ಕುಂದಾಪುರದಿಂದ ಉತ್ತರಾಭಿಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಕಂಬದಕೋಣೆಯಲ್ಲಿ ಪೂರ್ವಕ್ಕೆ 5 ಕಿ.ಮೀ ಕ್ರಮಿಸಿದರೆ ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ಪುಣ್ಯ ಕ್ಷೇತ್ರದ ದಿವ್ಯ ದರ್ಶನವಾಗುತ್ತದೆ. ಶ್ರೀ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದೆ. ದೇಗುಲದ ಹಿಂಬದಿಯಲ್ಲಿ ಪುರಾಣ ಪ್ರಸಿದ್ಧ ಕೌಶಿಕಿ ನದಿ ಹರಿಯುತ್ತದೆ. ಈ ನದಿ ಪ್ರಾಚೀನ ಕಾಲದಲ್ಲಿ ಭಾರೀ ಆಳವಾಗಿತ್ತು ಎನ್ನಲಾಗಿದ್ದು ಶ್ರೀ ಅಮ್ಮನವರು ಇಲ್ಲಿ ಕೊಪ್ಪರಿಗೆ ಮೆಟ್ಟಿದ್ದಾರೆ ಎಂಬ ಐತಿಹ್ಯ ವಿದೆ. ಪೂರ್ವ ದಲ್ಲಿ ಉದ್ಬವಿಸಿ ಈ ನದಿ ಪಶ್ಚಿಮಾಭಿಮುಖವಾಗಿ ಸಮುದ್ರ ವನ್ನು ಸೇರುತ್ತದೆ.
ಸ್ಥಳ ಪುರಾಣಗಳ ಪ್ರಕಾರ ಐನರೆನ್ನುವ ಮನೆತನದವರು ಇಲ್ಲಿ ವಾಸಿಸುತ್ತಿದ್ದರಂತೆ.ಕುಶಶ್ರವ ಎಂಬ ಮುನಿಯ ಕನಸಿನಲ್ಲಿ ಶ್ರೀ ಅಮ್ಮನವರು ಕಾಣಿಸಿಕೊಂಡು ಐನರೆಂಬುವವರಿಗೆ ಸೇರಿದ ಸ್ಥಳದಲ್ಲಿ ಕೌಶಿಕಿ ನದಿಯ ತಟದಲ್ಲಿ ಬೆಳೆದು ನಿಂತಿರುವ ನೆಲ್ಲಿಕಾಯಿ ಮರದಡಿಯಲ್ಲಿ ಬೆಳೆದ ಹುತ್ತದಲ್ಲಿ ನಾನಿದ್ದೇನೆ. ನನ್ನನ್ನು ಅಲ್ಲಿಯೇ ಪ್ರತಿಷ್ಠಾಪಿಸು.ನನ್ನ ಸಹವರ್ತಿ ಯಾದ ಉಗ್ರರೂಪಿಣಿ ಮಾರಿಕಾಂಬೆಗೆ ನನ್ನೆದುರಲ್ಲೇ ಸ್ಥಾನ ನೀಡು ಎಂಬುದಾಗಿ ಹೇಳಿ ಅದೃಶ್ಯಳಾದಳು.ಅದರಂತೆ ಕುಶಶ್ರವ ಮುನಿಗಳು ಐನರ ಮುಂದಾಳತ್ವದಲ್ಲಿ ನೋಡಿದಾಗ ಬೆಳೆದು ನಿಂತ ಗಿಡ ಮರ ಪೊದೆಗಳ ನಡುವೆ ಹುತ್ತವೊಂದು ಬೆಳೆದು ನಿಂತಿದ್ದು ಗೋಚರವಾಯಿತು.ಶ್ರೀ ಅಮ್ಮನವರ ಅಣತಿಯಂತೆ ಶ್ರೀ ಮಹಾಲಸಾ ಮಾರಿಕಾಂಬೆಯನ್ನು ಸಕಲ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಪ್ರತಿಷ್ಠಾಪಿಸಲಾಯಿತು.ಕಾಲಕ್ರಮೇಣ ಐನರ ಕುಟುಂಬ ದೇಗುಲದ ಪೂಜಾ ಕೈಂಕರ್ಯಗಳನ್ನು ಯೋಗ್ಯ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸಿ ಬೇರೆ ಕಡೆ ವಲಸೆ ಹೋದರು.ಕೇವಲ ಹುಲ್ಲು ಚಾವಣಿಯಲ್ಲಿ ಪೂಜಿಸುತ್ತಿದ್ದ ದೇವಿಯ ಗುಡಿ ಇಂದು ಭವ್ಯ ದೇಗುಲವಾಗಿ ಕಂಗೊಳಿಸುತ್ತಿದೆ.
ದೇಗುಲದ ಅರ್ಚಕರಾದ ಶೀ ರಾಮಯ್ಯ, ಮೊಕ್ತೇಸರರು ಮತ್ತು ಊರ ನಾಗರಿಕರ ಭಕ್ತಿ ಭಾವಗಳ ಫಲವಾಗಿ ಶ್ರೀ ಅಮ್ಮನವರ ದೇಗುಲ ಊರಪರವೂರ ಭಕ್ತಾದಿಗಳ ಅನನ್ಯ ನಂಬಿಕೆಯ ತಾಣವಾಗಿದೆ.ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೆಯು ಪ್ರತಿವರ್ಷ ಜನವರಿ 19 ಮತ್ತು 20 ರಂದು ನಡೆಯುತ್ತದೆ. ಈ ಜಾತ್ರೆಗೆ ರಾಜ್ಯಾದ್ಯಂತದಿಂದ ಭಕ್ತಾಧಿಗಳು ಬಂದು ಅಮ್ಮನ ದರುಶನ ಪಡೆದು ಪುನೀತರಾಗುತ್ತಾರೆ. ಭಟ್ಕಳ ಮೂಲದ ಮುಸ್ಲಿಂ ಕುಟುಂಬವೊಂದು ಈ ಕ್ಷೇತ್ರದ ಸದ್ಬಕ್ತರಾಗಿರುವುದು ವಿಶೇಷ. ಕಂಬದಕೋಣೆ ಕೊಲ್ಲೂರು ಮಾರ್ಗ ವಾಗಿ ಸಾಗುವ ಭಕ್ತಾದಿಗಳು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಈ ಊರಿನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೆ ಶ್ರೀ ದೇವಿಯಲ್ಲಿ ಪ್ರಾರ್ಥಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ.
ಈ ಕ್ಷೇತ್ರದಲ್ಲಿ ಆಕರ್ಷಣಿಯ ಬಿಂದುವಾಗಿರುವುದು ಅಪೂರ್ವವಾದ ನೆಲ್ಲಿಕಾಯಿ ಮರ. ಈ ನೆಲ್ಲಿಕಾಯಿ ಮರ ಬಹಳ ಪುರಾತನವಾದುದು. ಈ ಮರವು ಈಗಲೂ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇದನ್ನು ಬಹಳ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಶ್ರೀ ಅಮ್ಮನವರ ಅಪಾರ ಮಹಿಮೆಯ ಪ್ರಭಾವದಿಂದ ನೆಲ್ಲಿಕಾಯಿ ಮರ ಈ ಕ್ಷೇತ್ರದ ಅದ್ಭುತವಾಗಿ ಕಂಗೊಳಿಸುತ್ತಿದೆ. ನಮ್ಮ ಪುರಾಣಗಳಲ್ಲಿ ನೆಲ್ಲಿಕಾಯಿ ಮರಕ್ಕೆ ದೈವಿಕ ಸ್ಥಾನಮಾನವಿರುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ನವಮಿಯ ದಿನದಂದು ಅಕ್ಷಯ ನವಮಿ ಅಥವಾ ಆಮ್ಲ ನವಮಿ ಆಚರಿಸುತ್ತಾರೆ.
ಆಮ್ಲ ಎಂದರೆ ನೆಲ್ಲಿಕಾಯಿ. ಆ ದಿನ ಶಿವ ಮತ್ತು ವಿಷ್ಣು ನೆಲ್ಲಿಕಾಯಿ ಮರದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಇದೇ ದಿನದಂದು ಶ್ರೀ ಲಕ್ಷ್ಮೀ ಯು ಧರೆಗಿಳಿದು ಬಂದು ನೆಲ್ಲಿಕಾಯಿ ಮರವನ್ನು ಶಿವ ಮತ್ತು ವಿಷ್ಣುವಿನ ರೂಪದಲ್ಲಿ ಪೂಜಿಸಿದ್ದರಿಂದ ಅಕ್ಷಯ ನವಮಿ ಪುಣ್ಯ ಪ್ರದವಾಗಿರುತ್ತದೆ. ಈ ದಿನ ನೆಲ್ಲಿಕಾಯಿ ಮರವನ್ನು ಪೂಜಿಸಿದರೆ ಪುಣ್ಯ ಪ್ರಾಪ್ತಿ ಯಾಗುತ್ತದೆ ಎಂಬ ದೃಡನಂಬಿಕೆಯೂ ಇದೆ. ವೇದ, ಉಪನಿಷತ್ತು ಮತ್ತು ಪುರಾಣಗಳ ಪ್ರಕಾರ ಪ್ರಕೃತಿಯಲ್ಲಿ ಮಾನವ ಹೊಂದಿರುವ ಅವಲಂಬನೆ ಭಾಗಷಃ ಧಾರ್ಮಿಕ ಮತ್ತು ಪಾರಮಾರ್ಥಿಕ ಸಂಬಂಧವನ್ನು ಬೆಸೆದುಕೊಂಡಿದೆ.
ನೈಸರ್ಗಿಕ ಪರಿಸರ ದೈವಿಕ ಪೃಕೃತಿಯ ಪ್ರತಿರೂಪವೆಂದೇ ಹಿಂದೂ ಧರ್ಮ ಹೇಳುತ್ತದೆ. ಕಾಲ್ತೋಡು ಶ್ರೀ ಕ್ಷೇತ್ರದ ಪುರಾತನವಾದ ನೆಲ್ಲಿಕಾಯಿ ವೃಕ್ಷ ಕ್ಷೇತ್ರದ ಸಮಗ್ರ ಇತಿಹಾಸದ ಕೇಂದ್ರ ಬಿಂದುವಾಗಿ ಪೂಜನೀಯ ಸ್ಥಾನ ಪಡೆದುಕೊಂಡಿದೆ. ಈ ಊರಿಗೆ ಕಾಲ್ತೋಡು ಎಂಬ ಹೆಸರು ಬರಲು ಮುಖ್ಯ ಕಾರಣವಿದೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದ ಅಲ್ಪಾಯುಷಿಯಾದ ಋಷಿ ಕುಮಾರನ ಪ್ರಾಣಹರಣ ಮಾಡಲು ಕಾಲಯಮ ಬಂದಾಗ ಋಷಿಕುಮಾರನ ತಾಯಿ ಮಗನನ್ನು ಉಳಿಸುವಂತೆ ಶ್ರೀ ಮಾರಿಕಾಂಬೆಯಲ್ಲಿ ಪ್ರಾರ್ಥಿಸುತ್ತಾಳೆ. ತಾಯಿಯ ಪ್ರಾರ್ಥನೆಗೆ ಒಲಿದ ಶ್ರೀ ಮಾರಿಕಾಂಬೆ ಉಗ್ರರೂಪಿಯಾಗಿ ಯುದ್ಧದಲ್ಲಿ ಯಮನನ್ನು ಸೋಲಿಸಿ ಋಷಿಕುಮಾರನಿಗೆ ಜೀವದಾನ ಮಾಡುತ್ತಾಳೆ.
ಹೀಗೆ ಕಾಲಯಮನ ಕರ್ತವ್ಯಕ್ಕೆ ತೊಡಕು ಬಂದ ಕಾರಣ ಈ ಪ್ರದೇಶ ಕಾಲ್ತೋಡು ಎಂದು ನಾಮಾಂಕಿತವಾಯಿತು ಎಂಬ ಐತಿಹ್ಯ ಗಳಿವೆ. ಅಪಾರ ಮಹಿಮೆಯ ಶಕ್ತಿ ಸ್ವರೂಪಿಣಿ ಜಗನ್ಮಾತೆಯ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಭಕ್ತ ಜನರ ಸಹಭಾಗಿತ್ವದಲ್ಲಿ ಭಕ್ತಿ ವೈಭವದಲ್ಲಿ ನಡೆಯಲಿದೆ. ಜಗನ್ಮಾತೆ ಶ್ರೀ ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬೆಯ ಅನುಗ್ರಹಕ್ಕೆ ಪಾತ್ರರಾಗಲು ಕಾತರದಿಂದ ಕಾಯುತ್ತಿದ್ದಾರೆ. ಸರ್ವಮಂಗಳೆಯ ಕೃಪಾಕೃಟಾಕ್ಷ ಎಲ್ಲರಿಗೂ ಪ್ರಾಪ್ತಿ ಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ.
ಉಮಾಕಾಂತ ಖಾರ್ವಿ ಕುಂದಾಪುರ
ಶ್ರೀ ಕಾಲ್ತೋಡು ಮಹಾಲಸಾ ಮಾರಿಕಾಂಬಾ ದೇವಸ್ಥಾನ ಮತ್ತು ಆಕರ್ಷಣೀಯ ಕೇಂದ್ರ ಬಿಂದು ಪುರಾತನ ನೆಲ್ಲಿಕಾಯಿ ವೃಕ್ಷ

Sign Up For Daily Newsletter
Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Leave a Comment Leave a Comment
Stay Connected
- Advertisement -