ಖುತುಬೇ ಕುಂದಾಪುರ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ)
ಕರ್ನಾಟಕದ ಕರಾವಳಿ ಪ್ರದೇಶದ ಪ್ರಖ್ಯಾತ ನಗರವಾಗಿದೆ ಕುಂದಾಪುರ. ಸ್ವಹಾಬಿಗಳ ಪಾದಸ್ಪರ್ಶದಿಂದ ಅನುಗ್ರಹಿತವಾದ ಮಣ್ಣು. ಈ ಪ್ರದೇಶಕ್ಕೆ ಆರನೇ ಶತಮಾನ ದಲ್ಲಿಯೆ ಇಸ್ಲಾಂ ಆಗಮನವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ನಿರ್ದೇಶನದಂತೆ ಧರ್ಮ ಪ್ರಚಾರಕ್ಕಾಗಿ ಬಂದ ಮಾಲಿಕುದ್ದೀನಾರ್ ಸಂಘವು ಕೇರಳದ ಮಲೆಬಾರಿನಲ್ಲಿ ಹತ್ತು ಮಸೀದಿಗಳನ್ನು ನಿರ್ಮಿಸಿದ್ದಾರೆ. ಅದರಲ್ಲೊಂದು ಬಾರ್ಕೂರಿನ ಮಾಲಿಕುದ್ದೀನಾರ್ ಮಸೀದಿ. ಈ ಪ್ರದೇಶವು ಪುರಾತನ ಕಾಲದಿಂದಲೇ ವಿಶ್ವದ ಎಲ್ಲಾ ರಾಷ್ಟ್ರದ ವ್ಯಾಪಾರಿಗಳ ಸಂಪರ್ಕ ಕೊಂಡಿಯಾಗಿತ್ತು. ವಿಶ್ವವಿಖ್ಯಾತ ಅರಬೀ ಇತಿಹಾಸಕಾರ ರಾದ ಯಾಕೂ ತುಲ್ ಹಮವಿ ತನ್ನ ಇತಿಹಾಸ ಗ್ರಂಥದಲ್ಲಿ ಈ ಪ್ರದೇಶದ ಕುರಿತು ಉಲ್ಲೇಖಿಸಿದ್ದು ಹೀಗೆ. “ಮಲಬಾರ್ ಎಂಬುವುದು ವಿವಿಧ ನಗರಗಳಿಂದ ಆವೃತವಾದ ದಕ್ಷಿಣ ಭಾರತ ದ ಒಂದು ಪ್ರಾಂತ್ಯವಾಗಿದೆ.

ಕುಂದಾಪುರ ಮತ್ತು ಮಂಗಳೂರು ಆ ನಗರಗಳಲ್ಲಿ ಒಳಗೊಂಡಿವೆ (ಫಾಕ ನ್ನೂರ್, ಮಂಜಲೂರ್). ಇಲ್ಲಿಂದ ವಿಶ್ವದ ಎಲ್ಲಾ ಭಾಗಗಳಿಗೂ ಶುಂಠಿ ಮತ್ತು ಕಾಳು ಮೆಣಸು ರಫ್ತಾಗುತ್ತಿತ್ತು. ಅದೇ ರೀತಿ 11ನೇ ಶತಮಾನದಲ್ಲಿ ವಿಶ್ವ ಪರ್ಯಟನೆ ಮಾಡಿದ್ದ ವಿಶ್ವ ಸಂಚಾರಿ ಇಬ್ನು ಬತೂತ ತಮ್ಮ ರಿಹ್ಲ ಎಂಬ ಪ್ರವಾಸ ಕಥನ ಗ್ರಂಥದಲ್ಲಿ ಕುಂದಾಪುರದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅವರು ಹೇಳುತ್ತಾರೆ, “ನಾನು ಫಾಕನ್ನೂರಿಗೆ (ಬಾರ್ಕೂರ್, ಕುಂದಾಪುರ) ತಲುಪಿದೆ. ಅಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಿದ್ದರು. ಇಲ್ಲಿ ಒಂದು ವಿಭಾಗ ಮುಸ್ಲಿಮರು ವಾಸಿಸುತ್ತಿದ್ದರು. ಅವರಿಗೆ ಮಸೀದಿ ಇತ್ತು. ಅಲ್ಲಿ ಖಾಝಿಗಳು, ಖತೀಬರು ಇದ್ದರು. ಅಲ್ಲಿ ಬಾಸುದೇವ್ ಎಂಬ ರಾಜನು ಆಳುತ್ತಿದ್ದ. ಅವನಿಗೆ 30 ಯುದ್ಧ ನೌಕೆಗಳು ಇದ್ದವು. ಲೂಲಾ ಎಂಬ ಮುಸ್ಲಿಂ ವ್ಯಕ್ತಿ ಅದರ ನಿರ್ವಾಹಕನಾಗಿದ್ದ. ಈ ಪ್ರದೇಶದಲ್ಲಿ ಸಂಚರಿಸ ಬೇಕಾದರೆ ಅವನಿಗೆ ಸುಂಕ ಕೊಡಬೇಕಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ರಾಜನು ನಮ್ಮ ಬಳಿಗೆ ಒಬ್ಬರನ್ನು ಕಳುಹಿಸಿದನು. ನಾವು ಅವರಿಗೆ ಮೂರು ಕಾಣಿಕೆಯನ್ನು ಕೊಟ್ಟೆವು. ಭಾರತದ ಅತಿಥಿ ಎಂಬ ನೆಲೆಯಲ್ಲಿ ಮೂರು ದಿವಸಗಳ ಕಾಲ ನಾವು ಅಲ್ಲಿ ತಂಗಿದೆವು ಎಂದು ಬಹಳ ಸ್ಪಷ್ಟವಾಗಿ ಅವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಅದನ್ನೆಲ್ಲಾ ನೋಡು ವಾಗ ಕುಂದಾಪುರ ಪ್ರದೇಶ ಪುರಾತನ ಕಾಲದಿಂದಲೇ ಮುಸ್ಲಿಮರ ವಾಸವಿರುವ ಪ್ರದೇಶವಾಗಿದೆ ಎಂದು ದಿಟವಾಗುತ್ತದೆ.


ಕುತುಭೇ ಕುಂದಾಪುರ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ( ಖ.ಸಿ) ರವರು. ಸ್ವಹಾಬಿಗಳ ಧರ್ಮ ಬೋಧನೆಯ ನಂತರ ಕುಂದಾಪುರದ ಜನತೆಯ ಆಧ್ಯಾತ್ಮಿಕ ನಾಯಕರಾಗಿದ್ದರು.
ಕುಂದಾಪುರ ನಗರದಿಂದ ತುಸುದೂರ ಕ್ರಮಿಸಿದರೆ ಅವರ ಭವ್ಯವಾದ ದರ್ಗಾ ಶರೀಫ್ ಮನಸ್ಸಿಗೆ ಮುದ ನೀಡುತ್ತದೆ. ಕುಂದಾಪುರದ ಸುತ್ತ ಮುತ್ತಲ ಜನತೆಯ ಆಶಾಕಿರಣವೂ ಸರ್ವ ಧರ್ಮೀಯರ ಸೌಹಾರ್ದ ಕೇಂದ್ರವೂ ಆಗಿರುವ ಈ ದರ್ಗಾ ಶರೀಫ್ ಪೂರ್ವ ಕಾಲದಿದಲೇ ಈ ಪ್ರದೇಶದ ಸುತ್ತ ಮುತ್ತಲಿಗೆ ಆಧ್ಯಾತ್ಮಿಕತೆಯ ಕಂಪನ್ನು ಪಸರಿಸಿದ ಆಧ್ಯಾತ್ಮಿಕ ಕೇಂದ್ರವಾಗಿತ್ತು. ಅವರ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದ್ದ ಆಶಾ ಕೇಂದ್ರವಾಗಿತ್ತು. ಯೂಸುಫ್ ವಲಿಯುಲ್ಲಾಹ್ (ಖ.ಸಿ) ರವರು ಮೂಲತಃ ಲಕ್ಷದ್ವೀಪದವರು. ಅವರ ತಾತ, ಮುತ್ತಾತಂದಿರೆಲ್ಲ ಮಹಾನ್ ಅವುಲಿಯಾ ಗಳ ಪರಂಪರೆಗೆ ಸೇರಿದ ವರು. ಅವರ ತಂದೆ ಲಕ್ಷದ್ವೀಪದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖಾಸಿಮ್ (ರ.ಅ)ರವರು ಲಕ್ಷದ್ವೀಪದ ಜನತೆಯ ಬಹು ದೊಡ್ಡ ಆಧ್ಯಾತ್ಮಿಕ ನಾಯಕರಾಗಿದ್ದರು. ಅಸಂಖ್ಯ ಅದ್ಭುತ ಪವಾಡಗಳು ಅವರಿಂದ ಪ್ರಕಟವಾಗಿ ದ್ದವು. ಹೆರಿಗೆ ನೋವಿನಿಂದ ಬಳಲುತ್ತಿರುವ ಸ್ತ್ರೀಯರಿಗೆ ಅವರ ದರ್ಗಾದ ಹತ್ತಿರವಿರುವ ಬಾವಿಯ ನೀರನ್ನು ಕುಡಿಸಿದರೆ ಅಥವಾ ಅವರ ಮೇಲೆ ಯಾಸೀನ್ ಓದಿದರೆ ಅವರ ಪವಾಡದಿಂದ ಸಹಜ ಹೆರಿಗೆಯಾದ ಅದೆಷ್ಟೋ ಅನುಭವಗಳಿವೆ.
ಒಮ್ಮೆ ಅವರು ವಝೂ (ಅಂಗಸ್ನಾನ) ಮಾಡುತ್ತಿದ್ದಾಗ ಕಾಗೆಯೊಂದು ಅವರ ಮೈ ಮೇಲೆ ಮಲಿನ ಮಾಡಿತು. ಇದು ಕಂಡು ಅಸಮಾಧಾನಗೊಂಡ ಅವರು ಇಲ್ಲಿ ಕಾಗೆಯೇ ಬೇಡ ಎಂದರು. ಅವರು ಹಾಗೆ ಹೇಳಿದ್ದೇ ತಡ, ಅಂದಿನಿಂದ ಇಂದಿನವರೆಗೂ ಅವರು ಅಂತ್ಯ ವಿಶ್ರಮ ಪಡೆಯುತ್ತಿರುವ ಕವರತ್ತಿ ದ್ವೀಪದಲ್ಲಿ ಒಂದೇ ಒಂದು ಕಾಗೆಯಿಲ್ಲ!! ಕಾಗೆ ಸುಳಿದಾಡದ ಅಪರೂಪದ ದ್ವೀಪ ಎಂಬ ಖ್ಯಾತಿ ಈ ದ್ವೀಪಕ್ಕಿದೆ.


ಇವರ ತಾತಂದಿರಾದ ಸಯ್ಯಿದ್ ಮೂಸಾ ರಿಫಾಯಿ (ರ) ರವರು ಕೂಡಾ ಓರ್ವ ಮಹಾನ್ ವಲಿಯ್ಯಾಗಿದ್ದರು. ಅವರು ನಮ್ಮದೇ ಕರ್ನಾಟಕದ ಅಂಕೋಲಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ವಿವಾಹವಾಗಿ ವರ್ಷಗಳು ಸಂದರೂ ಮಕ್ಕಳಿ ರಲಿಲ್ಲ. ಒಮ್ಮೆ ಅವರು ತಮ್ಮ ಪತ್ನಿಯೊಂದಿಗೆ ಪವಿತ್ರ ಹಜ್ಜೆ ನಿರ್ವಹಿಸಲು ಮಕ್ಕಾಗೆ ತೆರಳಿದರು. ಹಜ್ಜೆ ಕರ್ಮ ಮುಗಿಸಿ ಹೊರಗೆ ಬರುತ್ತಿದ್ದಂತೆ ಖಿಳ್ರ್ (ಅ) ರವರು ಎದುರುಗೊಂಡರು. ಅವರ ಸಮಸ್ಯೆಯನ್ನು ಅರಿತ ಖಿಳ್ರ್ (ಅ)ರವರು ಅವರಿಗೆ ಖರ್ಜೂರವನ್ನು ಕೊಟ್ಟರು. ಆ ಖರ್ಜೂರ ತಿಂದ ಕೆಲ ದಿನಗಳ ಬಳಿಕ ಅವರ ಪತ್ನಿ ಗರ್ಭಿಣಿಯಾದರು. ಹಾಗೆ ಹುಟ್ಟಿದ ಮಗುವಾಗಿದ್ದರು ಖಾಸಿಮ್ (ರ).
ಯೂಸುಫ್ ವಲಿಯುಲ್ಲಾಹಿ (ಖ.ಸಿ) ರವರ ಎರಡನೇ ತಾತ ಫತ್ ಹುಲ್ಲಾ ಹಿಲ್ ಬಗ್ದಾದಿ (ರ) ರವರು ಗೌಸುಲ್ ಅಲ್ಲಮ್ ಮುಹಿಯಿದ್ದೀನ್ ಅಬ್ದುಲ್ ಖಾದಿರಿಲ್ ಜಿಲಾನಿ (ರ) ರವರ ಹನ್ನೆರಡನೆಯ ಪೌತ್ರ. ಇವರ ಪವಿತ್ರ ಸಮಾಧಿಯು ಕಾರವಾರ ಜಿಲ್ಲೆಯ ಅಂಕೋಲದಲ್ಲಿದೆ. ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ)ರವರು ಪ್ರವಾದಿ ಮುಹ ಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ 26 ನೆಯ ಪೌತ್ರ. ಅವರು ಮೂಸಾ ರಿಫಾಈ ( ಖ.ಸಿ) ಮತ್ತು ಆಯಿಷಾ (ಖ.ಸಿ) ದಂಪತಿಗಳ ಪುತ್ರನಾಗಿ ಲಕ್ಷದ್ವೀಪದ ಆಂದ್ರೋತಿನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅಸಾಮಾನ್ಯ ಶಿಶುವಾಗಿ ಬೆಳೆದ ಅವರಿಂದ ಸಣ್ಣ ವಯಸ್ಸಿನಲ್ಲೇ ಅದ್ಭುತ ಪವಾಡಗಳು ಪ್ರಕಟಗೊಂಡಿದ್ದವು. ಅವರ ಮಹಿಮೆ ಮತ್ತು ಔನ್ನತ್ಯವನ್ನು ತಿಳಿಯಲು ಕೆಲವು ಕರಾಮತ್’ಗಳನ್ನು ವಿವರಿಸುತ್ತೇನೆ.


ಹುರಿದ ಕೋಳಿ ಜೀವ ತಾಳಿತು!!
ಇದು ವಲಿಯುಲ್ಲಾಹಿ ಯೂಸುಫ್ (ಖ.ಸಿ) ರವರ ಬಾಲ್ಯದಲ್ಲಿ ನಡೆದ ಘಟನೆ. ಒಮ್ಮೆ ಅವರ ಊರಿಗೆ ಬರಗಾಲ ಬಾಧಿಸಿತು. ಜನರು ಅನ್ನಾಹಾರವಿಲ್ಲದೆ ಕಂಗಾಲಾಗ ತೊಡಗಿದರು. ಆಗ ಆ ಊರಿನ ಮಹಿಳೆಯೊ ಬ್ಬರು, “ನಮ್ಮ ಊರಿಗೆ ವಕ್ಕರಿಸಿದ ಈ ಬರಗಾಲವೇನಾದರೂ ನೀಗಿದರೆ ನಾನು ಹುರಿದ ಕೋಳಿ ಮತ್ತು ಊಟವನ್ನು ಶೈಖ್’ ರವರಿಗೆ ನೀಡುತ್ತೇನೆ ಎಂದು ಹರಕೆ ಹೊತ್ತರು. ಅವರ ಹರಕೆಯಂತೆ ಕ್ಷಾಮ ನೀಗಿತು. ಕ್ಷೇಮ ನಳನಳಿಸ ತೊಡಗಿತು. ಎಲ್ಲರೂ ನಿಟ್ಟುಸಿರು ಬಿಟ್ಟರು. ಸಂತೋಷದಿಂದ ತೇಲಾಡಿದರು.
ಆ ಮಹಿಳೆ ಹರಕೆ ಮಾಡಿದಂತೆ ಹುರಿದ ಕೋಳಿ ಮತ್ತು ಊಟವನ್ನು ಒಂದು ತಟ್ಟೆಯಲ್ಲಿ ಹಾಕಿ ಯೂಸುಫ್ ವಲಿಯವರ ಮನೆಗೆ ಬಂದರು. ಅವತ್ತು ಶೈಖ್’ರವರು ಖುರ್’ಆನ್ ಕಲಿಯಲು ಮದ್ರಸಕ್ಕೆ ತೆರಳಿದ್ದರು. ಆ ಮಹಿಳೆಯು ಅದನ್ನು ಅವರ ತಂದೆ ಖಾಸಿಂ(ರ) ರವರಿಗೆ ಕೊಟ್ಟು ಮನೆಗೆ ಮರಳಿದರು. ಹತ್ತಿರದಲ್ಲಿ ಅವರ ಓರ್ವ ಮುರೀದ್ ಕುಳಿತು ಕೊಂಡಿದ್ದರು. ತಂದೆಯವರು ತಟ್ಟೆಯಲ್ಲಿದ್ದ ಆಹಾರವನ್ನು ಅವರಿಗೆ ನೀಡಿದರು. ಅವರು ಮುಚ್ಚಿದ ಆ ತಟ್ಟೆಯನ್ನು ತೆರೆದಾಗ ಜೀವಂತ ಕೋಳಿ ಅದರೊಳಗೆ ಅಕ್ಕಿ ಕಾಳುಗಳನ್ನು ತಿನ್ನುತ್ತಿರುವುದನ್ನು ಕಂಡು ಬೆಕ್ಕಸ ಬೆರಗಾದರು!! ತಕ್ಷಣವೇ ಅದನ್ನು ಅವರು ಶೈಖ್ ರವರ ತಂದೆಗೆ ತಿಳಿಸಿದರು. ಇದು ಮಗ ಯೂಸುಫ್’ರವರದ್ದೇ ಮಹಿಮೆ ಎಂದು ಅವರು ಮನವರಿಕೆ ಮಾಡಿಕೊಂಡರು.


ಯೂಸುಫ್ (ಖ.ಸಿ) ರವರು ಬಂದಾಗ ಆಹಾರದ ತಟ್ಟೆಯನ್ನು ಕೊಟ್ಟು ಉಣ್ಣಲು ಹೇಳಿದರು. ಯೂಸುಫ್ ವಲಿಯುಲ್ಲಾಹಿರವರು ಮನೆಯ ಆಸುಪಾಸಿನಲ್ಲಿದ್ದ ಎಲ್ಲರನ್ನು ಕರೆದು ತಟ್ಟೆಯಲ್ಲಿದ್ದ ಹುರಿದ ಕೋಳಿ ಮತ್ತು ಊಟವನ್ನು ವಿತರಿಸಿದರು. ಅವರಿಗೆಂದೇ ತಂದ ಆಹಾರವನ್ನು ಇತರರಿಗೆ ನೀಡಿದಾಗ ಹುರಿದ ಮಾಂಸವೂ ಜೀವ ತಾಳಿತು!! ಬಳಿಕ ಅದು ಅವರ ಕೈ ಸೇರಿದಾಗ ಜೀವಂತ ಕೋಳಿ ಹುರಿದ ಕೋಳಿಯಾಯಿತು!!
ಗಂಡು ಕರು ಹೆಣ್ಣಾಯಿತು!!
ಒಂದು ದಿನ ಯೂಸುಫ್ ವಲಿಯವರ ಖಾದಿಂ ಬಂದು, “ಹಸುವೊಂದು ಗಂಡು ಕರುವಿಗೆ ಜನ್ಮ ನೀಡಿದೆ” ಎಂದರು. ಆಗ ಶೈಖ್’ರವರು, “ನಾನು ಗಂಡು ಕರುವನ್ನುಇಷ್ಟಪಡುವುದಿಲ್ಲ” ಎಂದರು. ಏನಾಶ್ಚರ್ಯ! ಮತ್ತೆ ಬಂದು ನೋಡ ಬೇಕಾದರೆ ಗಂಡು ಕರು ಹೆಣ್ಣಾಗಿ ಪರಿವರ್ತನೆಗೊಂಡಿತ್ತು!!


ಪಿಶಾಚಿ ಮರಳಿ ಬಂತು
ಒಂದು ದಿನ ಒಂದು ವೃದ್ಧೆ ಬೆಳಗ್ಗಿನ ತಿಂಡಿಯೊಂದಿಗೆ ವಲಿಯುಲ್ಲಾಹಿ ಖಾಸಿಂ (ರ) ರವರ ಬಳಿಗೆ ತೆರಳಿದರು. ಅವತ್ತು ಯೂಸುಫ್ ವಲಿಯವರು ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅವರು ಆ ಸ್ತ್ರೀಯೊಂದಿಗೆ ತಿಂಡಿಯನ್ನು ಕೊಡಿಯೆಂದು ಕೇಳಿದರು. ಅವಳು ಕೊಡಲು ಹಿಂದೇಟು ಹಾಕಿದಳು. ಆಗ ಶೈಖ್ ರವರು ಹೇಳಿದರು. “ನಿಮ್ಮ ಪಿಶಾಚಿ ನಿಮಗೆ ಮರಳಿ ಬರಲಿ” ಶೈಖ್’ ರವರು ಹಾಗೆ ಹೇಳಿದ್ದೇ ತಡ. ಅವಳ ಶರೀರಕ್ಕೆ ಪಿಶಾಚಿಯು ಪ್ರವೇಶಿಸಿ ಅವಳು ಸ್ಮೃತಿ ತಪ್ಪಿ ಕೆಳಗೆ ಬಿದ್ದು ಬಿಟ್ಟಳು. ಅಲ್ಲಿರುವವರು ಅವಳನ್ನು ಹೊತ್ತು ಕೊಂಡು ಶೈಖ್’ರವರ ತಂದೆಯ ಬಳಿಗೆ ಕರೆದುಕೊಂಡು ಹೋದರು. ಆಗ ಅವರ ತಂದೆ ಪಿಶಾಚಿಯೊಂದಿಗೆ ಕೇಳಿದರು, “ನೀನು ಯಾಕೆ ಮರಳಿ ಬಂದೆ? ಈಕೆಯ ದೇಹದಿಂದ ನಿನ್ನನ್ನು ಒಮ್ಮೆ ಓಡಿಸಿದ್ದೇಕೆ? ಮತ್ತೆ ಯಾಕೆ ಮರಳಿ ಬಂದೆ. ಆಕೆಯ ಶರೀರದಲ್ಲಿದ್ದ ಪಿಶಾಚಿ ಹೇಳಿತು, “ನಿಮ್ಮ ಮಗನ ನಿರ್ದೆಶನ ದಂತೆ ನಾನು ಬಂದಿದ್ದೇನೆ” ತಂದೆಯವರು ಮಗನನ್ನು ಕರೆದು, “ಯೂಸುಫ್! ಆ ಪಿಶಾಚಿಯೊಂದಿಗೆ ಆಕೆಯ ಶರೀರದಿಂದ ಬಿಟ್ಟು ತೊಲಗುವಂತೆ ಹೇಳು” ಎಂದರು. ಯೂಸುಫ್ ವಲಿಯವರು ಹಾಗೆಯೇ ಮಾಡಿದರು. ಶೈಖ್ ರವರ ಆಜ್ಞೆಯನ್ನು ಕೇಳಿದ ಪಿಶಾಚಿಯು ತಕ್ಷಣವೇ ಅವಳ ಶರೀರದಿಂದ ಹೊರ ಬಂದು ದೂರವಾ ಯಿತು. ಆಕೆ ಮೊದಲಿನಂತೆ ಎದ್ದು
ನಿಂತಳು. ಆಗ ಅವರ ತಂದೆ ಸೇರಿದ್ದ ಜನರೊಂದಿಗೆ ಹೇಳಿದರು,” ನನ್ನ ಮಗನೊಂದಿಗೆ ನೀವು ಆಟವಾಡಬೇಡಿರಿ”


ಸಹೋದರನ ಪತ್ತೆ
ಒಮ್ಮೆ ಯೂಸುಫ್ ವಲಿಯವರು ಆಂಧ್ರೊತ್ ದ್ವೀಪದಲ್ಲಿರುವಾಗ ಅವರ ಸಹೋದರ ಅಬೂಸ್ವಾಲಿಹ್ ರವರು ಕಾಣೆಯಾಗಿದ್ದರು. ಎಷ್ಟೇ ಹುಡುಕಿ ದರೂ ಅವರ ಪತ್ತೆ ಇರಲಿಲ್ಲ. ಹಲವು ಕಡೆಗಳಿಗೆ ಜನರನ್ನು ಕಳುಹಿಸಿ ಹುಡುಕಾಡಿದರೂ ಅವರದ್ದು ಮಾತ್ರ ಸುಳಿವೇ ಇರಲಿಲ್ಲ. ಆಗ ಶೈಖ್’ರವರು ಹೇಳಿದರು, “ಈಗ ಅವರು ಕವರತ್ತಿ ದ್ವೀಪದಲ್ಲಿದ್ದಾರೆ. ಮದುಮಗನಾಗಿ ಬಹಳ ಖುಷಿಯಲ್ಲಿದ್ದಾರೆ”. ಕವರತ್ತಿ ದ್ವೀಪ ಅಲ್ಲಿಂದ ಬಹು ದೂರ ವಿತ್ತು. ಅವತ್ತು ಅಲ್ಲಿಗೆ ತೆರಳಲು ಹಡಗುಗಳ ವ್ಯವಸ್ಥೆ ಇರಲಿಲ್ಲ. ತರುವಾಯ ಅವರ ಸಹೋದರನ ಬಗ್ಗೆ ಪತ್ತೆ ಹಚ್ಚಿದಾಗ ಶೈಖ್’ರವರು ಹೇಳಿದಂತೆ ಅವರು ಅವತ್ತು ಅಲ್ಲಿ ವಿವಾಹವಾಗಿದ್ದರು! ಶೈಖ್’ರವರ ಮಾತು ಅಕ್ಷರಶಃ ನಿಜಗೊಂಡಾಗ ಜನರು ಚಕಿತರಾಗಿ ಬಿಟ್ಟರು.ಹೀಗೆ ಅವರ ಪವಾಡಗಳ ಪಟ್ಟಿ ದೀರ್ಘವಿದೆ. ಈ ಕಾರಣದಿಂದಲೇ ಅವರು ಜನರೆಡೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದರು. ಜನರು ಜಾತಿ ಬೇಧ ವಿಲ್ಲದೆ ಉದ್ದೇಶ ಸಿದ್ದಿಗಾಗಿ ಹರಕೆ ಹೊತ್ತು ಬರ ತೊಡಗಿದರು. ಉದ್ದೇಶ ಈಡೇರುತ್ತಿದ್ದಂತೆ ಅವರ ಕರಾಮತ್ತಿನ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗ ತೊಡಗಿತು. ಯೂಸುಫ್ ವಲಿಯವರು ಜನರೆಡೆಗೆ ಮತ್ತೆ ಹತ್ತಿರವಾದರು. ಅವರ ದರ್ಗಾ ಸಂದರ್ಶಿಸಲು ಬರುವವರ ಸಂಖ್ಯೆ ವೃದ್ಧಿಸುತ್ತಾ ಹೋಯಿತು. ಪ್ರತಿವರ್ಷ ನಡೆಯುವ ಉರೂಸ್ ಸಮಾರಂಭದಲ್ಲಿ ಸೇರುವ ಜನಸಂದಣಿಯೇ ಅವರ ಮಹಿಮೆಗೆ ದೊಡ್ಡ ಸಾಕ್ಷಿಯಾಗಿದೆ.


ಅಲ್ಲಾಹನು ಅವರ ಬರಕತಿನಿಂದ ನಮ್ಮ ಎಲ್ಲಾ ಉದ್ದೇಶಗಳನ್ನು ಈಡೇರಿಸಲಿ. ನಮ್ಮ ಐಹಿಕ ಮತ್ತು ಪಾರತ್ರಿಕ ಎಲ್ಲಾ ಕಾರ್ಯಗಳನ್ನು ಹಸನುಗೊಳಿಸಲಿ. ಆಮೀನ್
ಲೇಖನ: ಯಅ್ ಕೂಬ್ ಸಖಾಫಿ ಪರಪ್ಪು (ಸದರ್ ಮುಅಲ್ಲಿಂ ಮಧುವನ)
(ಕುಂದಾಪುರದ ಇತಿಹಾಸ ಪ್ರಸಿದ್ಧವಾದ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ದರ್ಗಾವು ಪ್ರಮುಖವಾಗಿದ್ದು,ಈ ದರ್ಗಾದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿರವರ ಮಹೋನ್ನತ ಸತ್ಕಾರ್ಯಗಳ, ಪವಾಡಗಳ ಪುಣ್ಯ ಸ್ಥಳವಾಗಿದೆ.
ಉರುಸ್ ಎಂಬುದು ಅರೇಬಿಕ್ ಶಬ್ದವಾಗಿರುತ್ತದೆ. ಮುಸ್ಲಿಂ ಸಂತರ ಪುಣ್ಯತಿಥಿಯ ವಾರ್ಷಿಕ ಆರಾಧನೆಯಾಗಿರುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಸಂತರ ಅಂತ್ಯ ವಿಶ್ರಮಗೊಳ್ಳುತ್ತಿರುವ ದರ್ಗಾದಲ್ಲಿ ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳು ಬಹಳ ಶ್ರದ್ಧೆ ಭಕ್ತಿಯಿಂದ ಜರುಗುತ್ತದೆ. ಇದರಲ್ಲಿ ಸರ್ವಧರ್ಮೀಯರೂ ಪಾಲ್ಗೊಂಡು ಸಂತರ ಕೃಪಾರ್ಶೀವಾದಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಧಾರ್ಮಿಕ ಕಾರ್ಯಕ್ರಮದೊಂದಿಗೆ ಉರುಸ್ ಸಮಯದಲ್ಲಿ ಅನ್ನಸಂತರ್ಪಣೆ ಕೂಡಾ ನಡೆಯುತ್ತದೆ. ಇದರಲ್ಲಿ ಸರ್ವಧರ್ಮಿಯರು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಹೇಳುವುದಾದರೆ ಉರುಸ್ ಹಿಂದೂ ಮುಸ್ಲಿಂ ಭಾವೈಕತೆಯ ಸಂಕೇತವಾಗಿರುತ್ತದೆ.




