ಕುಂದಾಪುರ ಕಂಡ ಧೀಮಂತ ವ್ಯಕ್ತಿತ್ವದ ಅಪ್ರತಿಮ ಸಾಧಕ ಸೊಲೊಮನ್ ಸೋನ್ಸ್

kundapuradotcom@gmail.com
7 Min Read

ಸೊಲೊಮನ್ ಸ್ಯಾಮುಯಲ್ ಸೋನ್ಸ್ ಹೆಸರೇ ಸೂಚಿಸುವಂತೆ ಅವರು ಸೋಲಿಲ್ಲದ ಸರದಾರ, ಯಶಸ್ವಿ ಉದ್ಯಮಿ, ಸರಳ ಸಜ್ಜನಿಕೆಯ ಹೃದಯವಂತ ಅವರ ಸಾಧನೆಯ ಬದುಕನ್ನು ಅವಲೋಕಿಸಿದರೆ ಕಾಯಕವೇ ಕೈಲಾಸ ಎಂಬ ಅಭಿಪ್ರಾಯ ಖಂಡಿತಾ ಮೂಡದೇ ಇರುವುದಿಲ್ಲ. ಅವರ ಮಾತುಗಳು ವಿದ್ವಾಂಸರ ಉಪನ್ಯಾಸದಂತಿರದೇ ಬದುಕಿನ ಶ್ರೇಷ್ಠ ಮೌಲ್ಯಗಳ ಚಿಂತನೆಯಾಗಿ ಯುವ ಜನರ ಸಾಧನೆಗೆ ಪ್ರೇರಣೆ ನೀಡುತ್ತದೆ.

ಸಹಸ್ರಾರು ಜನರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಟ್ಟ, ಶೈಕ್ಷಣಿಕ, ಕ್ರೀಡೆ, ಆರೋಗ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಸಹಾಯ ಹಸ್ತ ಚಾಚಿದ ಸಮಾಜಮುಖಿ ಚಿಂತನೆಯ ಉದ್ಯಮಿಯ ಉದ್ಯಮದ ಫಲಗಳನ್ನು ನಿತ್ಯದ ಜೀವನದಲ್ಲಿ ಅನುಭವಿಸುತ್ತಿರುವವರು ಆ ಉದ್ಯಮದ ಒಳಹೊರಗುಗಳನ್ನು, ಅದರ ಹಿಂದಿರುವ ಉದ್ಯಮಿಯ ತುಡಿತಗಳನ್ನು ಅರಿತುಕೊಳ್ಳಬೇಕಾಗಿದೆ ಇಂಥವರ ಬಗ್ಗೆ ಬಹುತೇಕರಿಗೆ ಗೊತ್ತಿರುವುದೆಲ್ಲ ಪತ್ರಿಕೆಯಲ್ಲಿ ಆಗೊಮ್ಮೆ, ಈಗೊಮ್ಮೆ ಬರಬಹುದಾದ ತೀರಾ ಪ್ರಾಥಮಿಕ ಮಾಹಿತಿಯ ಕೆಲವು ಸಾಲುಗಳಷ್ಟೆ. ಆ ದೆಸೆಯಲ್ಲಿ ಸೊಲೊಮನ್ ಸೋನ್ಸ್ ರು ಉದ್ಯಮ ಕಟ್ಟಿದ ಕತೆಯನ್ನು, ಸಮಾಜಮುಖಿ ಚಿಂತನೆಯ ಕಾರ್ಯವನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ಅನಾವರಣಗೊಳಿಸಲಾಗಿದೆ.

ಸೆಪ್ಟೆಂಬರ್ 4, 1933 ರಲ್ಲಿ ಜನಿಸಿದ ಸೊಲೊಮನ್ ಸೋನ್ಸ್ ರವರು ತಮ್ಮ ಫ್ರೌಢ ಶಿಕ್ಷಣವನ್ನು ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ಸೇಂಟ್ ಆಲೋಶಿಯಸ್ ಕಾಲೇಜು ಮಂಗಳೂರುನಲ್ಲಿ ಪಡೆದುಕೊಂಡರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮುಗಿಸಿಕೊಂಡು ಬಂದ ಹೊಸ್ತಿಲಲ್ಲಿ ಸೊಲೊಮನ್ ಸೊನ್ಸ್ ರವರು ತಮ್ಮ ತಂದೆ ಥಿಯೋಡರ್ ಸೋನ್ಸ್ ರವರು ಸ್ಥಾಪಿಸಿದ ಪ್ರಭಾಕರ ಟೈಲ್ಸ್ ವರ್ಕ್ ನ ನಿರ್ವಹಣೆಯ ಜವಾಬ್ದಾರಿಯನ್ನು ತಂದೆಯೊಡನೆ ಹಂಚಿಕೊಂಡರು. ಪ್ರಭಾಕರ ಟೈಲ್ಸ್ ವರ್ಕ್ ಬೆಳವಣಿಗೆಗೆ ತಮ್ಮ ಉದ್ಯಮ ಶೀಲತೆಯ ಕೌಶಲ್ಯವನ್ನು ಧಾರೆಯೆರೆದರು.

ಉದ್ದಿಮೆಗಳ ಬೆಳವಣಿಗೆಗಳೆಲ್ಲವೂ ಉದ್ಯಮದಾರನ ಉದ್ದಿಮಶೀಲ ಪ್ರವೃತ್ತಿಯನ್ನು ಅವಲಂಬಿಸಿರುತ್ತದೆ ಎಂಬ ಮಾತಿನಂತೆ ತಂದೆಯವರ ಮಾರ್ಗದರ್ಶನದಂತೆ ಪ್ರಭಾಕರ ಟೈಲ್ಸ್ ವರ್ಕ್ ಸಂಸ್ಥೆಯನ್ನು ಉತ್ಕರ್ಷದ ಹಾದಿಯಲ್ಲಿ ಮುನ್ನೆಡೆಸಿದರು. ಪ್ರಭಾಕರ ಟೈಲ್ಸ್ ವರ್ಕ್ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಪಂಚಗಂಗಾವಳಿ ನದಿದಂಡೆಯ ಮೇಲೆ 1931 ರಲ್ಲಿ ಸ್ಥಾಪಿತಗೊಂಡಿತ್ತು.

ಕುಂದಾಪುರದ ಹೊಸ ಬಸ್ಸು ನಿಲ್ದಾಣದ ಪಶ್ಚಿಮ ಭಾಗದಲ್ಲಿ ಫೆರಿ ರೋಡ್ ಎಂದು ಕರೆಯಲ್ಪಡುವ ಪಂಚಗಂಗಾವಳಿ ನದಿದಂಡೆಯ ಪ್ರದೇಶದಲ್ಲಿ ಈ ಕಾರ್ಖಾನೆ ಇದೆ ಆಗಿನ ಕಾಲದಲ್ಲಿ ಈ ಪ್ರದೇಶದಲ್ಲಿ ಹಂಚಿನ ಕಾರ್ಖಾನೆ ನಿರ್ಮಿಸಲು ನಿರ್ದಿಷ್ಟ ಉದ್ದೇಶವಿತ್ತು. ಆ ದಿನಗಳಲ್ಲಿ ಸುಧಾರಿತ ರಸ್ತೆಯಾಗಿರಲಿ, ಸೇತುವೆಯಾಗಲಿ, ಸರಕು ಸಾಗಾಣಿಕೆ ವಾಹನಗಳಾಗಲಿ ಇದ್ದಿದ್ದರಲಿಲ್ಲ ಇದೇ ಪಂಚಗಂಗಾವಳಿ ನದಿಯ ಮೂಲಕವೇ ಸರಕು ಸಾಗಾಣಿಕೆ ನಡೆಯುತ್ತಿತ್ತು ಇಲ್ಲಿ ತಯಾರಾದ ಹಂಚುಗಳನ್ನು ದೊಡ್ಡ ದೋಣಿಯ ಮೂಲಕ ಗಂಗೊಳ್ಳಿ ಬಂದರಿಗೆ ಸಾಗಿಸಿ ಅಲ್ಲಿಂದ ಮಚವೆ ಎಂದು ಕರೆಯಲ್ಪಡುವ ಮರದಿಂದ ನಿರ್ಮಿಸಲ್ಪಟ್ಟಿರುವ ಹಡಗಿನ ಮೂಲಕ ಮುಂಬೈ, ಗುಜರಾತ್ ಮುಂತಾದ ಪ್ರದೇಶಗಳಿಗೆ ರವಾನಿಸಲಾಗುತ್ತಿತ್ತು.

ಕಾರ್ಖಾನೆಗೆ ಬೇಕಾಗುವ ಕಚ್ಚಾವಸ್ತುಗಳು ಇರಲಿ ಕಾರ್ಮಿಕರು ದಿನಾ ಬಂದು ಹೋಗುವುದು ಇರಲಿ ಇದೇ ಪಂಚಗಂಗಾವಳಿ ನದಿಯ ಮೂಲಕವೇ ನಡೆಯುತ್ತಿತ್ತು. ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಹತ್ತು ಹಲವು ಸವಾಲುಗಳನ್ನು ಎದುರಿಸಿ ಸೊಲೊಮನ್ ಸೊನ್ಸ್ ರವರ ತಂದೆಯವರು ಇಲ್ಲಿ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿದ್ದು ಈಗ ಇತಿಹಾಸ.

ಕರಾವಳಿ ಕರ್ನಾಟಕದಲ್ಲಿ 1966 ಮತ್ತು 1967 ರ ಸಮಯದಲ್ಲಿ ಹಲವು ಸೇತುವೆಗಳು ನಿರ್ಮಾಣ ಮಾಡಿದ್ದರಿಂದ ಸಂಚಾರ ವ್ಯವಸ್ಥೆ ಸುಗಮವಾಗಿ ಪ್ರಭಾಕರ ಟೈಲ್ಸ್ ವರ್ಕ್ ಹಂಚುಗಳು ವ್ಯಾಪಕ ಪ್ರಮಾಣದಲ್ಲಿ ರಾಜ್ಯಾದ್ಯಂತ ಹರಡಲು ಕಾರಣವಾಯಿತು. ಸ್ವತಃ ಸೊಲೊಮನ್ ಸೋನ್ಸ್ ರವರೇ ಉತ್ತಮ ಗುಣಮಟ್ಟದ ತಮ್ಮ ಪ್ರಭಾಕರ ಬ್ರಾಂಡ್ ಹಂಚುಗಳನ್ನು ಮಾರ್ಕೆಟಿಂಗ್ ಮಾಡಲು ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಹೋಗುತ್ತಿದ್ದರು ರಸ್ತೆ ಸೌಕರ್ಯ ಮತ್ತು ವಾಹನ ಸೌಕರ್ಯಗಳು ಇಲ್ಲದ ಪ್ರದೇಶಗಳಲ್ಲಿ ಎತ್ತಿನ ಬಂಡಿಗಳಲ್ಲಿ ಹೋಗುವ ಅನಿವಾರ್ಯತೆಯ ಪ್ರಮೇಯ ಎದುರಾಗುತ್ತಿತ್ತು.

ಕಾರವಾರ ಮತ್ತು ಗೋವಾಕ್ಕೆ ಹಂಚು ಸಾಗಿಸಲು ಹರಸಾಹಸ ಪಡಬೇಕಿತ್ತು.ಆಗ ಕುಮಟಾ ಅಘನಾಶಿನಿ ನದಿಗೆ ಸೇತುವೆ ನಿರ್ಮಾಣವಾಗಿರಲಿಲ್ಲ ಕುಮಟಾದ ದೀವಿಗೆ ಬಳಿ ಹಂಚುಗಳನ್ನು ಆನ್ ಲೋಡ್ ಮಾಡಿ ದೋಣಿಯಲ್ಲಿ ಹಂಚು ಸಿಫ್ಟ್ ಮಾಡಿ ನದಿಯ ಉತ್ತರ ಭಾಗಕ್ಕೆ ಸಾಗಿಸಬೇಕಾದ ಅನಿವಾರ್ಯತೆ ಇತ್ತು.

ಒಮ್ಮೆ ಮಾರ್ಕೆಟಿಂಗ್ ಮಾಡಲು ಹೋದರೆ ಬರುವಾಗ ತಿಂಗಳು ಕಳೆಯುತ್ತಿತ್ತು. ತಮ್ಮ ಕೌಶಲ್ಯ ಭರಿತ ಪರಿಶ್ರಮದಿಂದ ಪ್ರಭಾಕರ ಟೈಲ್ಸ್ ವರ್ಕ್ ಸಂಸ್ಥೆಯನ್ನು ಅವರು ಹಂತ ಹಂತವಾಗಿ ಪ್ರವರ್ಧಮಾನಕ್ಕೆ ತಂದರು. ಕುಂದಾಪುರ ಸುತ್ತಮುತ್ತ ಜನರಿಗೆ ಆದಷ್ಟೂ ಕೆಲಸ ಕೊಟ್ಟು ಬದುಕು ಕಟ್ಟಿಕೊಡಬೇಕೆಂಬ ಅಭಿಲಾಷೆ ಅವರಲ್ಲಿ ಮನೆ ಮಾಡಿತ್ತು ಪರಿಣಾಮವಾಗಿ 1950 ರ ದಶಕದ ಉತ್ತರಾರ್ಧದಲ್ಲಿ ಗುಲ್ವಾಡಿಯಲ್ಲಿ ಹಂಚಿನ ಕಾರ್ಖಾನೆಯ ಮತ್ತೊಂದು ಶಾಖೆಯನ್ನು ಪ್ರಾರಂಭಿಸಿದರು. ನೂರಾರು ಜನರಿಗೆ ಕೆಲಸ ಕೊಟ್ಟರು ಅಂದು ಕಟ್ಟಿದ ಈ ಹಂಚಿನ ಕಾರ್ಖಾನೆ ಇಂದಿಗೂ ಉಚ್ಚ್ರಾಯ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

1956 ರಲ್ಲಿ ಸೊಲೊಮನ್ ಸೋನ್ಸ್ ಹಂಚಿನ ಕಾರ್ಖಾನೆಯ ವ್ಯವಹಾರಕ್ಕೆ ಸೇರಿದಾಗ,ಕಾರ್ಖಾನೆಯ ಉತ್ಪಾದನೆಯು ದಿನಕ್ಕೆ ಕೇವಲ 5000 ಟೈಲ್ಸ್ ಗಳಾಗಿದ್ದು,28 ಡೀಲರ್ ಗಳನ್ನು ನೇಮಿಸಿಕೊಳ್ಳಲಾಗಿತ್ತು.1970 ರ ಹೊತ್ತಿಗೆ ಕುಂದಾಪುರ ಮತ್ತು ಗುಲ್ವಾಡಿಯ ಎರಡು ಕಾರ್ಖಾನೆಗಳ ಉತ್ಪಾದನೆ ಪ್ರಮಾಣ 50000 ಟೈಲ್ಸ್ ಗಳಿಗೆ ಏರಿಕೆಯಾಯಿತು.ಆ ಸಮಯದಲ್ಲಿ ಡೀಲರ್ ಗಳ ಸಂಖ್ಯೆ ಕೂಡಾ 250 ಕ್ಕೆ ಏರಿತು.

ಹಂಚು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಂಡ ಬಳಿಕ ಸೊನ್ಸ್ ಕುಟುಂಬ ಇತರ ಕ್ಷೇತ್ರಗಳತ್ತ ದೃಷ್ಟಿ ಹಾಯಿಸಿದರ ಪರಿಣಾಮವಾಗಿ ಕುಂದಾಪುರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಹೋಟೆಲ್ ಶರೋನ್ 1985 ರಲ್ಲಿ ಪ್ರಾರಂಭವಾಯಿತು. ಇದರ ಜೊತೆಯಲ್ಲಿ ಬಸ್ರೂರಿನಲ್ಲಿ ವಾರಾಹಿ ನದಿ ಜಲರಾಶಿಯಲ್ಲಿರುವ ಸೋನ್ಸ್ ದ್ವೀಪದಲ್ಲಿ ನೈಸರ್ಗಿಕ ನೀರ ಹರವಿನಲ್ಲಿ ರೆಸಾರ್ಟ್ ನಿರ್ಮಾಣಗೊಂಡಿತ್ತು. ಈ ರೆಸಾರ್ಟ್ ಪ್ರಕೃತಿ ರಮಣೀಯವಾಗಿದ್ದು, ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ ಇದೆಲ್ಲವೂ ತಂದೆಯವರ ಕೊಡುಗೆ ಎಂದು ವಿನಮ್ರ ಭಾವದಿಂದ ವಿಶ್ವಾಸ್ ಸೋನ್ಸ್ ನುಡಿಯುತ್ತಾರೆ.

ಹಲವು ದಶಕಗಳ ಕಾಲದಿಂದಲೂ ಪ್ರಭಾಕರ ಬ್ರಾಂಡ್ ಹಂಚುಗಳು ತನ್ನ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವುದು ತಮ್ಮ ಸಂಸ್ಥೆಯ ನೈತಿಕ ಶಿಸ್ತಿನ ಪ್ರತೀಕ ಮತ್ತು ಹೆಮ್ಮೆಯ ಹೆಗ್ಗುರುತು ಎಂದು ಸೊಲೊಮನ್ ಸೋನ್ಸ್ ರವರ ಪುತ್ರರಾದ ವಿಶ್ವಾಸ್ ಸೋನ್ಸ್ ರವರು ವಿಶ್ವಾಸಭರಿತರಾಗಿ ನುಡಿಯುತ್ತಾರೆ.

ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ, ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುತ್ತದೆ ಎಂಬ ಸುಭಾಷಿತದಂತೆ ಸೊಲೊಮನ್ ಸೋನ್ಸ್ ರವರು ತಾವು ಉದ್ಯಮ ಕ್ಷೇತ್ರದಲ್ಲಿ ದುಡಿದ ಆರ್ಥಿಕ ದ್ರವ್ಯದ ಪಾಲನ್ನು ಸಮಾಜಮುಖಿ ಚಿಂತನೆಯ ಹಲವು ಕ್ಷೇತ್ರಕ್ಕೆ ದಾನರೂಪದಲ್ಲಿ ಸಮರ್ಪಿಸಿ ಹಲವರ ಆತ್ಮಾನಂದಕ್ಕೆ ಕಾರಣರಾಗಿದ್ದಾರೆ.

ಇಂಥದೊಂದು ಅವಿಸ್ಮರಣೀಯ ಘಟನೆಯೊಂದನ್ನು ಶ್ರೀಯುತರು ಮೆಲುಕು ಹಾಕಿದ್ದು, ಅದು ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಸಂಸ್ಥೆಯಾದ ವಿದ್ಯಾರಂಗ ಮಿತ್ರ ಮಂಡಳಿಯ ವಿದ್ಯಾನಿಧಿ ಯೋಜನೆಗೆ ಪ್ರಾರಂಭಿಕ ನಿಧಿಯಾಗಿ ಸೋನ್ಸ್ ರವರು ಹತ್ತು ಸಾವಿರ ನೀಡಿದ್ದರು ಮತ್ತು ಪ್ರತಿವರ್ಷ ಹಣವನ್ನು ಸಂಚಯನ ಮಾಡುತ್ತಾ ಬಂದ್ದಿದರು ವಿದ್ಯಾನಿಧಿಯ ಮಹಾಪೋಷಕರಾಗಿ ಅವರು ಹಂತ ಹಂತವಾಗಿ ವಿದ್ಯಾನಿಧಿ ಯೋಜನೆಯ ಶಕ್ತಿಯನ್ನು ವಿರಾಟ್ ಸ್ವರೂಪದಲ್ಲಿ ಕ್ರೋಢೀಕರಿಸಿ ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಭದ್ರವಾದ ಬುನಾದಿ ಹಾಕಿಕೊಟ್ಟರು.

ಸಮಾಜಮುಖಿ ಚಿಂತನೆಯ ಸಹೃದಯಿ ಸೋನ್ಸ್ ರವರ ಹೃದಯ ವೈಶ್ಯಾಲತೆಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ? ಯಾವ ಕ್ಷೇತ್ರದಲ್ಲಿಯಾದರೂ ಯಶಸ್ಸು ಕಾಣಬೇಕೆಂದರೆ ಧೀರ್ಘಕಾಲೀನವಾದ ಮತ್ತು ದೂರದೃಷ್ಟಿ ಚಿಂತನೆಯ ಯೋಜನೆಗಳಿರಬೇಕೆಂದು ವಿದ್ಯಾನಿಧಿ ಯೋಜನೆಯ ಕಾರ್ಯಕ್ರಮದ ಸಮಾರಂಭದಲ್ಲಿ ಸೋನ್ಸ್ ರವರು ಹೇಳಿದ್ದನ್ನು ಹಿರಿಯರೊಬ್ಬರು ಸ್ಮರಿಸಿಕೊಳ್ಳುತ್ತಾರೆ. ಜನರಿಗೆ ಗುಣಮಟ್ಟದ ಉತ್ಪನ್ನಗಳನ್ನು ಆದಷ್ಟೂ ಕಡಿಮೆ ಬೆಲೆಗೆ ಕೊಡಬೇಕೆನ್ನುವುದು ಸೋನ್ಸ್ ರವರ ಇಚ್ಛೆಯಾಗಿತ್ತು. ಅವರು ಯಾವತ್ತೂ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಂಡವರಲ್ಲ ಯಾವುದೇ ವ್ಯವಹಾರದಲ್ಲಾಗಲಿ ಅಂತಿಮವಾಗಿ ಗ್ರಾಹಕರ ಸಂತೃಪ್ತಿಯೇ ಯಶಸ್ಸಿಗೆ ಮುಖ್ಯವೆನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಒಬ್ಬ ಯಶಸ್ವಿ ಉದ್ಯಮಿಯಾಗಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡ ಸೋನ್ಸ್ ರವರು ಬಡವರಿಗೆ ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಕ್ರೀಡೆ, ನಾಟಕ, ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರವು ಶಾಲೆ ಕಾಲೇಜುಗಳಿಗೆ ಆರ್ಥಿಕ ಸಹಾಯ ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ನೆರವು ನೀಡುತ್ತಾ ಬಂದಿರುತ್ತಾರೆ.

ಕುಂದಾಪುರ ಕೋಡಿಯಲ್ಲಿ ಬಾಸೆಲ್ ಮಿಶನ್ ರವರು ನಡೆಸುತ್ತಿದ್ದ ಪ್ರಾಥಮಿಕ ಶಾಲೆ ಮುಚ್ಚುವ ಪರಿಸ್ಥಿತಿ ಬಂದಾಗ ಸೋನ್ಸ್ ರವರ ತಂದೆ ಶ್ರೀಯುತ ಥಿಯೋಡರ್ ಸೋನ್ಸ್ ರವರು ಶಾಲೆಯನ್ನು ಉಳಿಸುವ ನಿರ್ಧಾರ ಮಾಡಿ, ಶಾಲೆಗೆ ಸ್ವಂತ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ಮತ್ತು ಪೀಠೋಪಕರಣಗಳನ್ನು ಒದಗಿಸಿದರು.ಈ ಸತ್ಕಾರ್ಯಗಳನ್ನು ಮುಂದುವರಿಸಿದ ಸೊಲೊಮನ್ ಸೋನ್ಸ್ ರವರು ಈ ಶಾಲೆಯನ್ನು ಹೈಯರ್ ಪೈಮರಿ ಶಾಲೆಯನ್ನಾಗಿ ಪರಿವರ್ತಿಸಿ ಶಾಲೆಗೆ ಅಧ್ಯಾಪಕರು ಮತ್ತು ಇನ್ನಿತರ ಸೌಲಭ್ಯಗಳನ್ನು ಕಾಲ ಕಾಲಕಾಲಕ್ಕೆ ಒದಗಿಸುತ್ತಾ ಬಂದಿದ್ದಾರೆ. ಕೊರಾನಾ ಕಾಲದಲ್ಲಿ ಈ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಯಿತು.

ತಾನು ಬಾಲ್ಯದಲ್ಲಿ ಕಲಿತ ಶಾಲೆಯನ್ನು ಮರೆಯದೇ ಆ ಶಾಲೆಗೂ ಆಗಾಗ್ಗೆ ನೆರವು ನೀಡುತ್ತಿದ್ದಾರೆ. ಕುಂದಾಪುರ ಬೋರ್ಡ್ ಹೈಸ್ಕೂಲ್ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಶತಮಾನೋತ್ಸವದ ಸವಿ ನೆನಪಿಗಾಗಿ ಹೊಸ ತರಗತಿ ಕೋಣೆಗಳನ್ನು,ಕಾರ್ಯಾಲಯಗಳನ್ನು ನಿರ್ಮಿಸಿ ಶತಮಾನೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.

ಸಮಾಜ ಸೇವೆಯ ಮೇರು ಸಂಸ್ಥೆ ರೋಟರಿ ಕ್ಲಬ್ ನಲ್ಲಿ 27 ನೇ ವರ್ಷದಲ್ಲಿ ಸೇರಿ ಸಕ್ರಿಯ ಸದಸ್ಯರಾಗಿ ನಿರಂತರವಾಗಿ 53 ವರ್ಷಗಳ ಕಾಲ ಸೇವೆ ಸಲ್ಲಿಸಿದ ದಾಖಲೆ ನಿರ್ಮಿಸಿದರು. ಕುಂದಾಪುರ ರೋಟರಿ ಕ್ಲಬ್ ನೇತ್ರ ಚಿಕಿತ್ಸಾ ಶಿಬಿರದ ಅಧ್ಯಕ್ಷರಾಗಿ ಹತ್ತು ದಿನಗಳ ಕಾಲ ನೇತ್ರಾ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು.

ಯಾವುದೇ ಸಂದರ್ಭದಲ್ಲೇ ಆಗಲಿ, ನೀವು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ ಯಾವಾಗ ಆತ್ಮವಿಶ್ವಾಸ ಮುಂಚೂಣಿಗೆ ಬರುತ್ತದೆಯೋ ಆಗ ನಕರಾತ್ಮಕ ಅಂಶಗಳೆಲ್ಲ ಕಣ್ಮರೆಯಾಗಿ ಹೋಗುತ್ತದೆ ಎಂದು ಸೋನ್ಸ್ ರವರು ಯುವಜನತೆಗೆ ಸ್ಪೂರ್ತಿಯ ಸಂದೇಶವನ್ನು ನೀಡುತ್ತಾರೆ. ಕುಂದಾಪುರದ ಯುವಜನರು ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ಬಂದು ಹುಟ್ಟಿದೂರಿನಲ್ಲಿ ತಮ್ಮದೇ ಆದ ಪರಿಕಲ್ಪನೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಿದರೆ ನೂರಾರು ಜನರಿಗೆ ಉದ್ಯೋಗ ದೊರಕುತ್ತದೆ ಮತ್ತು ಊರಿನ ಅಭಿವೃದ್ಧಿಯಾಗುತ್ತದೆ. ಇದು ಯುವಜನತೆ ಊರಿಗೆ ನೀಡುವ ಅತಿ ದೊಡ್ಡ ಕೊಡುಗೆ ಎಂದು ಸೊಲೊಮನ್ ಸೊನ್ಸ್ ರವರು ಯುವಜನತೆಗೆ ಉದಾತ್ತ ಸಂದೇಶ ನೀಡಿದ್ದಾರೆ.

ಮಹಾನ್ ಕನಸುಗಾರ, ಅಪ್ರತಿಮ ಸಾಧಕ ಶ್ರೀ ಸೊಲೊಮನ್ ಸೋನ್ಸ್ ರವರ ಬಗ್ಗೆ ಬರೆಯುವಾಗ ಭಾರತ ಕಂಡ ಖ್ಯಾತ ಉದ್ಯಮಿ ಧೀರೂಬಾಯಿ ಅಂಬಾನಿಯವರ ಮಾತು ನೆನಪಾಗುತ್ತದೆ ” ದೊಡ್ಡದಾಗಿ ಯೋಚಿಸಿ, ಶೀಘ್ರವಾಗಿ ಯೋಚಿಸಿ, ಎಲ್ಲರಿಗಿಂತ ಮುಂದಾಗಿ ಯೋಚಿಸಿ, ಕಲ್ಪನೆಗಳು ಯಾರೊಬ್ಬರ ಏಕಸ್ವಾಮ್ಯವಲ್ಲ” ಬದುಕಿನ ಸಂಧ್ಯಾಕಾಲದಲ್ಲೂ, ಕ್ರೀಯಾಶೀಲ ಮನಸ್ಸು ಹೊಂದಿರುವ ಸೋನ್ಸ್ ರವರ ಮಾತುಗಳು ಮತ್ತು ಸ್ಮೃತಿಪಟಲದ ಸ್ಮರಣ ಶಕ್ತಿ ಅದ್ಭುತವಾಗಿದೆ ಮತ್ತು ಸ್ಪೂರ್ತಿಯ ಸೆಲೆಯಾಗಿದೆ. ಕುಂದಾಪುರದ ಸಹಸ್ರಾರು ಜನರ ಪಾಲಿಗೆ ಭಾಗ್ಯವಿಧಾತರಾದ ಸೊಲೊಮನ್ ಸೊನ್ಸ್ ರವರು ಚಿರಕಾಲ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

ಸಂದರ್ಶನ: ಸುಧಾಕರ ಕುಂದಾಪುರ
ಸಂಪಾದಕರು
ಕುಂದಾಪುರ. ಕಾಮ್

Share This Article
Leave a Comment
error: Content is protected !!