ಭಾರತಿ ಮರವಂತೆ “ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ”

kundapuradotcom@gmail.com
3 Min Read

ರಂಗೋಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕಲೆ ಸೃಜನಶೀಲತೆಯ ಉತ್ಕೃಷ್ಟ ಕಲಾಪ್ರಕಾರವಾಗಿರುವ ರಂಗೋಲಿ ಮನಸ್ಸಿಗೆ ಮುದ, ಸಂತಸ ನೀಡುವುದರ ಜೊತೆಗೆ ಕಲ್ಪನಾಶಕ್ತಿಗೆ ಸ್ಪೂರ್ತಿ, ಚೈತನ್ಯ ನೀಡುತ್ತದೆ. ತನ್ನದೇ ಆದ ಸಾಹಿತ್ಯ ಮತ್ತು ಇತಿಹಾಸ ಹೊಂದಿರುವ ರಂಗೋಲಿ ಕಲೆಯ ಕುರಿತಂತೆ ಬರೆಯಲೊರಟರೆ ಮೊದಲು ನೆನಪಾಗುವವರು ರಂಗೋಲಿ ಕಲೆಗೆ ಮೊದಲ ಡಾಕ್ಟರೇಟ್ ಪಡೆದ ಶ್ರೀ ಭಾರತಿ ಮರವಂತೆಯವರು.

ಮೂಲತಃ ಕುಂದಾಪುರ ತಾಲೂಕಿನ ಮರವಂತೆಯವರಾದ ಭಾರತಿಯವರು ತಮ್ಮ ದ್ವಿತೀಯ ಪಿಯುಸಿವರೆಗಿನ ವಿದ್ಯಾಭ್ಯಾಸವನ್ನು ತಾರೀಕಟ್ಟೆಯಲ್ಲಿ ಮುಗಿಸಿ, ಬಸ್ರೂರು ಶಾರದಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು ಉಡುಪಿ ಚಿತ್ರಕಲಾ ಮಂದಿರದಲ್ಲಿ ಡ್ರಾಯಿಂಗ್ ಮಾಸ್ಟರ್ ಕೋರ್ಸ್ ಮಾಡಿದ್ದ ಇವರು ಮುಂದೆ ಇದೇ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಿಕೆಯಾಗಿ ಕಾರ್ಯ ನಿರ್ವಹಿಸಿದರು ಇದಕ್ಕೂ ಮೊದಲು ಬ್ರಹ್ಮಾವರದ ನಿರ್ಮಲ ಅಂಗ್ಲ ಮಾಧ್ಯಮ ಫ್ರೌಢ ಶಾಲೆಯಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ ಕಿರು ಯೋಜನೆಗಳಲ್ಲಿ ಕ್ಷೇತ್ರ ತಜ್ಞರಾಗಿ ಅನುಭವ ಹೊಂದಿರುವ ಭಾರತಿ ಮರವಂತೆಯವರು ಕನ್ನಡ ಜಾನಪದ ಪರಿಷತ್ ರಾಜ್ಯ ಮಹಿಳಾ ಘಟಕದಲ್ಲಿ ವಿಭಾಗೀಯ ಸಂಚಾಲಕಿಯಾಗಿ ಮತ್ತು ಡಾ.ಶಿವರಾಮ ಕಾರಂತ ಉಡುಪಿ ಟ್ರಸ್ಟ್ ನ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಲ್ಲಿಯೇ ಚಿತ್ರಕಲೆ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಭಾರತಿಯವರು ಓದುವ ಸಮಯದಲ್ಲಿ ಚಿತ್ರ ಬಿಡಿಸುತ್ತಿದ್ದರು ಶಾಲೆಯಲ್ಲಿ ಸಹಪಾಠಿಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೋಡಿ ತಾನೂ ಭಾಗವಹಿಸಬೇಕು ಎಂಬ ಹಂಬಲ ಮನದಲ್ಲಿ ಮೂಡುತ್ತಿತ್ತು. ಈ ಹಂಬಲ ಚಿಗುರೊಡೆದು ಕೆಲವು ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು ಇದು ರಂಗೋಲಿ ಕಲೆಗೆ ತನ್ನನ್ನು ಸಮರ್ಪಿಸಿಕೊಳ್ಳಲು ಭಾರತಿಯವರಿಗೆ ಮೂಲ ಪ್ರೇರಣೆಯಾಯಿತು ಪದವಿ ಶಿಕ್ಷಣಕ್ಕಾಗಿ ಬಸ್ರೂರು ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಇವರಲ್ಲಿದ್ದ ರಂಗೋಲಿ ಕಲೆಯನ್ನು ಗಮನಿಸಿ ಪ್ರೊ ಕನರಾಡಿ ವಾದಿರಾಜ್ ಭಟ್, ಚಂದ್ರಶೇಖರ್ ಹೊಳ್ಳ ಹಾಗೂ ಡಾಕ್ಟರ್ ಅಕ್ಕ ಮಹಾದೇವಿಯವರು ಪ್ರೋತ್ಸಾಹಿಸಿ, ಹುರಿದುಂಬಿಸಿದರು.

ರಂಗೋಲಿ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಭಾರತಿಯವರಿಗೆ ಆ ಕ್ಷೇತ್ರದಲ್ಲಿ ಮುಂದುವರಿಯಲು ಮನೆಯವರಿಗೆ ಇಷ್ಟವಿರಲಿಲ್ಲ ಕಾಲ ಕ್ರಮೇಣ ರಂಗೋಲಿ ಕಲೆಯಲ್ಲಿ ಭಾರತಿಯವರು ತೋರಿದ ಅಪೂರ್ವ ಸಾಧನೆಯನ್ನು ನೋಡಿ ಮನೆಯವರು ತುಂಬಾ ಖುಷಿ ಪಟ್ಟರು. ಆಧುನಿಕ ಯುಗದ ನಾಗಾಲೋಟದಲ್ಲಿ ಜನಮಾನಸದಿಂದ ದೂರ ಸರಿಯುತ್ತಿರುವ ರಂಗೋಲಿ ಕಲೆಯನ್ನು ಉಳಿಸಬೇಕೆಂಬ ಮಹಾದಾಸೆಯಿಂದ ರಂಗೋಲಿ ಕಲೆಯೊಳಗೆ ಪರಕಾಯ ಪ್ರವೇಶ ಮಾಡಿದ ಭಾರತಿಯವರು ಇಂದು ಕರಾವಳಿ ಕರ್ನಾಟಕದ ರಂಗೋಲಿ ಕಲೆ ಎಂಬ ವಿಷಯದಲ್ಲಿ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಮೈಸೂರು ವಿಶ್ವ ವಿದ್ಯಾಲಯದ ಡಾಕ್ಟರೇಟ್ ಪ್ರಶಸ್ತಿಯಿಂದ ಭಾಜನರಾಗಿದ್ದಾರೆ.

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಗಳ ರಾಷ್ಟ್ರಧ್ವಜಗಳನ್ನು ಅರಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ರಂಗೋಲಿ ಕಲೆಯಲ್ಲಿ ಭಾರತಿಯವರು ತೋರಿದ ಅಪೂರ್ವ ಸಾಧನೆಯನ್ನು ಮೆಚ್ಚಿ ನೂರಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದೆ. ಪ್ರಶಸ್ತಿಗಳು, ಸನ್ಮಾನಗಳು ಅವರ ಪಾಲಿಗೆ ನಿತ್ಯ ನಿರಂತರವಾಗಿದೆ.

ಬಹುಮುಖ ಪ್ರತಿಭೆಯಾಗಿರುವ ಭಾರತಿಯವರ ಲೇಖನಿಯಿಂದ ರಂಗೋಲಿ, ಜನಪದ ಕಲೆಯ ಕುರಿತಂತೆ ಅತ್ಯುತ್ತಮ ಕೃತಿಗಳು ಪಡಿಮೂಡಿದ್ದು, ರಂಗೋಲಿ, ನಿತ್ಯ ವಿನೂತನ ರಂಗೋಲಿ, ಹಬ್ಬಗಳ ರಂಗೋಲಿ, ಶಿವನೊಡನೆ ಸಂಭಾಷಣೆ, ಜನಪದ ಚಿತ್ತಾರ ಮುಂತಾದ ಕೃತಿಗಳು ಪ್ರಮುಖವಾಗಿದೆ. ವೃತ್ತಿ ಬದುಕಿನೊಂದಿಗೆ ಆಪ್ತತೆಯ ಲಯ ಬೆಸೆದ ರಂಗೋಲಿ ಕಲೆಯನ್ನು ತನ್ನ ದಿನಚರಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡ ಭಾರತಿ ಮರವಂತೆಯವರು ಎಲ್ಲೇ ಇದ್ದರೂ, ಅವರ ಮನಸ್ಸು ಮಾತ್ರ ಸದಾಕಾಲವೂ ರಂಗೋಲಿಯ ಬಗ್ಗೆ ವಿಚಾರ ಮಾಡುತ್ತಿರುತ್ತದೆ.

ಬದಲಾವಣೆ ಜಗದ ನಿಯಮ ಎಂಬಂತೆ ರಂಗೋಲಿ ಕಲೆಯ ಮೂಲಸ್ವರೂಪಕ್ಕೆ ಧಕ್ಕೆ ಬಾರದಂತೆ ರಂಗೋಲಿ ಕಲೆಯಲ್ಲಿ ವಿನೂತನ ಆವಿಷ್ಕಾರ ಮತ್ತು ಪ್ರಯೋಗಶೀಲತೆಗೆ ತನ್ನನ್ನು ವಿಧೇಯಿಸಿಕೊಂಡ ಭಾರತಿಯವರು ರಂಗೋಲಿಯನ್ನು ಕ್ಯಾನ್ ವಾಸ್ ಮೇಲೆ ಬಿಡಿಸಿ ರಂಗೋಲಿಯ ನೂತನ ಪ್ರಯೋಗಕ್ಕೆ ಮುನ್ನುಡಿ ಬರೆದರು. ಭಾರತಿಯವರ ರಂಗೋಲಿಯಲ್ಲಿ ನಡೆಸಿದ ಈ ನೂತನ ಪ್ರಯೋಗ ಶೀಲತೆ ಜನರಿಗೆ ರಂಗೋಲಿ ಕಲೆಯ ಬಗ್ಗೆ ಮತ್ತಷ್ಟು ಆಸಕ್ತಿಗೆ ಕಾರಣವಾಯಿತು.

ರಂಗೋಲಿ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಹೇಳುವ ಭಾರತಿ ಮರವಂತೆಯವರು ಬೆಳಿಗ್ಗೆ ಎದ್ದೊಡನೆ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿದರೆ ಅದು ದೇವರಿಗೆ ಪೂಜೆ ಮಾಡಿದಂತೆ ಎಂದು ವಿನಮ್ರ ಭಾವದಿಂದ ರಂಗೋಲಿ ಮಹತ್ವದ ಬಗ್ಗೆ ನುಡಿಯುತ್ತಾರೆ. ಇಂದಿನ ಬಹುತೇಕ ರಂಗೋಲಿ ಕಲಾವಿದರು ಭಾರತಿ ಮರವಂತೆಯವರ ಸಾಧನೆಯಿಂದ ಪ್ರೇರಿತರಾಗಿದ್ದಾರೆ ಮತ್ತು ವಿಶಿಷ್ಟ ಶೈಲಿಯಿಂದ ಪ್ರೇರಿತರಾಗಿದ್ದಾರೆ ಎಂದರೆ ತಪ್ಪಲ್ಲ.

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಜನಪ್ರಿಯ ಮಾತಿಗೆ ಡಾಕ್ಟರ್ ಭಾರತಿ ಮರವಂತೆಯವರು ಉತ್ತಮ ಉದಾಹರಣೆ. ವೃತ್ತಿ ಬೇರೆಯಾದರೂ, ರಂಗೋಲಿಯನ್ನು ದಿನನಿತ್ಯದ ದಿನಚರಿಯ ಅವಿಭಾಜ್ಯ ಅಂಗವಾಗಿ ವಿಧೇಯಿಸಿಕೊಂಡಿರುವ ಅವರ ಸಾಧನೆ ಅನನ್ಯ, ಅಪೂರ್ವ ಅವರ ಕಲಾಸೇವೆಯ ಪಯಣ ನಾಗಾಲೋಟದಲ್ಲಿ ಮುಂದುವರಿಯಲಿ ಮತ್ತು ಮತ್ತಷ್ಟೂ ಪ್ರಶಸ್ತಿ ಪುರಸ್ಕಾರಗಳು ಲಭಿಸಿ ರಂಗೋಲಿಯೊಂದಿಗಿನ ಬಣ್ಣದ ಬದುಕು ತೇಜೋಮಯವಾಗಿ ಬೆಳಗಲಿ ಎಂಬುದು ನಮ್ಮೆಲ್ಲರ ಒಲವಿನ ಹಾರೈಕೆ.

ಸುಧಾಕರ ಕುಂದಾಪುರ
ಸಂಪಾದಕರು
ಕುಂದಾಪುರ.ಕಾಂ

Share This Article
Leave a Comment
error: Content is protected !!