ವೈದಿಕ ಪುರಾಣಗಳ ಸಂಬಂಧವನ್ನು ಹೊಂದಿ ದೇವರಿಂದ ಸೃಷ್ಟಿಯಾಗಿ ಭೂಮಿಯಲ್ಲಿ ಆರಾಧನೆ ಪಡೆಯುತ್ತಿರುವ ದೈವಗಳಲ್ಲಿ ಪಂಜುರ್ಲಿ ದೈವ ಪ್ರಾಮುಖ್ಯತೆ ಪಡೆಯುತ್ತದೆ ಶಿವಸಂಭೂತನಾದ ಪಂಜುರ್ಲಿ ಕರ್ನಾಟಕ ಕರಾವಳಿ ಪ್ರಾಂತ್ಯದ ಕಾರಣಿಕ ಮತ್ತು ಜನಪ್ರಿಯ ದೈವ ಕುಲಲಾಂಛನ ಮತ್ತು ಉಗಮದಲ್ಲಿ ಪ್ರಾಣಿ ಸಂಬಂಧವನ್ನು ಹೊಂದಿರುವ ಪಂಜುರ್ಲಿಯ ಮಹಿಮೆ ಅಗಣಿತ ಗ್ರಾಮೀಣ ಕರಾವಳಿಯ ಬಹುತೇಕ ಮನೆತನಗಳು ಪಂಜುರ್ಲಿ ದೈವವನ್ನು ತಮ್ಮ ಮನೆತನದ ಕುಲದೇವತೆಯಾಗಿ ಪೂಜಿಸಿರುವುದಕ್ಕೆ ಸಾಕ್ಷಿಯಾಗಿ ಹಲವು ಕುಟುಂಬಗಳ ದೈವಸ್ಥಾನಗಳಲ್ಲಿ ವರಾಹ ಮುಖವಾಡಗಳು ಕುಲದೇವತೆ ರೂಪದಲ್ಲಿ ಆರಾಧನೆಗೊಳ್ಳುತ್ತಿವೆ.
ಕರಾವಳಿಯ ಅದ್ಭುತ ಕಾರಣಿಕದ ಈ ಪಂಜುರ್ಲಿ ದೈವ ಪ್ರಕೃತಿ ಪ್ರಿಯನೂ ಹೌದು ಪಂಜುರ್ಲಿಯ ಬದುಕು ಹಸಿರು ನಿಸರ್ಗದೊಂದಿಗೆ ವಿಧೇಯಿಸಿಕೊಂಡಿದ್ದರಿಂದ ಸಾಂಧರ್ಭಿಕ ಸನ್ನಿವೇಶವೊಂದರಲ್ಲಿ ಬೃಹತ್ ಗಾತ್ರದ ಮರವೊಂದನ್ನು ತನ್ನ ಕಾರಣಿಕ ಶಕ್ತಿಯಿಂದ ಕಾಪಾಡಿದ ಮೈ ನವಿರೇಳಿಸುವ ಕಥೆಯೊಂದನ್ನು ಇಲ್ಲಿ ಅನಾವರಣಗೊಳಿಸುತ್ತಿದ್ದೇನೆ. ಅದು ಹದಿನೈದನೇ ಶತಮಾನದ ಕಾಲಘಟ್ಟ ಒಂದು ದಿನ ಪಂಜುರ್ಲಿ ದೈವವು ಘಟ್ಟದ ಮೇಲಿಂದ ಹೊರಟು ಬಿಸಿಲೆ ಘಾಟಿಯ ಹಾದಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸಮೀಪದ ಕಡಬದ ಮರ್ಧಾಳ ಊರಿಗೆ ಬರುತ್ತದೆ.
ಹಾಗೆ ಬಂದ ಪಂಜುರ್ಲಿ ದೈವ ಊರಿನ ಹೊರವಲಯದ ಕಾಡುಪ್ರದೇಶದ ಮರವೊಂದರಲ್ಲಿ ವಸತಿ ಹೂಡುತ್ತದೆ ಅದೇ ಸಮಯಕ್ಕೆ ಊರಿಗೆ ಬಂದ ಕಡಲ ವ್ಯಾಪಾರಿ ಆ ಬೃಹತ್ ಮರವನ್ನು ಕಂಡು ಆಕರ್ಷಿತನಾಗುತ್ತಾನೆ ಕಡಲಯಾನಕ್ಕೆ ಬೇಕಾಗಿ ದೊಡ್ಡ ಹಡಗು ನಿರ್ಮಿಸಲು ಈ ಮರ ಸೂಕ್ತ ಎಂಬ ವಿಚಾರ ಆತನ ತಲೆಯಲ್ಲಿ ಹೊಳೆಯುತ್ತದೆ.


ಉತ್ಕೃಷ್ಟ ಗುಣಮಟ್ಟದ ಈ ಮರದಿಂದ ಮಾಡುವ ಹಡಗು ಸುದೃಢವಾಗಿರುತ್ತದೆ ಎಂದು ಆತ ನಿರ್ಧರಿಸಿ, ಆ ಬೃಹತ್ ಮರವನ್ನು ಕಡಿಯಲು ಸಿದ್ಧತೆ ಮಾಡುತ್ತಾನೆ. ಮರವನ್ನು ಕಡಿಯಲು ಆಳುಗಳನ್ನು ನೇಮಿಸಿ ಕಡಿಯುವ ಕಾರ್ಯಕ್ಕೆ ಕೈಹಾಕುತ್ತಾನೆ ಮರ ಕಡಿಯುವ ಆಳುಗಳು ಅಲ್ಲಿ ನಿಂತ ಕಡಲ ವ್ಯಾಪಾರಿಯೊಡನೆ ಮರ ಕಡಿಯುವುದಾ? ಎಂದು ಪ್ರಶ್ನೆಯನ್ನು ಕೇಳಿ, ಕಡಿ ಎಂಬ ಉತ್ತರ ಪಡೆಯುತ್ತಾರೆ ಆದರೆ ಅಂಥ ಪ್ರಶ್ನೆಯ ಸದ್ದು ಕೇಳುತ್ತಲೇ ಆ ಬೃಹತ್ ಮರ ಭಯಂಕರವಾಗಿ ಥರಥರಿಸತೊಡಗಿತು ಅದರಲ್ಲಿದ ಪಂಜುರ್ಲಿ ದೈವ ರೌದ್ರ ರೂಪದಲ್ಲಿ ಭಯಂಕರವಾಗಿ ಆರ್ಭಟಿಸುತ್ತದೆ ಭಯ ಭೀತರಾದ ಕಡಲ ವ್ಯಾಪಾರಿ ಮತ್ತು ಆಳುಗಳು ಅಲ್ಲಿಂದ ಓಡಿಹೋಗುತ್ತಾರೆ ಕೊಡಲಿಗೆ ಆಹಾರವಾಗಬೇಕಾದ ಆ ಬೃಹತ್ ವೃಕ್ಷ ಸುರಕ್ಷಿತವಾಗಿ ಕಾಪಾಡಲ್ಪಡುತ್ತದೆ.
ಹೀಗೆ ಪಂಜುರ್ಲಿ ದೈವದ ಸಾನ್ನಿಧ್ಯವಿದ್ದ ಕಾರಣ ಆ ಬೃಹತ್ ವೃಕ್ಷ ಉಳಿಯುತ್ತದೆ. ಪರಿಸರದ ಅವನತಿಯಿಂದ ನೈಸರ್ಗಿಕ ವ್ಯವಸ್ಥೆಗಳು ಮಾತ್ರವಲ್ಲ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಸರವೂ ಕೂಡಾ ಹಾಳಾಗುತ್ತದೆ ಎಂಬ ಸಂದೇಶವನ್ನು ಪಂಜುರ್ಲಿ ಕಥಾನಕವು ಸಾರುತ್ತದೆ. ಕೃಷಿ ಪ್ರಧಾನ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ದೈವಗಳ ಹೆಸರಿನಲ್ಲಿ ಕೊಡಿಕಟ್ಟುವ ಸಂಪ್ರದಾಯವಿದೆ ತರಕಾರಿ ತೋಟ ಮತ್ತು ಗಿಡಮರಗಳ ರಕ್ಷಣೆಗೆ ಈ ವಿಧಾನವನ್ನು ಅನುಸರಿಸುತ್ತಾರೆ. ದೈವಗಳ ಹೆಸರಿನಲ್ಲಿ ಮಂತ್ರಿಸಿದ ಒಂದು ವಸ್ತುವನ್ನು ಅಡಿಕೆಯ ಮರ ಅಥವಾ ತೆಂಗಿನಮರಗಳಿಗೆ ಕಟ್ಟುತ್ತಾರೆ ದೈವವು ವಸ್ತುರೂಪದ ಈ ಗುರುತಿನಲ್ಲಿ ಅಡಗಿ ಕುಳಿತು ಗಿಡಮರಗಳ ಫಲವಸ್ತುಗಳನ್ನು ಕಾಯುತ್ತದೆ ಎಂಬುದು ಜನರ ನಂಬಿಕೆ


ದೈವದ ಕಾವಲಿರುವ ಈ ಗಿಡಮರಗಳ ವಸ್ತುಗಳನ್ನು ಯಾರಾದರೂ ಕದ್ದು ಉಪಯೋಗಿಸಿದರೆ ಅದರಿಂದ ನಾನಾ ತರದ ತೊಂದರೆ, ತಾಪತ್ರಯಗಳು ಉಂಟಾಗುತ್ತದೆ ಎಂಬುದು ಜನರ ನಂಬಿಕೆ ಹೆಚ್ಚಾಗಿ ಜನರು ಪಂಜುರ್ಲಿ, ಕಲ್ಲುರ್ಟಿ, ಜುಮಾದಿ, ಮಲರಾಯ ದೈವಗಳ ಹೆಸರಿನಲ್ಲಿ ಕೊಡಿಕಟ್ಟುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೀಗೆ ಪಂಜುರ್ಲಿ ದೈವ ಸೇರಿದಂತೆ ಕರಾವಳಿಯ ದೈವಗಳು ಜನರ ರಕ್ಷಣೆಯ ಜೊತೆಗೆ ಅವರ ಭೂಮಿ,ಗಿಡಮರಗಳ, ಕೃಷಿ ಉತ್ಪನ್ನಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು,ಪರಿಸರ ವ್ಯವಸ್ಥೆಗಳಿಗೆ ಧಕ್ಕೆ ಬಂದರೆ ತಮ್ಮ ಕಾರಣಿಕ ಶಕ್ತಿಯಿಂದ ಪ್ರಬಲವಾಗಿ ಪ್ರತಿರೋಧಿಸುತ್ತದೆ ಎಂಬ ಸತ್ಯ ಪಂಜುರ್ಲಿಯ ಈ ಕಥೆಯಲ್ಲಿ ಅನಾವರಣಗೊಳ್ಳುತ್ತದೆ.
ಉಮಾಕಾಂತ ಖಾರ್ವಿ ಕುಂದಾಪುರ



















