ಕುಂದಾಪುರ ತಾಲೂಕು ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನ ಹತ್ತು ಹಲವು ದೈವಿಕ ಪವಾಡ ಮತ್ತು ಪ್ರಾಕೃತಿಕ ವಿಸ್ಮಯಗಳಿಗೆ ಸಾಕ್ಷಿಯಾಗಿದೆ.
ಪ್ರಕೃತಿಯೇ ತನ್ನೊಡಲನ್ನು ಸೀಳಿ ಸೃಷ್ಟಿಸಿಕೊಂಡ ಭೂಗರ್ಭ ಗುಹೆಯೊಳಗೆ ದಿವ್ಯ ಕಾರಣಿಕ ಶಕ್ತಿಯ ಪರಶಿವ ಕೇಶವನಾಥೇಶ್ವರನ ಸಾನ್ನಿಧ್ಯವಿದೆ ಇದರೊಂದಿಗೆ ಎಲ್ಲಿಯೂ ಕಾಣಸಿಗದ ಅಪರೂಪದ ಮತ್ಸ್ಯ ಪ್ರಭೇದಗಳು ಇಲ್ಲಿನ ಜಲಧಾರೆಯಲ್ಲಿ ಎಲ್ಲರ ಆಕರ್ಷಣೆಯ ಬಿಂದುವಾಗಿ ಸ್ವಚ್ಛಂದ ರೂಪದಲ್ಲಿ ಕಾಣಸಿಗುತ್ತವೆ.
ಈ ವಿಸ್ಮಯಕಾರಿ ಭೂಗರ್ಭ ಗುಹೆಯೊಳಗೆ ನಿರ್ಭಯವಾಗಿ ಮನುಷ್ಯರ ಸಾಂಗತ್ಯದೊಂದಿಗೆ ಜಲಧಾರೆಯಲ್ಲಿ ಓಡಾಡಿಕೊಂಡಿರುವ ಈ ಮೀನುಗಳು ನಮ್ಮ ಕೂತೂಹಲದ ಕಟ್ಟೆಯೊಡೆದು ಅಧ್ಯಯನ ಶೀಲತೆಗೆ ಎಡೆಮಾಡಿಕೊಡುತ್ತದೆ. ರಾಶಿ ರಾಶಿಯಾಗಿ ಈ ಜಲಧಾರೆಯಲ್ಲಿ ವಿಹರಿಸಿಕೊಂಡಿರುವ ಈ ಮೀನುಗಳು ನೋಡಲು ಮುಗುಡು ಅಥವಾ ಶ್ಯಾಡೆ ಮೀನಿನಂತೆ ಕಾಣುತ್ತದೆ ಆದರೆ ಈ ಮೀನುಗಳು ಅವುಗಳಿಕ್ಕಿಂತ ಭಿನ್ನವಾಗಿದ್ದು, ಅದೇ ಪ್ರಭೇಧಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ ಈ ಮೀನುಗಳ ದೇಹದ ಬಣ್ಣ ಸಂಪೂರ್ಣ ಗ್ರೇ ಬಣ್ಣದಿಂದ ಕೂಡಿದ್ದು ,ಗಾತ್ರದಲ್ಲಿ ಮುಗುಡು ಮೀನಿಕ್ಕಿಂತ ಕೊಂಚ ಸಣ್ಣದಾಗಿದ್ದು, ಶ್ಯಾಡೆ ಮೀನಿನಕ್ಕಿಂತ ಸ್ವಲ್ಪ ದೊಡ್ಡದಾಗಿದೆ.ದೇಹಾಕೃತಿಗಳು ಆ ಎರಡು ಮೀನುಗಳಿಗೆ ಸ್ವಲ್ಪ ಹೊಂದಾಣಿಕೆಯಾಗುತ್ತದೆ.



ಮುಗುಡು ಮೀನುಗಳು ಬೇಸಿಗೆಯಲ್ಲಿ ನದಿಯಂಚಿನ ಮತ್ತು ಹಳ್ಳ, ತೊರೆ, ಗದ್ದೆಯ ಜವಗು ಪ್ರದೇಶದ ಭೂಗರ್ಭದಲ್ಲಿ ವಾಸಿಸುತ್ತದೆ ಮಳೆಗಾಲ ಪ್ರಾರಂಭದಲ್ಲಿ ಅವುಗಳು ಭೂಗರ್ಭದಿಂದ ಮೇಲೆದ್ದು ಬಂದು ಮಳೆ ನೀರಿನೊಂದಿಗೆ ಹಳ್ಳ,ತೊರೆ ಮತ್ತು ನದಿಯನ್ನು ಸೇರಿಕೊಳ್ಳುತ್ತದೆ ಇವುಗಳು ಸಿಹಿನೀರಿನ ಮೀನುಗಳು ಈ ಮೀನುಗಳಿಗೆ ಕೊಂಕಣಿ ಭಾಷೆಯಲ್ಲಿ ವಳಾಯಿ ಎಂದು ಕರೆಯುತ್ತಾರೆ. ಶ್ಯಾಡೆ ಮೀನುಗಳು ನದಿ ಮತ್ತು ಸಮುದ್ರಗಳ ಉಭಯವಾಸಿಗಳು ಉಪ್ಪು ನೀರಿನ ಮೀನುಗಳಾದ ಶ್ಯಾಡೆ ಮೀನುಗಳು ಒಳನಾಡಿನ ಸಿಹಿನೀರಿನ ಹೊಳೆಗಳಲ್ಲಿ ವಾಸಿಸುವುದಿಲ್ಲ.
ಆದರೆ ಮೂಡುಗಲ್ಲಿನ ಈ ವಿಶಿಷ್ಟ ಮೀನಿನ ಪ್ರಭೇದಗಳು ನೂರಾರು ವರ್ಷಗಳಿಂದ ಈ ಭೂಗರ್ಭ ಜಲಧಾರೆಯಲ್ಲಿ ವಾಸಿಸಿಕೊಂಡು ಬಂದಿದ್ದು, ವರ್ಷವೀಡಿ ಸಮತಟ್ಟಿನ ಸ್ಥಿತಿಯಲ್ಲಿ ಈ ಜಲಧಾರೆ ಇರುವುದರಿಂದ ಮತ್ತು ಈ ಗುಹೆಯಲ್ಲಿ ಜಲದ ನಿರಂತರ ಒಸರುವಿಕೆಯ ಕಾರಣ ಈ ಪರಿಸರ ಈ ಮೀನುಗಳ ವಾಸಸ್ಥಾನಕ್ಕೆ ಯೋಗ್ಯವಾಗಿದೆ. ಮೂಡುಗಲ್ಲಿನ ಗುಹೆಯ ಪ್ರವೇಶದ್ವಾರದಿಂದ ಸುಮಾರು ಇಪ್ಪತ್ತು ಅಡಿ ದೂರದಲ್ಲಿ ಪರಶಿವನ ಸಾನ್ನಿಧ್ಯವಿದೆ ಅಲ್ಲಿಗೆ ನೀರಿನಲ್ಲಿ ಹೋಗುವಾಗ ಈ ಮೀನುಗಳು ನಮ್ಮ ಕಾಲುಗಳನ್ನು ಸ್ಪರ್ಶಿಸಿ ಕಚಗುಳಿ ನೀಡುವ ಅದ್ಭುತ ಅನುಭವ ಉಂಟಾಗುತ್ತದೆ. ವಿಶೇಷವಾಗಿ ಸುಣ್ಣಗಲ್ಲಿನ ಶಿಲೆಗಳಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಅಂತರ್ಜಲವೂ ಸಹ ಮೇಲ್ಮೈ ತೊರೆಗಳಂತೆ ಹರಿಯುತ್ತದೆ ಮೂಡುಗಲ್ಲಿನ ಈ ಜಲಧಾರೆ ಅದೇ ರೀತಿಯಲ್ಲಿ ರೂಪುಗೊಂಡಿದೆ ಸುಣ್ಣಗಲ್ಲಿನೊಳಗಿಂದ ಹರಿಯುವ ಇಂಥ ಭೂಗತ ತೊರೆಗಳು ತಾವು ಹರಿಯುವ ಭೂಗತ ಪಾತ್ರವನ್ನು ನಿರಂತರವಾಗಿ ಕೊರೆದು ಅಗಲ ಮಾಡುತ್ತದೆ.


ಇದರ ಪರಿಣಾಮವಾಗಿ ಸುಣ್ಣಗಲ್ಲಿನ ಮೇಲ್ಭಾಗದ ಛಪ್ಪರದಿಂದ ತೊಟ್ಟಿಕ್ಕುವ ನೀರಿನ ಕಣಗಳಿಂದುಂಟಾದ ಅವರೋಹಿ ಸುಣ್ಣಗಲ್ಲು ಶಂಕು ಮತ್ತು ನೆಲದಿಂದ ಕಂಬದಂತೆ ಮೇಲೇಳುವ ಆರೋಹಿ ಸುಣ್ಣಗಲ್ಲು ಶಂಕುಗಳ ವಿಶಿಷ್ಟ ಸಂಚಯಗಳಿಂದ ಕೂಡಿದ ಗುಹೆಗಳು ಉಂಟಾಗುತ್ತದೆ ಮೂಡಗಲ್ಲು ಗುಹೆ ಈ ಪರಿಯಲ್ಲಿ ಉದ್ಬವವಾಗಿರಬಹುದು ಎಂಬುದು ಬಲ್ಲವರ ಅಭಿಮತ ಇಲ್ಲಿ ಶಂಕು ಎಂದರೆ ಒಂದು ಲಂಬಕೋನ ತ್ರಿಭುಜವನ್ನು ಲಂಬಕೋನ ಹೊಂದಿರುವಂತಹ ಯಾವುದಾದರೊಂದು ಬಾಹುವಿನ ತನಕ ಪರಿಭ್ರಮಿಸುವಂತೆ ಮಾಡಿದಾಗ ಉಂಟಾಗುವ ಆಕೃತಿಯೇ ಶಂಕು ಎನಿಸಿಕೊಳ್ಳುತ್ತದೆ. ಪ್ರತಿವರ್ಷ ಎಳ್ಳಾಮಾವಾಸ್ಯೆ ದಿನದಂದು ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನದ ಜಲಧಾರೆಯಲ್ಲಿ ದೊಡ್ಡ ಗಾತ್ರದ ಬಂಗಾರದ ಮೂಗುತಿಯುಳ್ಳ ಮೀನು ಕಾಣಿಸಿಕೊಳ್ಳುತ್ತದೆ ಎಂಬ ಪ್ರತೀತಿ ಇದೆ.
ಈ ಗುಹೆಯ ಪರಿಸರ ಸದಾಕಾಲವೂ ತಂಪಾಗಿ ಇರುವುದರಿಂದ ಮತ್ತು ಪ್ರಾಕೃತಿಕ ಆಹಾರ ಲಭ್ಯವಿರುವುದರಿಂದ ದೇವರ ಈ ಮೀನುಗಳ ಜೊತೆಗೆ ಕೆಲವು ಸಣ್ಣಪುಟ್ಟ ಹಾವುಗಳು ಕೂಡಾ ಇಲ್ಲಿ ವಾಸ ಮಾಡಿಕೊಂಡಿದ್ದು,ಇದುವರೆಗೂ ಯಾರಿಗೂ ತೊಂದರೆ ಕೊಟ್ಟ ಉದಾಹರಣೆಗಳು ಇಲ್ಲ. ಇಲ್ಲಿನ ಮೀನುಗಳ ಸಮೂಹ ಕಾಲಮಾನಕ್ಕೆ ತಕ್ಕಂತೆ ಈ ಪರಿಸರದಲ್ಲಿ ಹೊಂದಾಣಿಕೆಯನ್ನು ಸೃಷ್ಟಿಸಿಕೊಂಡಿವೆ. ಉದಾಹರಣಾರ್ಥವಾಗಿ ಮಳೆಗಾಲದಲ್ಲಿ ಇಲ್ಲಿ ನೀರಿನ ಸೆಳೆತ ತೀವ್ರ ಸ್ವರೂಪದಲ್ಲಿ ಇದ್ದಾಗ ಈ ಮೀನುಗಳು ಗುಹೆಯ ತಳಭಾಗ ಸಣ್ಣಪುಟ್ಟ ಕಲ್ಲುಗಳಿಗೆ ಅಂಟಿಕೊಳ್ಳುವಂತೆ ಹೀರುಬಟ್ಟಲುಗಳನ್ನು ಹೊಂದಿವೆ.


ತಾವಿರುವ ವಾತಾವರಣಕ್ಕೆ ಹೊಂದಿಕೊಂಡು ಇತರ ಪ್ರಾಣಿಗಳೊಂದಿಗೆ ಸಹಜೀವನ ನಡೆಸಲು ಜೀವಿಗಳಲ್ಲಿ ಅನೇಕ ಮಾರ್ಪಾಡುಗಳು ಉಂಟಾಗಿರುವುವು. ಕೆಲವು ಅದಿಮ ಪ್ರಾಣಿಗಳು ತಾವಿರುವ ವಾತಾವರಣಕ್ಕೆ ಮಾತ್ರ ಹೊಂದಿಕೊಳ್ಳಲು ಸಾಧ್ಯವಾದರೆ ವಿಕಸನದಲ್ಲಿ ಉಚ್ಚಮಟ್ಟಕ್ಕೇರಿರುವ ಕೆಲವೊಂದು ಪ್ರಾಣಿಗಳು, ಜಲಚರಗಳು ತಮ್ಮ ದೈಹಿಕ, ಮಾನಸಿಕ ಬೆಳವಣಿಗೆಗಳಿಂದ ವಿಧವಿಧವಾದ ವಾತಾವರಣಗಳಿಗೂ ಹೊಂದಿಕೊಂಡು ಬದುಕುವ ಸಾಮರ್ಥ್ಯವನ್ನು ಪಡೆದಿರುತ್ತವೆ. ಈ ರೀತಿ ಯಾವುದೇ ಒಂದು ಜೀವಿ ತನ್ನ ಪರಿಸರದ ಎಡರು ತೊಡರುಗಳನ್ನು ನಿವಾರಿಸಿಕೊಂಡು ತಾನು ಅಳಿಯದೇ ತನ್ನ ವಂಶೋದ್ಧಾರವನ್ನು ಮಾಡಿಕೊಂಡು ಬರುವ ಅಂತರ್ಶಕ್ತಿಗೆ ಜೀವೋತ್ಪನ್ನ ಸಾಮರ್ಥ್ಯ ಎಂದು ಕರೆಯುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆ ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನದ ದೇವರಮೀನುಗಳು. ಈ ದೇಗುಲದ ಪರಿಸರ ಋಷಿ ಮುನಿಗಳ ತಪೋಭೂಮಿ.
ಇಲ್ಲಿನ ಪ್ರತಿಯೊಂದು ಅಂಶಗಳಲ್ಲಿ ದೈವಿಕ ಪವಾಡ ಮತ್ತು ಪ್ರಕೃತಿಯ ಕೈವಾಡ ಎದ್ದು ಕಾಣುತ್ತದೆ ಈ ಅದ್ಭುತ ತಾಣದ ಬಗ್ಗೆ ನನಗೆ ತಿಳಿದ ವಿಚಾರವನ್ನು ತಮ್ಮ ಮುಂದೆ ಅನಾವರಣಗೊಳಿಸಲು ಈ ಪರಿಸರದ ದೈವಿಕ ಮತ್ತು ಪ್ರಾಕೃತಿಕ ವಿಸ್ಮಯಗಳ ಮಧುರ ಅನುಭೂತಿಯೇ ಕಾರಣ.
ಉಮಾಕಾಂತ ಖಾರ್ವಿ ಕುಂದಾಪುರ











