ಕೇವಲ ಎರಡು ವರ್ಷಗಳಲ್ಲಿಯೇ ವಿದ್ಯಾರಣ್ಯ ಕ್ಯಾಂಪಸ್ ನ ಚಿತ್ರಣವನ್ನೇ ಬದಲಾವಣೆ ಮಾಡಿ ಸಂಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ, ರಾಜ್ಯದ ಮೂಲೆ ಮೂಲೆಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಗಳು ಹರಿದು ಬರುತ್ತಿದ್ದಾರೆ. ಈ ಮೂಲಕ ಶಿಕ್ಷಣ ಸಂಸ್ಥೆಯ ಮೂಲಕ ಕುಂದಾಪುರಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹೇಳಿದರು.
ಅವರು ಶನಿವಾರ ಸಂಜೆ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ‘ವರ್ಷಾ 2025’ನ್ನು ಉದ್ಘಾಟಿಸಿ ಮಾತನಾಡಿದರು.


ಶಿಕ್ಷಣ ಸಂಸ್ಥೆಗಳು ಬೆಳೆಯುವಲ್ಲಿ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಪಾತ್ರ ಬಹಳಷ್ಟಿದೆ. ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಿದ ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಸಂಸ್ಥೆ ಒಂದು ಮಾದರಿ ಸಂಸ್ಥೆಯಾಗಿದೆ ಎಂದರು.
ಇದೇ ಸಂದರ್ಭ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆರ್ಥಿಕ ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ರ್ಯಾಂಕ್ ವಿಜೇತರಿಗೆ ಐವತ್ತು ಸಾವಿರ ಮೌಲ್ಯದ ಚೆಕ್ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ಮೊತ್ತದ ಚೆಕ್ ನೀಡಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಬಹುಮಾನ ವಿತರಿಸಿದ ಜೆ.ಎನ್.ಎಸ್ ಗ್ರೂಪ್ ಆಫ್ ಕಂಪನೀಸ್ ಘಟಪ್ರಭಾ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಜಯಶೀಲ ಶೆಟ್ಟಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಶಿಕ್ಷಣ ಹೊಸ ಯುಗವನ್ನು ಸೃಷ್ಟಿಸಲು ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಸಕ್ರಿಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಂದು ಧಾರ್ಮಿಕ ಹಬ್ಬಗಳು, ವಿವಿಧ ಸಾಂಸ್ಕೃತಿಕ ಆಚರಣೆಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಣೇತರ ಚಟುವಟಿಕೆಗಳಲ್ಲಿಯೂ ಸಿದ್ದಗೊಳಿಸುವಲ್ಲಿ ಯಶಸ್ಸು ಕಂಡಿದ್ದೇವೆ ಎಂದರು.


ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾದ್ಯಾಯ ಪ್ರದೀಪ್ ಕೆ ಅವರು ಶಾಲಾ ವಾರ್ಷಿಕ ವರದಿ ಮತ್ತು ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜಿತ್ ಶೆಟ್ಟಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಹಾಗೂ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಚರಿಷ್ಮಾ ಸ್ವಾಗತಿಸಿದರು. ಶಿಕ್ಷಕಿ ದೀಕ್ಷಾ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ವಿನಯಕುಮಾರ್ ಕೆ ನಿರೂಪಿಸಿದರು.





















