ಕಡಲತೀರದಲ್ಲಿ ನಗರೀಕರಣ ಹೆಚ್ಚಿದಂತೆ ಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದಾಗಿ ಸಾಗರದ ನೈಸರ್ಗಿಕ ಜೀವಮಂಡಲದ ಮೇಲೆ ಒತ್ತಡ ಹೆಚ್ಚುತ್ತದೆ. ನೀರಿನ ಗುಣಮಟ್ಟ ಕೆಡುತ್ತಾ ಬಂದ ಹಾಗೆ ಸಮುದ್ರದ ಮತ್ಸಸಂತತಿ, ಇತರ ಜಲಚರಗಳು ಮತ್ತು ಸಸ್ಯ ಸಂಕುಲಗಳು ಆಘಾತಕ್ಕೆ ಒಳಗಾಗಿ ನಶಿಸಲೂಬಹುದಾಗಿದೆ. ಸಮುದ್ರಕ್ಕೆ ಪರಿತ್ಯಜಿಸಲ್ಪಟ್ಟ ಪ್ಲಾಸ್ಟಿಕ್ ವಸ್ತುಗಳು, ಹರಿದು ಬರುವ ಕೊಳಚೆ ನೀರಿನಲ್ಲಿ ವಿಸರ್ಜಿಸಲ್ಪಡುವ ತಾಮ್ರ ಸೀಸ ಮತ್ತು ಪಾದರಸದಂತ ಭಾರಲೋಹ ಸಂಯುಕ್ತಗಳು ಮೀನುಗಳ ಶರೀರಕ್ಕೆ ಸೇರಿ ಅಂತಿಮವಾಗಿ ಬಳಕೆದಾರರಿಗೂ ರೋಗ ರುಜಿನ ಉಂಟಾಗುತ್ತದೆ ಇಂತಹ ಸಮಸ್ಯೆ ಗಳು ಉದ್ಬವಿಸದಂತೆ ಕಡಲತೀರದ ಸ್ವಚ್ಛತೆ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ.
ನಮ್ಮ ದೇಶದಲ್ಲಿ ಅದ್ಭುತವಾದ, ರಮಣೀಯವಾದ ಕಡಲತೀರಗಳಿವೆ. ಆದರೆ ಕಡಲತೀರದ ಪರಿಸರ ಮಾಲಿನ್ಯ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಕಡಲತೀರದ ಸೌಂದರ್ಯ ವನ್ನು ಆಸ್ವಾದಿಸುವ ಮನಸ್ಥಿತಿ ಇರಬೇಕೇ ವಿನಹಾ ತ್ಯಾಜ್ಯ ಗಳನ್ನು ವಿಸರ್ಜಿಸಿ ತಿಪ್ಪೆ ಗುಂಡಿಯನ್ನಾಗಿ ಮಾಡುವ ವಿಕೃತಿ ಖಂಡಿತಾ ಸಲ್ಲದು.


ಸಾಗರತೀರಗಳಲ್ಲಿ ಸ್ವಚ್ಛತೆ ಕಾಪಾಡಿ ಪರಿಸರ ರಕ್ಷಣೆ ಮಾಡಬೇಕೇಂಬ ಉನ್ನತ ಧೇಯೋದೇಶ್ಯದಿಂದ ಪ್ರತಿವರ್ಷ Sep 20 ರಂದು ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತದೆ. ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪಡೆ ಇನ್ಸ್ಪೆಕ್ಟರ್ ವಸಂತ್ ರಾಮ ಆಚಾರ್ ಮತ್ತು ಸಿಬ್ಬಂದಿ ವರ್ಗ, ಡಾಕ್ಟರ್ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಫಲಕ 14 ಕಾರ್ಯಕರ್ತರು, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿಥುನ್ ದೇವಾಡಿಗ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸಹನಾ NGO, ಖಾರ್ವಿ ಆನ್ಲೈನ್ ಮತ್ತು ಸ್ವಚ್ಛ ಕರಾವಳಿ ಮಿಶನ್ ಮುಂತಾದವರ ಸಹೃದಯಿಗಳ ಸಹಯೋಗದಲ್ಲಿ ನಮ್ಮ ಕುಂದಾಪುರ ಕರಾವಳಿಯ ಹೆಮ್ಮೆಯ ಪ್ರತೀಕವಾದ ವಿಶ್ವ ವಿಖ್ಯಾತ ತ್ರಾಸಿ ಮರವಂತೆ ಬೀಚ್ ನ್ನು ಸ್ವಚ್ಛ ಗೊಳಿಸಲಾಯಿತು.
ಇಲ್ಲಿ ಬಹುತೇಕ ಎಲ್ಲಾ ರೀತಿಯ ತ್ಯಾಜ್ಯ ವಸ್ತುಗಳು ಕಡಲತೀರದೂದ್ದಕ್ಕೂ ಅಲ್ಲಲ್ಲಿ ಬಿದ್ದಿದ್ದವು. ಸುಂದರ ಕಡಲತೀರದಲ್ಲಿ ಅಸಹ್ಯ ಕಾರಿಯಾಗಿ ಬಿದ್ದಿದ್ದ ಹತ್ತು ಮೂಟೆಗಳಿಗೂ ಹೆಚ್ಚು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಇದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಗಳೊಂದಿಗೆ ಪಾನಪ್ರಿಯರು ಮೋಜು ಮಸ್ತಿ ಮಾಡಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳೂ ತುಂಬಿ ತುಳುಕಾಡುತ್ತಿದ್ದವು. ಇದು ಪರಿಸರವನ್ನು ವಿಕೃತಿಗೊಳಿಸುವ ಅನಾಗರಿಕ ಮನಸ್ಥಿತಿಯ ಸಂಸ್ಕಾರ ಹೀನರ ಕೃತ್ಯವಾಗಿದೆ. ಸಮಗ್ರ ಜಗತ್ತಿನಲ್ಲೇ ತ್ರಾಸಿ ಮರವಂತೆ ಕಡಲತೀರಕ್ಕೆ ಸರಿಸಾಟಿ ಯಾವ ಬೀಚ್ ಇಲ್ಲ ಎಂದು ಹೇಳಬಹುದು. ನದಿ ಸಮೀಪದಲ್ಲಿದ್ದರೂ ಕಡಲಿನೊಂದಿಗೆ ಸಂಗಮಿಸದ ಭೂವೈಚಿತ್ರಗಳಿಂದ ಅದ್ಬುತ ತಾಣವಾಗಿರುವ ಮರವಂತೆ ಕಡಲತೀರವನ್ನು ಈ ರೀತಿ ಅಶುದ್ದಿಗೊಳಿಸುತ್ತಿರುವ ಪರಿ ನಿಜಕ್ಕೂ ಖೇದಕರ ಸಂಗತಿ. ಇಲ್ಲಿ ಬರುವ ಪ್ರವಾಸಿಗಳು,ಇಲ್ಲಿ ವಿಶ್ರಾಂತಿಗಾಗಿ ವಾಹನ ನಿಲುಗಡೆ ಮಾಡುತ್ತಿರುವ ಚಾಲಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕಾಗಿದೆ.


ಕಡಲಂಚು ಆರಂಭವಾಗುವ ಎಡೆಯಿಂದ ನೀರು ಅಪ್ಪಳಿಸುವ ಮರಳಿನ ರಾಶಿಯ ತನಕವೂ ತ್ಯಾಜ್ಯ ಗಳ ರಾಶಿ ರಾಶಿ ಕಣ್ಣಿಗೆ ರಾಚುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಡಲತೀರದ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕಾಗಿದೆ. ಕಡಲತೀರದ ಸ್ವಚ್ಛತೆಯ ಈ ಸಮಾಜ ಮುಖಿ ಕಾರ್ಯದಲ್ಲಿ ಪಾಲ್ಗೊಂಡ ಕರಾವಳಿ ಕಾವಲು ಪೋಲೀಸ್ ಠಾಣಾಧಿಕಾರಿಗಳು ಕಡಲತೀರದ ಸ್ವಚ್ಛತೆಯ ಬಗ್ಗೆ ಮಾತನಾಡಿದರಲ್ಲದೇ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆಗೆ ಹೋದಾಗ ಲೈಪ್ ಚಾಕೆಟ್ ಕಡ್ಡಾಯವಾಗಿ ಧರಿಸಬೇಕೆಂದು ಕಿವಿ ಮಾತು ಹೇಳಿದರು. ಲೈಪ್ ಜಾಕೆಟ್ ಧರಿಸದೇ ಎಷ್ಟೋ ಮೀನುಗಾರರು ಕಡಲಿನಲ್ಲಿ ಸಾವಿಗೀಡಾಗುವ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಪರಿಸರ ನಿರಂತರ ಸಂಬಂಧದಿಂದ ನಮ್ಮಲ್ಲಿ ಅದರೆಡಗಿನ ಒಂದು ಗ್ರಹಿಕೆ ಮೂಡುತ್ತದೆ. ಪರಿಸರದ ವಿಚಾರದಲ್ಲಿ ನಾವು ಹೊಂದಿರುವ ದೃಷ್ಟಿ ಕೋನ ,ಜ್ಞಾನ, ಮತ್ತು ಮೌಲ್ಯ ಗಳ ಒಂದು ಒಟ್ಟಾರೆಯಾದ ಮೊತ್ತ ಇದಾಗಿದೆ. ಪ್ರತಿ ಸಂಸ್ಕೃತಿಯಲ್ಲೂ ಮೌಲ್ಯ ಗಳ ಒಂದು ಶ್ರೇಣಿಕರಣವೇ ಇದ್ದು ಪರಿಸರವನ್ನು ಹೇಗೆ ಬಳಸಿಕೊಳ್ಳಬೇಕೆನ್ನುವುದಕ್ಕೆ ಒಂದು ನಿರ್ದಿಷ್ಟ ಕ್ರಮವನ್ನೇ ಇದು ಕಟ್ಟಿ ಕೊಡುತ್ತದೆ. ಈ ಮೌಲ್ಯ ಗಳು ಬಹು ಸಮಯಗಳಲ್ಲಿ ಪರಿಸರಕ್ಕೆ ಪೂರಕವಾಗಿಯೇ ಇರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಕೆಲವೊಂದು ಕ್ರಿಯೆಗಳಿಂದ ಪರಿಸರ ಹೇಗೆ ಬಾಧಿಸಲ್ಪಡುತ್ತದೆಯೆಂಬುದು ವಿಜ್ಞಾನ ಸಂಬಂಧಿ ಪ್ರಶ್ನೆ. ಅಂತಿಮವಾಗಿ ನಾವು ಎಂತಹ ಕ್ರಿಯೆಯನ್ನು ಆರಿಸಿಕೊಳ್ಳುತ್ತೇವೆ ಎಂಬುದು ನೀತಿ ನೇಮದ ಪ್ರಶ್ನೆ. ಪರಿಸರವನ್ನು ಕಾಪಾಡಿಕೊಳ್ಳುವ ಮತ್ತು ಅಂತಹ ಪ್ರಕ್ರಿಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ತಮ್ಮ ಜವಾಬ್ದಾರಿಯನ್ನು ಜನ ಅರಿತುಕೊಳ್ಳಬೇಕಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಅವಶ್ಯಕವಾಗಿದೆ. ವೈಜ್ಞಾನಿಕ ಪರಿಜ್ಞಾನವಿಲ್ಲದಿದ್ದರೂ ಕಡಲಿನ ಸಮಗ್ರ ಮಾಹಿತಿ ಇರುವ ಮೀನುಗಾರರನ್ನು ಈ ನಿಟ್ಟಿನಲ್ಲಿ ಬರಿಗಾಲ ಕಡಲ ಸಂರಕ್ಷಕರು ಎಂದು ಅರ್ಥ ಗರ್ಭಿತವಾಗಿ ಹೇಳಬಹುದಾಗಿದೆ. ಕಡಲತಡಿಯ ಪರಿಸರ ಸಮಸ್ಯೆ ಗಳೆಡೆಗೆ ಸರ್ಕಾರದ ಗಮನ ಸೆಳೆಯುವಲ್ಲಿ ಸಮುದಾಯ ಮತ್ತು ಖಾಸಗಿ ಸಂಸ್ಥೆಗಳ ಪಾತ್ರ ತುಂಬಾ ಮುಖ್ಯ ವಾದದ್ದು. ಪರಿಸರದೆಡೆಗಿನ ಕಳಕಳಿ ಸರ್ಕಾರವನ್ನು ಕ್ರಿಯೆಗೆ ಉತ್ತೇಜಿಸಬಹುದು. ಭೂಮಿಯ ಇತಿಹಾಸದಲ್ಲಿ ಸಮುದ್ರಗಳ, ಸಾಗರಗಳ ಪಾತ್ರ ದೊಡ್ಡದು.


ತ್ರಾಸಿ ಮರವಂತೆ ಕಡಲತೀರದ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತಮಗೊಳಿಸಲು ಸರ್ವರ ಸಹಭಾಗಿತ್ವದಲ್ಲಿ ನಿರಂತರ ಸ್ವಚ್ಛತೆ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದ್ದು ಕರಾವಳಿ ಕಾವಲು ಪಡೆ, ಡಾಕ್ಟರ್ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಫಲಕ 14 ಕಾರ್ಯಕರ್ತರು, ತ್ರಾಸಿ ಗ್ರಾಮ ಪಂಚಾಯತ್ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸಹನಾ NGO, ಖಾರ್ವಿ ಆನ್ಲೈನ್ ಮತ್ತು ಸ್ವಚ್ಛ ಕರಾವಳಿ ಮಿಶನ್ ಮುಂತಾದವರ ಸಹಯೋಗದಲ್ಲಿ ಈ ಸೇವಾ ಕೈಂಕರ್ಯಗಳು ಕೇವಲ ಒಂದು ದಿನಕಷ್ಟೇ ಸೀಮಿತವಾಗದೇ ನಿರಂತರವಾಗಿ ನಡೆಯಲಿದೆ.
ಮನುಷ್ಯನ ಬದುಕಿನ ಜೀವ ಸೆಲೆಯಾದ ಕಡಲನ್ನು,ಕಡಲತೀರಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ನೀಡುವ ಉತ್ತರದಾಯಿತ್ವ ನಮ್ಮೆಲ್ಲರ ಮೇಲಿದೆ. ಅದು ಪ್ರತಿಯೊಬ್ಬರ ಅದ್ಯ ಕರ್ತವ್ಯ ವೂ ಆಗಿರುತ್ತದೆ. ನಮ್ಮ ಹೆಮ್ಮೆಯ ಕಡಲತೀರ ಮರವಂತೆ ತ್ರಾಸಿಯ ಸ್ವಚ್ಛತಾ ಕಾರ್ಯ ದಲ್ಲಿ ಉತ್ಸಾಹ ದಿಂದ ಭಾಗವಹಿಸಿ ಸಾರ್ಥಕತೆ ತಂದು ಕೊಟ್ಟ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಗೌರವಪೂರ್ವಕವಾಗಿ ಸಲ್ಲಿಸುತ್ತದೆ.
ಸುಧಾಕರ್ ಖಾರ್ವಿ
www.kundapura.com



