ನಶಿಸಿ ಹೋದ ಪಿಟ್ಲಿ ಜಾನಪದ ಆಟಿಕೆಯ ಅನನ್ಯ ನೆನಪು….

kundapuradotcom@gmail.com
2 Min Read

ತೊಂಬತ್ತರ ದಶಕದ ತನಕ ಕೃಷ್ಣಾಷ್ಟಮಿ ಪರ್ವಕಾಲದಲ್ಲಿ ಪ್ರಚಲಿತದಲ್ಲಿದ್ದ ಬಿದಿರಿನ ಆಟಿಕೆಯೇ ಪಿಟ್ಲಿ. ಕುಂದಾಪುರ ಭಾಗದಲ್ಲಿ ಪಿಟ್ಲಿ ಎಂದು ಕರೆದರೆ ಉತ್ತರ ಕನ್ನಡ, ಮಲೆನಾಡು ಪ್ರಾಂತ್ಯಗಳಲ್ಲಿ ಇದನ್ನು ಪೆಟ್ಟಲು ಎಂದು ಕರೆಯುತ್ತಾರೆ. ಪಿಟ್ಲಿ ಆಟಿಕೆ ಬಿದಿರಿನಿಂದ ತಯಾರಿಸಲಾಗುತ್ತಿದ್ದು ಒಂದು ಮೊಳ ಅಥವಾ ಸ್ವಲ್ಪ ಕಡಿಮೆ ಅಳತೆಗೆ ಅದನ್ನು ಕತ್ತರಿಸಿ ಗಜ ಎಂದು ಕರೆಯಲ್ಪಡುವ ಬಿದಿರಿನ ಹಿಡಿಗೆಗೆ ಸಪೂರ ಕೋಲನ್ನು ಸಿಕ್ಕಿಸಿಕೊಳ್ಳುತ್ತಾರೆ. ಈ ಸಪೂರ ಕೋಲಿಗೆ ಗಜದ ಹಿಡಿ ಎನ್ನುತ್ತಾರೆ ಒಂದು ಜುಮ್ಮನ ಕಾಯಿಯನ್ನು ಬಿದಿರಿನ ನಳಿಗೆಯಲ್ಲಿ ಹಾಕಿ ನಂತರ ಮತ್ತೊಂದು ಜುಮ್ಮನ ಕಾಯಿಯನ್ನು ಹಾಕಿ ಗಜವನ್ನು ತಳ್ಳಿದಾಗ ಪಟ್ ಎಂದು ತೀಕ್ಷ್ಣ ಶಬ್ದ ಉಂಟಾಗುತ್ತದೆ.

ಎರಡೂ ಕಡೆ ತೂತೂ ಇರುವ ಬಿದಿರಿನ ನಳಿಗೆಯಲ್ಲಿ ಜುಮ್ಮನ ಕಾಯಿಯನ್ನು ಅತಿ ರಭಸದಿಂದ ಗಜದ ಮೂಲಕ ತಳ್ಳಿದಾಗ ಫಿರಂಗಿ ಗುಂಡಿನಂತೆ ಜುಮ್ಮನ ಕಾಯಿ ಹೊರಗೆ ಚಿಮ್ಮತ್ತದೆ. ಈ ಪಿಟ್ಲಿಯಲ್ಲಿ ಹೆಚ್ಚಾಗಿ ಜುಮ್ಮನ ಕಾಯಿಯನ್ನು ಬಳಸುತ್ತಾರೆ ಜುಮ್ಮನ ಕಾಯಿ ಹೆಚ್ಚು ತೀಕ್ಷ್ಣವಾಗಿರುತ್ತದೆ ಜುಮ್ಮನ ಕಾಯಿ ಲಭ್ಯವಿಲ್ಲದಿದ್ದರೆ ಮಾತ್ರ ಅರಳು ಮರಳು ಕಾಯಿ ಅಥವಾ ಮಜ್ಜಿಗೆ ಕಾಯಿಯನ್ನು ಬಳಸುತ್ತಾರೆ.

ಕಾಲಕ್ರಮೇಣ ಪಿಟ್ಲಿಯಲ್ಲಿ ಹಲವು ಬದಲಾವಣೆಗಳು ಕಂಡುಬಂದವು ಪಿಟ್ಲಿ ಸೌಂಡ್ ಜಾಸ್ತಿ ಬರಲು ಪಿಟ್ಲಿಗೆ ವಿವಿಧ ಗಾತ್ರದ ತಗಡಿನ ಕೊಳವೆಗಳನ್ನು ಆಳವಡಿಸಲಾಯಿತು ಆ ಕಾಲಕ್ಕೆ ಪಿಟ್ಲಿ ತಯಾರಕರಿಗೆ ಮತ್ತು ಜುಮ್ಮನ ಕಾಯಿ ಮಾರಾಟ ಮಾಡುವವರಿಗೆ ಒಳ್ಳೆಯ ವ್ಯಾಪಾರವಾಗುತ್ತಿತ್ತು ಜುಮ್ಮನ ಕಾಯಿ ಸಿಗದೇ ಇದ್ದ ಸಮಯದಲ್ಲಿ ಅರಳುಮರಳು ಕಾಯಿ, ಮಜ್ಜಿಗೆಹಣ್ಣು, ಎತ್ತುಬೀಳಿನ ಕಾಯಿ ಅಥವಾ ಕೆಸುವಿನ ಸೊಪ್ಪು ಹಾಕಿ ಪಿಟ್ಲಿ ಹೊಡೆಯುತ್ತಿದ್ದರು. ಬಿದಿರಿನ ಪಿಟ್ಲಿಗೆ ತಗಡಿನ ಕೊಳವೆ ಆಳವಡಿಸಿಕೊಡುವ ತಂತ್ರವನ್ನು ಮೊತ್ತಮೊದಲಿಗೆ ಕುಂದಾಪುರದ ಬೆಸ್ಕಿ ನಾರಾಯಣ ಖಾರ್ವಿಯವರು ಕಂಡುಹಿಡಿದರು. ವಿವಿಧ ಪರಿಕರಗಳಿಗೆ ಲೋಹದ ಬೆಸ್ಕಿ ಹಾಕುವ ಕೆಲಸದಲ್ಲಿ ನಿಪುಣರಾದ ಅವರ ಹೆಸರಿನೊಂದಿಗೆ ಬೆಸ್ಕಿ ಎಂಬ ಶಬ್ದ ಖಾಯಂ ಆಗಿ ನಾಮಾಂಕಿತವಾಯಿತು. ಕುಂದಾಪುರ ತಾಲೂಕಿನ ವಿವಿಧ ಕಡೆ ಕೃಷ್ಣಾಷ್ಟಮಿಯ ಮರುದಿನ ಪಿಟ್ಲಿ ಹೊಡೆಯುವ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದರು ಆ ಸಂಭ್ರಮದ ದಿನಗಳು ಈಗ ಕೇವಲ ನೆನಪು ಮಾತ್ರ ಪಿಟ್ಲಿಗೆ ಪೌರಾಣಿಕ ಇತಿಹಾಸವಿದ್ದು, ಮಹಾಭಾರತ ಕಾಲದಲ್ಲಿ ಪಿಟ್ಲಿ ಹೊಡೆಯುವುದು ಪ್ರಚಲಿತದಲ್ಲಿತ್ತು.

ಬಾಲ್ಯಲೀಲೆಗಳಿಗೆ ಹೆಸರಾದ ಶ್ರೀ ಕೃಷ್ಣ ತನ್ನ ಸ್ನೇಹಿತರಾದ ಸುಧಾಮ, ವಿಜಯರೊಡಗೂಡಿ ಪಿಟ್ಲಿ ಆಡುತ್ತಿದ್ದರು. ಕೃಷ್ಣಾಷ್ಟಮಿ ದಿನ ಶ್ರೀ ಕೃಷ್ಣನ ಬಾಲ್ಯಲೀಲೆಗಳ ಸ್ಮರಣೆಗಾಗಿ ಪಿಟ್ಲಿ ಆಡುವ ಹಬ್ಬ ಆಚರಣೆಗೆ ಬಂತು. ಪಿಟ್ಲಿಯಿಂದ ಹೊರಡುವ ಶಬ್ದವು ಶುಭ ಸೂಚಕ, ಮಂಗಳಕಾರಕ ಎಂಬ ನಂಬಿಕೆಯೂ ಇದೆ ಕಾಲ ಬದಲಾಗಿದೆ ಆಧುನಿಕ ಜಗತ್ತಿನ ನಾಗಲೋಟದಲ್ಲಿ ನಮ್ಮ ಹಬ್ಬ ಹರಿದಿನಗಳು ಸಂಕೀರ್ಣವಾಗಿದೆ ಸಂಸ್ಕೃತಿ ಆಚರಣೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ ಹಾಗೆ ಕಣ್ಮರೆಯಾಗಿರುವ ಆಚರಣೆಯಲ್ಲಿ ಪಿಟ್ಲಿ ಕೂಡಾ ಒಂದು ಕಾಡು ನಾಶವಾಗುತ್ತಿರುವುದರಿಂದ ಬಿದಿರು ಮತ್ತು ಜುಮ್ಮನ ಕಾಯಿಯ ಅಭಾವ ಒಂದು ಕಡೆಯಾದರೆ, ಆಧುನಿಕ ಜಗತ್ತಿನ ವಿವಿಧ ಸೌಕರ್ಯಗಳು ಮಕ್ಕಳನ್ನು ನಮ್ಮ ಸಂಸ್ಕೃತಿ ಆಚರಣೆಗಳಿಂದ ವಿಮುಖರನ್ನಾಗಿ ಮಾಡಿದೆ. ಈಗಿನ ಮಕ್ಕಳಿಗೆ ಪಿಟ್ಲಿ ಎಂದರೆ ಏನೆಂದು ಗೊತ್ತಿಲ್ಲ ಸಂಪೂರ್ಣವಾಗಿ ಪಿಟ್ಲಿ ಕಣ್ಮರೆಯಾಗಿರುವುದರಿಂದ ವಸ್ತು ಸಂಗ್ರಹಾಲಯದಲ್ಲಿ ಪಿಟ್ಲಿಯನ್ನು ಮಕ್ಕಳಿಗೆ ತೋರಿಸುವ ಕಾಲ ಬಂದಿದೆ.

ಬನ್ನಿ, ಈ ಅಷ್ಟಮಿ ಎಲ್ಲಾ ಹಮ್ಮು ಬಿಮ್ಮು ಬಿಟ್ಟು ಪೇಟ್ಲಾ ಹೊಡೆದು ಮತ್ತೆ ಮಗುವಾಗೋಣ..

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment