬಸ್ಸಿನಲ್ಲಿ ಪಾರ್ಸೆಲ್ ಕಳುಹಿಸುವುದು ಉಂಟು. ಬಸ್ಸು ತಲುಪಿದ ನಿಗದಿತ ಸಮಯದಲ್ಲಿ ಪಾರ್ಸೆಲ್ ಸ್ವೀಕರಿಸಬೇಕಾದ ವ್ಯಕ್ತಿಗಳು ಬಾರದೇ ಇದ್ದಾಗ ಬಸ್ಸು ಚಾಲಕರು ಆ ಪಾರ್ಸೆಲ್ ನ್ನು ಸಿರಾಜ್ ಬಳಿ ಕೊಡುತ್ತಾರೆ, ವಿನಹಾ ಬಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ.

ಸಿರಾಜ್ ಬಳಿ ಕೊಟ್ಟರೆ ನಿಗದಿತ ಪಾರ್ಟಿಗೆ ಪಾರ್ಸೆಲ್ ನ್ನು ತಪ್ಪದೇ ತಲುಪಿಸುತ್ತಾರೆ ಎಂಬ ದೃಢವಾದ ನಂಬಿಕೆ ಇರುವುದರಿಂದ ಪಾರ್ಸೆಲ್ ಸ್ವೀಕರಿಸುವ ವ್ಯಕ್ತಿಗಳು ನಿಗದಿತ ಸಮಯಕ್ಕೆ ಬರದಿದ್ದ ಪಕ್ಷದಲ್ಲಿ ಬಸ್ಸು ಚಾಲಕರು ಸಿರಾಜ್ ಬಳಿ ಪಾರ್ಸೆಲ್ ಕೊಡುತ್ತಾರೆ. ಈ ಬಗ್ಗೆ ಬಸ್ಸು ಚಾಲಕರು ಪಾರ್ಸೆಲ್ ಕಳುಹಿಸುವ ವ್ಯಕ್ತಿಗಳ ಬಳಿ ಪಾರ್ಸೆಲ್ ತೆಗೆದುಕೊಳ್ಳುವವರು ಬರದಿದ್ದರೆ ಸಿರಾಜ್ ಹತ್ತಿರ ಕೊಡುತ್ತೇನೆ ಎಂದು ಮೊದಲೇ ಸೂಚನೆ ನೀಡುತ್ತಾರೆ. ವಿವಿಧ ಕ್ಷೇತ್ರದ ವೃತ್ತಿ ಉದ್ಯಮಗಳ ಶೀಘ್ರತಮ ಪೂರೈಕೆ ವ್ಯವಸ್ಥೆಗೆ ಪಾರ್ಸೆಲ್ ವ್ಯವಸ್ಥೆಯ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿರುವ ಸಿರಾಜ್ ರವರಿಗೆ ಹಲವು ಕಡೆ ಸನ್ಮಾನಗಳು ನಡೆದಿದೆ 2008 ರಲ್ಲಿ ಸೌತ್ ಕೆನರಾ ಪೋಟೊಗ್ರಾಫರ್ ಅಸೋಸಿಯೇಷನ್ ಉಡುಪಿ, ಮಂಗಳೂರು ಇವರ ವತಿಯಿಂದ ಅಭಿನಂದಿಸಲಾಯಿತು. 2009 ರಲ್ಲಿ ರೋಟರಿ ಕ್ಲಬ್ ಕುಂದಾಪುರ, ಜೆ ಸಿ ಐ ಕುಂದಾಪುರ ಮತ್ತು ಮುಸ್ಲಿಂ ವೆಲ್ಫೇರ್ ಆಸೋಷಿಯೆಷನ್ ಕುಂದಾಪುರ ಇದರ ವತಿಯಿಂದ ಸನ್ಮಾನಿಸಲಾಯಿತು. 2013 ರಲ್ಲಿ ಔಷಧಿ ವ್ಯಾಪಾರಸ್ಥರ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆ ಇದರ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. 2016 ರಲ್ಲಿ ಕುಂದಾಪುರ ಜೆ ಸಿ ಐ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಕುಂದಾಪುರ ಫಾರ್ಮಾ ಸಾಂಸ್ಕೃತಿಕ ಸಂಘಟನೆಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಪ್ರಸ್ತುತ ಸಿರಾಜ್ ರವರ ಪಾರ್ಸೆಲ್ ವ್ಯವಸ್ಥೆಯ ಕಾರ್ಯಕ್ಷೇತ್ರದ ವ್ಯಾಪ್ತಿಯು ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿರುವುದರಿಂದ ಶೀಘ್ರವಾಗಿ ಹಲವು ಕಡೆ ಪಾರ್ಸೆಲ್ ಗಳನ್ನು ತಲುಪಿಸಲು ಉತ್ತರ ಕರ್ನಾಟಕದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಯಶಸ್ಸು ಕಂಡ ಕಂಡಲ್ಲಿ ಬೆಳೆಯುವ ಕಾಡ ಕುಸುಮವಲ್ಲ, ಯಶಸ್ಸು ಆತ್ಮವಿಶ್ವಾಸವುಳ್ಳ, ಸೃಜನಶೀಲ ಮನಸ್ಸುಳ್ಳ, ಶಿಸ್ತುಬದ್ಧತೆಯುಳ್ಳ, ಸಮಯಪ್ರಜ್ಞೆಯುಳ್ಳ, ಚುರುಕಿನ ಉತ್ಸಾಹಿ ವ್ಯಕ್ತಿತ್ವವುಳ್ಳ ಪವಿತ್ರವಾದ ಹೃದಯಗಳಲ್ಲಿ ಬೆಳೆಯುವ ಮಂದಾರ ಪುಷ್ಪ ಎಂಬ ಅನಾಮಿಕ ಚಿಂತಕನ ಮಾತಿನಂತೆ ನಂಬಿಕೆ ಮತ್ತು ವಿಶ್ವಾಸದ ನೆಲೆಗಟ್ಟಿನಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ವಿನಯವಂತಿಕೆಯಿಂದ ಕಠಿಣ ಪರಿಶ್ರಮದಿಂದ ದುಡಿಯುತ್ತಿರುವ ಸಿರಾಜ್ ರವರ ಪಾರ್ಸೆಲ್ ಸೇವಾಕ್ಷೇತ್ರದ ವ್ಯಾಪ್ತಿ ಮತ್ತಷ್ಟೂ ವಿಸ್ತಾರವಾಗಲಿ ಹಾಗೂ ಕುಂದಾಪುರ ಜನರಿಗೆ ಅವರಿಂದ ಇನ್ನಷ್ಟು ಸೇವೆ ದೊರಕುವಂತಾಗಲಿ ಎಂದು ಆಶಿಸುತ್ತೇವೆ.

ಸುಧಾಕರ ಕುಂದಾಪುರ
ಕುಂದಾಪುರ.ಕಾಂ

Share This Article
Leave a Comment