ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು ಇದು ಯಾರಿಗೂ ಗೊತ್ತಿರದ ರೋಚಕ ಸಂಗತಿ
ಕುಂದಾಪುರ ತಾಲೂಕಿನ ಆರಾಟೆಯ ಹಳೆಯ ಸೇತುವೆಗೆ ಸಂಬಂಧಪಟ್ಟಂತೆ ಅಚ್ಚರಿದಾಯಕ ಸುದ್ದಿಯೊಂದು ಪ್ರಕಟವಾಗಿದೆ ಆರಾಟೆಯ ಹಳೆಯ ಸೇತುವೆಯ ಅಡಿಪಾಯ ಮತ್ತು ಫಿಲ್ಲರ್ ಗಳು ಸುದೃಢವಾಗಿ ಗಟ್ಟಿಮುಟ್ಟಾಗಿರುವುದರಿಂದ ಅದನ್ನು ನೆಲಸಮಗೊಳಿಸದೇ ಮೇಲ್ಭಾಗದಲ್ಲಿ ಮಾತ್ರ ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಲಾಗುತ್ತದೆ ಎಂಬುದು ವರದಿಯ ಸಾರಾಂಶ 1966-67 ರಲ್ಲಿ ಜರ್ಮನ್ ಮೂಲದ ಗ್ಯಾಮನ್ ಇಂಡಿಯಾ ಕಂಪನಿ ನಿರ್ಮಿಸಿದ್ದ ಈ ಸೇತುವೆ 58 ವರ್ಷ ಹಳೆಯದಾದರೂ ಈ ಪರಿಯಲ್ಲಿ ಗಟ್ಟಿಮುಟ್ಟಾಗಿರುವ ರಹಸ್ಯವೇನು ಎಂದು ತಿಳಿದರೆ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ.
ಆರಾಟೆಯ ಈ ಹಳೆಯ ಸೇತುವೆ ಇಷ್ಟೊಂದು ಸುದೃಢವಾಗಿರಲು ಮುಖ್ಯ ಕಾರಣ ಇದಕ್ಕೆ ಉಪಯೋಗಿಸಿದ ಕುಂದಾಪುರ ತಾಲೂಕಿನ ಕಂಚುಗೋಡು ಶ್ರೀ ಪಾರ್ಥನಾಥೇಶ್ವರ ದೇವಸ್ಥಾನದ ಭೂಮಿಯಲ್ಲಿದ್ದ ಬೃಹತ್ ಗಾತ್ರದ ಬಂಡೆಗಲ್ಲುಗಳು ಗ್ಯಾಮನ್ ಇಂಡಿಯಾ ಕಂಪನಿ ಈ ಸೇತುವೆಯ ಅಡಿಪಾಯ ನಿರ್ಮಾಣ ಮಾಡಲು ಸುದೃಢ ಬಂಡೆಗಲ್ಲುಗಳನ್ನು ಶೋಧಿಸಿದಾಗ ಕಣ್ಣಿಗೆ ಬಿದ್ದಿದು ಶ್ರೀ ಪಾರ್ಥನಾಥೇಶ್ವರ ದೇವಸ್ಥಾನದ ಆವರಣದಲ್ಲಿದ್ದ ಬೃಹತ್ ಬಂಡೆಗಲ್ಲುಗಳ ಸಮೂಹ ಅಂದು ಗ್ಯಾಮನ್ ಇಂಡಿಯಾ ಕಂಪನಿಯ ಅಧಿಕಾರಿಗಳು ಶ್ರೀ ಪಾರ್ಥನಾಥೇಶ್ವರ ದೇವರಿಗೆ ವಿಶೇಷ ಪೂಜೆ ಪುರಸ್ಕಾರ ಸಲ್ಲಿಸಿ ಪ್ರಸಾದ ರೂಪದಲ್ಲಿ ದೇವರ ಅಪ್ಪಣೆ ಪಡೆದು ಇಲ್ಲಿನ ಬಂಡೆಗಲ್ಲು ಸಮೂಹದ ಬಹುತೇಕ ಭಾಗಗಳನ್ನು ತೆಗೆದುಕೊಂಡು ಹೋಗಿ ಆರಾಟೆ ಸೇತುವೆಯ ಅಡಿಪಾಯಕ್ಕೆ ಬಳಸಿಕೊಂಡಿತ್ತು.


ಸಂಪೂರ್ಣ ಶಿಲಾಮಯ ಗರ್ಭಗುಡಿ ಹೊಂದಿರುವ ಶ್ರೀ ಪಾರ್ಥೇಶ್ವರ ದೇಗುಲದಲ್ಲಿ ಸುದೃಢವಾದ ಪಾಣಿಪೀಠದಲ್ಲಿ ಮಧ್ಯಮ ಪಾಂಡವ ಅರ್ಜುನನಿಂದ ಪ್ರತಿಷ್ಠಾಪಿಸಲ್ಪಟ್ಟ ಅಪೂರ್ವ ಶಿವಲಿಂಗವಿದೆ ದೇಗುಲವನ್ನು ಆಗಿನ ಕಾಲಘಟ್ಟದಲ್ಲಿ ಬಂಡೆಗಲ್ಲುಗಳ ಹಾಸಿನ ಮೇಲೆ ನಿರ್ಮಾಣ ಮಾಡಿದ್ದರಿಂದ ಸೇತುವೆ ನಿರ್ಮಾಣ ಕಾರ್ಯಕ್ಕೆ ಬಂಡೆಗಲ್ಲುಗಳನ್ನು ಸ್ಪೋಟಿಸುವ ಸಂದರ್ಭದಲ್ಲಿ ದೇಗುಲಕ್ಕೆ ಕಿಂಚಿತ್ತೂ ಹಾನಿಯಾಗಲಿಲ್ಲ ಬಂಡೆಗಲ್ಲುಗಳ ಉಳಿದ ಭಾಗವನ್ನು ದೇವಸ್ಥಾನದ ಹಿಂಭಾಗದಲ್ಲಿ ಕಾಣಬಹುದಾಗಿದೆ.
ಪ್ರಸ್ತುತ ದೇವಸ್ಥಾನದ ಸರ್ವ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಿರುವ ಅರ್ಚಕರಾದ ಶ್ರೀ ರವಿ ಕಾರಂತರು ಇಲ್ಲಿನ ಬಂಡೆಗಲ್ಲುಗಳು ಆರಾಟೆ ಸೇತುವೆಗೆ ಬಳಕೆಯಾದ ಮಾಹಿತಿಯನ್ನು ನಮಗೆ ತಿಳಿಸಿಕೊಡುತ್ತಾರೆ.
ಕಾರವಾರದ ಕಾಳಿ ನದಿಗೆ ನಿರ್ಮಿಸಿದ ಹಳೆಯ ಸೇತುವೆ ಕುಸಿದು ಬಿದ್ದ ಬಳಿಕ ಹೆದ್ದಾರಿ ಸೇತುವೆಗಳ ಧಾರಣ ಸಾಮರ್ಥ್ಯದ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಳ ತಂಡ ಅಧ್ಯಯನ ನಡೆಸಿ ಕರಾವಳಿಯ ಕೆಲವು ಸೇತುವೆಗಳು ಶಿಥಿಲಗೊಂಡಿದ್ದರಿಂದ ಈ ಸೇತುವೆಗಳಲ್ಲಿ ಸಂಚಾರ ನಿರ್ಬಂಧಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು ಅದರಂತೆ ಸಂಚಾರ ನಿರ್ಬಂಧಿತ ಸೇತುವೆಗಳಲ್ಲಿ ಆರಾಟೆ ಸೇತುವೆ ಕೂಡಾ ಒಂದು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆರಾಟೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು ಪರಿಣಾಮವಾಗಿ ಚತುಷ್ಪಥ ದಲ್ಲಿ ಸಂಚರಿಸಬೇಕಾದ ವಾಹನಗಳು ದ್ವಿಪಥದಲ್ಲಿ ಸಂಚರಿಸುವ ಅನಿವಾರ್ಯತೆ ಉಂಟಾಯಿತು ವಾಹನ ಸಂಚಾರದ ಗೊಂದಲಗಳಿಂದ ಇಲ್ಲಿ ಅಪಘಾತಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಳ್ಳಬೇಕಾಯಿತು.


ಈ ಹಳೆಯ ಸೇತುವೆಯನ್ನು ನೆಲಸಮಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿತ್ತು ಆದರೆ ತಜ್ಞರು ಪುನಃ ಆರಾಟೆಯ ಹಳೆ ಸೇತುವೆಯ ಧಾರಣ ಸಾಮರ್ಥ್ಯದ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ, ಈ ಸೇತುವೆಯ ಅಡಿಪಾಯ, ಫಿಲ್ಲರ್ ಗಳು ಗಟ್ಟಿಮುಟ್ಟಾಗಿ ಸುಧೃಡವಾಗಿರುವುದರಿಂದ ಸೇತುವೆ ನೆಲಸಮಗೊಳಿಸುವ ಅಗತ್ಯವಿಲ್ಲ, ಸೇತುವೆಯ ಮೇಲ್ಭಾಗದಲ್ಲಿ ಮಾತ್ರ ಕಾಮಗಾರಿ ನಡೆದರೆ ಸಾಕು ಎಂದು ಸರ್ಕಾರಕ್ಕೆ ವರದಿ ನೀಡಿದೆ ಅದರಂತೆ ಮಳೆ ಕಡಿಮೆಯಾದ ಕೂಡಲೇ ಆರಾಟೆ ಸೇತುವೆಯ ಮೇಲ್ಭಾಗದ ದುರಸ್ತಿ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ ಅದಕ್ಕೆ ಪೂರ್ವಭಾವಿಯಾಗಿ ಸೇತುವೆ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದೆ.
ಸುಮಾರು 615 ಮೀಟರ್ ಉದ್ದವುಳ್ಳ ಆರಾಟೆಯ ಹಳೆ ಸೇತುವೆಯ ಅಡಿಪಾಯ ನಿರ್ಮಾಣಕ್ಕೆ ಸುದೃಢವಾದ ಬಂಡೆಗಲ್ಲುಗಳನ್ನು ಕಂಚಗೋಡು ಪಾರ್ಥೇಶ್ವರ ದೇಗುಲದ ಪರಿಸರದಿಂದ ತೆಗೆದುಕೊಂಡು ಬಂದ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ. ಅದು ಇತಿಹಾಸದ ಪುಟದಲ್ಲಿ ಸೇರಿದ ರೋಚಕ ಸಂಗತಿಯಾಗಿದ್ದು, ಆರಾಟೆಯ ಹಳೆ ಸೇತುವೆಯ ಅತ್ಯುತ್ತಮ ಧಾರಣ ಸಾಮರ್ಥ್ಯದ ಬಗ್ಗೆ ತಜ್ಞರಿಂದ ಅಚ್ಚರಿಯ ಅಧ್ಯಯನ ವರದಿ ಬಂದ ಮೇಲೆ ಕಂಚಗೋಡು ಪಾರ್ಥೇಶ್ವರ ದೇವಸ್ಥಾನದ ಬಂಡೆಗಲ್ಲುಗಳ ವಿಷಯ ಮುನ್ನಲೆಗೆ ಬಂದಿದೆ.
ಉಮಾಕಾಂತ ಖಾರ್ವಿ ಕುಂದಾಪುರ





















