1990 ರಲ್ಲಿ ಯಾಕೂಬ್ ಖಾದರ್ ರವರು12 ವರ್ಷದವನಿದ್ದಾಗ ಕುಂದಾಪುರದಲ್ಲಿರುವ ತನ್ನ ತಂದೆ ಅಬ್ದುಲ್ ಖಾದರ್ ಬ್ಯಾರಿಯವರ ಸ್ಕ್ರ್ಯಾಪ್ ಅಂಗಡಿಯಲ್ಲಿದ್ದ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಇತರ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಇದು ಅವರಲ್ಲಿ ಓದುವ ಆಸಕ್ತಿಯನ್ನು ಹುಟ್ಟುಹಾಕಿತು. 2006 ರಲ್ಲಿ ಕುಂದಾಪುರದ ತಲ್ಲೂರಿನಲ್ಲಿ ಯಾಕೂಬ್ ರವರು ತನ್ನದೇ ಆದ ಸ್ಕ್ರ್ಯಾಪ್ ಸಂಗ್ರಹಣಾ ಅಂಗಡಿಯನ್ನು ಪ್ರಾರಂಭಿಸಿದರು, ಅದನ್ನು 2015 ರವರೆಗೆ ನಿರ್ವಹಿಸುತ್ತಿದ್ದರು, ಆದರೆ ಅವರು ತನ್ನ ಓದುವ ಅಭ್ಯಾಸವನ್ನು ಬಿಡಲಿಲ್ಲ. ನಿಧಾನವಾಗಿ ಚಲನಚಿತ್ರಗಳನ್ನು ನಿರ್ದೇಶಿಸಲು ಮತ್ತು ಸಮಾಜ ಸೇವೆ ಮಾಡಲು ತೊಡಗಿದರು.
ಯಾಕೂಬ್ ಖಾದರ್ ಗುಲ್ವಾಡಿಯವರು ಬಹುಮುಖ ಪ್ರತಿಭೆಯಾಗಿದ್ದು ಕಳೆದ ಮುವತ್ತು ವರ್ಷಗಳಿಂದ ಅವರು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ಬ್ಯಾರಿ ಸಾಹಿತ್ಯ, ಸಂಸ್ಕೃತಿ, ಪ್ರಾಚ್ಯವಸ್ತುಗಳ ಸಂಗ್ರಹ ಪುಟಾಣಿ ಗ್ರಂಥಾಲಯ, ನಟನೆ ಹೀಗೆ ಹತ್ತು ಹಲವು ವಿಭಾಗಗಳು ಇವರ ಆಸಕ್ತಿಯ ಕ್ಷೇತ್ರಗಳು.

ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ, ಕರ್ನಾಟಕ ರಾಜ್ಯ ಚಲನಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯನಾಗಿ, ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶಕನಾಗಿ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಹೆಮ್ಮೆಯ ನಿರ್ದೇಶಕರಾದ ಡಾ. ಗಿರೀಶ ಕಾಸರವಳ್ಳಿ ಅವರ ರಾಷ್ಟ್ರ ಪ್ರಶಸ್ತಿ ಪಡೆದ ” ಗುಲಾಬಿ ಟಾಕೀಸ್ ” ಸಿನಿಮಾದಲ್ಲಿ ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯನ್ನ ಬಿಂಬಿಸುವ ಈ ಚಿತ್ರದಲ್ಲಿ ಕನ್ನಡದ ಹಿರಿಯ ನಟಿ ಉಮಾಶ್ರೀ ಅವರಿಗೆ ವಸ್ತ್ರ ವಿನ್ಯಾಸ ಮತ್ತು ಆಭರಣ ವಿನ್ಯಾಸ ಅಲ್ಲದೆ ಕಲಾ ನಿರ್ದೇಶ ಮಾಡಿದ್ದಾರೆ. ಡಾ. ನಿಖಿಲ್ ಮಂಜು ಲಿಂಗೆ ಗೌಡ ಅವರ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಇನ್ನೊಂದು ಕುಂದಾಪ್ರ ಕನ್ನಡದ ಕಥಾ ಹಂದರ ಇರುವ ” ಹಜ್ ” ಸಿನಿಮಾಗೂ ಕೂಡ ವಸ್ತ್ರ ವಿನ್ಯಾಸ ಮತ್ತು ಕಲಾ ನಿರ್ದೇಶನ ಮಾಡಿದ್ದಾರೆ.



2017 ರಲ್ಲಿ ಇವರ ಮೊದಲ ನಿರ್ಮಾಣದ ಪೂರ್ಣ ಪ್ರಮಾಣದ ಕುಂದಾಪ್ರ ಕನ್ನಡದ ಸಿನಿಮಾ ” ರಿಸರ್ವೇಶನ್ ” ಎಂಬ ಚಲನ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ (ರಜತ ಕಮಲ) ಸೇರಿದಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ BIFFES 2018 ಬಂದಿದೆ, ಜೊತೆಗೆ ಈ ಸಿನಿಮಾ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ” ಟ್ರಿಪಲ್ ತಲಾಖ್ “ಎನ್ನುವ ಸೂಕ್ಷ್ಮ ಸಂವೇದನೆಯ ಬ್ಯಾರಿ ಬಾಷೆಯ ಚಲನಚಿತ್ರಕ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ವಾರ್ತ ಇಲಾಖೆಗೆ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿರುವ ಇವರಿಗೆ ಅಂಡಮಾನ್ ಮತ್ತು ತಮಿಳುನಾಡಿನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ಗೌರವ, ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ಗೌರವ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾ ಮಟ್ಟದ ಗೌರವ, ದುಬೈ ಕನ್ನಡ ಸಂಘದ ಗೌರವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಡಾ. ವಹಾಬ್ ದೊಡ್ಡಮನೆ ಸ್ಮಾರಕ ಗೌರವ, ಅಮೇರಿಕಾದ ಅಕ್ಕ ಸಂಸ್ಥೆಯ ಗೌರವ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸೌದಿ ಅರೇಬಿಯ ಕನ್ನಡ ಸಂಘದ ಗೌರವ ದ ಜೊತೆಗೆ ನೂರಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ.


ಗುಲ್ವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ಕನ್ನಡದ ಮೊದಲ ಕಾದಂಬರಿಯ ಪಿತಾಮಹ ಗುಲ್ವಾಡಿ ವೆಂಕಟರಾಯವ್ ಪ್ರಶಸ್ತಿ ಜೊತೆಗೆ ಸಮುದಾಯ ಕರ್ನಾಟಕ, ಸಧ್ಬಾವನ ಕುಂದಾಪುರ, ಸಹಮತ ಕುಂದಾಪುರ ಸಂಘಟನೆಯ ಮೂಲಕ ಕೋಮು ಸೌಹಾರ್ದತೆಗಾಗಿ ಕಾರ್ಯಕ್ರಮ ವಿಶೇಷವಾಗಿ ಮಾನಸಿಕ ಆರೋಗ್ಯಕ್ಕಾಗಿ ಮನಸ್ಮಿತ ಫೌಂಡೇಶನ್ನಿನ ನಿರ್ದೇಶಕನಾಗಿ ನೂರಾರು ಮಾನಸಿಕ ಆರೋಗ್ಯ ಉಚಿತ ವೈದ್ಯಕೀಯ ಶಿಬಿರ ಮತ್ತು ಔಷಧ ವಿತರಣೆಯಂತಹ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಹಲವು ದೇಶಗಳಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳ ಬಹುಭಾಷ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಜೊತೆ ಅವರು ತಿರುಗಾಡಿದ ಅಮೇರಿಕ, ಕೆನಡಾ,ಇಂಗ್ಲೆಂಡ್, ಸೌದಿ ಅರೇಬಿಯ, ಥೈಲ್ಯಾಂಡ್, ಕೀನ್ಯಾ, ದುಬೈ, ತಾಂಜೇನಿಯ, ಶ್ರೀಲಂಕಾ, ಓಮನ್, ಮಾಲ್ಡೀವ್ಸ್, ಕತಾರ್, ಮಲೇಶಿಯ, ಅಂಡಮಾನ ನಿಕೋಬಾರ್ ಮುಂತಾದ ದೇಶಗಳ ಅನುಭವಗಳನ್ನು ” ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ ” ಅಂಡಮಾನ್ ಮತ್ತು ಸುನಾಮಿ ” ನನ್ನ ಫಾರೀನ್ ಟೂಟಿಂಗ್ ಟಾಕೀಸ್ ” ಎಂಬ ಮೂರು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕಟ್ಟಿ ಕೊಟ್ಟಿದ್ದಾರೆ.
ಇದು ಗ್ರಂಥಾಲಯಗಳಲ್ಲೇ ವಿನೂತನ ಮತ್ತು ವಿಶಿಷ್ಟವಾಗಿರು ಲೈಬ್ರೆರಿಯೇ ಸರಿ. ಗುಜರಿ ಅಂಗಡಿಯಲ್ಲೇ ಪುಟಾಣಿ ಗ್ರಂಥಾಲಯ ಸ್ಥಾಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ. ನಾನೇನೂ ಹೆಚ್ಚು ಓದಿದವನಲ್ಲ, ಆದರೆ ನನ್ನ ಸಾಧನೆಗೆ ಮುಖ್ಯ ಕಾರಣ ಓದುವಿಕ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಓದಿನಿಂದ ವಿಮುಖರಾಗುತ್ತಿರುವ ಜನರನ್ನು ಮತ್ತೆ ಓದಿನ ಕಡೆಗೆ ಕರೆದೊಯ್ಯುವ ಪುಟ್ಟ ಪ್ರಯತ್ವವಿದು ಎಂದು ಹೇಳುತ್ತಾರೆ ಯಾಕೂಬ್


1989 ರಿಂದ ಪ್ರಾರಂಭದವಾದ ಅವರ ಗುಜರಿ ಸೈಕಲ್ ಜರ್ನಿಯಲ್ಲಿ ಹಲವು ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ವಿಶ್ವ ಕನ್ನಡ ಸಮ್ಮೇಳನಗಳ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.ಜೊತೆಗೆ ಅವರು ಕಳೆದ 35 ವರ್ಷಗಳಿಂದ ಭಾಗವಹಿಸಿದ ಪ್ರಮುಖ ಸಮ್ಮೇಳನಗಳ ವಿವರಗಳು
* 1989 : ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು ಹರಡೀಕರ್ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಯುವ ಜನ ಮತ್ತು ಮಕ್ಕಳ ಮೇಳದ ಪ್ರತಿನಿಧಿ.
* 1993 : ರಲ್ಲಿ ಮಂಗಳೂರಿನಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ನನ್ನ ಮಿನಿಯೇಚರ್ ಕಲಾ ಪ್ರದರ್ಶನಕ್ಕೆ ಆಗಿನ ಜಿಲ್ಲಾಧಿಕಾರಿ ಅವರಿಂದ ಗೌರವ.
* 2000 : ಮಂಗಳೂರಿನ ಕರಾವಳಿ ಕ್ರಿಕೆಟ್ ಕ್ಲಿನಿಕ್ ಪರವಾಗಿ ಶ್ರೀಲಂಕಾದ ಕೊಲಂಬೋ, ರತ್ನಪುರ, ಕಲುತರ, ಬೆಂತೋಟ, ಬಲ್ ಪಿಟಿಯ, ಹಂಬನ್ ತೋಟ, ಕೊಸಗೋಡ, ಅಂಬಲಗೋಡದಲ್ಲಿ ನಡೆದ ( ಇಂದಿರ ಗಾಂಧಿ / ಬಂಡಾರ ನಾಯಿಕೆ ) ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾಗಿ.
* 2002 : ಶಿರಸಿಯ ಸ್ವರ್ಣವಲ್ಲೀ ಮಠದಲ್ಲಿ ನಡೆದ ರಾಮಕ್ಕ ಪದ್ಮಕ್ಕ ಸೇವಾನಿಧಿಯ ಆರನೆ ವಾರ್ಷಿಕ ಸಮಾವೇಶದ ಪ್ರತಿನಿಧಿ.
* 2003 : ಮಡಿಕೇರಿಯಲ್ಲಿ ನಡೆದ ರಾಮಕ್ಕ ಪದ್ಮಕ್ಕ ಸೇವಾನಿಧಿಯ ಎಳನೇ ವಾರ್ಷಿಕ ಸಮಾವೇಶದ ಪ್ರತಿನಿಧಿ.


2005 : ಭಾರತ ಸೇವಾದಳದ ಪರವಾಗಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಪ್ರದೇಶದಲ್ಲಿ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿ.
* 2005 : ಭಾರತ ಸೇವಾದಳದ ಪರವಾಗಿ ತಮಿಳುನಾಡು ರೆಡ್ ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಚೆನ್ನೈನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿ.
* 2006 : ಕುಂದಾಪುರದ ನಾವುಂದದಲ್ಲಿ ನಡೆದ SSF ರಾಜ್ಯ ಮಟ್ಟದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ನನ್ನ ಅಂಡಮಾನ್ ಮತ್ತು ಸುನಾಮಿ ಛಾಯಾಚಿತ್ರ ಪ್ರದರ್ಶನ.
* 2008 : ಉಡುಪಿಯಲ್ಲಿ ನಡೆದ 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಅಂಡಮಾನ್ ಮತ್ತು ಸುನಾಮಿ ಪುಸ್ತಕ ಬಿಡುಗಡೆ.
* 2010 : ಸಿಂಗಾಪುರದಲ್ಲಿ ನಡೆದ 7 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ನನ್ನ ಅಂಡಮಾನ್ ಮತ್ತು ಸುನಾಮಿ ಛಾಯಾಚಿತ್ರ ಪ್ರದರ್ಶನ
* 2010 : ಮೂಡಬಿದರೆಯಲ್ಲಿ ನಡೆದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನದ ಪ್ರತಿನಿಧಿ.
* 2011 : ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿ.


2011 : ಮಾಲ್ಡೀವ್ಸ್ ನಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಸೌರಭದ ಕವಿಗೋಷ್ಟಿಯಲ್ಲಿ ಭಾಗಿ.
* 2012 : ಗುಜರಾತಿನ ಸೂರತ್ ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯಲ್ಲಿ ಭಾಗಿ.
* 2012 : ಅಬುಧಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಪ್ರತಿನಿಧಿ.
* 2013 : ದೆಹಲಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗಿ.
* 2013 : ಕೀನ್ಯಾದ ನೈರೋಬಿಯಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಾಂಸ್ಕೃತಿಕ ಗೋಷ್ಠಿಯಲ್ಲಿ ಭಾಗಿ.
* 2013 : ತಾಂಜಾನಿಯ ದಲ್ಲಿ ನಡೆದ ವಿಶ್ವಕನ್ನಡ ಸಾಂಸ್ಕೃತಿಕ ಸೌರಭದ ಗೌರವ ಪ್ರತಿನಿಧಿ.
* 2013 : ಶಾರ್ಜಾದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯಲ್ಲಿ ಭಾಗಿ.
* 2014 : ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಪ್ರತಿಷ್ಠಿತ 8 ನೇ ಅಕ್ಕ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯಲ್ಲಿ ಭಾಗಿ.
* 2014 : ಥಾಯ್ಲಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಸೌರಭದಲ್ಲಿ ಭಾಗಿ.
* 2014 : ಕೆನಡಾದ ಟೊರೊಂಟೊ ದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ನನ್ನ ಫಾರೀನ್ ಟೂರಿಂಗ್ ಟಾಕೀಸ್ ಪುಸ್ತಕ ಬಿಡುಗಡೆ.


2016 : ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ಪ್ರತಿಷ್ಠಿತ 9 ನೇ ಅಕ್ಕ ಸಮ್ಮೇಳನದ ಬಹುಭಾಷ ಕವಿಗೋಷ್ಟಿಯಲ್ಲಿ ಭಾಗಿ.
* 2017 : ಲಂಡನ್ನಿನ ಬ್ರಿಸ್ಟೆಲ್ ಕನ್ನಡ ಬಳಗದ ಆಶ್ರಯದಲ್ಲಿ ನನ್ನ ರಾಷ್ಟ್ರ ಪ್ರಶಸ್ತಿ ಪಡೆದ ರಿಸರ್ವೇಶನ ಸಿನಿಮಾದ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗಿ.
* 2018 : ಅಮೆರಿಕಾದ ಅಟ್ಲಾಂಟಿಕ್ ಸಿಟಿಯಲ್ಲಿ ನಡೆದ ಪ್ರತಿಷ್ಠಿತ 10 ನೇ ಅಕ್ಕ ಸಮ್ಮೇಳನದಲ್ಲಿ ನನ್ನ ರಾಷ್ಟ್ರ ಪ್ರಶಸ್ತಿ ಪಡೆದ ರಿಸರ್ವೇಶನ ಸಿನಿಮಾದ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗಿ.
* 2019 : ಲಂಡನ್ನಿನ ಬ್ರಿಸ್ಟೆಲ್ ಕನ್ನಡ ಬಳಗದ ಆಶ್ರಯದಲ್ಲಿ ನನ್ನ ನಿರ್ದೇಶನದ ಸೂಕ್ಷ್ಮ ಸಂವೇದನೆಯ ಟ್ರಿಪಲ್ ತಲಾಖ್ ಬ್ಯಾರಿ ಭಾಷೆಯ ಸಿನಿಮಾದ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗಿ.
* 2021 : ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಸೌರಭದ ಕವಿಗೋಷ್ಟಿಯ ಅಧ್ಯಕ್ಷತೆ.
* 2022 : ದುಬೈನಲ್ಲಿ ನಡೆದ ವಿಶ್ವ ಪುಸ್ತಕ ಮೇಳದ ಕನ್ನಡ ಪುಸ್ತಕಗಳ ಉದ್ಘಾಟನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗಿ.
* 2022 : ಶಾರ್ಜಾ ಕರ್ನಾಟಕ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗಿ.
* 2024 : ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ನಡೆದ ಮೊದಲ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಬಹುಭಾಷ ಕವಿ ಗೋಷ್ಠಿಯಲ್ಲಿ ಭಾಗಿ
ವರದಿ: ಸುಧಾಕರ ಖಾರ್ವಿ
ಕುಂದಾಪುರ.ಕಾಂ















