ಪಿತೃಪಕ್ಷ ಆಚರಣೆಯ ಈ ಸಾಂಧರ್ಭಿಕ ಸನ್ನಿವೇಶದಲ್ಲಿ ಪರಿಸರ ಸಂಬಂಧಿ ವಿಷಯವೊಂದು ಮತ್ತೆ ಮುನ್ನಲೆಗೆ ಬಂದಿದೆ ಕಳೆದ ಕೆಲವು ವರ್ಷಗಳಿಂದ ನಿಸರ್ಗದ ಜಾಡಮಾಲಿಗಳು ಎಂದು ಕರೆಯಲ್ಪಡುವ ಕಾಗೆಗಳ ಸಂತತಿಗಳು ಕ್ಷೀಣಿಸುತ್ತಿರುವ ಸುದ್ದಿಗಳು ಸದ್ದು ಮಾಡುತ್ತಿದೆ ಪಿತೃಗಳಿಗೆ ಅನ್ನ ಇಟ್ಟರೆ ತಿನ್ನಲು ಕಾಗೆಗಳೇ ಇಲ್ಲ ಎಂಬ ಮಾತುಗಳು ಬಹುತೇಕ ಕಡೆಯಿಂದ ಕೇಳಿ ಬಂದಿದೆ.
ಆಧುನಿಕ ಜೀವನ ಶೈಲಿ, ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಪರಿಸರದ ಸಮತೋಲನವನ್ನು ಕಾಪಾಡುವ ಪ್ರಾಣಿ ಪಕ್ಷಿಗಳ ಬದುಕನ್ನು ಹೇಗೆ ಸರ್ವನಾಶ ಮಾಡುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಕಾಗೆ ಸಂತತಿ ನಶಿಸುತ್ತಿರುವುದಕ್ಕೆ ಕೆಲವು ಕಾರಣಗಳಿವೆ ಪ್ರಮುಖವಾಗಿ ಮೊಬೈಲ್ ರೇಡಿಯೇಷನ್ ಗುಬ್ಬಚ್ಚಿಗಳಿಗಾದ ಹಾನಿ ಕಾಗೆಗಳಿಗೂ ಆಗಿದೆ ಎರಡನೆಯದಾಗಿ ಈ ಹಿಂದೆ ರಾತ್ರಿಯ ಮನೆಯ ಮುಸುರೆಯನ್ನು ಬೆಳಿಗ್ಗೆ ತೊಳೆಯುವ ಪದ್ಧತಿ ಇತ್ತು ಆಗ ಕಾಗೆಗಳಿಗೆ ಆಹಾರ ಸಿಗುತ್ತಿತ್ತು ಪ್ರಸ್ತುತ ಮುಸುರೆ ತ್ಯಾಜ್ಯ ನೇರವಾಗಿ ಮುನ್ಸಿಪಾಲಿಟಿ ಕಸದ ಗಾಡಿಯನ್ನು ಸೇರುತ್ತದೆ ಮೂರನೆಯ ಮುಖ್ಯ ಕಾರಣವೆಂದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳ ಅವ್ಯಾಹತ ಮಾರಣಹೋಮ.

ಕಾಗೆಗಳಿಗೆ ಗೂಡು ಕಟ್ಟಲೂ ಕೂಡಾ ಮರಗಳು ಇಲ್ಲದ ದುಸ್ಥಿತಿ ಮನುಷ್ಯರ ದುಷ್ಕೃತ್ಯಗಳಿಗೆ ಪರಿಸರ, ಪ್ರಾಣಿ ಸಂಕುಲ ನಾಶವಾಗುತ್ತಿದೆ ಕಾಗೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ ಅವುಗಳು ಗತಿಸಿ ಹೋದ ನಮ್ಮ ಪೂರ್ವಿಕರು ಎಂಬ ಅಚಲವಾದ ನಂಬಿಕೆ ಇದೆ ನಮ್ಮ ಪಿತೃಗಳು ಕಾಗೆಗಳ ದೇಹದಲ್ಲಿ ಸೇರಿಕೊಂಡು ಪಿತೃಪಕ್ಷ ಮತ್ತು ಪಿತೃಸಂಬಂಧಿ ತರ್ಪಣ ಕಾರ್ಯಗಳ ಸಂದರ್ಭದಲ್ಲಿ ಅನ್ನೋದಕಗಳನ್ನು ಸ್ವೀಕರಿಸುತ್ತಾರೆ ಎಂಬುದು ಹಿಂದೂ ಧರ್ಮದ ನಂಬಿಕೆ ಪದ್ಮಪುರಾಣದಲ್ಲಿ ದೇವಕಾರ್ಯಕ್ಕಿಂತಲೂ ಪಿತೃಕಾರ್ಯವು ಶ್ರೇಷ್ಠವಾಗಿದೆ ಎಂದು ಹೇಳಲಾಗಿದೆ.
ಪಿತೃಋಣವನ್ನು ತೀರಿಸಲು ಶ್ರಾದ್ಧಕರ್ಮವು ಅವಶ್ಯಕವಾಗಿದ್ದು, ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಅತೃಪ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗಿ ಕುಟುಂಬದವರಿಗೆ ತೊಂದರೆ ನೀಡುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಿ ಕುಟುಂಬದವರಿಗೆ ತೊಂದರೆ ಬಾಧಿಸುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಕುಟುಂಬ ವರ್ಗದವರು ಶ್ರಾದ್ಧವಿಧಿಯನ್ನು ಮತ್ತು ಪಿತೃಕಾರ್ಯವನ್ನು ಆ ಸಮಯದಲ್ಲಿ ಮಾಡಲು ಆಗದಿದ್ದ ಪಕ್ಷದಲ್ಲಿ ಮಹಾಲಯ ಅಮಾವಾಸ್ಯೆಯ ಸಮಯದಲ್ಲಿ ಪಿತೃಸಂಬಂಧಿ ಕಾರ್ಯಗಳನ್ನು ಮಾಡಿದರೆ ಅದು ಶ್ರೇಷ್ಠವಾಗಿ ಸಲ್ಲಲ್ಪಡುತ್ತದೆ ಎಂಬ ಉಲ್ಲೇಖವಿದೆ.


ಪಿತೃಪಕ್ಷದ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಯಮಲಹರಿ ಹೆಚ್ಚು ಸಕ್ರಿಯವಾಗಿರುತ್ತದೆ. ಕಾಗೆಯ ಕಪ್ಪು ಬಣ್ಣವು ರಜ ತಮ ದರ್ಶಕವಾಗಿರುವುದರಿಂದ ಅದು ಪಿತೃಸಂಬಂಧಿ ಕಾರ್ಯಗಳಲ್ಲಿ ಹೆಚ್ಚು ಹೊಂದಿಕೊಳ್ಳುತ್ತದೆ. ಕಾಗೆಯ ದೇಹಪ್ರಕೃತಿಯ ಸೂಕ್ಷ್ಮಕೋಶದಲ್ಲಿ ಅಪಕಣಗಳ ಪ್ರಾಬಲ್ಯ ಹೆಚ್ಚಿಗೆ ಇರುವುದರಿಂದ ನಮ್ಮ ಪೂರ್ವಿಕರ ಆತ್ಮಗಳಿಗೆ ಸುಲಭವಾಗಿ ಕಾಗೆಯ ಶರೀರವನ್ನು ಪ್ರವೇಶಿಸಲು ರಹದಾರಿ ಸಿಗುತ್ತದೆ ಮತ್ತು ಅಮವಾಸ್ಯೆಯ ಸಂದರ್ಭದಲ್ಲಿ ಸಕ್ರಿಯವಾಗಿರುವ ಯಮಲಹರಿಯ ಮೂಲಕ ಆತ್ಮಗಳು ಕಾಗೆಗಳ ದೇಹ ಪ್ರವೇಶಿಸಿ ಪಿಂಡದಲ್ಲಿರುವ ಅನ್ನೋದಕಗಳನ್ನು ಸೇವಿಸುತ್ತವೆ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾಗಿ ಪಿತೃಸಂಬಂಧಿ ಕಾರ್ಯಗಳಲ್ಲಿ ಕಾಗೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಕಾಗೆಗಳಿಗೆ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ ಮತ್ತು ಅವುಗಳು ಕಾಯಿಲೆಗಳಿಂದ ಸಾಯುವುದಿಲ್ಲ ಎಂಬ ಮಾತಿದೆ ಅದು ಸತ್ಯ ಎಂದು ವೈಜ್ಞಾನಿಕವಾಗಿ ನಿರೂಪಿತಗೊಂಡಿದೆ ಕಾಗೆಗಳಿಗೆ ವಿದ್ಯುತ್ ಶಾಕ್, ವಾಹನ ಅಪಘಾತ, ಶತ್ರು ಪ್ರಾಣಿಯೊಂದಿನ ಮಾರಾಣಾಂತಿಕ ಸಂಘರ್ಷ ಮುಂತಾದ ಸಮಯದಲ್ಲಿ ಮಾತ್ರ ಸಾಯುತ್ತವೆ.
ರಾಮಾಯಣ ಕಾಲದ ಕಥೆಯೊಂದು ಇದಕ್ಕೆ ಪುಷ್ಟಿ ನೀಡುತ್ತಿದ್ದು,ರಾಮಾಯಣ ಕಾಲದಲ್ಲಿ ಇಕಾಕ್ಷು ವಂಶದ ಮರುತ್ತ ಮಹಾರಾಜನು ದೊಡ್ಡ ಯಾಗ ಕೈಗೊಳ್ಳುತ್ತಾನೆ. ಈ ಯಾಗದಲ್ಲಿ ವಿವಿಧ ಪ್ರಾಣಿ ಪಕ್ಷಿಗಳ ರೂಪದಲ್ಲಿ ದೇವತೆಗಳು ಪಾಲ್ಗೊಳ್ಳುತ್ತಾರೆ. ಇಂದ್ರನು ನವಿಲಿನ ರೂಪದಲ್ಲಿ ಪಾಲ್ಗೊಂಡಿದ್ದರೆ, ಯಮರಾಜನು ಕಾಗೆಯ ರೂಪದಲ್ಲಿ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ ಇದರ ಕೃತಜ್ಞತೆ ಸಲ್ಲಿಸಲು ಯಮರಾಜನು ಕಾಗೆಗಳಿಗೆ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ ಮತ್ತು ಕಾಯಿಲೆಗಳಿಂದ ಸಾವು ಸಂಭವಿಸುವುದಿಲ್ಲ ಎಂದು ವರದಾನ ನೀಡುತ್ತಾನೆ. ಯಮನ ವರದಾನದ ದೃಷ್ಟಾಂತ ಶತಶತಮಾನಗಳಿಂದ ಸತ್ಯವಾಗಿ ನಿಚ್ಚಳ ರೂಪದಲ್ಲಿ ದೃಢಗೊಂಡರೂ ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯರೇ ಕಾಗೆಗಳ ಪಾಲಿಗೆ ಮ್ಯತ್ಯು ಸ್ವರೂಪಿ ಕಾಲಯಮನಾಗುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.


ಪಿತೃಸಂಬಂಧಿ ಕಾರ್ಯಗಳು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಜಗತ್ತಿನ ಪ್ರಮುಖ ಧರ್ಮದಲ್ಲಿ ಇದರ ಆಚರಣೆ ಉಂಟು ರೋಮನ್ ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಕುಟುಂಬದ ಸದಸ್ಯರು ಮೃತಪಟ್ಟು ಒಂದು ತಿಂಗಳಾದ ಬಳಿಕ ಮತ್ತು ವಾರ್ಷಿಕ ದಿನದಂದು ಚರ್ಚ್ ನಲ್ಲಿ ದೇವರ ಪ್ರಾರ್ಥನೆ , ಮೃತನ ಸಮಾಧಿ ಬಳಿ ವಿಶೇಷ ಪ್ರಾರ್ಥನೆಗಳು ನಡೆಯುತ್ತದೆ ಮುಸ್ಲಿಂ ಧರ್ಮದಲ್ಲಿ ಮೃತವ್ಯಕ್ತಿಯ ವಾರ್ಷಿಕ ದಿನದಂದು ಅವರ ಹೆಸರಿನಲ್ಲಿ ಫಕೀರರಿಗೆ ಅನ್ನ ಮತ್ತು ದ್ರವ್ಯಗಳನ್ನು ದಾನ ಮಾಡಿ ಕುರಾನ್ ನ ಕೆಲವು ವಚನಗಳನ್ನು ಓದುತ್ತಾರೆ ಪಾರ್ಸಿ ಪಂಥದಲ್ಲಿ ಮೃತರ ವರ್ಷಾಂತ್ಯದ ದಿನದಂದು ಮನೆಯಲ್ಲಿನ ಸ್ವಚ್ಛವಾದ ಜಾಗದಲ್ಲಿ ಹಣ್ಣು ಹೂಗಳನ್ನು ಇಡುತ್ತಾರೆ ಮತ್ತು ಮೃತ ವ್ಯಕ್ತಿಯ ತಿಥಿಯ ದಿನದಂದು ಅವರ ಪಂಥದ ಪುರೋಹಿತರು ಮಂತ್ರಗಳನ್ನು ಹೇಳುತ್ತಾರೆ. ಜೈನಪಂಥದಲ್ಲಿ ಪಿತೃಗಳ ತಿಥಿಯ ದಿನದಂದು ಮಂದಿರಕ್ಕೆ ಹೋಗಿ ತೀರ್ಥಂಕರರಿಗೆ ನೈವೇದ್ಯವನ್ನು ತೋರಿಸುತ್ತಾರೆ ಮತ್ತು ಪಿತೃಗಳನ್ನು ಸ್ಮರಿಸಿ ಪೂಜೆಯನ್ನು ಮಾಡುತ್ತಾರೆ.
ಹಿಂದೂ ಧರ್ಮೀಯರ ಹಬ್ಬಗಳಲ್ಲಿ ಎರಡು ವಿಧ, ಒಂದು ಸಾಮಾಜಿಕ ಸಾಂಸ್ಕೃತಿಕ, ಇನ್ನೊಂದು ವೈಜ್ಞಾನಿಕ ಆಧ್ಯಾತ್ಮಿಕ ರಾಮನವಮಿ ಕೃಷ್ಣಾಷ್ಟಮಿ ಇವೆಲ್ಲಾ ಸಾಮಾಜಿಕ ಸಾಂಸ್ಕೃತಿಕ ಹಬ್ಬವಾದರೆ, ಮಹಾಲಯ ಅಮವಾಸ್ಯೆ, ದೀಪಾವಳಿ ಮುಂತಾದ ಹಬ್ಬಗಳೆಲ್ಲ ವೈಜ್ಞಾನಿಕ ಆಧ್ಯಾತ್ಮಿಕ. ಇದರ ಬಗ್ಗೆ ಸವಿಸ್ತಾರವಾಗಿ 2003 ರ ದೀಪಾವಳಿ ವಿಶೇಷಾಂಕದಲ್ಲಿ ಕೆ.ಎಂ.ಗುಪ್ತ ಎಂಬ ಲೇಖಕರು ಬಹಳ ಸುಂದರವಾಗಿ ನಿರೂಪಿಸಿದ್ದಾರೆ. ಅವರ ಮಾತಿನ ಮಂಟಪದಲ್ಲಿ ಅರ್ಥಗರ್ಭಿತ ವಿವರಣೆಯನ್ನು ಆಲಿಸೋಣ. ಮಹಾಲಯವೆಂದರೆ ದೊಡ್ಡ ಸ್ಪೋಟ ಆದಿಯಲ್ಲಿ ಜಗತ್ತು ಅಕ್ಷರವಾಗಿತ್ತು ನಿರ್ಗುಣ ಬ್ರಹ್ಮವಾಗಿತ್ತು ಅಲ್ಲಿಂದ ಸ್ಪೋಟಿಸಿ ಜಗತ್ತು ಹುಟ್ಟಿತ್ತು ಈಗ ಅಲ್ಲೇ ಲಯವಾಗುತ್ತಿದೆ ಇದೇ ಮಹಾಲಯ.


ಹೀಗೆ ಮಹಾಲಯವು ಜಗತ್ತಿನ ಆದಿ ಮತ್ತು ಅಂತ ಆದಿ ಅಂತಗಳ ಈ ಬಿಂದುವಿನ ಸಂಕೇತವೇ ನಾವು ಆಚರಿಸುವ ಮಹಾಲಯ ಅಮವಾಸ್ಯೆಯ ಹಬ್ಬ ಮಹಾಲಯವು ಜಗತ್ತಿನ ಸಂಕೋಚದ ಸಂಕೇತವಾದರೆ, ನವರಾತ್ರಿ , ದೀಪಾವಳಿ ಹಬ್ಬಗಳು ಜಗತ್ತಿನ ವಿಕಾಸದ ಸಂಕೇತ ಸಂಕೋಚದಿಂದ ಜಗತ್ತು ತಮಸ್ಸಿಗೆ ಬರುತ್ತದೆ ಹಾಗಾಗಿ ಪಿತೃಪಕ್ಷದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ ಕೇವಲ ಪಿತೃಗಳ ಕಾರ್ಯಕ್ಕೆ ಪಿತೃಪಕ್ಷ ಮೀಸಲು. ವಿಕಾಸದ ಸಂಕೇತವಾದ ನವರಾತ್ರಿಯಲ್ಲಿ ಶುಭ ಕಾರ್ಯಗಳಿಗೆ ಚಾಲನೆ ದೊರಕುತ್ತದೆ ಅದರ ಬೆನ್ನಲ್ಲೇ ದೀಪಾವಳಿ ಹಬ್ಬಕ್ಕೆ ದೇಶದಲ್ಲಿ ದೀಪಾವಳಿಯ ಜ್ಯೋತಿ ಬೆಳಗುತ್ತದೆ.
ಈಗ ಸ್ವಲ್ಪ ಕಾಗೆಪುರಾಣದತ್ತ ಗಮನ ಹರಿಸೋಣ ನಮ್ಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ, ಮನೆಯೊಳಗಡೆ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿಗಳು ಕಣ್ಮರೆಯಾದ ಬಳಿಕ ಇದೀಗ ನಿಸರ್ಗದ ಜಾಡಮಾಲಿಗಳಾದ ಕಾಗೆಗಳ ಸರದಿ. ಕಳೆದ ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ಪ್ರಕಟಣೆ ನೀಡಿ ಪಿತೃಸಂಬಂಧಿ ಕಾರ್ಯಗಳಿಗಾಗಿ ಕಾಗೆಗಳ ಅವಶ್ಯಕತೆ ಇದ್ದರೆ ನನ್ನನ್ನು ಸಂಪರ್ಕಿಸಿ ಎಂದು ಪ್ರಕಟಣೆ ನೀಡಿದ್ದ ತಮಾಷೆಯಾಗಿ ಕಂಡರೂ ಗಂಭೀರವಾದ ವಿಷಯವಿದು. ಪರಿಸ್ಥಿತಿ ಅಷ್ಟರ ಮಟ್ಟಿಗೆ ಬಂದು ನಿಂತಿದೆ ವಿಷಯವೇನೆಂದರೆ ಈ ವ್ಯಕ್ತಿ ಕಾಗೆಗಳನ್ನು ಹಿಡಿದು ಪಳಗಿಸಿ ಸಾಕುತ್ತಿದ್ದ ಅವುಗಳಿಗೆ ತರಬೇತಿಯನ್ನು ನೀಡುತ್ತಿದ್ದ ಈ ವ್ಯಕ್ತಿ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಕಾಗೆಗಳ ಸಂತತಿ ಕಡಿಮೆಯಾಗುತ್ತಿರುವುದನ್ನು ಮತ್ತು ಅದರಿಂದ ಪಿತೃಸಂಬಂಧಿ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ಇಂತಹ ಪ್ರಕಟಣೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಎಲ್ಲ ಜೀವಿಗಳು, ಮಾನವ, ಪ್ರಾಣಿ ಮತ್ತು ಸಸ್ಯಗಳು ಪವಿತ್ರವಾದವು, ಮತ್ತು ಒಂದಕ್ಕೆ ಆಘಾತವಾದಾಗ ಇನ್ನೊಂದು ತತ್ತರಿಸುತ್ತದೆ ಎಂಬುದನ್ನು ಭಾರತೀಯ ಪರಂಪರೆ ನಮಗೆ ಕಲಿಸಿಕೊಟ್ಟಿದೆ ಈ ಜಗತ್ತಿನ ಪ್ರತಿ ಜೀವಿಗೂ ಬದುಕಿ ಬಾಳಲು ತನ್ನದೇ ಆದ ಅವಶ್ಯಕತೆಗಳಿರುತ್ತದೆ ಅದಕ್ಕೆ ಸಂಚಕಾರ ಬಂದರೆ ಅವುಗಳು ಭೂಮಿಯಿಂದ ಕಣ್ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಇದಕ್ಕೆ ಗುಬ್ಬಚ್ಚಿ,ಕಾಗೆಗಳ ಉದಾಹರಣೆಯೇ ಉತ್ತಮ ಸಾಕ್ಷಿಯಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ









