ಪರಶುರಾಮ ಸೃಷ್ಟಿಯ ಪುಣ್ಯಭೂಮಿ ಕರಾವಳಿಯ ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಕೋಟೇಶ್ವರವೂ ಒಂದು ಇತಿಹಾಸ ಕಾಲದಲ್ಲಿ ಕೋಟೇಶ್ವರದ ಹೆಸರು ಧ್ವಜಪುರವಾಗಿತ್ತು ಪ್ರಾಚೀನ ಕಾಲದಲ್ಲಿ ಕೋಟೇಶ್ವರ ಪರಿಸರ ಬರಗಾಲದ ತೀವ್ರತೆಗೆ ಸಿಲುಕಿತ್ತು. ಈ ಬರಗಾಲದ ನಿವಾರಣೆಗಾಗಿ ಹಿಭಾಂಡಕ ಋಷಿಗಳ ನೇತೃತ್ವದಲ್ಲಿ ಒಂದು ಕೋಟಿ ಮುನಿಗಳು ಶಿವನ ಅನುಗ್ರಹಕ್ಕಾಗಿ ತಪಸ್ಸು ಮಾಡುತ್ತಾರೆ. ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ವರ್ಷಧಾರೆಯನ್ನು ಸುರಿಸಿ ಬರಗಾಲದ ಸಮಸ್ಯೆಯನ್ನು ನಿವಾರಿಸುತ್ತಾನೆ ಇದರ ಪ್ರತೀಕವಾಗಿ ಶಿವನು ಕೋಟಿಲಿಂಗದ ರೂಪದಲ್ಲಿ ಇಲ್ಲಿ ನೆಲೆ ನಿಲ್ಲುತ್ತಾನೆ.
ಶಿವನು ಕೋಟಿ ಲಿಂಗದ ರೂಪದಲ್ಲಿ ಐಕ್ಯವಾದ ಕ್ಷೇತ್ರಕ್ಕೆ ಕೋಟಿಲಿಂಗೇಶ್ವರ ಎಂದು ಹೆಸರಾಗಿ ಕಾಲಾನುಗತಿಯಲ್ಲಿ ಕೋಟೇಶ್ವರ ಎಂದು ನಾಮಾಂಕಿತವಾಯಿತು ಹಿಂದಿನ ಕಾಲದಲ್ಲಿ ತೆಕ್ಕಟ್ಟೆ, ಕೊಮೆ, ಕೊರವಡಿ, ಕುಂಭಾಶಿ, ಗೋಪಾಡಿ,ಮೂಡುಗೋಪಾಡಿ, ಬೀಜಾಡಿ, ಹೊದ್ರಾಳಿ, ಕುಂಬ್ರಿ, ಬಡಾಕೆರೆ, ಮೂಡುಹಂಗಳೂರು, ಹಂಗಳೂರು, ಕೋಣಿ, ಕಟ್ಕೇರಿಗಳೆಂಬ 14 ಗ್ರಾಮಗಳನ್ನು ಒಟ್ಟಾಗಿ ಕೋಟೇಶ್ವರ ಮಾಗಣಿ ಎಂದು ಕರೆಯಲಾಗುತ್ತಿತ್ತು ಎನ್ನುವ ಉಲ್ಲೇಖವಿದೆ.

ಕೋಟೇಶ್ವರದ ಕೊಡಿಹಬ್ಬಕ್ಕೆ ಶತಶತಮಾನಗಳ ಇತಿಹಾಸವಿದೆ. ಕ್ರಿ.ಶ.1451 ರಲ್ಲಿ ಕೋಟೇಶ್ವರ ದೇವಾಲಯದ ಕೊಡಿಹಬ್ಬದಲ್ಲಿ ಜಗಳ ಉಂಟಾಗಿ ಜನರು ತಮ್ಮ ತಮ್ಮೊಳಗೆ ಹೊಡೆದಾಡಿಕೊಂಡು ಅನೇಕ ಗೋವುಗಳು, ಶೂದ್ರರ ಮತ್ತು ಬ್ರಾಹ್ಮಣರ ಹೆಣಗಳು ಬಿದ್ದಿದ್ದರಿಂದ ಆರು ತಿಂಗಳುಗಳ ಕಾಲ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ನಿಂತು ಹೋಗಿದ್ದವು ಆಗ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾದ ಸದಾಶಿವರಾಯನ ಆಜ್ಞೆಯಂತೆ ರಾಜ್ಯಪಾಲನಾಗಿದ್ದ ಏಕದಳ ಖಾನ್ ವಿವಾದವನ್ನು ಸುಖಾಂತ್ಯವಾಗಿ ಪರಿಹರಿಸಿ,ಪ್ರಾಯಶ್ಚಿತ್ತ ನಡೆಸುವುದಕ್ಕಾಗಿ 35 ವರಹಗಳನ್ನು ಕೊಟ್ಟು,ಪುನಃ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಮುಂದುವರಿಯುವಂತೆ ಮಾಡಿದ ಎಂದು ಕೋಟೇಶ್ವರದಲ್ಲಿ ದೊರೆತ ಶಾಸನಗಳಲ್ಲಿ ಉಲ್ಲೇಖವಿದೆ.
ಸುಮಾರು 1400 ವರ್ಷಗಳ ಇತಿಹಾಸ ಹೊಂದಿರುವ ಕೋಟೇಶ್ವರ ರಥೋತ್ಸವ ಕೊಡಿಹಬ್ಬ ಎಂದು ಪ್ರಸಿದ್ಧಿ ಪಡೆದಿದೆ ಕೊಡಿ ಎಂದರೆ ಫಲವಂತಿಕೆಯ ಚಿಗುರು ಎಂದರ್ಥ ಕೊಡಿ ಬಾಳೆಎಲೆ, ಕಬ್ಬಿನ ಕೊಡಿ ಎಂಬಿತ್ಯಾದಿ ಭಾವದಲ್ಲಿ ಅರ್ಥ ಕೊಡುವ ಕೊಡಿ ಎಂಬ ಶಬ್ದವನ್ನು ಮನುಷ್ಯನ ವಂಶಾಭಿವೃದ್ದಿ ಅರಳುವ ಪರಿಯಲ್ಲಿ ಬಳಸುವುದು ಉಂಟು.


ಬಸ್ರೂರಿನ ಇತಿಹಾಸ ಹೇಳುವಂತೆ ವಸು ಚಕ್ರವರ್ತಿಗೆ ಬಹಳ ವರ್ಷಗಳ ತನಕ ಸಂತಾನವಿರಲಿಲ್ಲ ಕೋಟಿಲಿಂಗೇಶ್ವರನಿಗೆ ಹರಕೆ ಹೇಳಿಕೊಂಡ ಪ್ರಕಾರ ಮಕ್ಕಳಾದ ಮೇಲೆ ವಸು ಚಕ್ರವರ್ತಿ ಕೋಟಿಲಿಂಗೇಶ್ವರ ದೇಗುಲವನ್ನು ಜೀರ್ಣೋದ್ಧಾರಗೊಳಿಸಿ ರಥೋತ್ಸವ ನಡೆಸಲು ಬ್ರಹ್ಮರಥವನ್ನು ನಿರ್ಮಾಣ ಮಾಡುವ ಕೈಂಕರ್ಯ ಕೈಗೊಳ್ಳುತ್ತಾನೆ ಆದರೆ ನಿಗದಿತ ಮೂಹೂರ್ತಕ್ಕೆ ಸರಿಯಾಗಿ ಬ್ರಹ್ಮರಥ ತಯಾರಾಗುವುದಿಲ್ಲ ಈ ವೇಳೆ ರಾಜ ಪುರೋಹಿತರ ಸೂಚನೆಯಂತೆ ಬಿದಿರು ಮತ್ತು ಕಬ್ಬಿನ ಜಲ್ಲೆ ಬಳಸಿ ಬ್ರಹ್ಮರಥ ನಿರ್ಮಾಣ ಮಾಡುತ್ತಾರೆ ಆ ಕಾರಣಕ್ಕಾಗಿಯೂ ಕೋಟೇಶ್ವರ ರಥೋತ್ಸವಕ್ಕೆ ಕೊಡಿಹಬ್ಬ ಎಂದು ಹೆಸರು ಬಂತು ಎಂಬ ಉಲ್ಲೇಖವಿದೆ.
ವಂಶಾಭಿವೃದ್ದಿಯ ಹೊಸ ಕುಡಿ ಚಿಗುರುವ ಸಂಕೇತವಾಗಿ ಹೊಸದಾಗಿ ಮದುವೆಯಾದ ದಂಪತಿಗಳು ಕಬ್ಬಿನ ಜಲ್ಲೆಗಳನ್ನು ರಥೋತ್ಸವದ ದಿನ ತೆಗೆದುಕೊಂಡು ಹೋಗುವ ಪದ್ಧತಿ ನಡೆದುಕೊಂಡು ಬಂದಿದೆ.
ಶೈವರ ಇಷ್ಟದೇವರಾದ ಶ್ರೀ ಕೋಟಿಲಿಂಗೇಶ್ವರ ಶ್ರೀ ಮದ್ ವಾದಿರಾಜ ತೀರ್ಥಗುರುಸಾರ್ವಭೌಮರ ಅನುಯಾಯಿಗಳಾದ ವೈಷ್ಣವರಿಗೂ ಆರಾಧ್ಯ ದೇವರು ಶ್ರೀ ಪಾರ್ವತಿದೇವಿ ಸಪ್ತಮಾತೃಕೆಯರು, ಜ್ಯೇಷ್ಠಾ ಲಕ್ಷ್ಮಿ, ಮಹಿಷ ಮರ್ಧಿನಿ, ಆದಿಗಣಪತಿ, ಮೂಲೆ ಗಣಪತಿಯರ ಸಾನ್ನಿಧ್ಯದಿಂದ ಶಾಕ್ತ ಗಾಣಪತ್ಯರಿಗೂ ಶೃದ್ದಾಭಕ್ತಿಯ ಕೇಂದ್ರವಾಗಿದೆ.


ಅಪೂರ್ವ ಶಿಲ್ಪಕಲಾ ವೈಭವದ ಗರ್ಭಗುಡಿ, ತೀರ್ಥಮಂಟಪ, ಶಿಲಾಮೂರ್ತಿಗಳು, ಕಾಷ್ಠಶಿಲ್ಪದ ಕಲಾಸಾರ್ವಭೌಮತೆಯನ್ನು ಸಾರುವ ಬ್ರಹ್ಮರಥ, ಐತಿಹಾಸಿಕ ಪರಂಪರೆಯ ದ್ಯೋತಕವಾಗಿರುವ ಪುಣ್ಯಪ್ರದ ಕೋಟಿತೀರ್ಥ, ಶೈವಾಗಮನ ಪದ್ಧತಿಯ ಪೂಜೆ ಪುರಸ್ಕಾರಗಳು, ನಿತ್ಯ ವಿಧಿಗಳು ಕೋಟಿಲಿಂಗೇಶ್ವರ ದೇಗುಲದ ಭವ್ಯ ಧಾರ್ಮಿಕ ಪರಂಪರೆಗಳ ವೈಶಿಷ್ಟ್ಯತೆಗಳಾಗಿ ರೂಪುಗೊಂಡಿದೆ.
ಕೋಟೇಶ್ವರ ಕೊಡಿಹಬ್ಬಕ್ಕೆ ಮೂಹೂರ್ತವಾಗಿ ಧ್ವಜಾರೋಹಣ ಅಥವಾ ಗರ್ನಾ ಕಟ್ಟುವ ಕಾರ್ಯಕ್ರಮ ನಡೆಯುತ್ತದೆ ಇದು ರಥೋತ್ಸವದ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡುತ್ತದೆ ಈ ದಿನದಿಂದ ಕೋಟೇಶ್ವರದ ನಿರ್ದಿಷ್ಟ ಪ್ರದೇಶಗಳಲ್ಲಿ ಶ್ರೀ ದೇವರಿಗೆ ವಿಶೇಷವಾಗಿ ಕಟ್ಟೆಪೂಜೆ ನಡೆಯುತ್ತದೆ ಪಾರಂಪರಿಕ ಕಟ್ಟುಕಟ್ಟಲೆಯ ಕಟ್ಟೆಗಳು ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತೆರವುಗೊಂಡಿರುವುದರಿಂದ ಪರಿಸರದ ಜನರು ತಾತ್ಕಾಲಿಕವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ವೈಭವದಿಂದ ಪೂಜೆ ನೇರವೇರಿಸುತ್ತಾರೆ.


ಕೋಟೇಶ್ವರ ಕೊಡಿಹಬ್ಬ ಸಂಪನ್ನಗೊಳ್ಳುವ ದಿನ ರಾಜ್ಯ, ಪರರಾಜ್ಯ, ದೇಶ ವಿದೇಶಗಳಲ್ಲಿ ನೆಲೆಸಿರುವ ಕೋಟೇಶ್ವರದ ಜನರು ತಪ್ಪದೇ ಊರಿಗೆ ಧಾವಿಸಿ ಕೊಡಿಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ ಬ್ರಹ್ಮ ರಥಾರೂಢ ಶ್ರೀ ಕೋಟಿಲಿಂಗೇಶ್ವರ ದೇವರನ್ನು ನೋಡಿ ಜನರು ಪುನೀತರಾಗುತ್ತಾರೆ. ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನಾ ಪರಿಕರಗಳು, ನೂರಾರು ಅಂಗಡಿಗಳು, ವಿದ್ಯುತ್ ಅಲಂಕಾರದ ಸೊಬಗಿನ ಚಿತ್ತಾರ ಕೊಡಿಹಬ್ಬದ ಸಂಭ್ರಮಕ್ಕೆ ಮೆರಗು ನೀಡುತ್ತದೆ.
ಕೋಟೇಶ್ವರದ ರಥೋತ್ಸವಕ್ಕೂ, ಉಪ್ಪುಂದ ರಥೋತ್ಸವಕ್ಕೂ ಪರಸ್ಪರ ಸಾಮತ್ಯೆ ಇದೆ ಉಪ್ಪುಂದ ರಥೋತ್ಸವವನ್ನು ಕೂಡಾ ಕೊಡಿಹಬ್ಬ ಎಂದು ಕರೆಯುವುದು ವಾಡಿಕೆ ಸಾಮಾನ್ಯವಾಗಿ ಕೋಟೇಶ್ವರ ಕೊಡಿಹಬ್ಬದ ಮರುದಿನ ಉಪ್ಪುಂದ ಕೊಡಿಹಬ್ಬ ಬರುವುದು ವಾಡಿಕೆ ಆದರೆ ಕಳೆದ ವರ್ಷ ಉಪ್ಪುಂದ ಕೊಡಿಹಬ್ಬ ಒಂದು ತಿಂಗಳು ಮುಂಚೆ ಬಂದಿತ್ತು ಮುವತ್ತಾರು ವರ್ಷಗಳ ಹಿಂದೆ ಇದೇ ತರ ಉಪ್ಪುಂದ ಕೊಡಿಹಬ್ಬ ಕೋಟೇಶ್ವರ ಕೊಡಿಹಬ್ಬಕ್ಕಿಂತ ಮೊದಲೇ ಬಂದಿತ್ತು.


ಕೊಡಿಹಬ್ಬದ ದಿನದಂದು ಮುಖ್ಯವಾಗಿ ಕುಂದಾಪುರ ಮತ್ತು ಭಟ್ಕಳ ಗ್ರಾಮೀಣ ಪ್ರದೇಶದ ಜನರು ತುಳಸಿ ಹಬ್ಬ ಮತ್ತು ಗೋಪೂಜೆ ಮಾಡುವ ಸಂಪ್ರದಾಯವಿದೆ ಕುಂದಾಪುರ ತಾಲೂಕು ಭಟ್ಕಳಕ್ಕೆ ನಿಕಟವಾಗಿರುವುದರಿಂದ ಭಟ್ಕಳ ತಾಲೂಕಿನಲ್ಲಿ ಕೊಡಿ ಹುಣ್ಣಿಮೆ ದಿನ ತುಳಸಿ ಪೂಜೆ ನೇರವೇರಿಸುತ್ತಾರೆ ಕುಂದಾಪುರ ತಾಲೂಕಿನ ಕೆಲವು ಸಂಪ್ರದಾಯ, ಆಚರಣೆಗಳು ಭಟ್ಕಳ ತಾಲೂಕಿನಲ್ಲಿ ಕೂಡಾ ಪ್ರಭಾವಿಸಿದೆ.
ಕೊಡಿಹಬ್ಬದ ದಿನದಂದು ರಾತ್ರಿ ವೇಳೆ ರೈತರು ವ್ಯವಸಾಯಕ್ಕೆ ಉಪಯೋಗಿಸುವ ನೇಗಿಲು, ನೊಗ ಇತ್ಯಾದಿ ಕೃಷಿ ಪರಿಕರಗಳನ್ನು ಅಂಗಳದಲ್ಲಿರುವ ಮೇಟಿ ಕಂಬದ ಸಮೀಪ ಇಟ್ಟು ಭಕ್ತಿಯಿಂದ ಪೂಜಿಸುವ ಸಂಪ್ರದಾಯವಿದೆ. 14 ಗ್ರಾಮಗಳ ಒಡೆಯನಾಗಿರುವ ಶ್ರೀ ಕೋಟಿಲಿಂಗೇಶ್ವರ ದೇವರ ರಥೋತ್ಸವಕ್ಕೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ ಪುಣ್ಯಪ್ರದವಾದ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಪರಶುರಾಮ ಕ್ಷೇತ್ರದಲ್ಲಿ ಒಂದಾದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಶ್ರೀ ದೇವರ ದರ್ಶನ ಮಾಡಿದರೆ ಜನ್ಮಾಂತರದ ಪಾಪಗಳು ಕಳೆಯುತ್ತದೆ ಎಂಬ ಪರಮ ನಂಬಿಕೆ ಇದೆ.
ಉಮಾಕಾಂತ ಖಾರ್ವಿ ಕುಂದಾಪುರ






















