ಸಮುದ್ರಗರ್ಭದಲ್ಲಿ ನೀಲಿಕಲ್ಲುಗಳ ಬೇಟೆ ಜಲಸ್ಥಂಭನ ವಿದ್ಯೆಯ ಸಾಹಸಗಾಥೆ

kundapuradotcom@gmail.com
3 Min Read

ಜೀವಜಗತ್ತಿನ ಮೂಲಸೆಲೆಯಾದ ಸಾಗರ ಸಮುದ್ರಗಳಲ್ಲಿ ಅಗಣಿತವಾದ ಜಲಚರಗಳಿವೆ ಇವುಗಳಲ್ಲಿ ಕಪ್ಪೆಚಿಪ್ಪಿನ ಪ್ರಭೇಧವಾದ ನೀಲಿಕಲ್ಲುಗಳು ಪ್ರಮುಖವಾಗಿದೆ ಸಮುದ್ರದ ಬಂಡೆಗಳಿಗೆ ಅಂಟಿಕೊಂಡು ಬೆಳೆಯುವ ಈ ನೀಲಿಕಲ್ಲುಗಳನ್ನು ಕೊಂಕಣಿಯಲ್ಲಿ ಜೋಬು ಎಂದು ಕರೆದರೆ ತುಳುವಿನಲ್ಲಿ ಪಚ್ಚಲೆ ಎನ್ನುತ್ತಾರೆ ಉತ್ತರ ಕನ್ನಡದ ಗ್ರಾಮ್ಯ ಕನ್ನಡದಲ್ಲಿ ಕೊಜುಳಿ, ಕಲಗ ಎಂದೂ ಕರೆಯುವುದುಂಟು.

ಈ ಜೋಬುಗಳನ್ನು ಸಮುದ್ರದಾಳದ ಬಂಡೆಗಲ್ಲುಗಳಿಂದ ಕಿತ್ತು ಸಂಗ್ರಹಿಸುವ ಸಾಂಪ್ರದಾಯಿಕ ಮೀನುಗಾರಿಕೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಮತ್ತು ಬೈಂದೂರಿನ ಶಿರೂರು ಭಾಗದಲ್ಲಿ ಇದೆ. ಇದು ಅಪಾಯಕಾರಿ ಮತ್ತು ಸಾಹಸಮಯ ಮೀನುಗಾರಿಕೆಯಾಗಿದೆ ಜೋಬು ಬಂಡೆಕಲ್ಲುಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಬೆಳೆಯುವುದರಿಂದ ಕೈಯಲ್ಲಿ ಕೀಳಲು ಆಗುವುದಿಲ್ಲ ಅದಕ್ಕೆ ಬಲಿಷ್ಠವಾದ ಮಚ್ಚು ತರದ ಆಯುಧವೇ ಬೇಕು ಸಾಮಾನ್ಯವಾಗಿ ಲಾರಿಯ ಬ್ಲೇಡ್ ನಿಂದ ಈ ಆಯುಧ ತಯಾರಿಸುತ್ತಾರೆ.

ಮೀನುಗಾರರು ಸಮುದ್ರದಾಳಕ್ಕೆ ಮುಳುಗುವ ಮುನ್ನ ಈ ಆಯುಧವನ್ನು ಹದಿನೈದರಿಂದ ಮುವತ್ತು ಅಡಿ ಆಳಕ್ಕೆ ಇಳಿಸಿ ನೀಲಿಕಲ್ಲುಗಳು ಅಂಟಿಕೊಂಡಿರುವ ಕಲ್ಲುಗಳನ್ನು ಹುಡುಕಿದ ಬಳಿಕ ಸಮುದ್ರದಾಳಕ್ಕೆ ಇಳಿಯುತ್ತಾರೆ ನೀರಿನಲ್ಲಿ ಒಂದೆರಡು ನಿಮಿಷ ಉಸಿರು ಕಟ್ಟಿಕೊಂಡು ಜೋಬನ್ನು ಆಯುಧದ ಸಹಾಯದಿಂದ ಕಿತ್ತು ಸಂಗ್ರಹಿಸುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿ ಮೂರು ನಾಲ್ಕು ಗಂಟೆಗಳ ಕಾಲ ನಡೆದು ಅಂದಾಜು ಸುಮಾರು ಮೂರರಿಂದ ನಾಲ್ಕು ಸಾವಿರ ಜೋಬುಗಳನ್ನು ಸಂಗ್ರಹಿಸುತ್ತಾರೆ.

ಉಸಿರು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಜೋಬುಗಳನ್ನು ಕೀಳುವ ಈ ಮೀನುಗಾರಿಕೆ ಅತ್ಯಂತ ಅಪಾಯಕಾರಿಯಾಗಿದ್ದು, ಬಂಡೆಗಲ್ಲುಗಳಿಗೆ ಅಂಟಿಕೊಂಡು ಬೆಳೆಯುವ ಈ ಜೋಬುಗಳನ್ನು ತೆಗೆಯುವ ಸಂದರ್ಭದಲ್ಲಿ ಬಾಯ್ದೆರೆದು ಕೊಂಡ ಜೋಬುಗಳ ಬಾಯಿಗೆ ಮೀನುಗಾರರ ಕೂದಲು ಸಿಕ್ಕಿಹಾಕಿಕೊಂಡರೇ ಪ್ರಾಣಾಪಾಯ ಖಂಡಿತಾ ಎಷ್ಟೋ ಮೀನುಗಾರರು ಇದರಲ್ಲಿ ತಮ್ಮ ಜೀವ ಕಳೆದುಕೊಂಡ ಘಟನೆಯೂ ನಡೆದಿದೆ.

ಜೋಬು ತೆಗೆಯುವ ಈ ಅಪಾಯಕಾರಿ ವೃತ್ತಿ ಮಾಡುವ ಮೀನುಗಾರರಿಗೆ ಅನಾರೋಗ್ಯ ನಿರಂತರವಾಗಿ ಕಾಡುತ್ತಲೇ ಇರುತ್ತದೆ. ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುವುದು, ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಕೆಲವು ವರ್ಷಗಳ ಹಿಂದೆ ಈ ನೀಲಿಕಲ್ಲುಗಳನ್ನು ಕೃತಕವಾಗಿ ಬೆಳೆಸುವ ಯೋಜನೆ ಆರಂಭವಾಯಿತು. ಕುಂದಾಪುರ, ಉಡುಪಿ, ಮಂಗಳೂರು, ಕಾರವಾರ, ಅಂಕೋಲಾ ಮುಂತಾದ ಕಡೆ ನೀಲಿಕಲ್ಲುಗಳನ್ನು ಕೃತಕವಾಗಿ ಬೆಳೆಸುವ ವಿಧಾನ ಯಶಸ್ವಿಯಾಗಿ ನಡೆಯುತ್ತಿದೆ. ಮೀನುಗಾರಿಕೆ ಇಲಾಖೆ ಕೂಡಾ ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿದೆ.

ನೀಲಿಕಲ್ಲುಗಳಗಳಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಅಂಶಗಳು ಅಡಕವಾಗಿದ್ದು,ಇದನ್ನು ಸೇವಿಸಿದರೆ ಬೆನ್ನು ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಐದು ವರ್ಷಗಳ ಹಿಂದೆ ಸಮುದ್ರದಲ್ಲಿ ನೀಲಿಕಲ್ಲುಗಳ ಸಂತತಿ ಗಣನೀಯವಾಗಿ ಕ್ಷೀಣಿಸಿತ್ತು. 2022 ರಲ್ಲಿ ಕರಾವಳಿಯಲ್ಲಿ ಮುಖ್ಯವಾಗಿ ಕುಂದಾಪುರ, ಬೈಂದೂರು, ಭಟ್ಕಳದಲ್ಲಿ ಸಂಭವಿಸಿದ ಮೇಘಸ್ಪೋಟದ ಜಲಪ್ರಳಯದಿಂದ ನದಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳು ಅಚ್ಚರಿದಾಯಕ ರೀತಿಯಲ್ಲಿ ಪುನಶ್ಚೇತನಗೊಂಡವು. ನದಿ ಮತ್ತು ಸಮುದ್ರಗಳಲ್ಲಿ ನೀಲಿಕಲ್ಲುಗಳು,ಮಳಿವೆಗಳು ಅಪಾರ ಪ್ರಮಾಣದಲ್ಲಿ ಹುಟ್ಟಿಕೊಂಡವು.

ಪ್ರಕೃತಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಅಗಾಧ ಪ್ರಮಾಣದಲ್ಲಿ ಮತ್ಸ್ಯ ಸಂಪತ್ತನ್ನು ಕೂಡಾ ವಿಸ್ಮಯಕಾರಿ ರೂಪದಲ್ಲಿ ಒದಗಿಸಿಕೊಟ್ಟಿತ್ತು. ಬೇಸಿಗೆಯಲ್ಲಿ ನೀಲಿಕಲ್ಲುಗಳ ಸಂತತಿ ಬಹುಬೇಗನೆ ವೃದ್ಧಿಗೊಳ್ಳುತ್ತದೆ ಉಪ್ಪು ನೀರು ಅದರ ಬೆಳವಣಿಗೆಗೆ ಪೂರಕವಾಗಿರುತ್ತದೆ.ಈಗ ಮಳೆಗಾಲದಲ್ಲಿ ಸಮುದ್ರ ಮತ್ತು ನದಿ ನೀರು ಸಿಹಿ ಅಥವಾ ಚಪ್ಪೆಯಾಗುವುದರಿಂದ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಅದರಲ್ಲೂ ಮಳೆಗಾಲದ ಸಂದರ್ಭದ ಅಮವಾಸ್ಯೆ ದಿನಗಳಲ್ಲಿ ನೀರಿನ ಉಬ್ಬರ ಮತ್ತು ಗಾಳಿ ಮಳೆಯಿಂದ ಬಂಡೆಕಲ್ಲುಗಳ ಅಂಟಿಕೊಂಡ ಮರಿ ನೀಲಿಕಲ್ಲುಗಳು ಸಮುದ್ರ ದಂಡೆಗೆ ಬಂದು ಬೀಳುವುದು ಇರುತ್ತದೆ. ಈ ನೀಲಿಕಲ್ಲುಗಳನ್ನು ತೆಗೆಯುವ ಮೀನುಗಾರರು ಕಠಿಣ ಪರಿಶ್ರಮಿಗಳಾಗಿದ್ದು, ಪ್ರಾತಃಕಾಲದಲ್ಲಿ ತಮ್ಮ ಹೊಟ್ಟೆಪಾಡಿನ ದುಡಿಮೆ ಪ್ರಾರಂಭಿಸುತ್ತಾರೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಭಾಗದಲ್ಲಿ ನೀಲಿಕಲ್ಲುಗಳನ್ನು ತೆಗೆಯುವ ಮೀನುಗಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದು,ಕಳೆದ ಮೂರು ವರ್ಷಗಳ ಹಿಂದೆ ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನ ಶಿಲಾಮಯಗೊಂಡು ನವೀಕೃತಗೊಂಡಾಗ ಈ ಮೀನುಗಾರರು ಶ್ರೀ ಮಹಾಕಾಳಿ ಅಮ್ಮನವರಿಗೆ ನೀಲಿಕಲ್ಲುಗಳ ತದ್ರೂಪದ ಚಿನ್ನದ ಸರವನ್ನು ಸಮರ್ಪಣೆ ಮಾಡಿದ್ದು ಬಹಳಷ್ಟು ಸುದ್ದಿಯಾಗಿತ್ತು.

ಸಮುದ್ರದಾಳದಲ್ಲಿ ಮುಳುಗಿ ನೀಲಿಕಲ್ಲುಗಳನ್ನು ತೆಗೆದು ಜೀವನ ನಡೆಸುವ ಈ ಮೀನುಗಾರರ ಬದುಕು ಸದಾಕಾಲವೂ ಅಪಾಯದಲ್ಲಿರುತ್ತದೆ. ಆದರೂ ಹೊಟ್ಟೆಪಾಡಿಗಾಗಿ ಈ ಸಾಂಪ್ರದಾಯಿಕ ಮೀನುಗಾರರು ಈ ವೃತ್ತಿಯಲ್ಲಿ ತಮ್ಮ ಬದುಕನ್ನು ವೀಧೇಯಿಸಿಕೊಂಡಿದ್ದಾರೆ.

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment