ಪರಿಸ್ಥಿತಿ ಮತ್ತು ಪರಿಸರಕ್ಕೆತಕ್ಕಂತೆ ಹೊಂದಿಕೊಂಡು ಬಾಳುವುದು ಮನುಷ್ಯನ ಬದುಕಿನ ಮೂಲಭೂತ ಲಕ್ಷಣ ಪರಿಸ್ಥಿತಿ ನಮಗೆ ಅನುಕೂಲವಾಗದಿದ್ದಲ್ಲಿ ನಾವೇ ಪರಿಸ್ಥಿತಿಗೆ ಹೊಂದಿಕೊಂಡು ಬಾಳಬೇಕು ಎಂಬ ಸ್ಪೂರ್ತಿದಾಯಕ ಮಾತು ಕೂಡಾ ಇದೆ ಆದರೆ ಇದಕ್ಕೆ ಪ್ರಾಣಿಗಳೂ ಕೂಡಾ ಹೊರತಲ್ಲ ಪ್ರಾಣಿ ಪಕ್ಷಿಗಳು ಕೂಡಾ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಬಾಳಿ ಬದುಕಿದ ಹತ್ತು ಹಲವಾರು ಘಟನೆಗಳು ನಮ್ಮ ಸುತ್ತಮುತ್ತ ನಡೆದಿದೆ.
ಇದಕ್ಕೆ ಉದಾಹರಣೆಯಾಗಿ ಸಿಹಿನೀರಿನ ಮೊಸಳೆಯೊಂದು ಉಪ್ಪುನೀರಿನ ನದಿಯ ಜವಗು ಪ್ರದೇಶದಲ್ಲಿ ನಾಲ್ಕು ವರ್ಷಗಳಿಂದ ಬದುಕುತ್ತಿರುವ ಸ್ವಾರಸ್ಯಕರ ಕಥೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.
ಸಾಗರ ತಾಲೂಕಿನ ಭಟ್ಕಳ ಗಡಿಯಂಚಿನ ಸುಪ್ರಸಿದ್ದ ಭೀಮೇಶ್ವರ ದೇಗುಲದ ಪರ್ವತ ಶ್ರೇಣಿಯಲ್ಲಿ ಹುಟ್ಟುವ ನದಿಯೇ ಭೀಮಾನದಿ ಈ ನದಿ ಎರಡು ಕವಲಾಗಿ ಹರಿದು ಭೀಮೇಶ್ವರ ಪ್ರದೇಶದಲ್ಲಿ ಸರಳಾ ಹೊಳೆ ಎಂದು ಕರೆಯಲ್ಪಟ್ಟರೆ, ಭಟ್ಕಳದ ಕಡೆ ಹರಿದು ಭೀಮಾನದಿಯೆಂದು ಕರೆಯಲ್ಪಡುತ್ತದೆ.


ಈ ಕಾಡಿನಂಚಿನಿಂದ ಸುಮಾರು 45 ಕೀಮೀ ಹರಿದು ವೆಂಕ್ಟಾಪುರ ಮೂಲಕ ಸಮುದ್ರವನ್ನು ಸೇರುತ್ತದೆ ಈ ನದಿಗೆ ಭಟ್ಕಳದ ಕಡವಿನಕಟ್ಟಾ ಬಳಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ ಈ ನದಿ ವೆಂಕ್ಟಾಪುರ ಮೂಲಕ ಸಮುದ್ರವನ್ನು ಸೇರುವುದರಿಂದ ಸ್ಥಳೀಯವಾಗಿ ವೆಂಕ್ಟಾಪುರ ಹೊಳೆ ಎಂದು ಕರೆಸಿಕೊಳ್ಳುತ್ತದೆ. ಘಟ್ಟ ಪ್ರದೇಶದಿಂದ ಮಳೆಗಾಲದಲ್ಲಿ ಈ ನದಿ ಹರಿದು ಬರುವಾಗ ರೌದ್ರರೂಪ ತಾಳುತ್ತದೆ ಮಳೆಗಾಲದಲ್ಲಿ ಈ ನದಿ ಸೃಷ್ಟಿಸುವ ಭೀಕರ ಪ್ರವಾಹದಲ್ಲಿ ಕಾಡಿನ ದೊಡ್ಡ ದೊಡ್ಡ ಮರದ ದಿಮ್ಮಿಗಳ ಸಹಿತ ಮೊಸಳೆ, ಹೆಬ್ಬಾವು, ವಿವಿಧ ಜಾತಿಯ ಹಾವುಗಳು ಹರಿದು ಬರುತ್ತವೆ ಹಾಗೆ ಕಳೆದ ನಾಲ್ಕು ವರ್ಷಗಳ ಹಿಂದೆ ನದಿನೀರಿನ ಪ್ರವಾಹದಲ್ಲಿ ಹರಿದು ಬಂದ ಪ್ರಾಣಿಗಳಲ್ಲಿ ಈ ಮೊಸಳೆ ಕೂಡಾ ಒಂದು.
ಇದಕ್ಕೂ ಮೊದಲು ಆರು ವರ್ಷಗಳ ಹಿಂದೆ ಬೃಹತ್ ಗಾತ್ರದ ಮೊಸಳೆ ವೆಂಕ್ಟಾಪುರ ನದಿಯಲ್ಲಿ ಹರಿದು ಬಂದು ಕೊನೆಗೆ ಅಳ್ವೇಕೋಡಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸೆರೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಾಲ್ಕು ವರ್ಷಗಳ ಹಿಂದೆ ಹರಿದು ಬಂದ ಮೊಸಳೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದಿಂದ ಹಿಡಿಯಲು ಪ್ರಯತ್ನಿಸಿ ವಿಫಲವಾಗಿತ್ತು ವೆಂಕ್ಟಾಪುರ ನದಿಯ ನೀರು ಕಡಿಮೆಯಾದಾಗ ಈ ಮೊಸಳೆ ಬಿಸಿಲು ಕಾಯಿಸಲು ಮತ್ತು ಪಕ್ಷಿಗಳಿಂದ ತನ್ನ ಹಲ್ಲನ್ನು ಸ್ವಚ್ಛಗೊಳಿಸಿಕೊಳ್ಳಲು ಮರಳಿನ ದಿಬ್ಬದಲ್ಲಿ ಆಗಾಗ್ಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಿತ್ತು.
ಈ ಮೊಸಳೆಯನ್ನು ಹಿಡಿಯಲು ಭಟ್ಕಳ ಅರಣ್ಯ ಇಲಾಖೆ ಪಂಜರವಿಟ್ಟರೂ ಪ್ರಯೋಜನವಾಗಿರಲಿಲ್ಲ.
ಕಳೆದ ಮೂರ್ನಾಲ್ಕು ವರ್ಷಗಳಿಂದ ವೆಂಕ್ಟಾಪುರ ನದಿಯಲ್ಲಿ ಭೂಗತವಾಗಿದ್ದ ಈ ಮೊಸಳೆ ತಾರೀಕು 20.10.2025 ದೀಪಾವಳಿ ದಿನದಂದು ವೆಂಕ್ಟಾಪುರ ನದಿತೀರದ ಬಪ್ಪುಂಡ ಪ್ರದೇಶದ ಮರಳಿನ ದಿಬ್ಬದಲ್ಲಿ ಕಾಣಿಸಿಕೊಂಡು ಮೀನುಗಾರರು ಮತ್ತು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.


ವೆಂಕ್ಟಾಪುರ ನದಿಯ ಎಡದಂಡೆಯ ನಿವಾಸಿಗಳು ಈ ಮೊಸಳೆಯ ವೀಡಿಯೋ ಮತ್ತು ಪೋಟೊ ಸೆರೆಹಿಡಿದಿದ್ದು, ಜನರ ಗದ್ದಲದ ಜೋರಾಗುತ್ತಲೇ ಈ ಚಾಣಾಕ್ಷ ಮೊಸಳೆ ನದಿಯಾಳದಲ್ಲಿ ಕಣ್ಮರೆಯಾಗಿದೆ. ಸ್ಥಳಕ್ಕೆ ಭಟ್ಕಳ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಧೌಡಾಯಿಸಿದ್ದು, ಈ ಬಾರಿ ಹೇಗಾದರೂ ಮಾಡಿ ಈ ಮೊಸಳೆಯನ್ನು ಹಿಡಿಯಲೇಬೇಕೆಂದು ಪಣ ತೊಟ್ಟಿದ್ದಾರೆ. ಸಾಮಾನ್ಯವಾಗಿ ಮೊಸಳೆಗಳು ಸಿಹಿನೀರಿನ ಪ್ರಾಣಿಗಳಾಗಿದ್ದು,ಉಪ್ಪು ನೀರಿನ ವೆಂಕ್ಟಾಪುರ ನದಿಯಲ್ಲಿ ನಾಲ್ಕು ವರ್ಷಗಳಿಂದ ಈ ಮೊಸಳೆ ಹೇಗೆ ಬದುಕಿತು? ಎಂಬ ಕೂತೂಹಲದ ಪ್ರಶ್ನೆಗೆ ಸ್ವಾರಸ್ಯಕರ ಮತ್ತು ವಿಸ್ಮಯಕಾರಿ ಉತ್ತರ ಇಲ್ಲಿದೆ. 2022 ರಲ್ಲಿ ಭಟ್ಕಳ ತಾಲೂಕಿನಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ನದಿಗಳ ಗುಣಲಕ್ಷಣಗಳವನ್ನು ಮಾರ್ಪಾಡು ಮಾಡಿದ್ದು,ವೆಂಕ್ಟಾಪುರ ನದಿಯ ನೀರು ಈ ಜಲಪ್ರಳಯದ ಕಾರಣದಿಂದ ಕೆಲವು ತಿಂಗಳುಗಳ ತನಕ ಶೇಕಡಾ 50.50 ರ ಅನುಪಾತದಲ್ಲಿ ವಿಂಗಡಿಸಲ್ಪಟ್ಟಿತ್ತು ಪರಿಣಾಮವಾಗಿ ನದಿಯ ಭರತದ ಸಮುಯದಲ್ಲಿ ಇಲ್ಲಿನ ರೈಲ್ವೇ ಬ್ರಿಜ್ ತನಕ ಹರಿಯುತ್ತಿದ್ದ ವೆಂಕ್ಟಾಪುರ ನದಿಯ ನೀರು ಅಸಾಮಾನ್ಯ ರೀತಿಯಲ್ಲಿ ಐವತ್ತು ಶೇಕಡಾ ಚಪ್ಪೆನೀರು, ಅಂದರೆ ಸಿಹಿನೀರು ಮತ್ತು ಐವತ್ತು ಶೇಕಡಾ ಉಪ್ಪು ನೀರಿನ ರೂಪದಲ್ಲಿ ಹರಿಯತೊಡಗಿತು ಇದು ಮೊಸಳೆ ಬದುಕಿ ಉಳಿಯಲು ಅನೂಕೂಲಕರ ವಾತಾವರಣ ಸೃಷ್ಟಿಸಿತು.
ಪ್ರಕೃತಿಯೇ ಸೃಷ್ಟಿಸಿದ ಅಸಾಮಾನ್ಯ ಚಮತ್ಕಾರ ಈ ಮೊಸಳೆಗೆ ಜೀವನ್ಮುಖಿ ಬದುಕಿಗೆ ವರದಾನವಾಗಿ ಪರಿಣಮಿಸಿತು ಈ ಬಗೆಯ ಪ್ರಕೃತಿಯ ವರದಾನ ಮೊಸಳೆಯಂತ ಬಲಿಷ್ಠ ಜೀವಿಯ ಬದುಕಿ ಉಳಿಯುವಿಕೆಗೆ ಎಡೆಮಾಡಿಕೊಟ್ಟಿದೆ. ಇನ್ನೂ ಅದೃಷ್ಟವೆಂಬಂತೆ ಈ ಮೊಸಳೆಗೆ ಆಹಾರ ಕೂಡಾ ವೆಂಕ್ಟಾಪುರ ನದಿಯ ಅಸುಪಾಸಿನ ಪರಿಸರದಲ್ಲಿ ಲಭ್ಯವಾಯಿತು ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಸಾಯಿಖಾನೆ ಸಂಸ್ಕರಣಾ ಘಟಕದಿಂದ ಸಂಸ್ಕರಿಸದೇ ಇರುವ ವಿವಿಧ ಪ್ರಾಣಿಗಳ ತ್ಯಾಜ್ಯಗಳನ್ನು ನೇರವಾಗಿ ದೊಡ್ಡ ದೊಡ್ಡ ಕೊಳವೆಗಳ ಮೂಲಕ ನದಿಗೆ ಬಿಡುತ್ತಿರುವುದರಿಂದ ಮೊಸಳೆಗೆ ಸಮೃದ್ಧ ಪ್ರಮಾಣದಲ್ಲಿ ಆಹಾರ ಲಭ್ಯವಾಯಿತು ಮತ್ತು ಈ ಆಹಾರ ತಿನ್ನಲು ಬರುತ್ತಿದ್ದ ಹತ್ತಿರದ ಕಾಡಿನ ಹಂದಿಗಳು, ಬೀದಿನಾಯಿಗಳು ಕೂಡಾ ಈ ಮೊಸಳೆಗೆ ಆಹಾರವಾದವು.


ಪರಿಣಾಮವಾಗಿ ಈ ಪ್ರದೇಶಕ್ಕೆ ಬಂದ ಸಮಯದಲ್ಲಿ ತೀರಾ ಕೃಶವಾಗಿದ್ದ ಮೊಸಳೆ ದಷ್ಟಪುಷ್ಟವಾಗಿ ಬೆಳೆಯಲು ಕಾರಣವಾಯಿತು. ಪ್ರಸ್ತುತ ಈ ಮೊಸಳೆ ಸುಮಾರು ಏಳು ಅಡಿ ಉದ್ದವಾಗಿ ಭರ್ಜರಿಯಾಗಿ ಕಾಣುತ್ತದೆ. ವೆಂಕ್ಟಾಪುರ ನದಿಯಲ್ಲಿ ಮೀನುಗಾರಿಕೆ ಅವಲಂಬಿಸಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಬದುಕು ನಡೆಸುತಿದ್ದು, ನದಿಯ ಉಬ್ಬರ ಇಳಿತದ ಚಲನೆಯನ್ನು ಹೊಂದಿಕೊಂಡು ಅವರೆಲ್ಲರೂ ರಾತ್ರಿ ಮೀನುಗಾರಿಕೆಗೆ ತೆರಳುವುದು ಹೆಚ್ಚು. ಇದುವರೆಗೂ ಈ ಮೊಸಳೆ ಈ ಮೀನುಗಾರರಿಗೆ ತೊಂದರೆ ನೀಡಿಲ್ಲವಾದರೂ, ಒಂದಲ್ಲಾ ಒಂದು ದಿನ ಅಪಾಯ ತಪ್ಪಿದಲ್ಲ. ಹಾಗೇಯೇ ವೆಂಕ್ಟಾಪುರ ನದಿಗೆ ಹೊಂದಿಕೊಂಡಂತೆ ರೈತರ ಕೃಷಿ ಜಮೀನುಗಳಿದ್ದು, ರೈತರು ತಮ್ಮ ದನಕರುಗಳನ್ನು ಸ್ನಾನ ಮಾಡಿಸಲು ನದಿಗೆ ಇಳಿಯುತ್ತಾರೆ ದನಕರುಗಳ, ಮೇಲಾಗಲಿ, ಮನುಷ್ಯರ ಮೇಲಾಗಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಮೊಸಳೆ ದಾಳಿ ಮಾಡಿಲ್ಲವಾದರೂ, ಮುಂದಿನ ಪರಿಸ್ಥಿತಿ ಹೇಳಲು ಬರುವುದಿಲ್ಲ.
ಆಹಾರ ಸಿಗದೇ ಹೋದಾಗ ದನಕರುಗಳ ಮೇಲೆ,ಮನುಷ್ಯರ ಮೇಲೆ ಈ ಮೊಸಳೆ ದಾಳಿ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಹಾಗಾಗಿ ಅದಷ್ಟು ಶೀಘ್ರ ಈ ಮೊಸಳೆಯನ್ನು ಸೆರೆಹಿಡಿಯಬೇಕೆಂದು ಈ ಭಾಗದ ಜನರು ಆಗ್ರಹಿಸುತ್ತಿದ್ದಾರೆ.ಹಾಗೇನೇ ರಜೆ ಸಂದರ್ಭದಲ್ಲಿ ವೆಂಕ್ಟಾಪುರ ನದಿಯಲ್ಲಿ ಈಜಾಡುವವರ ಸಂಖ್ಯೆ ಜಾಸ್ತಿ ಇರುವುದರಿಂದ ಅವರು ಕೂಡಾ ನದಿಗೆ ಇಳಿಯುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಕಳೆದ ಎರಡು ವಾರಗಳಿಂದ ಆಗಾಗ್ಗೆ ಮಳೆ ಬೀಳುತ್ತಿರುವುದರಿಂದ ನದಿ ನೀರಿನ ಬಣ್ಣ ಕೆಂಪಾಗಿದೆ ಮತ್ತು ನೀರು ಚಪ್ಪೆನೀರಾಗಿ ಪರಿವರ್ತನೆಯಾಗಿದೆ.ಹೀಗಾಗಿ ದೂರದಲ್ಲಿದ ಮೊಸಳೆ ಬಪ್ಪುಂಡ ಪ್ರದೇಶದತ್ತ ಬಂದಿದೆ. ಅತಿ ಸೂಕ್ಷ್ಮ ಮತ್ತು ಚಾಣಾಕ್ಷವಾಗಿರುವ ಈ ಮೊಸಳೆ ಮನುಷ್ಯರಿಂದ ಪಾರಾಗಲು ಪ್ರತಿಬಾರಿ ತನ್ನ ವಾಸಸ್ಥಾನವನ್ನು ಬದಲಾಯಿಸುತ್ತಿದೆ.


ಆದ್ದರಿಂದ ಈ ಚಾಣಾಕ್ಷ ಮೊಸಳೆಯನ್ನು ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಇಷ್ಟು ದಿನ ಈ ಮೊಸಳೆ ಕಡವಿನಕಟ್ಟಾ ಜಲಾಶಯದ ಸಮೀಪದ ಬಂಡೆಕಲ್ಲುಗಳ ಎಡೆಯಲ್ಲಿ ಠಿಕಾಣಿ ಹೂಡಿತ್ತು ಕಡವಿನಕಟ್ಟಾ ಜಲಾಶಯದ ಬಲದಂಡೆಯಲ್ಲಿ ವರ್ಷವಿಡಿ ಹೂ ಬಿಡುವ ಸಸ್ಯಗಳ ಸಮೂಹವಿದೆ ಅದರ ಹೂವು ಈ ಜಲಾಶಯ ಮತ್ತು ಅಸುಪಾಸಿನಲ್ಲಿ ವಾಸಿಸುತ್ತಿರುವ ಹೂ ಮೀನು ಎಂಬ ವಿಶಿಷ್ಟ ಪ್ರಭೇದದ ಮೀನುಗಳಿಗೆ ಬಲು ಇಷ್ಟದ ಆಹಾರ ಸಸ್ಯಗಳಿಂದ ನೀರಿನೊಳಗೆ ಬೀಳುವ ಹೂಗಳನ್ನು ತಿನ್ನಲು ಬರುವ ಹೂ ಮೀನುಗಳನ್ನು ಈ ಮೊಸಳೆ ಹೊಂಚು ಹಾಕಿ ಬೇಟೆಯಾಡಿ ತಿನ್ನುತ್ತದೆ ಕಳೆದ ಎರಡು ವಾರಗಳಿಂದ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ನೀರು ರಾಡಿಯಾಗಿರುವುದರಿಂದ ಮೊಸಳೆ ಮತ್ತೆ ಆಹಾರ ಹುಡುಕುತ್ತಾ ಕೊಳಚೆ ನೀರು ಸಂಸ್ಕರಣಾ ಘಟಕದತ್ತ ಬಂದಿದೆ.
ಇಲ್ಲಿನ ತ್ಯಾಜ್ಯ ಆಹಾರ ತಿಂದು ಹಲ್ಲಿನಲ್ಲಿ ಸಿಕ್ಕಿಬಿದ್ದ ಆಹಾರದ ಕಣಗಳನ್ನು ಪಕ್ಷಿಗಳ ಮೂಲಕ ಸ್ವಚ್ಛಗೊಳಿಸಿಕೊಳ್ಳಲು ಕೆಸರು ಮಿಶ್ರಿತ ಮರಳಿನ ದಿಬ್ಬದಲ್ಲಿ ಬಾಯಿ ತೆರೆದುಕೊಂಡು ಇದ್ದಾಗ ಜನರ ಕಣ್ಣಿಗೆ ಬಿದ್ದು ಮತ್ತೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಜಾತಿಯ ಸಸ್ಯ ಅಥವಾ ಪ್ರಾಣಿಗಳ ಗುಂಪು ಸಾಂಧರ್ಭಿಕ ಸನ್ನಿವೇಶದಲ್ಲಿಅಥವಾ ಆಕಸ್ಮಿಕವಾಗಿ ತಮ್ಮ ಗುಂಪಿನಿಂದ ಬೇರ್ಪಡಿಸಲ್ಪಟ್ಟಿದ್ದಾಗ ಅದನ್ನು ಜೀವಸಂದಣಿ ಎಂದು ಕರೆಯಲಾಗುತ್ತದೆ. ಹೀಗೆ ಬೇರ್ಪಡಿಸಿಲ್ಪಟ್ಟ ಜೀವಸಂದಣಿಯ ಪ್ರಾಣಿ ಬೇರೆ ಪ್ರದೇಶದಲ್ಲಿ ಪ್ರವೇಶ ಪಡೆದು ಅಲ್ಲಿ ಹೊಂದಿಕೊಳ್ಳುತ್ತದೆ ಅಥವಾ ಅಲ್ಲಿನ ಪ್ರಕೃತಿಯ ಬದಲಾದ ಗುಣಲಕ್ಷಣಗಳು ವಲಸೆ ಬಂದ ಪ್ರಾಣಿಗಳಿಗೆ ಅನುಕೂಲಕರ ಆವಾಸ ಸ್ಥಾನವನ್ನು ಕಲ್ಪಿಸಿಕೊಡುತ್ತದೆ ಇಂತಹ ಸಂದರ್ಭದಲ್ಲಿ ಇಲ್ಲಿ ನೆಲೆಯಾದ ಪ್ರಾಣಿಗಳು ಸ್ಥಳೀಯ ಜೀವಸಂಕುಲಕ್ಕೆ ಮತ್ತು ಮನುಷ್ಯರಿಗೆ ಅಪಾಯಕಾರಿಯಾಗಿ ಪರಿಣಾಮಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ ವೆಂಕ್ಟಾಪುರ ನದಿಯಲ್ಲಿ ಪ್ರಕೃತಿಯ ವರದಾನದಿಂದ ಠಿಕಾಣಿ ಹೂಡಿರುವ ಬೃಹತ್ ಗಾತ್ರದ ಮೊಸಳೆ ಇದಕ್ಕೊಂದು ಉತ್ತಮ ನಿದರ್ಶನ.
ಉಮಾಕಾಂತ ಖಾರ್ವಿ ಕುಂದಾಪುರ















