ಹಡೀಲು ಭೂಮಿಯಲ್ಲಿ ಹಸಿರುಕ್ಕಿಸುವ ಕೃಷಿ ಮಾಂತ್ರಿಕ, ಕೋಡಿ ಗಂಗಾಧರ ಪೂಜಾರಿ.

kundapuradotcom@gmail.com
6 Min Read

ಬಹಳ ಸಂತೋಷ, ಸಂಭ್ರಮ, ಅಭಿಮಾನ, ಪ್ರೀತಿ ಮತ್ತು ಹೆಮ್ಮೆಯಿಂದ ಈ ಲೇಖನ ಬರೆಯುತ್ತಿದ್ದೇನೆ ಏಕ್ರೆಗಟ್ಟಲೆ ಹಡೀಲು ಬಿದ್ದ ಭೂಮಿಯಲ್ಲಿ ಹಸಿರು ಸ್ವರ್ಗ ಸೃಷ್ಟಿಸುವ ಮಹಾಸಾಧಕನೊಬ್ಬನ ಅದ್ಬುತ ಸಾಹಸಗಾಥೆ ಇಲ್ಲಿ ನವಿರಾಗಿ ಅನಾವರಣಗೊಂಡಿದೆ.

ಫಿರಂಗಿ ಬಾಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವ ಪರಿಯಲ್ಲಿ ಕಷ್ಟ ಸಂಕಷ್ಟಗಳ ಕುಲುಮೆಯಲ್ಲಿ ಬೆಂದು ಮಾಗಿ, ಸಮಸ್ತ ಸಮಾಜವೇ ಕಣ್ಣರಳಿಸಿ ನೋಡುವಂತೆ ಮಾಡಿದ ಅದ್ಭುತ ಸಾಧನೆಗೈದು ಕೃಷಿ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನನ್ನ ಕ್ಲಾಸ್ ಮೇಟ್ ಕೋಡಿ ಗಂಗಾಧರ ಪೂಜಾರಿಯವರ ಸಾಧನೆ ಬಗ್ಗೆ ಅಕ್ಷರ ರೂಪದಲ್ಲಿ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಅವಕಾಶ ದೊರಕಿರುವುದು ನಿಜಕ್ಕೂ ನನಗೆ ಸಂಭ್ರಮವನ್ನುಂಟು ಮಾಡಿದೆ.

ಕುಂದಾಪುರ ಕೋಡಿ ಭಾಗದಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡದೇ ಹಡೀಲು ಬಿಟ್ಟ ಏಕ್ರೆಗಟ್ಟಲೆ ಭೂಮಿಯನ್ನು ಹಸನುಗೊಳಿಸಿ ಭತ್ತ ಬೆಳೆಯುವ ಮೂಲಕ ಹಸಿರಿನ ನಂದನವನವನ್ನಾಗಿಸಿದ ಗಂಗಾಧರ ಪೂಜಾರಿಯವರ ಸಾಧನೆಯನ್ನು ಅವಲೋಕಿಸಿದರೆ ಬಂಗಾರದ ಮನುಷ್ಯ ಚಿತ್ರ ಸ್ಮೃತಿ ಪಟಲದಲ್ಲಿ ಮೂಡುತ್ತದೆ.

ಬಂಗಾರದ ಮನುಷ್ಯ ಚಿತ್ರಕಥೆಯನ್ನು ಒಮ್ಮೆ ಸ್ಮರಿಸಿಕೊಳ್ಳಿ, ಅದರಲ್ಲಿ ಕಥಾನಾಯಕ ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಅಕ್ಕನ ಕುಟುಂಬವನ್ನು ಪೋಷಿಸಲು ಭೂಮಾಲೀಕರೊಬ್ಬರಿಂದ ಬಂಜರು ಭೂಮಿಯನ್ನು ಪಡೆದುಕೊಂಡು ಪರಿಶ್ರಮದಿಂದ ವ್ಯವಸಾಯ ಮಾಡಿ ಯಶಸ್ಸು ಗಳಿಸುತ್ತಾನೆ. ಬಂಡೆಗಲ್ಲುಗಳಿಂದ ಆವೃತ್ತವಾದ ಬಂಜರು ಭೂಮಿಯಲ್ಲಿ ವ್ಯವಸಾಯ ಹೇಗೆ ಮಾಡಲು ಸಾಧ್ಯ? ಎಂಬ ಜನರ ಪ್ರಶ್ನೆಯ ನಡುವೆಯೂ ಎದೆಗುಂದದೇ ಮನಸ್ಸೊಂದಿದ್ದರೆ ಮಾರ್ಗವೂ ಉಂಟು ಎಂದು ಮುನ್ನುಗ್ಗಿ ಬಂಜರು ಭೂಮಿಯಲ್ಲಿ ಉಳುಮೆ ಮಾಡಿ ಹಸಿರು ಉಕ್ಕಿಸುತ್ತಾನೆ.

ಈ ಸಿನಿಮಾ ನೋಡಿ ಪ್ರೇರಣೆಗೊಂಡು ಹಲವು ಯುವಕರು ಪಟ್ಟಣ ಬಿಟ್ಟು ಹಳ್ಳಿ ಸೇರಿ ಕೃಷಿ ಪ್ರಾರಂಭಿಸಿದ್ದರು. ಅಷ್ಟರ ಮಟ್ಟಿಗೆ ಈ ಸಿನಿಮಾ ಜನರ ಮೇಲೆ ಪರಿಣಾಮ ಬೀರಿತ್ತು ಖಂಡಿತಾ ಬಂಗಾರದ ಮನುಷ್ಯ ಚಿತ್ರಕಥೆಗೂ, ಹಡೀಲು ಭೂಮಿಯಲ್ಲಿ ಹಸಿರು ಉಕ್ಕಿಸಿದ ಕೋಡಿ ಗಂಗಾಧರ ಪೂಜಾರಿಯವರ ಸಾಧನೆಗೂ ಪರಸ್ಪರ ಹೋಲಿಕೆ ಇದೆ. ಹಡೀಲು ಬಿದ್ದ 45 ಎಕರೆ ಹಡೀಲು ಬಿದ್ದ ಭೂಮಿಯನ್ನು ಹಸನುಗೊಳಿಸಿ ಅದರಲ್ಲಿ ಸಮೃದ್ಧ ಫಸಲು ತೆಗೆದ ಭಗೀರಥನಾದ ಗಂಗಾಧರ ಪೂಜಾರಿಯವರ ಸಾಧನೆಯ ಹಿಂದೆ ಅವರ ತಂದೆ ಗಣಪ ಪೂಜಾರಿಯವರ ಆದರ್ಶಪೂರ್ಣ ಪರಿಶ್ರಮದ ಪ್ರೇರಣೆ ಇದೆ.

ಗಂಗಾಧರ ಪೂಜಾರಿಯವರ ತಂದೆ ಗಣಪ ಪೂಜಾರಿಯವರ ಮನೆತನದವರು ಆಸ್ತಿವಂತರು ಆದರೆ ಈ ಆಸ್ತಿಗೆ ಗಣಪ ಪೂಜಾರಿಯವರು ಆಸೆ ಮಾಡದೇ ಎಲ್ಲವನ್ನೂ ಬಿಟ್ಟುಬಂದರು ತಾನು ಸ್ವಾಭಿಮಾನಿಯಾಗಿ ದುಡಿದು ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಭೂ ಮಾಲೀಕರ ಗದ್ದೆಗಳಲ್ಲಿ ಉಳುಮೆ ಮಾಡಿ ಭತ್ತದ ಬೇಸಾಯದಲ್ಲಿ ತನ್ನನ್ನು ತೊಡಗಿಸಿಕೊಂಡರು ಅದರ ಜೊತೆಯಲ್ಲಿ ಕೃಷಿ ಸಂಬಂಧಿ ಇತರ ಕಾರ್ಯಗಳನ್ನು ದಣಿವರಿಯದಂತೆ ತನ್ನ ಸಂಸಾರಕ್ಕಾಗಿ ಮಾಡುತ್ತಿದ್ದರು ಮುಂದೆ ಉಳುವವನೆ ಭೂಮಿ ಒಡೆಯ ಕಾಯ್ದೆ ಬಂದಾಗ ತಾನು ಉಳುಮೆ ಮಾಡುತ್ತಿದ್ದ ಗದ್ದೆ ಭೂಮಿಗೆ ಡಿಕ್ಲೇರೇಷನ್ ಕೊಡುವ ಅವಕಾಶವಿದ್ದರೂ ಅದನ್ನು ನಿರಾಕರಿಸಿ ನಿಷ್ಠೆಯ ದುಡಿಮೆಯ ಆದರ್ಶವನ್ನು ಪಾಲಿಸಿದರು.

ಅಂತಿಮವಾಗಿ ತನ್ನ ಹೆಂಡತಿ ಮನೆಯ ಪಾಲಿನ ಒಂದು ಏಕರೆ ಗದ್ದೆಯಲ್ಲಿ ವ್ಯವಸಾಯ ಮಾಡಲು ಪ್ರಾರಂಭಿಸಿದ ಗಣಪ ಪೂಜಾರಿಯವರು ಏಕಾಏಕಿ ಅನಾರೋಗ್ಯಕ್ಕೆ ತುತ್ತಾದ ಪರಿಣಾಮ ಸಂಸಾರ ನಿರ್ವಹಣೆಯ ಹೊಣೆ ಗಂಗಾಧರ ಪೂಜಾರಿ ಮತ್ತು ಅವರ ಅಣ್ಣನ ಮೇಲೆ ಬಿತ್ತು. ಗಂಗಾಧರರವರ ಅಣ್ಣ ಮುಂಬೈ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರೆ ಗಂಗಾಧರ ಪೂಜಾರಿಯವರು ವಿದ್ಯಾಭ್ಯಾಸದ ನಡುವೆಯೂ ಕೃಷಿ ಕಾಯಕ ಸೇರಿದಂತೆ ಸಣ್ಣಪುಟ್ಟ ಕೂಲಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡರು. ಇದರಿಂದ ವಿದ್ಯಾಭ್ಯಾಸ ಮತ್ತು ಫಲಿತಾಂಶದ ವ್ಯತಿರಿಕ್ತ ಪರಿಣಾಮ ಬೀರಿ ಶಿಕ್ಷಣಕ್ಕೆ ತಿಲಾಂಜಲಿ ನೀಡಬೇಕಾಯಿತು.

ಮುಂದೆ ಸ್ವಲ್ಪಕಾಲ ಕುಂದಾಪುರದಲ್ಲಿ ITI ಕಲಿತು ಮಂಗಳೂರಿನಲ್ಲಿ ಇಲೆಕ್ಟ್ರೇಷನ್ ಒಬ್ಬರ ಬಳಿ ಅವರು ಕೆಲಸಕ್ಕೆ ಸೇರಿಕೊಂಡರು ಅಲ್ಲಿ ಅವರಿಗೆ ಊಟ ಬಿಟ್ಟರೆ ಯಾವುದೇ ಸಂಬಳ ಸಿಗುತ್ತಿರಲಿಲ್ಲ ಎಲೆಕ್ಟ್ರೇಷನ್ ಕೆಲಸ ಕಲಿಯುವ ಗುರಿಯಲ್ಲಿ ಗಂಗಾಧರರವರು ಸಂಬಳವಿಲ್ಲದೇ ಮಾಲೀಕರು ಕೊಡುವ ಊಟದಲ್ಲಿ ತೃಪ್ತಿ ಪಡುತ್ತಿದ್ದರು ಎರಡು ವರ್ಷಗಳ ಬಳಿಕ ಊರಿನಲ್ಲಿ ನೆಲೆ ನಿಂತು ತಾನು ಕಲಿತ ಎಲೆಕ್ಟ್ರೆಶೀನ್ ಕೆಲಸವನ್ನು ಮೂಲ ಕಸಬು ಮಾಡಿಕೊಂಡು ತಂದೆ ಬೇಸಾಯ ಮಾಡುತ್ತಿದ್ದ ಗದ್ದೆಯಲ್ಲಿ ಕೃಷಿ ಕಾಯಕ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಕೋಡಿಯಲ್ಲಿ ಉಪ್ಪು ನೀರಿನ ಸಮಸ್ಯೆ ಮತ್ತು ಕೂಲಿಯಾಳುಗಳ ಅಭಾವದಿಂದ ಕೆಲವರು ವ್ಯವಸಾಯ ಮಾಡದೇ ಹಡೀಲು ಬಿಟ್ಟಿದ್ದರು ಈ ಎಲ್ಲಾ ಗದ್ದೆಗಳ ಮಾಲೀಕರನ್ನು ಗಂಗಾಧರರವರು ಸಂಪರ್ಕಿಸಿ ಹಡೀಲು ಬಿದ್ದ ಗದ್ದೆಯನ್ನು ಗೇಣಿಗೆ ಪಡೆದುಕೊಂಡು ಭತ್ತದ ಕೃಷಿ ಮಾಡತೊಡಗಿದರು ಪ್ರಾರಂಭದಲ್ಲಿ ಗದ್ದೆಗಳ ಮಾಲೀಕರು ಗೇಣಿಗೆ ಗದ್ದೆಗಳನ್ನು ಕೊಡಲಿಕ್ಕೆ ಹಿಂದೇಟು ಹಾಕಿದರೂ, ಗಂಗಾಧರರವರ ಪ್ರಾಮಾಣಿಕತೆ ಮತ್ತುಕಠಿಣ ದುಡಿಮೆಗೆ ಮೆಚ್ಚಿ ತಮ್ಮ ಗದ್ದೆಗಳನ್ನು ಗೇಣಿಗೆ ನೀಡತೊಡಗಿದರು.

ಉಪ್ಪು ನೀರಿನಿಂದ ಆವೃತ್ತವಾಗಿ ಹಡೀಲು ಬಿದ್ದ ಏಕ್ರೆಗಟ್ಟಲೆ ಕೃಷಿ ಭೂಮಿ ಇಂದು ಗಂಗಾಧರ ಪೂಜಾರಿಯವರ ಕಠಿಣ ಪರಿಶ್ರಮದಿಂದ ಹಚ್ಚ ಹಸಿರಾಗಿ ನಳನಳಿಸುತ್ತಿದೆ ಪ್ರಾರಂಭದಲ್ಲಿ ಎರಡು ಎಕರೆ ಹಡೀಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಲು ಪ್ರಾರಂಭಿಸಿದ ಗಂಗಾಧರ ಪೂಜಾರಿಯವರು ಇಂದು 45 ಏಕರೆ ಹಡೀಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡಿ ಸಾಧನೆಯ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಹೊಟ್ಟೆಪಾಡಿನ ಧ್ವನಿ ಬೆಳಕು ಉದ್ಯೋಗದ ಜೊತೆಗೆ ಮಳೆಗಾಲದ ಸಮಯದಲ್ಲಿ ಹಡೀಲು ಬಿದ್ದ ಭತ್ತದ ಗದ್ದೆಗಳ ಸಾಗುವಳಿ ಮಾಡುತ್ತಿರುವ ಗಂಗಾಧರ ಪೂಜಾರಿಯವರು ಕೃಷಿಯಿಂದ ಹೇಳಿಕೊಳ್ಳುವಷ್ಟು ಲಾಭವಿಲ್ಲ, ಆದರೆ ಆತ್ಮತೃಪ್ತಿಯಿದೆ ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಭೂತಾಯಿಯ ಸೇವೆ ಮಾಡಿದರೆ ಖಂಡಿತಾ ಆಕೆ ಕೈ ಬಿಡುವುದಿಲ್ಲ ಎಂದು ನುಡಿಯುವ ಅವರು ಕೃಷಿಯಲ್ಲಿ ದೊರೆಯುವ ಫಸಲನ್ನು ಸ್ವಲ್ಪ ಪ್ರಮಾಣದಲ್ಲಿ ಬಡವರಿಗೆ ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ.

ಗಂಗಾಧರ ಪೂಜಾರಿಯವರ ಕೃಷಿಕಾಯಕಕ್ಕೆ ಅವರ ಪತ್ನಿ, ಚಿಕ್ಕಪ್ಪ ಶಂಕರ ಪೂಜಾರಿ ಮತ್ತು ಸಹೋದರನಾದ ಗೋವಿಂದ ಪೂಜಾರಿಯವರು ಸಾಥ್ ನೀಡುತ್ತಿದ್ದು, ನೆಮ್ಮದಿ ಬೇಕಾದರೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ. ಕೃಷಿ ಕಾಯಕದಲ್ಲಿ ತಮ್ಮನೆಲ್ಲಾ ಸಾಕಿ ಸಲಹಿದ ತಂದೆಯನ್ನು ಮಾದರಿಯಾಗಿಟ್ಟುಕೊಂಡು ಸುಂದರ ಬದುಕು ಕಟ್ಟಿಕೊಂಡಿರುವ ಗಂಗಾಧರ ಪೂಜಾರಿಯವರು ಕುಂದಾಪುರ ಹಂಗಳೂರು ನಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅವರ ಪುತ್ರ ಬೆಂಗಳೂರುನಲ್ಲಿ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದಾನೆ. ತನ್ನ ಮೂಲ ಉದ್ಯೋಗವಾದ ಸೌಂಡ್ಸ್ ಲೈಟಿಂಗ್ ಮತ್ತು ಡೆಕೋರೆಷನ್ ಕ್ಷೇತ್ರ ಆರ್ಥಿಕ ದೃಡತೆಯನ್ನು ನೀಡಿದರೆ,ಕೃಷಿ ಕಾಯಕ ನೆಮ್ಮದಿಯನ್ನು ನೀಡಿದೆ ಎನ್ನುತ್ತಾರೆ.

ಗಂಗಾಧರ ಪೂಜಾರಿಯವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ ಇತ್ತೀಚೆಗೆ ಸರ್ಕಾರ ಗುರುತಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿ ಕ್ಷೇತ್ರ ತನ್ನನ್ನು ಇಷ್ಟು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎನ್ನುವ ಗಂಗಾಧರ ಪೂಜಾರಿಯವರಿಗೆ ಹುಟ್ಟೂರು ಕೋಡಿಯಲ್ಲಿ ನಡೆದ ಸನ್ಮಾನ ಅತೀವ ಆನಂದ ತಂದಿದ್ದು,ಎಲ್ಲ ಸನ್ಮಾನಗಳಿಕ್ಕಿಂತ ಹುಟ್ಟೂರಲ್ಲಿ ಪಡೆದ ಸನ್ಮಾನ ಅವಿಸ್ಮರಣೀಯ ಎಂದು ಭಾವಪರವಶರಾಗುತ್ತಾರೆ.

ಜಗತ್ತಿನಲ್ಲಿ ಯಾವ ಶಾಲೆ ಕಾಲೇಜುಗಳು ಕಲಿಸದ ಪಾಠವನ್ನು ಬಡತನ, ಹಸಿವು ಸೋಲು ಮತ್ತು ಅವಮಾನಗಳು ಕಲಿಸುತ್ತದೆ ಎಂಬ ಸಾರ್ವಕಾಲಿಕ ಸತ್ಯದ ನುಡಿಮುತ್ತಿಗೆ ಕೃಷಿ ಮಾಂತ್ರಿಕ ಕೋಡಿ ಗಂಗಾಧರ ಪೂಜಾರಿಯವರು ದೃಷ್ಟಾಂತವಾಗಿ ನಿಲ್ಲುತ್ತಾರೆ. ಹೋರಾಟವಿಲ್ಲದೇ ಬದುಕಿಲ್ಲ, ಸವಾಲುಗಳನ್ನು ಎದುರಿಸಿ ಗೆಲ್ಲುವುದೇ ನಿಜವಾದ ಜೀವನ ಎನ್ನುವ ಗಂಗಾಧರ ಪೂಜಾರಿಯವರ ಮಾತು ಸ್ಪೂರ್ತಿದಾಯಕ ಮತ್ತು ಪ್ರೇರಣದಾಯಕ ಮಾತಾಗಿ ಎಲ್ಲರ ಹೃದಯ ತಟ್ಟುತ್ತದೆ.

ಭತ್ತದ ಕೃಷಿ ಬಗ್ಗೆ ಕರಾವಳಿ ರೈತರ ಬಳಿ ಕೇಳಿದಾಗ ಬೇಸಾಯದ ಬಗ್ಗೆ ಮಾತಾಡಿ ಸುಖವಿಲ್ಲ, ಅದನ್ನು ನಂಬಿ ಬದುಕಲಿಕ್ಕೆ ಸಾಧ್ಯವಿಲ್ಲ ಎಂಬ ಉತ್ತರ ಬರುವುದು ಸಾಮಾನ್ಯವಾಗಿದೆ ಕರಾವಳಿಯ ತುಂಡು ಗದ್ದೆಗಳು, ಭೌಗೋಳಿಕ ಪರಿಸ್ಥಿತಿ, ಕೂಲಿಯಾಳುಗಳ ಸಮಸ್ಯೆ, ಕೃಷಿಯಲ್ಲಿ ರೈತರ ಮಕ್ಕಳಿಗೆ ನಿರಾಸಕ್ತಿ ಇತ್ಯಾದಿ ಕಾರಣಗಳಿಂದಾಗಿ ಕರಾವಳಿಯುದ್ದಕ್ಕೂ ಬಹುತೇಕ ಭತ್ತದ ಗದ್ದೆಗಳು ಸೈಟುಗಳಾಗಿಯೂ, ತೋಟಗಳಾಗಿಯೂ, ಕಾಂಪ್ಲೆಕ್ಸ್ ಗಳಾಗಿಯೂ ಪರಿವರ್ತನೆಗೊಂಡಿದೆ ಅದರಲ್ಲೂ ನದಿತೀರದ ಭತ್ತದ ಗದ್ದೆಗಳಂತೂ ಸಿಗಡಿ ಸಾಕಣೆಯ ಕೆರೆಗಳಾಗಿ ಮಾರ್ಪಟ್ಟಿವೆ ಇದಕ್ಕೆ ಅಪವಾದವೆಂಬಂತೆ ಹಡೀಲು ಬಿದ್ದ ತಮ್ಮ ಗದ್ದೆಗಳನ್ನು ಕೋಡಿ ಗಂಗಾಧರ ಪೂಜಾರಿಯವರಿಗೆ ಭತ್ತದ ಕೃಷಿ ಮಾಡಲು ಗೇಣಿಗೆ ಕೊಟ್ಟು ಸಹಕರಿಸಿದ ಭೂಮಾಲೀಕರು ನಿಜಕ್ಕೂ ಅಭಿನಂದನಾರ್ಹರು.

ಭತ್ತದ ಬೇಸಾಯದ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡುತ್ತಲೇ ಇರುವ ಕೋಡಿ ಗಂಗಾಧರ ಪೂಜಾರಿಯವರು ದೂರದೃಷ್ಟಿ ಚಿಂತನೆಯುಳ್ಳ ವ್ಯಕ್ತಿ. ಇಂತಹ ವ್ಯಕ್ತಿಗಳು ಬರಿಯ ಭ್ರಮೆಯಲ್ಲಿ ಓಡಾಡುವುದಿಲ್ಲ ತಾನು ಅಡಿಯಿಟ್ಟ ನೆಲ ಕೇವಲ ಮಣ್ಣಾಗಿ ಆತನಿಗೆ ತೋರುವುದಿಲ್ಲ ಶತಶತಮಾನಗಳಿಂದ ಅನ್ನ ನೀಡುತ್ತಿರುವ ಭೂರಮೆಯ ಮಡಿಲು ಎಂದೇ ಪೂಜ್ಯ ಭಾವನೆ ಆತನ ಹೃದಯದಲ್ಲಿ ಅಡಕವಾಗಿರುತ್ತದೆ.

ಕುಂದಾಪುರ ಕೋಡಿಯ ಹಡೀಲು ಬಿದ್ದ ಗದ್ದೆಗಳಲ್ಲಿ ಸಮೃದ್ಧತೆಯ ಹಸಿರುಕ್ಕಿಸಿ ಅಭೂತಪೂರ್ವ ಸಾಧನೆಗೈದಿರುವ ಗಂಗಾಧರ ಪೂಜಾರಿಯವರ ಸ್ಪೂರ್ತಿದಾಯಕ ಕೃಷಿ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಭತ್ತದ ಕೃಷಿಯಲ್ಲಿ ಹೊಸ ಆವಿಷ್ಕಾರದ ಮನ್ವಂತರ ಮೂಡಿ ಬರಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಗಂಗಾಧರ ಪೂಜಾರಿಯವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಲಿ ಎಂದು ಶುಭ ಹಾರೈಸುತ್ತೇವೆ.

ಬರಹ: ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment
error: Content is protected !!