ಪಂಚದಿನಾತ್ಮಕವಾಗಿ ಆಚರಿಸುವ ದೀಪಾವಳಿ ಹಬ್ಬದಲ್ಲಿ ಬಲಿಪಾಡ್ಯಮಿ ಮತ್ತು ಗೋಪೂಜೆ ಪ್ರಾಮುಖ್ಯತೆ ಪಡೆಯುತ್ತದೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು ಬಲೀಂದ್ರ ಪೂಜೆ ಮತ್ತು ಗೋ ಪೂಜೆಯನ್ನು ಒಟ್ಟೊಟ್ಟಿಗೆ ಆಚರಿಸುವ ಸಂಪ್ರದಾಯವಿದೆ. ಪೌರಾಣಿಕ ಕಥೆಯ ಪ್ರಕಾರ ಅಸುರ ಬಲಿ ಚಕ್ರವರ್ತಿಗೆ ಇಂದ್ರ ಪದವಿ ದೊರಕಿಸಿಕೊಡಲು ಅಸುರ ಗುರು ಶುಕ್ರಾಚಾರ್ಯರು ಬಲಿ ಚಕ್ರವರ್ತಿಯ ಕೈಯಿಂದ ತೊಂಬತ್ತೊಂಬತ್ತು ಅಶ್ವಮೇಧ ಯಜ್ಞಗಳನ್ನು ಮಾಡಿಸುತ್ತಾನೆ ಆದರೆ ಇದರಿಂದ ಭಯಗೊಂಡ ಇಂದ್ರ ತನ್ನ ಪದವಿಗೆ ಕುತ್ತು ಬರುವುದು ಎಂದು ಭಾವಿಸಿ ಶ್ರೀ ಮನ್ ನಾರಾಯಣನಲ್ಲಿ ಮೊರೆ ಇಡುತ್ತಾನೆ.
ಆಗ ಶ್ರೀಮನ್ ನಾರಾಯಣನು ವಾಮನ ಅವತಾರಿಯಾಗಿ ಬೆಳೆದು, ಬಾಲಬ್ರಾಹ್ಮಣನ ವೇಷ ಧರಿಸಿ ಬಲಿಯ ಯಜ್ಞ ಮಂಟಪ ಪ್ರವೇಶಿಸುತ್ತಾನೆ ಬಾಲಬ್ರಾಹ್ಮಣನ ತೇಜಸ್ಸು ಕಂಡು ಗುರುತಿಸಿದ ಶುಕ್ರಾಚಾರ್ಯರು ತಮ್ಮ ಶಿಷ್ಯ ಬಲಿಗೆ ಬಾಲಬ್ರಾಹ್ಮಣ ಕೇಳಿದ ಮೂರು ಹೆಜ್ಜೆ ಭೂಮಿಯನ್ನು ದಾನ ಮಾಡಬಾರದೆಂದು ಎಚ್ಚರಿಸುತ್ತಾರೆ ಆದರೆ ಬಲಿ ಗುರುಗಳ ಎಚ್ಚರಿಕೆಯ ಮಾತುಗಳನ್ನು ಧಿಕ್ಕರಿಸಿ ಬಲಿ ಚಕ್ರವರ್ತಿ ಬಾಲಬ್ರಾಹ್ಮಣನಿಗೆ ದಾನ ಮಾಡುತ್ತಾನೆ ವಾಮನ ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ.


ಬಲಿಯ ಸತ್ಯ,ನಿಷ್ಠೆ ಮತ್ತು ದಾನಗುಣಕ್ಕೆ ಮೆಚ್ಚಿ ಸ್ವತಃ ಶ್ರೀಮನ್ ನಾರಾಯಣನೇ ಬಲಿಯ ಅರಮನೆಯ ಕಾವಲುಗಾರನಾಗುತ್ತಾನೆ ಆ ಸಂದರ್ಭದಲ್ಲಿ ಶ್ರೀಮನ್ ನಾರಾಯಣನ ಬಳಿ ಬಲಿ ತಾನು ವರ್ಷಕ್ಕೊಮ್ಮೆ ಮೂರು ದಿನಗಳ ಕಾಲ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ನೋಡಿಕೊಂಡು ಹೋಗುವೆ ಎಂದು ವರ ಪಡೆದನಂತೆ. ಅದರಂತೆ ದೀಪಾವಳಿ ಹಬ್ಬದ ಮೂರು ದಿನ ಬಲೀಂದ್ರನಿಗೆ ವಿಶೇಷ ಪೂಜೆ ಪುರಸ್ಕಾರ ಸಲ್ಲಿಸುತ್ತಾರೆ ಇದೇ ಸಮಯದಲ್ಲಿ ಗೋಪೂಜೆ ಮಾಡುವುದರ ಉದ್ದೇಶವೆಂದರೆ ಬಲಿ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವವಿತ್ತು ಗೋವುಗಳ ಆರಾಧನೆ ವಿಶೇಷ ರೀತಿಯಲ್ಲಿ ನಡೆಸಲಾಗುತ್ತಿತ್ತು.ಅದರ ಸವಿ ನೆನಪಿಗಾಗಿ ಬಲಿಪಾಡ್ಯಮಿಯ ದಿನ ಗೋಪೂಜೆ ಮಾಡುತ್ತಾರೆ.
ಆ ದಿನ ಗೋವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ತಿಂಡಿ ತಿನಿಸುಗಳನ್ನು ನೀಡಿ ಸ್ವಚ್ಚಂದವಾಗಿ ಮೇಯಲು ಬಿಡುತ್ತಾರೆ ಕೆಲವು ಕಡೆ ಆ ದಿನ ಗೋವುಗಳ ಹಾಲು ಕರೆಯದೇ ಕರುಗಳಿಗೆ ಕುಡಿಯಲು ಬಿಡುತ್ತಾರೆ.


ಸಾಮಾನ್ಯವಾಗಿ ಕುಂದಾಪುರ ಮತ್ತು ಭಟ್ಕಳ ಗ್ರಾಮಾಂತರ ಪ್ರದೇಶಗಳಲ್ಲಿ ಗೋಪೂಜೆಯನ್ನು ಕೊಡಿ ತಿಂಗಳಲ್ಲಿ ಮಾಡುವುದುಂಟು ಇದಕ್ಕೆ ಗ್ರಾಮ್ಯ ಕನ್ನಡದಲ್ಲಿ ಗಂಟಿಪೂಜೆ ಅಥವಾ ಗಂಟಿ ಕೊರಳಿಗೆ ರೊಟ್ಟಿ ಕಟ್ಟುವ ಹಬ್ಬ ಎಂದು ಕರೆಯುತ್ತಾರೆ ಮನೆಯಲ್ಲಿ ತಯಾರಿಸಿದ ರೊಟ್ಟಿಯ ಮಧ್ಯಭಾಗದಲ್ಲಿ ಒಂದು ರಂಧ್ರ ಮಾಡಿ, ಅದಕ್ಕೆ ದಾರವನ್ನು ಸಿಕ್ಕಿಸಿ, ದಾರಕ್ಕೆ ತುಳಸಿ , ಎಲೆ ಹಾಗೂ ಹೂವನ್ನು ಸಿಕ್ಕಿಸಿ ಸುಂದರವಾದ ಹಾರವನ್ನು ತಯಾರಿಸಿ, ಕುತ್ತಿಗೆಗೆ, ತಿರಿಗೆ ಕಟ್ಟುವುದು ವಾಡಿಕೆಯಾಗಿದೆ. ಕೊಡಿ ತಿಂಗಳ ಗ್ರಾಮೀಣ ರೈತರ ಗೋಪೂಜೆ ವಿಭಿನ್ನವಾಗಿದ್ದು, ಕೃಷಿ ಜನಪದ ಸಂಪ್ರದಾಯದ ಆಚರಣೆಯಾಗಿದೆ ತುಳಸಿ ಪೂಜೆ ನಡೆದ ಮರುದಿನ ಗೋಪೂಜೆ ನಡೆಯುವುದು ವಾಡಿಕೆ.
ರೈತರು, ಕೋಣ, ಎತ್ತು, ದನ, ಕರುಗಳನ್ನು ಮೀಯಿಸಿ, ಶೃಂಗರಿಸಿ, ಗೋವಿನ ಕೊರಳಿಗೆ ಭತ್ತದ ತೆನೆ, ಸಿಂಗಾರ ಹೂ, ಅಡಿಕೆಯ ಮಾಲೆ ಮತ್ತು ಕರಿಬೀಳಿನ ಎಲೆ, ಕೋಳಿ ಹೂ, ಜಂಗಮನ ಹೂವನ್ನು ಸೇರಿಸಿ ಮಾಡಿದ ಮಾಲೆಯನ್ನು ಹಾಕಿ ಅಲಂಕರಿಸುತ್ತಾರೆ.ಗೋವಿಗೆ ಆರತಿ ಬೆಳಗಿ ಅದರ ಕೊರಳಿಗೆ ಕರ್ಜಿ ಕಾಯಿ, ಚಪ್ಪೆರೊಟ್ಟಿಗಳನ್ನು ಕಟ್ಟಿ, ಪಾಯಸ ಇತ್ಯಾದಿ ತಿಂಡಿ ತಿನಿಸುಗಳನ್ನು ತಿನ್ನಲು ನೀಡುತ್ತಾರೆ ನಂತರ ಅವುಗಳನ್ನು ಸ್ವಚ್ಛಂದವಾಗಿ ತಿರುಗಾಡಲು ಬಿಡುತ್ತಾರೆ ಕುಂದಾಪುರ ಮತ್ತು ಭಟ್ಕಳ ಪ್ರದೇಶದಲ್ಲಿ ಕೃಷಿ ಸಾಗುವಳಿ ಮತ್ತು ಹೈನುಗಾರಿಕೆ ಮಾಡಿಕೊಂಡಿರುವ ರೈತರು ಕೊಡಿ ತಿಂಗಳಲ್ಲಿ ಗೋಪೂಜೆ ಮತ್ತು ತುಳಸಿ ಪೂಜೆ ಮಾಡಲು ನಿರ್ದಿಷ್ಟ ಕಾರಣಗಳಿವೆ.


ಭಟ್ಕಳ ಪ್ರದೇಶದಲ್ಲಿ ಈ ಹಿಂದೆ ಕೃಷಿ ಕಾರ್ಯ ನಡೆದ ಬಳಿಕ ಎತ್ತು,ಕೋಣಗಳನ್ನು ಸಾಗರ ತಾಲೂಕಿನ ಹೊಗೆವಡ್ಡಿ ಪ್ರದೇಶಕ್ಕೆ ಮೇವಿಗಾಗಿ ಅಲ್ಲಿನ ರೈತರ ಬಳಿ ಬಿಟ್ಟು ಬರುತ್ತಿದ್ದರು ಆ ರೈತರು ಎತ್ತು,ಕೋಣಗಳಿಗೆ ಸಮೃದ್ಧವಾದ ಮೇವು ನೀಡಿ ನಾಲ್ಕೈದು ತಿಂಗಳು ಸಾಕುತ್ತಿದ್ದರು ಊರಿನಲ್ಲಿ ಕೊಯ್ಲು ಕಾರ್ಯ ಮುಗಿದ ಬಳಿಕ ರೈತರು ಮೇವು ಕೊಟ್ಟು ಸಾಕಿದ ಹೊಗೆವಡ್ಡಿ ಪ್ರದೇಶದ ರೈತರಿಗೆ ನಿರ್ದಿಷ್ಟ ಪ್ರಮಾಣದ ಹಣ ನೀಡಿ ತಮ್ಮ ಊರಿಗೆ ತಮ್ಮ ಎತ್ತು,ಗೋವುಗಳನ್ನು ತೆಗೆದುಕೊಂಡು ಬರುತ್ತಿದ್ದರು.ಈ ಸಂಪ್ರದಾಯ ಮುಂದೆ ಕೊಡಿ ತಿಂಗಳ ಗೋಪೂಜೆಯ ರೂಪದಲ್ಲಿ ಸಂಪನ್ನಗೊಂಡಿತ್ತು.
ಎತ್ತು, ಕೋಣಗಳನ್ನು ಘಟ್ಟ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಪದ್ಧತಿ ಈಗ ಸಂಪೂರ್ಣವಾಗಿ ನಿಂತಿದ್ದರೂ ಕೊಡಿ ತಿಂಗಳ ತುಳಸಿ ಪೂಜೆ ಮತ್ತು ಗೋಪೂಜೆ ನಿರಂತರವಾಗಿ ನಡೆದುಕೊಂಡು ಬಂತು.
ಬಲೀಂದ್ರನ ರಾಜ್ಯ ಸುಖ ಸಮೃದ್ಧಿಯಿಂದ ತುಂಬಿ ತುಳುಕಾಡುತ್ತಿತ್ತು ತಾನು ವರ್ಷಕೊಮ್ಮೆ ಭೂಮಿಗೆ ಬರುವಾಗ ಭೂಮಿ ಬೆಳೆ ಪಚ್ಚು ಪೈರುಗಳಿಂದ ಸಮೃದ್ಧವಾಗಿ ಜನರು ಸುಖ ಸಂತೋಷ ಸಮೃದ್ಧಿಗಳಿಂದ ಇರಬೇಕು ಎಂಬುದು ಬಲೀಂದ್ರ ಮಹಾವಿಷ್ಣುವಿನಲ್ಲಿ ಪಡೆದುಕೊಂಡ ವರದಾನವಾಗಿತ್ತು.
ದೇವರ ವರದಾನ ಮತ್ತು ಪ್ರಕೃತಿಯ ಆಶೀರ್ವಾದದಿಂದ ದೀಪಾವಳಿ ಸಮಯದಲ್ಲಿ ಗದ್ದೆಗಳೆಲ್ಲ ಫೈರುಪಚ್ಚೆಗಳಿಂದ ಸಮೃದ್ಧವಾಗಿರುತ್ತದೆ.


ಇಂತಹ ಸಮೃದ್ಧಿಗೆ ಕಾರಣನಾದ ಬೆಳೆಗಳ ಒಡೆಯನಾದ ಬಲಿಯನ್ನು ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸಿ ತಮ್ಮ ಬೆಳೆಯಲ್ಲಿ ಬಲಿಯನ್ನು, ಬೆಳಕನ್ನು ಕಾಣುವುದು ಬಲಿಪಾಡ್ಯಮಿಯ ವಿಶೇಷ.
ಬಲಿ ನಮ್ಮ ಫಲವಸ್ತುಗಳ ದೇವರಾದ್ದರಿಂದ ಮತ್ತು ಗೋವು ನಮ್ಮ ಪಾಲಿನ ಕಾಮಧೇನು ಆಗಿರುವುದರಿಂದ ದೀಪಾವಳಿ ಪರ್ವಕಾಲದಲ್ಲಿ ವಿಶೇಷ ಪೂಜೆ ಪುರಸ್ಕಾರ ಸಲ್ಲುತ್ತದೆ.ಬೇರೆ ಬೇರೆ ಊರು, ಪ್ರಾಂತ್ಯಗಳಲ್ಲಿ ಈ ಆಚರಣೆಗಳು ಭಿನ್ನತೆಯಿಂದ ಕೂಡಿದರೂ, ಎಲ್ಲರೂ ಪೂಜಿಸುವ, ಗೌರವಿಸುವ ಆಶಯದ ಹಿಂದಿರುವುದು ಅಮರ ತ್ಯಾಗಿ ಬಲಿಯ ಸ್ಮರಣೆ ಮತ್ತು ಕಾಮಧೇನು ಗೋಮಾತೆಗೆ ಪೂಜ್ಯ ಭಾವನೆಯ ಕೃತಜ್ಞತೆ.
ಉಮಾಕಾಂತ ಖಾರ್ವಿ ಕುಂದಾಪುರ
















