ಗಂಗೊಳ್ಳಿ-ಕುಂದಾಪುರ ಸೇತುವೆ ಕನಸಿಗೆ, ಬಾರ್ಜ್ ಸೇವೆ ವರವಾಗಲಿ

kundapuradotcom@gmail.com
6 Min Read

ಖ್ಯಾತ ಇತಿಹಾಸ ಸಂಶೋಧಕ ಮತ್ತು ಸಾಹಿತಿಗಳಾದ ದಿ. ಡಾಕ್ಟರ್ ಕೆ.ಜಿ ವಸಂತ ಮಾಧವ ಕೊಡಂಚರವರ ಪ್ರಕಾರ ನೈಲ್ ನದಿ ಬಿಟ್ಟರೆ ಪ್ರಪಂಚದ ಅದ್ಭುತ ನದಿಯೆಂದರೆ ಕುಂದಾಪುರದ ಪಂಚಗಂಗಾವಳಿ ನದಿ. ಪಶ್ಚಿಮ ಘಟ್ಟ ಶ್ರೇಣಿಯ ಪೂರ್ವದಲ್ಲಿ ಹುಟ್ಟಿ, ಉತ್ತರಕ್ಕೆ ಹರಿದು, ದಕ್ಷಿಣಕ್ಕೆ ಸಾಗಿ, ಮತ್ತೆ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುವ ಪಂಚಗಂಗಾವಳಿ ನದಿಯ ವೈಶಿಷ್ಟ್ಯತೆ ಈಜಿಪ್ಟಿನ ನೈಲ್ ನದಿಯೊಂದಿಗೆ ಸಾಮತ್ಯೆ ಹೊಂದಿದೆ.

ಪಂಚಗಂಗಾವಳಿ ನದಿಗಳಲ್ಲಿ ಒಂದಾದ ವಾರಾಹಿ ನದಿ ಕುಂದಾಪುರ ತಾಲೂಕಿನ ಸೌಡದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ ಮರವಂತೆಯಲ್ಲಿ ಪೂರ್ವದಿಂದ ಬಂದು, ವೃತ್ತಾಕಾರವಾಗಿ ಉತ್ತರಕ್ಕೆ ಹರಿದು, ಪೂರ್ವದತ್ತ ಸಾಗಿ, ಮತ್ತೆ ಪಶ್ಚಿಮಾಭಿಮುಖವಾಗಿ ಹರಿದು ಗಂಗೊಳ್ಳಿ ಬಳಿ ಅರಬ್ಬೀ ಸಮುದ್ರದ ಜೊತೆ ಸಂಗಮವಾಗುತ್ತದೆ. ಪಂಚಗಂಗಾವಳಿಯ ನದಿಯ ಕಾರಣದಿಂದ ಗಂಗೊಳ್ಳಿ ಎಂಬ ಹೆಸರಿನಿಂದ ಈ ಬಂದರು ಊರು ಪ್ರಸಿದ್ಧಿ ಪಡೆಯಿತು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಪ್ರಮುಖ ಮೀನುಗಾರಿಕಾ ಕೇಂದ್ರವಾಗಿದ್ದು, ಸಹಸ್ರಾರು ಜನರು ಮೀನುಗಾರಿಕೆಯನ್ನು ನಂಬಿಕೊಂಡು ಇಲ್ಲಿ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಬದುಕು ನಡೆಸುತ್ತಿದ್ದಾರೆ ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆ ಸಾರಿಗೆ ಅಂತರ 16 ಕೀ.ಮೀಗಳು ಬಸ್ಸಿನ ಮೂಲಕ ಮೂಕ್ಕಾಲು ಅಥವಾ ಒಂದು ಗಂಟೆಯೊಳಗೆ ಕ್ರಮಿಸಬಹುದು.

ದೋಣಿಯಲ್ಲಿ ಪಂಚಗಂಗಾವಳಿ ನದಿಯ ಮೂಲಕ ಗಂಗೊಳ್ಳಿಗೆ 1.5 ಕೀಮೀ ನಿಂದ 2 ಕೀಮೀ ಅಂತರವಿದೆ. ಇದಕ್ಕೆ ತಗಲುವ ಸಮಯ ಹತ್ತರಿಂದ ಇಪ್ಪತ್ತು ನಿಮಿಷ ಸುತ್ತು ಬಳಸಿ ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆ ಮೂಲಕ ಹೋಗುವ ಮಾರ್ಗದ ಜೊತೆಗೆ ತೀರಾ ಹತ್ತಿರವಾಗುವ ನದಿ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ, ಕುಂದಾಪುರದಿಂದ ಗಂಗೊಳ್ಳಿಗೆ ಸೇತುವೆಯೊಂದನ್ನು ನಿರ್ಮಿಸಿದರೆ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರುವ ಜೊತೆಗೆ ಮೀನುಗಾರಿಕಾ ಕ್ಷೇತ್ರದೊಂದಿಗೆ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಹೊಂದುವುದು ಖಂಡಿತಾ.

ಈ ಸೇತುವೆ ನಿರ್ಮಾಣವಾದಲ್ಲಿ ಸಮಯ ಮತ್ತು ಇಂಧನವೂ ಉಳಿತಾಯವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಬೇಕಾಗಿರುವುದರಿಂದ ಸೇತುವೆ ನಿರ್ಮಾಣವಾಗಲು ಮತ್ತೆ ಕೆಲವು ವರ್ಷಗಳೇ ಬೇಕಾಗಬಹುದು.

ಸೇತುವೆ ನಿರ್ಮಾಣ ಕಾರ್ಯದ ಬೇಡಿಕೆ ಚಾಲ್ತಿಯಿರಿಸಿಕೊಂಡು, ಪೂರ್ವಭಾವಿಯಾಗಿ ಕುಂದಾಪುರ ಕೋಡಿ -ಗಂಗೊಳ್ಳಿ ನದಿ ಸಂಚಾರ ವ್ಯವಸ್ಥೆಗೆ ಬಾರ್ಜ್ ಸೇವೆಯನ್ನು ಪ್ರಾರಂಭಿಸಲು ಕುಂದಾಪುರದ ಯುವ ರಾಜಕಾರಣಿ, ಕುಂದಾಪುರ ಪುರಸಭೆಯ ಸದಸ್ಯರಾದ ಶ್ರೀ ಚಂದ್ರಶೇಖರ್ ಖಾರ್ವಿಯವರ ನೇತೃತ್ವದಲ್ಲಿ ಅವಿರತ ಪ್ರಯತ್ನ ನಡೆದಿದ್ದು, ಅದರ ಫಲಶೃತಿಯಾಗಿ ಬಾರ್ಜ್ ಸೇವೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಕುಂದಾಪುರ ಕೋಡಿ ಗಂಗೊಳ್ಳಿ ನಡುವೆ ಪಂಚಗಂಗಾವಳಿ ನದಿಯಲ್ಲಿ ಬಾರ್ಜ್ ಸೇವೆ ಒದಗಿಸುವ ಕುರಿತಂತೆ ದಿನಪತ್ರಿಕೆಯಲ್ಲಿ ಕಳೆದೊಂದು ವರ್ಷಗಳಿಂದ ನಿರಂತರವಾಗಿ ಬೆಳಕು ಚೆಲ್ಲುತ್ತಲೇ ಇದೆ. ಇದೇ ವರದಿಯನ್ನು ಮುಂದಿಟ್ಟುಕೊಂಡು ಮೀನುಗಾರ ಮುಖಂಡ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿಯವರು ಕೋಡಿ, ಗಂಗೊಳ್ಳಿ ಕುಂದಾಪುರ ಭಾಗದ ಸಾರ್ವಜನಿಕರನ್ನು ಒಟ್ಟುಗೂಡಿಸಿಕೊಂಡು, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು ಮನವಿಗೆ ತಕ್ಷಣ ಸ್ಪಂದಿಸಿದ ಸ್ಪೀಕರ್ರವರು ಇದೊಂದು ಉತ್ತಮ ಕಾರ್ಯ ಎಂದು ಹೇಳಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸಿಂಗಧೂರಿನಲ್ಲಿ ಸೇತುವೆ ನಿರ್ಮಾಣವಾಗಿರುವುದರಿಂದ ಅಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾರ್ಜ್ ನ್ನು ಕುಂದಾಪುರ ಕೋಡಿ ಮೀನುಗಾರರ ಮತ್ತು ಸಾರ್ವಜನಿಕರ ಬಳಕೆಗೆ ಒದಗಿಸುವಂತೆ ಒತ್ತಾಯಿಸಿದ್ದರು ಸಭಾಪತಿ ಯು.ಟಿ.ಖಾದರ್ ರವರ ಪತ್ರಕ್ಕೆ ಸ್ಪಂದಿಸಿರುವ ಬಂದರು ಮತ್ತು ಮೀನುಗಾರಿಕೆ ಇಲಾಖೆ ಉಡುಪಿ ಇದರ ಕಾರ್ಯನಿರ್ವಾಹಕ ಎಂಜಿನಿಯರ್ ಕಾರವಾರದ ಕರ್ನಾಟಕ ಜಲಸಾರಿಗೆ ಮಂಡಳಿಯವರಿಗೆ ಪತ್ರ ಬರೆದು ಸಭಾಪತಿಯವರ ಪತ್ರದಲ್ಲಿ ಉಲ್ಲೇಖಿಸಿದಂತೆ ಸಿಂಗಧೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾರ್ಜ್ ನ್ನು ಕೋಡಿ ಗಂಗೊಳ್ಳಿ ನಡುವೆ ಪಂಚಗಂಗಾವಳಿ ನದಿಯಲ್ಲಿ ಬಳಕೆ ಮಾಡಲು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಕೋಡಿ ಗಂಗೊಳ್ಳಿ ಬಾರ್ಜ್ ಸೇವೆ ಪ್ರಾರಂಭಗೊಳ್ಳಬಹುದು. ಇದರಿಂದ ಈ ಭಾಗದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯಾಗುವ ನಿರೀಕ್ಷೆಯಿದೆ. ವಾರಾಹಿ, ಚಕ್ರಾ, ಖೇಟಕ, ಕುಬ್ಜಾ ಮತ್ತು ಸೌಪರ್ಣಿಕಾ ನದಿಗಳ ಸಂಗಮವಾದ ಪಂಚಗಂಗಾವಳಿ ನದಿ ಪಾತ್ರಗಳಲ್ಲಿ ಅದ್ಭುತ ಮತ್ತು ಅಪೂರ್ವವಾದ ಸಂಸ್ಕೃತಿಗಳು ಅರಳಿ ನಿಂತಿದೆ. ಕುಂದಾಪುರ ತಾಲೂಕಿನ ಜೀವನಾಡಿಯಾಗಿರುವ ಪಂಚಗಂಗಾವಳಿ ನದಿಯಿಂದ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ನಿಸರ್ಗ ಪಂಚಗಂಗಾವಳಿಯನ್ನು ಸೃಷ್ಟಿಸದೇ ಹೋಗಿದ್ದರೆ ಕುಂದಾಪುರ ತಾಲೂಕಿನಲ್ಲಿ ಅದ್ಭುತ ಮತ್ತು ಅಪೂರ್ವ ಸಂಸ್ಕೃತಿ ಹುಟ್ಟುತ್ತಿರಲಿಲ್ಲ.

ಪಂಚಗಂಗಾವಳಿಯ ಇತಿಹಾಸವನ್ನು ಅವಲೋಕಿಸಿದರೆ ಅದ್ಭುತ ವಿಚಾರಗಳು ಬೆಳಕಿಗೆ ಬರುತ್ತದೆ ಪ್ರಾಚೀನ ಕಾಲಘಟ್ಟದಲ್ಲಿ ಪಂಚಗಂಗಾವಳಿ ನದಿಯ ಆಳ ವಿಸ್ತಾರ ವ್ಯಾಪಕ ಗಾತ್ರದಲ್ಲಿ ಹರಡಿಕೊಂಡಿತ್ತು ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಗಂಗೊಳ್ಳಿಯಿಂದ ದೂರ ದೇಶದ ಹಡಗುಗಳು, ಸಣ್ಣ ತಾಂತ್ರಿಕತೆಯ ಹಾಯಿದೋಣಿಗಳು ಐತಿಹಾಸಿಕ ಬಂದರು ನಗರಿ ಬಸ್ರೂರು ಮಾತ್ರವಲ್ಲ, ಸೌಡದ ತನಕವೂ ವ್ಯಾಪಾರಕ್ಕಾಗಿ ಬರುತ್ತಿದ್ದವು. ಆದರೆ 1924 ರಲ್ಲಿ ಕುಂದಾಪುರ ಮತ್ತು ಮಲೆನಾಡು ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಚಂಡಮಾರುತ ಮತ್ತು ಜಲಪ್ರಳಯದ ಪರಿಣಾಮವಾಗಿ ಪಂಚಗಂಗಾವಳಿ ನದಿಯ ಹರವಿನಲ್ಲಿ ಅಗಾಧ ಪ್ರಮಾಣದಲ್ಲಿ ಮಣ್ಣು ಹೂಳು ತುಂಬಿಕೊಂಡು ನದಿಯ ಆಳ ಕಿರಿದಾಗಿ ಮರಳಿನ ದಿಬ್ಬಗಳಿಂದ ಆವೃತ್ತಗೊಂಡಿತ್ತು ಪರಿಣಾಮವಾಗಿ ಹಡಗುಗಳು, ಹಾಯಿದೋಣಿಗಳು ಬಸ್ರೂರು ಬಂದರಿಗೆ ಬರುವುದು ನಿಂತು ಹೋಯಿತು.

ಆಳಿವೆ ಬಾಗಿಲಿನ ಮುಂದೆ ಹರಡಿ ಬೀಳುವ ಮಣ್ಣಿಂದ ಸಾಲಾಗಿ ನಿರ್ಮಾಣಗೊಳ್ಳುವ ಮರಳಿನ ದಂಡೆಗಳ ಪರಿಣಾಮವಾಗಿ ಹೊರಗಿನ ಹಡಗುಗಳು ಒಳಗೆ ಬರಲು, ಒಳಗಿನವು ಹೊರಕ್ಕೆ ಹೋಗಲು ತೊಡಕು ಬರುತ್ತದೆ ಮುಳುಗಿಕೊಂಡ ಮರಳಿನ ದಿಬ್ಬಗಳಿಂದ ಹಡಗುಗಳ ಚಲನೆಗೆ ಧಕ್ಕೆ ಬರುತ್ತದೆ ಇಂದು ದೊಡ್ಡ ಹಡಗುಗಳು ಗಂಗೊಳ್ಳಿ ಬಂದರಿಗೆ ಪ್ರವೇಶಿಸಲು ಆಗದೇ ಕಡಲಿಗೆ ತೀರ ಸಮೀಪದಲ್ಲಿ ಲಂಗರು ಹಾಕಬೇಕು. ಪೋರ್ಚುಗೀಸ್ ಕಾಲದಲ್ಲಿ ಪಂಚಗಂಗಾವಳಿ ನದಿ ಹರವಿನ ಸಾಮರ್ಥ್ಯ ಎಷ್ಟಿತ್ತೆಂದರೆ ಗಂಗೊಳ್ಳಿಯನ್ನು ದ್ವೀಪವನ್ನಾಗಿ ಪರಿವರ್ತಿಸಬೇಕೆಂಬ ಪೋರ್ಚುಗೀಸರ ಕನಸು ಈಡೇರಲೇ ಇಲ್ಲ.

18 ನೇ ಶತಮಾನದ ಕಾಲದಲ್ಲಿ ಜನರ ಪ್ರಯಾಣ ಯಾತ್ರಾ ಸ್ಥಳಕಷ್ಟೇ ಸೀಮಿತವಾಗಿತ್ತು. 19ನೇ ಶತಮಾನದಲ್ಲಿ ವೈಜ್ಞಾನಿಕ, ಔದ್ಯಮಿಕ ಕ್ರಾಂತಿಯಿಂದಾಗಿ ಜನರು ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣಿಸುವುದು ಅನಿವಾರ್ಯವಾಯಿತು ಭಾರತದ ಸ್ವಾತಂತ್ರ್ಯಾನಂತರ ಅಭಿವೃದ್ಧಿಯ ಶಕೆ ಆರಂಭವಾಯಿತು ಕುಂದಾಪುರದ ಪಂಚಗಂಗಾವಳಿ ನದಿ ಹರವಿನ ವಿವಿಧ ಪ್ರದೇಶಗಳಿಗೆ 1966,1970 ರ ನಡುವೆ ಐದು ಕಡೆ ಅನುಕ್ರಮವಾಗಿ ಆರಾಟೆ, ಮುವತ್ತುಮುಡಿ, ತಲ್ಲೂರು ಜಾಲಾಡಿ, ಹೇರಿಕುದ್ರು ಮತ್ತು ಕುಂದಾಪುರ ಸೇತುವೆಗಳು ನಿರ್ಮಾಣಗೊಂಡವು.

ಕುಂದಾಪುರ ಮತ್ತು ಗಂಗೊಳ್ಳಿ ನಡುವೆ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಿಂದಲೂ ಈಗಿನ ಬಾರ್ಜ್ ಸಂಪರ್ಕ ವ್ಯವಸ್ಥೆಯನ್ನು ನೆನಪಿಸುವ ದೋಣಿ ಸಂಪರ್ಕ ಸಾರಿಗೆ ವ್ಯವಸ್ಥೆ ಚಾಲ್ತಿಯಲ್ಲಿತ್ತು. ದೊಡ್ಡ ಗಾತ್ರದ ಎರಡು ದೋಣಿಗಳಿಗೆ ಹಲಗೆಯನ್ನು ಜೋಡಿಸಿಕೊಂಡು ಅದರ ಮೇಲೆ ಸೈಕಲ್,ಮೋಟಾರ್ ಬೈಕ್, ಕಾರು ಮತ್ತು ಜನರನ್ನು ಕುಂದಾಪುರ ಕಡವಿನ ಬಾಗಿಲಿನಿಂದ ಗಂಗೊಳ್ಳಿ ಕಡವಿನ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇತ್ತು. ಇದೇ ಜಂಗಲ್ ದೋಣಿ ಸಂಚಾರದ ಮೂಲಕ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಶೃಂಗೇರಿ ಪೀಠದ ಜಗದ್ಗುರುಗಳನ್ನು ಮೀನುಗಾರರು ಕುಂದಾಪುರದಿಂದ ಗಂಗೊಳ್ಳಿಗೆ ಕರೆದುಕೊಂಡು ಹೋಗಿದ್ದರು.

ಇದಕ್ಕಿಂತಲೂ ಪೂರ್ವದಲ್ಲಿ ಕುಂದಾಪುರ ಮಸೀದಿ ಬಳಿಯ ಫೆರಿ ರೋಡ್ ನಿಂದ ಪಂಚಗಂಗಾವಳಿ ನದಿಯಲ್ಲಿ ಗಂಗೊಳ್ಳಿಗೆ ದೋಣಿ ಸಂಚಾರದ ವ್ಯವಸ್ಥೆಯಿತ್ತು.ಕುಂದಾಪುರ ಖಾರ್ವಿಕೇರಿಯ ಅಣ್ಣಪ್ಪ ಖಾರ್ವಿ, ಗೋವಿಂದ ಸಾರಂಗ, ಪಾತ್ರಿ ಪುರ್ಸು ಖಾರ್ವಿ, ಗಂಗೊಳ್ಳಿಯ ಜಿಲ್ಲಾ ಕೃಷ್ಣ ಖಾರ್ವಿ ಮತ್ತು ವಿಟ್ಟು ಖಾರ್ವಿಯವರು ತಮ್ಮ ದೋಣಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ದೋಣಿಯಲ್ಲಿ ಜನರನ್ನು ಕುಂದಾಪುರದಿಂದ ಗಂಗೊಳ್ಳಿಗೆ ಮತ್ತು ಗಂಗೊಳ್ಳಿಯಿಂದ ಕುಂದಾಪುರಕ್ಕೆ ಕರೆದುಕೊಂಡು ಬರುತ್ತಿದ್ದರು. ಈ ದೋಣಿ ಸಂಚಾರ ವ್ಯವಸ್ಥೆಗೆ ಜಂಗಲ್ ಎಂದು ಕರೆಯುತ್ತಿದ್ದರು ಪಂಚಗಂಗಾವಳಿ ನದಿಯ ಪಶ್ಚಿಮ ಮತ್ತು ಪೂರ್ವ ದಂಡೆಯ ಜನರು ಪಂಚಗಂಗಾವಳಿ ನದಿಯ ಮೂಲಕ ದಾಟಲು ಈ ಜಂಗಲ್ ವ್ಯವಸ್ಥೆ ಆಗಿನ ಕಾಲಘಟ್ಟದಲ್ಲಿ ಜನರಿಗೆ ಅನಿವಾರ್ಯವಾಗಿತ್ತು. ಇದೇ ಮುಂದೆ ಆಧುನಿಕ ಶೈಲಿಯ ಬಾರ್ಜ್ ನಿರ್ಮಾಣಕ್ಕೆ ಮುನ್ನುಡಿ ಬರೆಯಿತು

ಒಮ್ಮೆ ದೋಣಿ ಪ್ರಯಾಣದಲ್ಲಿ 10 ರಿಂದ 12 ಜನರಿಗೆ ಸ್ಥಳಾವಕಾಶವಿರುತ್ತಿತ್ತು. ಈ ಪ್ರದೇಶಕ್ಕೆ ಗಂಗೊಳ್ಳಿ ಕಡವಿನ ಬಾಗಿಲು ಎಂಬ ಹೆಸರಿತ್ತು. 80 ರ ದಶಕದಲ್ಲಿ ಬಸ್ಸು ಸಾರಿಗೆ ವ್ಯವಸ್ಥೆ ಬಹಳ ಚುರುಕು ಪಡೆದಿದ್ದರಿಂದ ದೋಣಿಯಲ್ಲಿ ಜನರು ಸಂಚರಿಸುವುದು ಕಡಿಮೆಯಾಯಿತು ಅಂತಿಮವಾಗಿ ಕುಂದಾಪುರ ಗಂಗೊಳ್ಳಿ ದೋಣಿ ಸಂಚಾರ ವ್ಯವಸ್ಥೆ 1982 ರ ಸುಮಾರಿಗೆ ತನ್ನ ಪ್ರಯಾಣಕ್ಕೆ ವಿದಾಯ ಹೇಳಿತು.

ಪ್ರಸ್ತುತ ಕುಂದಾಪುರ ಕೋಡಿಯಿಂದ ಗಂಗೊಳ್ಳಿಗೆ ಪಂಚಗಂಗಾವಳಿ ನದಿಯಲ್ಲಿ ಕ್ರಮಿಸುವ ಬಾರ್ಜ್ ವ್ಯವಸ್ಥೆ ಪ್ರಾರಂಭವಾಗುವ ಕಾಲ ಸನ್ನಿಹಿತವಾಗಿದೆ. ಕುಂದಾಪುರದ ಮೀನುಗಾರ ಮುಖಂಡ ಹಾಗೂ ಪುರಸಭಾ ಸದಸ್ಯರಾದ ಕ್ರೀಯಾಶೀಲ ರಾಜಕಾರಣಿ ಚಂದ್ರಶೇಖರ್ ಖಾರ್ವಿಯವರ ಸಾರಥ್ಯದಲ್ಲಿ ಅದಕ್ಕೊಂದು ಸ್ಪಷ್ಟವಾದ ರೂಪುರೇಷೆ ಮೂಡಿಬಂದಿದೆ ಕುಂದಾಪುರ ಕೋಡಿ ಗಂಗೊಳ್ಳಿ ಬಾರ್ಜ್ ಸಂಚಾರ ವ್ಯವಸ್ಥೆ ಹಳೆಯ ದೋಣಿ ಸಂಚಾರ ವ್ಯವಸ್ಥೆಯ ಆಧುನಿಕ ರೂಪವಾಗಿದ್ದು ಈ ಭಾಗದಲ್ಲಿ ಹೊಸತೊಂದು ಇತಿಹಾಸ ಸೃಷ್ಟಿಯಾಗಲಿದೆ.

ಸುಧಾಕರ ಕುಂದಾಪುರ
ಸಂಪಾದಕರು
ಕುಂದಾಪುರ.ಕಾಂ

Share This Article
Leave a Comment
error: Content is protected !!