ನಾಗಾರಾಧನೆಯ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಕಾಳಾವರ “ಚಂಪಾ ಷಷ್ಠಿ”

kundapuradotcom@gmail.com
5 Min Read

ಭಾರತೀಯ ಪುರಾಣ ಮತ್ತು ಸಂಸ್ಕೃತಿಯ ಪರಮ ಪವಿತ್ರ ಧಾರ್ಮಿಕ ನಂಬಿಕೆಯ ನೆಲೆಗಟ್ಟಿನಲ್ಲಿ ಕರಾವಳಿಯಲ್ಲಿ ನಾಗಾರಾಧನೆಗೆ ವಿಶಿಷ್ಟ ಸ್ಥಾನವಿದೆ. ನಾಗಾರಾಧನೆಯ ಪುಣ್ಯಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಕುಂದಾಪುರ ತಾಲೂಕಿನ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಕ್ಷೇತ್ರವು ನಾಗಾರಾಧನೆಗೆ ಪ್ರಸಿದ್ಧಿ ಪಡೆದಿದೆ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ, ಶ್ರೀ ಕ್ಷೇತ್ರ ಕಾಳಾವರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಕಾಳಿಂಗ ಇಲ್ಲಿಗೆ ಹರಿದು ನೆಲೆ ನಿಂತಿದ್ದರಿಂದ ಈ ಕ್ಷೇತ್ರಕ್ಕೆ ಕಾಳಾವರ ಎಂದು ಹೆಸರು ಬಂತು ಎಂಬ ಪ್ರತೀತಿ ಇದೆ.

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಾಚೀನದಲ್ಲಿ ಕಾಡಿನ ನಡುವಿನ ಹೊಳೆಯ ಮಧ್ಯೆ ನಾಗ ಸನ್ನಿಧಿ ಇದ್ದರೆ ಇಲ್ಲಿ ಬಯಲು ಪ್ರದೇಶ ಆವರಿಸಿದ ಕಾಡಿನ ನಡುವೆ ನಾಗನ ಸಾನ್ನಿಧ್ಯವಿದೆ. ಸುಬ್ರಹ್ಮಣ್ಯದಲ್ಲಿ ಮೂಲ ಹುತ್ತಕ್ಕೆ ಪೂಜೆ, ಸೇವೆಗಳು ನಡೆದಂತೆಯೇ ,ಕಾಳಾವರ ಕ್ಷೇತ್ರದಲ್ಲಿ ಬಾವಿಯೊಳಗಿಂದ ಮೇಲೆದ್ದು ಬಂದ ಐತಿಹ್ಯವುಳ್ಳ ಹುತ್ತಕ್ಕೆ ಪೂಜೆ ಪುರಸ್ಕಾರಗಳು ಸಲ್ಲುತ್ತದೆ. ಕರಾವಳಿಯಲ್ಲಿ ಕಾಳಿಂಗ ಎಂಬ ಹೆಸರಿನಲ್ಲಿರುವ ನಾಗ ಕ್ಷೇತ್ರ ಇದೊಂದೇ ಆಗಿದ್ದು, ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಕಾಳಿಂಗನ ರೂಪದಲ್ಲಿ ನೆಲೆ ನಿಂತಿದ್ದಾನೆ. ಕಾಳಿಂಗ ಹರಿದು ಬಂದ ದಾರಿ ಸದಾಕಾಲವೂ ನೀರಿನ ಒರತೆಯಿಂದ ಕೂಡಿರುತ್ತದೆ ಚಿತ್ರಕೂಟ ಎಂಬ ಪ್ರಬಲ ದೈವಿಕ ಶಕ್ತಿ ಕೇಂದ್ರ ಇಲ್ಲಿನ ನಾಗ ವಿಗ್ರಹಗಳ ಸಮೀಪವಿದೆ.

ಕಾಳಾವರ ಕ್ಷೇತ್ರದಲ್ಲಿ ಕಾಳಿಂಗ ಸುಬ್ರಹ್ಮಣ್ಯ ದೇವರೊಂದಿಗೆ ಶ್ರೀ ಮಹಾಲಿಂಗೇಶ್ವರನ ಸಾನ್ನಿಧ್ಯವಿರುವುದು ವಿಶೇಷವಾಗಿದೆ ಪ್ರತಿನಿತ್ಯ ಇಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತಿದ್ದು, ವಾರ್ಷಿಕವಾಗಿ ನಡೆಯುವ ಹಿರಿಷಷ್ಠಿ ಚಂಪಾಷಷ್ಠಿ ಮತ್ತು ಕಿರಿಷಷ್ಠಿ ಸ್ಕಂದ ಷಷ್ಠಿ ಬಹಳ ಪ್ರಸಿದ್ಧ ಉತ್ಸವಗಳಾಗಿದೆ. ಕಾಳಾವರ ಕ್ಷೇತ್ರವು ಎರಡನೇ ಕುಕ್ಕೆ ಸುಬ್ರಹ್ಮಣ್ಯ ಎಂದು ಪ್ರಸಿದ್ಧಿಯಾಗಿದ್ದು, ಸುಬ್ರಹ್ಮಣ್ಯಕ್ಕೆ ಹೋಗಲು ಅನಾನೂಕೂಲವಾದವರು ಶ್ರೀ ಕಾಳಾವರ ಕ್ಷೇತ್ರದಲ್ಲಿ ಹರಕೆ, ಪೂಜೆ ಸಲ್ಲಿಸಿದರೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ಪುಣ್ಯ ಕ್ಷೇತ್ರದಲ್ಲಿ ಸ್ವಯಂಭೂ ನಾಗನ ಮೂಲ ಲಿಂಗವಿದೆ. ಷಷ್ಠಿ ದಿನದಂದು ನಾಗರಹಾವು ಪ್ರತ್ಯಕ್ಷವಾಗಿ ಹದಿನೈದಿಪ್ಪತ್ತು ನಿಮಿಷಗಳ ಕಾಲ ಅಲಂಕೃತ ವಿಗ್ರಹದ ಮೇಲೆ ಕುಳಿತು ಮರೆಯಾಗುತ್ತದೆ ಮೂಲ ಹುತ್ತದಲ್ಲಿ ಸದಾಕಾಲ ನಾಗರಹಾವುಗಳು ಕಾಣಿಸಿಕೊಳ್ಳುತ್ತದೆ ಇದುವರೆಗೂ ಯಾರಿಗೂ ತೊಂದರೆಯಾದ ಉದಾಹರಣೆಗಿಲ್ಲ. ಷಷ್ಠಿ ದಿನದಂದು ನಾನಾ ರೀತಿಯ ಹರಕೆ ಹೊತ್ತು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ ಸಂತಾನ ಪ್ರಾಪ್ತಿ, ನಾಗದೋಷ ನಿವಾರಣೆ, ಭೂ ಸಂಬಂಧಿ ದೋಷ ನಿವಾರಣೆ, ರೋಗ ರೋಜಿನಗಳ ಪರಿಹಾರ ಇತ್ಯಾದಿಗಳ ಹರಕೆ ಇಲ್ಲಿ ಸಲ್ಲಿಸಲಾಗುತ್ತದೆ.

ಮನೆಯ ಜಿರಳೆ, ನುಸಿ, ನೊಣ ತಿಗಣೆ ಕಾಟ, ಸಾಕುಪ್ರಾಣಿಗಳ ಸಮಸ್ಯೆ, ಮೈಯ ತೊನ್ನು, ಜಿಡ್ಡುಗಳ ಪರಿಹಾರಕ್ಕಾಗಿ ಸಲ್ಲಿಸುವ ಹರಕೆಗೆ ತಕ್ಕಂತೆ ವಿವಿಧ ಮಾದರಿಯ ಬೆಳ್ಳಿಯ ತಗಡು ಚೂರುಗಳ ಆಕೃತಿಗಳನ್ನು ಜಾತ್ರೆ ಪೇಟೆಯ ಇಕ್ಕೆಲಗಳಲ್ಲಿ ಕುಳಿತುಕೊಂಡು ಮಾರುತ್ತಾರೆ. ಭಕ್ತರು ಅದನ್ನು ಖರೀದಿಸಿ ತಲೆಭಾಗಕ್ಕೆ ಸುಳಿಸಿಕೊಂಡು ಕ್ಷೇತ್ರ ಹುಂಡಿಗೆ ಸಮರ್ಪಿಸುತ್ತಾರೆ. ಕಾಲು, ಕಣ್ಣು, ಹಲ್ಲು, ಕೈ ಮುಂತಾದ ಬೆಳ್ಳಿಯ ತಗಡಿನ ಆಕೃತಿಗಳನ್ನು ಕೂಡಾ ಭಕ್ತರು ಒಪ್ಪಿಸುವುದು ಉಂಟು. 2019 ರಲ್ಲಿ ಈ ಕ್ಷೇತ್ರ ಜೀರ್ಣೋದ್ಧಾರಗೊಂಡಿದೆ. ಸುಮಾರು ಮೂರುವರೆ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ಕೈ ಗೊಂಡು ಗರ್ಭಗುಡಿಗಳು,ತೀರ್ಥ ಮಂಟಪ ನಿರ್ಮಿಸಲಾಗಿದೆ.

ನಾಗ ಸದಾ ತಂಪನ್ನು ಬಯಸುವುದರಿಂದ ಗರ್ಭಗುಡಿಯನ್ನು ತಂಪಿನ ಗುಣದ ಕೆಂಪು ಕಲ್ಲುಗಳಿಂದ ಕಟ್ಟಲಾಗಿದ್ದು ,ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿಯನ್ನು ಬಿಳಿ ಶಿಲೆಯಿಂದ ಕಟ್ಟಲಾಗಿದೆ. ಕೇರಳದ ಶಿಲ್ಪಿಗಳು ಕೇರಳದಿಂದಲೇ ಕೆಂಪು ಕಲ್ಲುಗಳನ್ನು ತರಿಸಿಕೊಂಡು ಮೂಲ ಹುತ್ತಕ್ಕೆ ಧಕ್ಕೆ ಬಾರದಂತೆ ಕಲಾತ್ಮಕವಾಗಿ ನಿರ್ಮಿಸಿದ್ದಾರೆ. ದೇವಸ್ಥಾನದ ಬಲಭಾಗದ ಪೌಳಿ ಮತ್ತು ಹಿಂದಿನ ಪೌಳಿ ಈಗಾಗಲೇ ಆಗಿದ್ದು, ಎಡಭಾಗದ ಪೌಳಿ ಮತ್ತು ಹೆಬ್ಬಾಗಿಲು ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ದೇವಸ್ಥಾನದ ಪಾಕಶಾಲೆ ನಿರ್ಮಾಣ ಕಾರ್ಯ ಈಗಾಗಲೇ ಆಗಿದ್ದು, ಇನ್ನು ಊಟದ ಹಾಲ್ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ರಂಜಿತ್ ಕುಮಾರ್ ಶೆಟ್ಟಿ ಸಳ್ವಾಡಿಯವರು ತಿಳಿಸಿರುತ್ತಾರೆ.

ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಕ್ಕಾಗಿ ವ್ಯವಸ್ಥಾಪನ ಸಮಿತಿ ಶ್ರಮಿಸುತ್ತಿದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ದಾನಿಗಳು ಭಾಗಿಯಾಗುವಂತೆ ಕೋರಲಾಗಿದೆ. ದೇವಸ್ಥಾನದ ಪುಷ್ಕರಣಿ ಬಳಿ ಸ್ನಾನ ಮಾಡಿದ ಭಕ್ತರಿಗೆ ಬಟ್ಟೆ ಬದಲಾಯಿಸಿಕೊಳ್ಳಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಭಾವ್ಯ ಅಪಾಯ ತಪ್ಪಿಸಲು ನುರಿತ ಸ್ವಯಂಸೇವಕರನ್ನು ಕೆರೆಯ ಬಳಿ ನಿಯೋಜಿಸಲಾಗಿದೆ.

26.11.2025 ಮತ್ತು 27.11.2025 ರಂದು ನಡೆಯುವ ಷಷ್ಠಿ ಮಹೋತ್ಸವ ಕಾರ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 27.11 2025 ರಂದು ವಿಶೇಷವಾಗಿ ಹಾಲಿಟ್ಟು ಸೇವೆ ಮತ್ತು ಕಟ್ಟುಕಟ್ಟಲೆಯ ನಾಗಮಂಡಲ ಸೇವೆ ಮತ್ತು ತುಲಾಭಾರ ಸೇವೆ ನಡೆಯಲಿದೆ. ಷಷ್ಠಿ ಮಹೋತ್ಸವ ಈ ಪವಿತ್ರ ಧಾರ್ಮಿಕ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ಗಡಣ ಹರಿದು ಬರಲಿದೆ. ಸುಮಾರು 800 ವರ್ಷಗಳಿಗೂ ಪುರಾತನವಾದ ಈ ಕ್ಷೇತ್ರ ಮಾತನಾಡುವ ನಾಗಕ್ಷೇತ್ರ ಎಂಬ ಖ್ಯಾತಿಗೆ ಪಾತ್ರವಾಗಿದ್ದು,ಭಕ್ತರ ಇಷ್ಟಾರ್ಥ ಸಿದ್ಧಿಯ ಕಾರಣಿಕ ಕ್ಷೇತ್ರವಾಗಿದೆ.

ಸುಬ್ರಹ್ಮಣ್ಯ ಷಷ್ಠಿ ದಿನ ಬಹುತೇಕ ಭಕ್ತರ ಮನೆಯಲ್ಲಿ ಬೂದು ಗುಂಬಳಕಾಯಿಯ ಪದಾರ್ಥ ಮತ್ತು ವಿವಿಧ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯ ಉಂಟು. ನಾಗರೂಪಿ ಸುಬ್ರಹ್ಮಣ್ಯ ದೇವರು ಬೂದು ಕುಂಬಳಕಾಯಿ ಪ್ರಿಯ ಎಂಬ ನಂಬಿಕೆಯೂ ಇದೆ ಶೈತ್ಯಕಾರಕವಾದ ಬೂದು ಕುಂಬಳಕಾಯಿಯ ಸೇವನೆಯಿಂದ ಹೊಟ್ಟೆಯ ಹುಣ್ಣುಗಳು ಮತ್ತು ಉದರ ವ್ಯಾಧಿಗಳು ನಿವಾರಣೆಯಾಗುತ್ತದೆ. ಔಷಧೀಯ ಅಂಶಗಳಿಂದ ಕೂಡಿದ ಬೂದು ಗುಂಬಳಕಾಯಿಯ ಸೇವನೆಯಿಂದ ಹೊಟ್ಟೆಯಲ್ಲಿ ವರ್ಷವಿಡಿ ತಿಂದು ಕರಗದ ಹಾನಿಕಾರಕ ಅಂಶಗಳು ಕರಗಿ ಹೋಗುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ನಮ್ಮ ಹಿರಿಯರು ಕಂಡುಕೊಂಡಿದ್ದು, ಆಯಾ ಋತುಮಾನಗಳಿಗೆ ತಕ್ಕಂತೆ ಹಬ್ಬ ಹರಿದಿನಗಳ ನೆಪದಲ್ಲಿ ನಿರ್ದಿಷ್ಟ ಆಹಾರವನ್ನು ಸೇವಿಸಿದರೆ ದೇಹ ಪ್ರಕೃತಿ ಆರೋಗ್ಯಕರವಾಗುತ್ತದೆ ಎಂಬ ವೈಜ್ಞಾನಿಕ ಸತ್ಯ ಇದರಲ್ಲಿ ಅಡಕವಾಗಿದೆ.

ಸಾಮಾನ್ಯವಾಗಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಷಷ್ಠಿ ಮಹೋತ್ಸವ ನಡೆಯುವರಿಂದ ಆ ಸಮಯದಲ್ಲಿ ಚಳಿಗಾಲದ ಶೈತ್ಯ ವಾತಾವರಣ ಇರುತ್ತದೆ. ಈ ಸಂದರ್ಭದಲ್ಲಿ ಶೈತ್ಯಕಾರಕವಾದ ಬೂದು ಗುಂಬಳಕಾಯಿ ಸೇವನೆ ಆರೋಗ್ಯಕ್ಕೆ ಹಿತಕರ ಎಂಬುದು ಹಿರಿಯರ ಅಭಿಮತ. ಷಷ್ಠಿ ದಿನ ದೇವಸ್ಥಾನದ ಅಸುಪಾಸಿನಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಬೂದು ಗುಂಬಳಕಾಯಿಯ ಸಣ್ಣ ಸಣ್ಣ ತುಂಡುಗಳನ್ನು ಮಾರಾಟಕ್ಕೆ ಇಡುವುದನ್ನು ಗಮನಿಸಬಹುದಾಗಿದೆ.

ಕಲಿಯುಗದ ಪ್ರತ್ಯಕ್ಷ ದೈವ ಎಂದು ಕರೆಯಲಾಗುವ ನಾಗ ಸುಬ್ರಹ್ಮಣ್ಯ ದೇವರ ಪುಣ್ಯಪ್ರದ ಕ್ಷೇತ್ರವಾದ ಕಾಳಾವರದಲ್ಲಿ ಎರಡು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನೇರವೇರಲಿದ್ದು,ಸಮಸ್ತ ಭಕ್ತರ ದಂಡು ಶ್ರೀ ದೇವರ ಅನುಗ್ರಹ ಪಡೆದುಕೊಳ್ಳಲು ಷಷ್ಠಿ ಮಹೋತ್ಸವದಲ್ಲಿ ಬಹಳ ಶ್ರದ್ಧೆ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ವರದಿ : ಸುಧಾಕರ ಖಾರ್ವಿ
ಸಂಪಾದಕರು
ಕುಂದಾಪುರ.ಕಾಂ

Share This Article
Leave a Comment
error: Content is protected !!