ಉದಯವಾಗಲಿ ನಮ್ಮ ಕುಂದಗನ್ನಡ ನಾಡು “ಕುಂದಾಪುರ”

kundapuradotcom@gmail.com
6 Min Read

ಭಾರತೀಯ ಪರಂಪರೆಯಲ್ಲಿ ನೆಲದ ಮಣ್ಣಿಗೆ ವಂದನೀಯ ಮಾತೃದೇವತೆಯ ಸ್ಥಾನವನ್ನು ನೀಡಲಾಗಿದೆ ಅಷ್ಟರ ಮಟ್ಟಿಗೆ ನಮ್ಮ ಜನರು ತಮ್ಮ ನಾಡು ನುಡಿಯ ಬಗ್ಗೆ ಅಪಾರವಾದ ಗೌರವಾಭಿಮಾನಗಳನ್ನು ಇಟ್ಟುಕೊಂಡಿದ್ದಾರೆ ಏಕೆಂದರೆ ನಮ್ಮ ನೆಲದ ಭಾಷೆ, ಸಂಸ್ಕೃತಿ ಆಚಾರ ವಿಚಾರ ಎಲ್ಲವೂ ಸಮೃದ್ಧ, ವೈಭವೋಪೇತ ಅದೇ ರೀತಿ ನಮ್ಮ ಕನ್ನಡನಾಡಿಗೂ, ಕನ್ನಡ ಭಾಷೆಗೂ ಕೂಡಾ ಅಪೂರ್ವ ಮತ್ತು ಶ್ರೀಮಂತ ಇತಿಹಾಸವಿದೆ ಕರ್ನಾಟಕದ ಎಂಬ ಶಬ್ದದ ಮೂಲ ಮಹಾಭಾರತ ಮಹಾಭಾರತದ ಹದಿನೆಂಟು ಪರ್ವದ ಸಭಾಪರ್ವದಲ್ಲಿ ಕರ್ನಾಟಕವನ್ನು ಕರ್ನಾಟಕ ಎಂದೇ ಉಲ್ಲೇಖಿಸಲಾಗಿದೆ.

ಭೀಷ್ಮ ಪರ್ವದಲ್ಲಿ ಕರ್ನಾಟಕವನ್ನು ಕರ್ನಾಟಿಕ ಎಂದು ಕರೆದಿದ್ದಾರೆ ಕ್ರಿ.ಶ 3 ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಕನ್ನಡ ಭಾಷೆಯ ಬಗ್ಗೆ ಉಲ್ಲೇಖವಿದೆ ಈ ಬ್ರಹ್ಮಗಿರಿ ಚಿತ್ರದುರ್ಗದಲ್ಲಿದೆ. ಕ್ರಿ.ಶ 5 ನೇ ಶತಮಾನದ ಗುಪ್ತರ ಕಾಲದಲ್ಲಿ ಶೂದ್ರಕ ಕವಿ ಬರೆದ ಮೃಚಕಟಿಕಾದಲ್ಲಿ ಕರುನಾಟ್ ಎಂದು ಕರೆದರೆ, ವರಾಹಾಮಿರ ಬರೆದ ಬೃಹತ್ ಸಂಹಿತೆ ಕೃತಿಯಲ್ಲಿ ಕರ್ನಾಟಕವನ್ನು ಕರ್ನಾಟ ಎಂದು ಕರೆದಿದ್ದಾರೆ ಕ್ರಿ.ಶ 850 ರಲ್ಲಿ ಕರ್ನಾಟಕದ ಸೀಮೆ ದಕ್ಷಿಣದ ಕಾವೇರಿಯಿಂದ ಹಿಡಿದು ಉತ್ತರದ ಗೋದಾವರಿ ತನಕವೂ ಹರಡಿತ್ತು ಎಂಬುದನ್ನು ಕನ್ನಡದ ಮೊದಲ ಪ್ರಾಚೀನ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಕವಿ ಶ್ರೀ ವಿಜಯ ವರ್ಣಿಸಿದ್ದಾರೆ.

ರಾಷ್ಟ್ರಕೂಟ ದೊರೆ ನೃಪತುಂಗನ ಆಸ್ಥಾನ ಕವಿಯಾಗಿದ್ದ ಶ್ರೀ ವಿಜಯ ಅಂದಿನ ಕಾಲದ ಕನ್ನಡ ನಾಡು, ನುಡಿ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿರುವುದು ಈ ಕೃತಿಯ ಹಿರಿಮೆಯನ್ನು ಹೆಚ್ಚಿಸಿದೆ ಇವೆಲ್ಲವೂ ಕನ್ನಡ ನಾಡು ನುಡಿಯ ವೈಭವದ ಇತಿಹಾಸದ ಜೊತೆಗೆ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಮಹಾಭಾರತದ ಕಾಲದಿಂದಲೂ ಇತ್ತು ಎಂಬುದನ್ನು ದೃಢೀಕರಿಸುತ್ತದೆ. ಕ್ರಿ.ಪೂ. 300 ರಲ್ಲಿ ಉಗಮಗೊಂಡ ಕನ್ನಡ ಭಾಷೆಯು ದ್ರಾವಿಡ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಸುಮಾರು 2500 ವರ್ಷಗಳ ವೈಭವಪೂರ್ಣ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಪದ ಪ್ರಯೋಗ ಕ್ರಿ.ಶ. ಎರಡನೇ ಶತಮಾನದೆನ್ನಲಾದ ಗ್ರೀಕ್ ನಾಟಕವೊಂದರಲ್ಲಿ ಬಳಕೆಯಾಗಿತ್ತು ಮತ್ತು ಅಂದಿನಿಂದಲೂ ಕನ್ನಡ ಭಾಷೆ ವ್ಯವಹಾರದ ಭಾಷೆಯಾಗಿತ್ತು.

ಕನ್ನಡ ಆಡಳಿತ ಭಾಷೆಯಾಗಿ ಗಂಗರ, ಕದಂಬರ, ಚಾಲುಕ್ಯರ, ರಾಷ್ಟ್ರಕೂಟರ, ಅಳುಪ ರಾಜರ, ಮೈಸೂರು ಅರಸರ, ಹೈದರ್, ಟಿಪ್ಪುವಿನ ಕಾಲದಲ್ಲೂ ವೈಭವದಿಂದ ಮೆರೆದಿತ್ತು ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕನ್ನಡಿಗರು 20 ವಿವಿಧ ಸಂಸ್ಥಾನದ ಆಡಳಿತ ಘಟಕಗಳಲ್ಲಿ ಹಂಚಿಹೋಗಿದ್ದರು ಅಂದಿನಿಂದಲೂ ಕರ್ನಾಟಕ ಏಕೀಕರಣಕ್ಕಾಗಿ ನಿರಂತರ ಚಳವಳಿಗಳು ನಡೆದವು ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣ ಚಳವಳಿ ತೀವ್ರಗೊಂಡು ಕನ್ನಡ ಮಾತೃಭಾಷೆಯಾಗುಳ್ಳ ಕನ್ನಡಿಗರಿಂದ ಕೂಡಿದ ಪ್ರದೇಶಗಳ ಸೇರ್ಪಡೆಯಿಂದ 1956 ನವೆಂಬರ್ 1 ರಂದು ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ರಾಜ್ಯ ಉದಯವಾದ ಕೆಲವೇ ವರ್ಷಗಳಲ್ಲಿ 1963 ರಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಶಾಸನಬದ್ದ ಅಧಿಕೃತವಾದ ಆಡಳಿತ ಭಾಷೆ ಎಂದು ಕರ್ನಾಟಕ ವಿಧಾನಮಂಡಲ ಘೋಷಿಸಿತು.

2004 ರಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿತು ಇದರ ಬೆನ್ನಲ್ಲೇ ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಕನ್ನಡಿಗರು ಹೋರಾಟ ನಡೆಸಿದರು ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 2008 ನವೆಂಬರ್ 1 ರಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿತು ಇದು ಕನ್ನಡಿಗರ ಹೋರಾಟಕ್ಕೆ ಸಂದ ಜಯವಾಗಿದೆ ಈ ವರ್ಷ 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಕನ್ನಡ ಆಡಳಿತ ಭಾಷೆಯಾಗಿ 62 ವರ್ಷಗಳಾಗಿದೆ ಆದರೆ ಸರ್ಕಾರದ ವ್ಯವಹಾರಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆಯಾಗುತ್ತಿಲ್ಲ. ಉನ್ನತ ಅಧಿಕಾರಿಗಳ ಅಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಆದೇಶ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ.

ಎಲ್ಲೆಲ್ಲೂ ಅಂಗ್ಲ ಭಾಷೆ ರಾರಾಜಿಸುತ್ತಿದೆ ಇದು ಒಂದೆಡೆಯಾದರೆ ಸಾರ್ವಜನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾಲಕರ ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚಿಹೋಗುತ್ತಿದೆ ವಿಪರ್ಯಾಸದ ಸಂಗತಿಯೆಂದರೆ ಸರ್ಕಾರಿ ಕನ್ನಡ ಶಾಲೆಯ ಅಧ್ಯಾಪಕರು ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಹಿರಿಮೆ ಗರಿಮೆಗಳ ಬಗ್ಗೆ ಭೋಧನೆ ನೀಡಿದರೆ ಅಧ್ಯಾಪಕರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಈ ಪರಿಯಲ್ಲಿ ಕನ್ನಡಿಗರಾದ ನಾವೇ ಅಂಗ್ಲ ಭಾಷೆಯನ್ನು ವಿಜೃಂಭಿಸಿ ತಾಯಿ ನುಡಿ ಕನ್ನಡವನ್ನು ಅವಗಣನೆ ಮಾಡಿದರೆ ಕನ್ನಡ ಭಾಷೆ ಉಳಿಯುವುದಾದರೂ ಹೇಗೆ?

ಕೇರಳದಲ್ಲಿ ಮಲಯಾಳಂ ಕಲಿಯದೇ ಬದುಕಲು ಸಾಧ್ಯವಿಲ್ಲ, ತಮಿಳುನಾಡಿನಲ್ಲಿ ತಮಿಳು ಕಲಿಯದೇ ಬದುಕಲು ಸಾಧ್ಯವಿಲ್ಲ, ಆಂಧ್ರಪ್ರದೇಶದಲ್ಲಿ ತೆಲುಗು ಕಲಿಯದೇ ಬದುಕಲು ಸಾಧ್ಯವಿಲ್ಲ ಆದರೆ ಕರ್ನಾಟಕದಲ್ಲಿ ಹೊರರಾಜ್ಯದವರು ಕನ್ನಡದ ಒಂದಕ್ಷರ ಕಲಿಯದೇ ಬದುಕು ಸಾಗಿಸಬಹುದು. ಏಕೆಂದರೆ ಕನ್ನಡಿಗರಾದ ನಾವು ವಿಶಾಲ ಹೃದಯಿಗಳು ನಮ್ಮ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಶರವೇಗದಲ್ಲಿ ಮಾಯಾವಾಗುತ್ತಿದೆ ಇನ್ನು ಕೆಲವು ವರ್ಷಗಳಲ್ಲಿ ಪರಭಾಷಿಕರ ಹತೋಟಿಗೆ ಕರ್ನಾಟಕ ಹೋದರೂ ಆಶ್ಚರ್ಯವಿಲ್ಲ.

ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸುತ್ತೇವೆ ಆ ದಿನ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷಣೆಗಳು ಮೊಳಗುತ್ತದೆ, ವೇದಿಕೆಗಳಲ್ಲಿ ಕನ್ನಡ ಭಾಷೆ, ನಾಡಿನ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ ಅಲ್ಲಿಗೆ ಮುಗಿಯಿತು ನಂತರ ಕನ್ನಡದ ನೆನಪಾಗುವುದು ಮುಂದಿನ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಹೀಗಿದೆ ಕನ್ನಡಿಗರ ಮನಸ್ಥಿತಿ, ಕನ್ನಡ ಭಾಷೆಯ ದುಸ್ಥಿತಿ. ಕನ್ನಡದಂತೆ ಮಲೆಯಾಳಂ, ತಮಿಳು, ತೆಲುಗು ಭಾಷೆಗಳ ಜನರಿಗೆ ತಮ್ಮ ರಾಜ್ಯಗಳಲ್ಲಿ ತಮ್ಮ ಭಾಷೆಯ ಬಗ್ಗೆ ಹೋರಾಟ ಮಾಡುವ ಅಗತ್ಯತೆಯೇ ಇಲ್ಲ ಏಕೆಂದರೆ ಆ ರಾಜ್ಯಗಳಲ್ಲಿ ಆಡಳಿತ ಭಾಷೆಯಾಗಿ, ಜನರ ಜೀವನಾಡಿ ಭಾಷೆಯಾಗಿ ಆ ಭಾಷೆಗಳು ಅಭಿಮಾನದಿಂದ ಮಾನ್ಯತೆ ಪಡೆದುಕೊಂಡಿದೆ ಸಮಸ್ಯೆ ಇರುವುದು ಕನ್ನಡಿಗರಿಗೆ ನಮ್ಮ ರಾಜ್ಯದಲ್ಲೇ ಕನ್ನಡವನ್ನು ಉಳಿಸಿಕೊಳ್ಳಲು ಕನ್ನಡ ಉಳಿಸಿ ಕನ್ನಡ ಬೆಳೆಸಿ ಎಂದು ನಿರಂತರ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ ಸರ್ಕಾರ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ರಾಜಕೀಯ ಇಚ್ಛಾಶಕ್ತಿಯಿಂದ ಸಾರ್ವತ್ರಿಕ ಬಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಮತ್ತು ಮಾತೃಭಾಷೆ ಕನ್ನಡದ ಬಗ್ಗೆ ಕನ್ನಡಿಗರ ಮನಸ್ಥಿತಿ ಬದಲಾದರೆ ಮಾತ್ರ ಕನ್ನಡ ನಾಡು ನುಡಿ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹತ್ತು ಹಲವು ಭಾಷಾ ವಿದ್ವಾಂಸರು ಮತ್ತು ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ಅತಿ ಹೆಚ್ಚು ಕುಂದಗನ್ನಡ ಭಾಷೆ ಮಾತನಾಡುವ ಪ್ರದೇಶವೆಂದು ಗುರುತಿಸಲ್ಪಟ್ಟಿದೆ ಕುಂದಾಪ್ರ ಕನ್ನಡ ಎಂದು ಕರೆಯಲ್ಪಡುವ ಕುಂದಗನ್ನಡ ಸ್ವಚ್ಛ ಮತ್ತು ಸುಂದರ ಭಾಷೆಯಾಗಿದ್ದು, ಬೇರೆ ಯಾವ ಭಾಷೆಗಳ ಶಬ್ದವೂ ಕುಂದಗನ್ನಡದಲ್ಲಿ ಅಡಕವಾಗಿಲ್ಲ ಕುಂದಾಪುರ ನೆಲದ ಕಂಪನ್ನೆಲ್ಲ ತನ್ನ ಒಡಲಾಳದಲ್ಲಿ ತುಂಬಿಸಿಕೊಂಡ ಕುಂದಗನ್ನಡದ ಅಪೂರ್ವ ಶಬ್ದಗಳ ಗೇಯತೆ, ಕಾವಾತ್ಮಕತೆಗಳು ಅನ್ಯತ್ರ ದುರ್ಲಭ ಉತ್ತರದ ಶಿರೂರಿನ ಸಂಕದಗುಂಡಿ ಹೊಳೆಯಿಂದ ಹಿಡಿದು ದಕ್ಷಿಣದ ಬ್ರಹ್ಮಾವರ, ಬಾರ್ಕೂರು, ಮಂದರ್ತಿ, ಪೂರ್ವದ ಕಾರ್ಕಳ ತಾಲೂಕಿನ ಹೆಬ್ರಿ ತನಕವೂ ಕುಂದಗನ್ನಡದ ಭಾಷೆ ಹರಡಿಕೊಂಡಿದೆ.

ಪ್ರಸ್ತುತ ಕುಂದಾಪುರ ತಾಲೂಕು ಸರ್ಕಾರಿ ಕ್ಷೇತ್ರ ಮಾತ್ರವಲ್ಲ, ಖಾಸಗಿ ಕ್ಷೇತ್ರಗಳಲ್ಲೂ ನಾಗಾಲೋಟದ ಅಭಿವೃದ್ಧಿಯ ಪಥದಲ್ಲಿದ್ದೆ ಮೂಲಭೂತ ಸೌಕರ್ಯಗಳಾದ ವೈದ್ಯಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕುಂದಾಪುರ ತಾಲೂಕು ಮುಂಚೂಣಿಯಲ್ಲಿರುವುದರಿಂದ ಅಭಿವೃದ್ಧಿಯ ಪರ್ವ ಮತ್ತಷ್ಟು ಹೆಚ್ಚಾಗಲು ಕುಂದಾಪುರವನ್ನು ಕುಂದಗನ್ನಡದ ಜಿಲ್ಲೆಯನ್ನಾಗಿ ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ಹಕ್ಕೊತ್ತಾಯ ಗಟ್ಟಿ ದ್ವನಿಯಲ್ಲಿ ಕೇಳಿ ಬರಬೇಕಾಗಿದೆ.

ಬೈಂದೂರಿನಿಂದ ಹಿಡಿದು ಬ್ರಹ್ಮಾವರ ತನಕದ ಪ್ರದೇಶವನ್ನು ಕುಂದಗನ್ನಡ ಜಿಲ್ಲೆಗೆ ಆಡಳಿತಾತ್ಮಕವಾಗಿ ರಚಿಸಬೇಕಾಗಿದೆ ಈ ಕುಂದಗನ್ನಡ ಜಿಲ್ಲೆಗೆ ಸೇರಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನವರು ಕೂಡಾ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಭಟ್ಕಳದ ಕನ್ನಡಕ್ಕೂ ಕುಂದಾಪುರ ಕನ್ನಡಕ್ಕೂ ಪರಸ್ಪರ ಸಾಮ್ಯತೆ ಇದೆ ಭಟ್ಕಳದ ಜನರು ವೈದ್ಯಕೀಯ, ಶೈಕ್ಷಣಿಕ ಮತ್ತು ಉದ್ಯೋಗದ ವಿಷಯಕ್ಕೆ ಸಂಬಂಧಿಸಿದಂತೆ ಕುಂದಾಪುರ ತಾಲೂಕನ್ನೇ ಅವಲಂಬಿಸಿಕೊಂಡಿರುವುದು ಮತ್ತು ಅವರಿಗೆ ಉತ್ತರ ಜಿಲ್ಲಾ ಕೇಂದ್ರ ಕಾರವಾರ 130 ಕೀಮೀ ದೂರದಲ್ಲಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಆಡಳಿತಾತ್ಮಕವಾಗಿ 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಂಗಡಿಸಿ ಉಡುಪಿ ಜಿಲ್ಲೆ ರಚನೆ ಮಾಡಿದಂತೆ ಉಡುಪಿಯನ್ನು ವಿಂಗಡಿಸಿ ಕುಂದಾಪುರವನ್ನು ಕುಂದಗನ್ನಡ ಜಿಲ್ಲೆಯನ್ನಾಗಿ ಮಾಡುವ ಅವಶ್ಯಕತೆಯ ಕಾಲ ಈಗ ಕೂಡಿ ಬಂದಿದೆ.

ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು, ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು.

ಸುಧಾಕರ ಕುಂದಾಪುರ
ಸಂಪಾದಕರು
ಕುಂದಾಪುರ.ಕಾಂ

Share This Article
Leave a Comment
error: Content is protected !!