ಜಗವಂದಿತ ಆದಿಕವಿ ಮಹರ್ಷಿ ವಾಲ್ಮೀಕಿ

kundapuradotcom@gmail.com
3 Min Read

ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ ಬೆರಗುಗೊಳಿಸುವ ಭಾಷಾ ಶೈಲಿ, ನವಿರಾದ ನಿರೂಪಣೆ, ವಿಭಿನ್ನ ಕಥಾ ಹಂದರಗಳಿಂದ ಚರಿತ್ರೆಯನ್ನು ಸಾಮಾನ್ಯ ಜ್ಞಾನಕ್ಕೆ ಭಾಗವಾಗಿ ನೋಡುವ ಕ್ರಮದಂತೆ ರೂಪುಗೊಂಡ ಸಾವಿರಾರು ಕೃತಿ ಕಾವ್ಯಗಳನ್ನು ಜ್ಞಾನದ ಶಿಸ್ತಾಗಿ ಕವಿಕೋವಿದರು ನಮ್ಮೆದುರು ಅನಾವರಣಗೊಳಿಸಿದ್ದಾರೆ.

ಅವರವರ ಬದುಕಿಗೆ ಹತ್ತಿರವಿರುವ ಸತ್ಯಗಳನ್ನು ತಮ್ಮದೇ ರೀತಿಯಲ್ಲಿ ಪಡಿಮೂಡಿಸಿದ್ದಾರೆ. ಆದರೆ ಇದಕ್ಕಿಂತಲೂ ಭಿನ್ನವಾಗಿ ಚರಿತ್ರೆಯ ಕಥಾನಕದಲ್ಲಿ ತಾನೂ ಒಂದು ಪಾತ್ರವಾಗಿ ಮಿಳಿತಗೊಂಡು ಕಥೆಯ ಒಳಗಿನೊಳಗನ್ನು ತೆರೆತೆರೆಯಾಗಿ ತೆರೆದು ಸೂಕ್ತ ಮತ್ತು ಯುಕ್ತ ರೀತಿಯಲ್ಲಿ ಅರ್ಥೈಸಿ ಅದರ ಮಹತ್ವ ಮತ್ತು ಮೌಲ್ಯಗಳನ್ನು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಪ್ರಚುರ ಪಡಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯ ಸಾಧನೆ ಅತಿಶಯವಾದ ಐರಾವತ ಪಥ.

ಜಗತ್ತಿನ ಆದಿಕಾವ್ಯವಾಗಿ ಪರಿಗಣಿಸಲ್ಪಟ್ಟಿರುವ ವಾಲ್ಮೀಕಿ ರಾಮಾಯಣದಲ್ಲಿ ತಪಸ್ಸಿಯ ಚಿತೈಕಾಗ್ರತೆ, ವಿಮರ್ಶಕನ ಚಿಕಿತ್ಸೆಕತೆ, ಸಾಧಕನ ಸಹನೆ, ಸತ್ಯಾನ್ವೇಷಕನ ಪ್ರಾಮಾಣಿಕತೆ, ನಿಜಭಕ್ತನ ನಿಷ್ಠೆ,ದಾರ್ಶನಿಕನ ಅಚಲ ನಿಲುವು ಇವೇ ಮೊದಲಾದ ವಿಶೇಷ ಸಾಮರ್ಥ್ಯಗಳು ಮೇಳೈಸಿದ್ದರಿಂದ ಯುಗಯುಗಾಂತರ ಕಳೆದರೂ ವಾಲ್ಮೀಕಿ ರಾಮಾಯಣ ಅಜರಾಮರವಾಗಿ ಜಗತ್ಪ್ರಸಿದ್ಧವಾಗಿದೆ. ಈ ಮಹಾಕಾವ್ಯ ಭಾರತೀಯ ಸಂಸ್ಕೃತಿಯ ಸುಧಾಸಾಗರವಾಗಿದ್ದು,ನಮ್ಮ ಸಾಮೂಹಿಕ ಜಾಗೃತ ಪ್ರಜ್ಞೆಯ ಸಾರಸರ್ವಸ್ವವಾಗಿದೆ.

ಕಾಡಿನಲ್ಲಿ ದಾರಿಹೋಕರನ್ನು ದೋಚುತ್ತಾ ಲೆಕ್ಕವಿಲ್ಲದಷ್ಟು ಪಾಪ ಕೃತ್ಯಗಳನ್ನು ಮಾಡುತ್ತಿದ್ದ ಮಹಾಕ್ರೂರಿ ಬೇಡನೊಬ್ಬ ನಾರದ ಮುನಿಗಳ ಮಾತಿನಿಂದ ಮನ ಪರಿವರ್ತನೆಯಾಗಿ ಹೊಂದಿ ಮಹರ್ಷಿಯಾದ,ಮಹಾಜ್ಞಾನಿಯಾದ.ವಾಲ್ಮೀಕ ಎಂದರೆ ಹುತ್ತ.ಹುತ್ತದಿಂದ ಜ್ಞಾನೋದಯ ಪಡೆದು ಬಂದ ಅವನಿಗೆ ವಾಲ್ಮೀಕಿ ಎಂಬ ಹೆಸರು ಬಂತು. ಶಿಷ್ಯರೊಂದಿಗೆ ತಮಸಾ ನದಿಯ ಸ್ನಾನಘಟ್ಟಕ್ಕೆ ಮದ್ಯಾಹ್ನಿಕವನ್ನು ಮುಗಿಸಲೆಂದು ವಾಲ್ಮೀಕಿ ಬಂದಾಗ ವೃಕ್ಷದ ತುದಿರೆಂಬೆಯ ಮೇಲೆ ಪ್ರಣಯ ಸಲ್ಲಾಪದಲ್ಲಿ ಮಗ್ನವಾಗಿದ್ದ ಕ್ರೌಂಚ ಪಕ್ಷಿಯನ್ನು ಹೊಂಚು ಹಾಕಿ ಕೊಂದು ಹಾಕಿದ ದಾರುಣ ದೃಶ್ಯವನ್ನು ಕಣ್ಣಾರೆ ಕಾಣುತ್ತಾನೆ.ಇದರಿಂದ ಅವನ ಹೃದಯ ಹೊನಲಾಗಿ ಹರಿಯಿತು.

ಕಣ್ಣಾಲಿಗಳು ವೇದನೆಯಿಂದ ದ್ರವಿಸಿ ಹೋಯಿತು. ಮೇರೆ ಮೀರಿದ ದುಖಃ ತಡೆಯಲಾರದೇ ಕ್ಷಣಿಕ ಕೋಪೋದ್ರೇಕಕ್ಕೆ ಒಳಗಾದ ವಾಲ್ಮೀಕಿ ಆ ಬೇಡನನ್ನು ಕುರಿತು ಮಾ ನಿಷಾದ ಪ್ರತಿಷ್ಠಾಂ ತ್ವಮಗಮ ಶ್ಯಾಶ್ವತೀಸ್ಸಮಾಃ ಯತ್ಕ್ರೌಂಚ ಮಿಥುನಾದೇಕ ಮವಧಿಃ ಕಾಮ ಮೋಹಿತಮ್ ಎಂದು ಶಪಿಸಿದ. ಇದರ ಅರ್ಥ ಮಿಥುನ ಸಂಭ್ರಮದಲ್ಲಿದ ಕ್ರೌಂಚ ಪಕ್ಷಿಯನ್ನು ಕೊಂದ ನೀನು ಬಹಳ ವರ್ಷ ಬದುಕಬಾರದು ಎಂದು. ತನಗರಿವಿಲ್ಲದಂತೇ ವಾಲ್ಮೀಕಿಯ ಬಾಯಿಂದ ಬಂದ ಈ ಶಾಪ ಅತ್ಯುತ್ತಮವಾದ ಛಂದಸ್ಸಿನಿಂದ ಕೂಡಿತ್ತು.

ಕ್ರೌಂಚ ಪಕ್ಷಿಗಳ ಆರ್ತನಾದವನ್ನು ಕಂಡು ಸಂಕಟ ತಾಳಲಾರದೇ ಅತೀಂದ್ರಿಯ ಮನೋವ್ಯಥೆಯಿಂದ ತಾನು ಶಪಿಸಿದ ಆ ಮಾತುಗಳು ಒಂದು ಅತ್ಯುದ್ಬುತ ಶ್ಲೋಕದ ರೂಪದಲ್ಲಿದೆ ಎಂದು ವಾಲ್ಮೀಕಿ ಆಶ್ಚರ್ಯಚಕಿತನಾಗುತ್ತಾನೆ. ಇದೇ ಶ್ಲೋಕ ರಾಮಾಯಣ ಕಾವ್ಯ ರಚನೆಗೆ ಮುನ್ನುಡಿ ಬರೆಯುತ್ತದೆ.ಅದ್ಭುತವಾದ ಶಬ್ದ ವಾಕ್ಯಗಳಿಂದ ವಾಲ್ಮೀಕಿ ರಾಮಾಯಣ ಮಹಾಕಾವ್ಯವನ್ನು ಸಂಪನ್ನಗೊಳಿಸುತ್ತಾನೆ. ಜಗತ್ತಿನ ಆದಿಕಾವ್ಯವಾದ ರಾಮಾಯಣ ಕೇವಲ ಭಾರತ ಮಾತ್ರವಲ್ಲ,ಇಂಡೋನೇಷ್ಯಾ,ಮಲೇಷ್ಯಾ,ಫಿಲಿಫೈನ್ಸ್ ದೇಶದ ಜನರ ಸಾಂಸ್ಕೃತಿಕ ಧಮನಿಗಳಲ್ಲಿ ರಾಮಾಯಣ ಬೆರೆತುಗೊಂಡಿದೆ.

ಸಂಸ್ಕೃತದ ಮೂಲ ವಾಹಿನಿಗೆ ಮೂಲವಾಗಿರುವ ರಾಮಾಯಣ ಕಾವ್ಯವಾಚಕ ಸಂಪ್ರದಾಯದಲ್ಲಿ (ORAL TRADITION) ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದು,ಕಣ್ಣಾಮುಚ್ಚೆ ಗಾಡೇ ಗೂಡೇ ಉದ್ದಿನ ಮೂಟೆ ಉರುಳಿ ಹೋಯ್ತು ಎಂಬ ಮಕ್ಕಳಾಟದ ಪದ್ಯಗಳಲ್ಲೂ ಸಂಪೂರ್ಣ ರಾಮಾಯಣ ಅಡಕವಾಗಿದೆ. ಪ್ರಕೃತಿಯ ವರ್ಣನೆಯನ್ನು ಓದಬೇಕೆನ್ನುವವರು ವಾಲ್ಮೀಕಿ ರಾಮಾಯಣ ಓದಬೇಕು.ಅಲ್ಲಿ ದೊರೆಯುವುದಕ್ಕಿಂತ ಸುಂದರ ಮತ್ತು ಶುಭ್ರವಾದ,ಸಹಜವಾದ ಪ್ರಕೃತಿ ವರ್ಣನೆ ಬೇರಾವ ಕಾವ್ಯದಲ್ಲಿ ದೊರಕಲಾರದು. ಹಾಗಾಗಿ ಕವಿರತ್ನ ಕಾಳಿದಾಸನು ಕೂಡಾ ವಾಲ್ಮೀಕಿ ರಾಮಾಯಣದಿಂದ ಸ್ಪೂರ್ತಿ ಪಡೆದು ತನ್ನ ಕೃತಿಯಲ್ಲಿ ಪ್ರಕೃತಿಯ ವರ್ಣನೆಯನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದಾನೆ

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಚಿವರಾಗಿದ್ದ ಶ್ರೀ ರಾಮುಲು ರವರ ಪ್ರಯತ್ನದ ಫಲವಾಗಿ ಪ್ರತಿವರ್ಷ ವಾಲ್ಮೀಕಿ ಜಯಂತಿ ಆಚರಣೆಗೆ ನಾಂದಿ ಹಾಡಲಾಯಿತು. ಅಂದಿನಿಂದ ವಾಲ್ಮೀಕಿ ಜಯಂತಿ ಸರ್ಕಾರಿ ರಜೆ ಘೋಷಿಸಲ್ಪಟ್ಟಿದ್ದು,ವಾಲ್ಮೀಕಿ ಜಯಂತಿಯನ್ನು ಸಂಭ್ರಮ,ಸಡಗರಗಳಿಂದ ಆಚರಿಸಲ್ಪಡುತ್ತಿದೆ. ಡಿವಿಜಿಯವರು ಹೇಳುವಂತೆ ವಾಲ್ಮೀಕಿ ರಾಮಾಯಣದಲ್ಲಿ ಸಾರ್ವಜನಿಕ ಜೀವನ ಮೌಲ್ಯಗಳ ಪ್ರತಿಪಾದನೆಯೊಂದಿಗೆ ಮಣ್ಣಿನ ವಾಸನೆಯೂ ಇದೆ,ಅದರ ಜೊತೆಗೆ ಮಲ್ಲಿಗೆಯ ಪರಿಮಳವೂ ಇದೆ.

ವಾಲ್ಮೀಕಿ ರಾಮಾಯಣ ರಚನೆಗೆ ಸೃಷ್ಟಿಕರ್ತ ಬ್ರಹ್ಮನ ವರದಾನವಿದ್ದು,ಸ್ವತಹ ಬ್ರಹ್ಮದೇವನೇ ಧರೆಗಿಳಿದು ಬಂದು ಮಹಾಕಾವ್ಯ ರಚನೆಗೆ ಆಶೀರ್ವಚಿಸಿ,ಈ ಜಗತ್ತಿನಲ್ಲಿ ಬೆಟ್ಟ, ಗುಡ್ಡ, ನದಿ, ಜೀವರಾಶಿಗಳು ಎಲ್ಲಿಯವರೆಗೂ ಇರುತ್ತದೆಯೊ ಅಲ್ಲಿಯವರೆಗೆ ರಾಮಾಯಣ ಅಜರಾಮರವಾಗಿರುತ್ತದೆ ಮತ್ತು ಕೃರ್ತ ವಾಲ್ಮೀಕಿಯ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದು ವರದಾನ ನೀಡುತ್ತಾನೆ. ಇಂದಿಗೂ ರಾಮಾಯಣ ಮಹಾಕಾವ್ಯ ಮತ್ತು ವಾಲ್ಮೀಕಿಯ ಹೆಸರು ಜಗತ್ತಿನಲ್ಲಿ ಚಿರಸ್ಥಾಯಿಯಾಗಿರುವುದಕ್ಕೆ ಬ್ರಹ್ಮದೇವರ ವರದಾನ ಪುಣ್ಯಪ್ರದ ದೃಷ್ಟಾಂತವಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment