ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ

kundapuradotcom@gmail.com
9 Min Read

ಭರತ ಖಂಡದ ಪುಣ್ಯಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಲಿಂಗರೂಪಿಣಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿರುವ ವಿಷಯ ಸರ್ವ ವಿದಿತ. ಕುಂದಾಪುರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರದಿಂದ 6 ಕಿ.ಮೀ. ದೂರದ (ಸಿದ್ದಾಪುರ, ಹಳ್ಳಿಹೊಳೆ, ಜಡ್ಕಲ್, ಕೊಲ್ಲೂರು ರಸ್ತೆ) ಮಲೆನಾಡಿನ ಮೂಲೆಯಲ್ಲಿ ತೆಂಗು ಕಂಗುಗಳ ಮಧ್ಯ ಪವಿತ್ರವಾದ ಪುಣ್ಯ ಕ್ಷೇತ್ರ ಕಮಲಶಿಲೆಯು ಕಂಗೊಳಿಸುತ್ತಿದೆ. ಕಮಲವೂ, ಶಿಲೆಯೂ ಒಂದಾದಿ ಕಮಲಶಿಲೆಯಾಗಿ ದುಷ್ಟನಿಗ್ರಹ ಶಿಷ್ಟಪರಿಪಾಲನ ಕಾರ್ಯ ಇಲ್ಲಿ ನಡೆಯುತ್ತದೆ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಮಲಶಿಲೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಪ್ರಸಿದ್ಧ ಕ್ಷೇತ್ರವಾಗಿದ್ದು ಭಕ್ತರು ಭಕ್ತಿ ಧ್ಯಾನದಿಂದ ಆರಾಧಿಸಿ ಹರಕೆ ಸಲ್ಲಿಸಿ ಭಕ್ತಿ ಪರವಶತೆಯಿಂದ ಪೂಜಿಸುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿದಾಗ ಕೃತಾರ್ಥರಾಗಿ ಧನ್ಯತಾ ಭಾವದಿಂದ ಹಿಂದಿರುಗುತ್ತಾರೆ.

ಪ್ರಾಕೃತಿಕವಾಗಿ ವಿಶಿಷ್ಟ ಸ್ಥಾನವನ್ನು ಪಡೆದ ತಾಯಿಯು ಪ್ರಕೃತಿ ಪ್ರಿಯಳಾಗಿ ಇಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಿಂದ ಲಿಂಗ ರೂಪಿಣಿಯಾಗಿ ನೆಲೆ ನಿಂತಿದ್ದಾಳೆ. ಹುಟ್ಟಿದ್ದು ನೀರಿನಲ್ಲಿ, ರೂಪ ಕಲ್ಲು, ಆಭರಣವೇ ಮಣ್ಣು. ಇದರಿಂದ ಆ ತಾಯಿಯ ಅದ್ಭುತ ಶಕ್ತಿ ಏನೆಂಬುದರ ಅರಿವಾಗುತ್ತದೆ. ‘ಬ್ರಾಹ್ಮೀ’ ಶಕ್ತಿಯ ಸಂಕೇತ, ಭಕ್ತಿಯ ಉಗಮ. ಪರಮೇಶ್ವರನ ಮಡದಿ ಆದಿ ಶಕ್ತಿ ಪರಮೇಶ್ವರಿಯಾಗಿ, ಜಗತ್ತಿಗೆ ಬಂದ ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಬ್ರಹ್ಮಾಣೀ ಶಕ್ತಿ ಐಕ್ಯವಾದ್ದರಿಂದ ಬ್ರಾಹ್ಮೀಯಾಗಿ ಹೀಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯಾಗಿ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರವಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತ್ಯಾತ್ಮಕ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಸ್ವರೂಪಿಣಿಯಾಗಿ ತ್ರಿಶಕ್ತಾö್ಯತ್ಮಕವಾದ ಅದ್ಭುತ ಶಕ್ತಿ ಇಲ್ಲಿ ಅಡಗಿದೆ.

ಸುಪಾರ್ಶ್ವ ಗುಹೆ :
ಹಿಂದೆ ಕೃತ ಯುಗದಲ್ಲಿ ‘ಸುಪಾರ್ಶ್ವ’ನೆಂಬ ಚಕ್ರವರ್ತಿಯು ತಪಸ್ಸನ್ನು ಆಚರಿಸಿ ಮೋಕ್ಷ ಹೊಂದುವ ಸಂಕಲ್ಪ ಮಾಡುತ್ತಾನೆ. ತಪಸ್ಸಿಗೆ ಯೋಗ್ಯವಾದ ಸ್ಥಳವನ್ನು ಹುಡುಕುತ್ತಾ ಇರುವಾಗ ಶಿವ ಪ್ರೇರಣೆಯಾಗಿ ಶ್ರೀ ಕ್ಷೇತ್ರ ಕಮಲಶಿಲೆಗೆ ಬರುತ್ತಾನೆ. ಇಲ್ಲಿ ಹುಡುಕುತ್ತಿರುವಾಗ ದಟ್ಟವಾದ ಅರಣ್ಯ ಮಧ್ಯದಲ್ಲಿ ಗಿಡ ಮರ ಬಳ್ಳಿಗಳಿಂದಾವೃತವಾದ ಈ ಗುಹೆಯನ್ನು ನೋಡುತ್ತಾನೆ. ದೇವತೆಗಳಿಂದ ನಿರ್ಮಿತವಾಗಿ ರಕ್ಷಿಸಲ್ಪಟ್ಟ ಈ ಗುಹೆಯನ್ನು ಸಮೀಕರಣಮಾಡಿ ತಪಸ್ಸಿಗೆ ಯೋಗ್ಯವಾದ ತಾಣವನ್ನಾಗಿ ಮಾರ್ಪಡಿಸುತ್ತಾನೆ. ಹೀಗೆ ಸುಪಾರ್ಶ್ವ ರಾಜನಿಂದ ಈ ಗುಹೆಯು ಲೋಕಕ್ಕೆ ಪರಿಚಯವಾದ್ದರಿಂದ ‘ಸುಪಾರ್ಶ್ವ ಗುಹೆ’ ಎಂಬ ಹೆಸರು ಪ್ರಖ್ಯಾತವಾಯಿತು. ಸುಪಾರ್ಶ್ವನು ಅದೇ ಗುಹೆಯಲ್ಲಿ ತಪಸ್ಸನ್ನು ಆಚರಿಸಲು ನಿರ್ಧರಿಸುತ್ತಾನೆ. ತಪಸ್ಸಿಗೆ ಯಾವುದೇ ವಿಘ್ನವುಂಟು ಮಾಡದಂತೆ ಪರಮೇಶ್ವರನನ್ನು ಪ್ರಾರ್ಥಿಸಿ ಶಿವನನ್ನು ಕುರಿತು ಭಕ್ತಿಯಿಂದ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ.

ರಾಜನ ಅಗಾಧ ಭಕ್ತಿಗೆ ಮೆಚ್ಚಿದ ಶಿವನು ಅವನ ತಪಸ್ಸಿಗೆ ಯಾರಿಂದಲೂ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಲು ತನ್ನ ಗಣಗಳಲ್ಲಿ ಒಬ್ಬನಾದ ಭೈರವನಿಗೆ ಅಪ್ಪಣೆ ಮಾಡುತ್ತಾನೆ. ಶಿವನಾಜ್ಞೆಯಂತೆ ಗುಹಾದ್ವಾರದಲ್ಲಿ ಭೈರವನು ಬಂದು ಗುಹೆಯಲ್ಲಿ ತಪಸ್ಸನ್ನು ಆಚರಿಸುವವರಿಗೆ ರಕ್ಷಕನಾಗಿ ನಿಲ್ಲುತ್ತಾನೆ. ಮಹಾದೇವನು ಭೈರವನಿಗೆ ‘ನೀನು ಇಂದಿನಿಂದ ಇಲ್ಲಿಯೇ ನೆಲೆನಿಂತು ತಪಸ್ಸನ್ನು ಆಚರಿಸುವ ಋಷಿಮುನಿಗಳಿಗೆ ರಕ್ಷಕನಾಗಿ ಅವರ ತಪಸ್ಸಿದ್ದಿಗೆ ಕಾರಣೀಕನಾಗಿ ಸಿದ್ಧೇಶ್ವರನಾಗು’ ಎಂದು ಅಪ್ಪಣೆ ಮಾಡಿ ಸುಪಾರ್ಶ್ವನ ಎದುರಲ್ಲೇ ಮಾಯವಾಗುತ್ತಾನೆ. ಸುಪಾರ್ಶ್ವ ರಾಜನು ಅನೇಕ ವರ್ಷಗಳವರೆಗೆ ಗುಹೆಯಲ್ಲಿ ಕಠಿಣವಾದ ತಪಸ್ಸನ್ನು ಮಾಡಿ ಶಿವಸಾಯುಜ್ಯ ಹೊಂದುತ್ತಾನೆ. ಮುಂದೆ ಅನೇಕ ರಾಜ ಮಹಾರಾಜರು, ಋಷಿ ಮಹಾಮುನಿಗಳು, ಅಷ್ಟಾಂಗಯೋಗ ನಿರತರಾಗಿ ಶಾಂತ ಮತ್ತು ನಿರ್ಮಲ ಮನಸ್ಸಿನಿಂದ ಇಲ್ಲಿ ತಪವನ್ನಾಚರಿಸಿ ಮೋಕ್ಷ ಹೊಂದುತ್ತಾರೆ. ಈಗಲೂ ಕೂಡ ಈ ಪವಿತ್ರ ಗುಹೆಯಲ್ಲಿ ಮಹಾತ್ಮರು ಅಂತರ್ಧಾಯರಾಗಿ ತಪೋ ನಿರತರಾಗಿರುತ್ತಾರೆಂದು ಪ್ರತೀತಿ ಇದೆ.

ಈ ಗುಹೆಯು ಶ್ರೀ ಕ್ಷೇತ್ರ ಕಮಲಶಿಲೆಯಿಂದ ೨ ಕಿ.ಮಿ ದೂರದಲ್ಲಿ ಕಮಲಶಿಲೆ – ಹಳ್ಳಿಹೊಳೆ ರಸ್ತೆಯ ಎಡಭಾಗದಲ್ಲಿ ಅರಣ್ಯ ಪ್ರದೇಶದಲ್ಲಿದೆ. ಗುಹಾದ್ವಾರದಲ್ಲಿ ಸಿದ್ದೇಶ್ವರ ಭೈರವನ ಮೂರ್ತಿ ಇದೆ. ಸ್ವಲ್ಪ ಮುಂದೆ ಎಡಬಲಗಳಲ್ಲಿ ವ್ಯಾಘ್ರ ಗುಹೆ (ದೇವಿವಾಹನ ಹುಲಿಯ ವಾಸಸ್ಥಳ) ಇದೆ. ಸ್ವಲ್ಪ ಮುಂದೆ ಎಡಕ್ಕೆ ಮೂರು ವಿಭಿನ್ನ ಲಿಂಗಗಳು ಗೋಚರಿಸುತ್ತವೆ. ಕಾಳಿ, ಲಕ್ಷ್ಮೀ, ಸರಸ್ವತಿಯರೆಂಬ ಶಕ್ತಿತ್ರಯಸ್ಥ ರೂಪಿಣಿಯಾದ ಆದಿಶಕ್ತಿಯ ಉದ್ಭವ ಲಿಂಗಗಳು ಎಂದು ಊಹಿಸಲಾಗಿದೆ. ಇಲ್ಲಿಯೇ ಕೆಳಗಿಳಿದಾಗ ‘ಗಂಗೆ, ಗೌರಿ’ಯರೆಂಬ ಜೋಡುಕೆರೆಗಳಿವೆ.

ಮುಂದೆ ಸಾಗಿದಾಗ ನಾಗನ ಸನ್ನಿಧಿ ಇದೆ. ನಾಗರಾಜನು ತಪಸ್ಸು ಮಾಡಿದ ಸ್ಥಳವಾಗಿದ್ದು ಇಲ್ಲಿಂದ ನಾಗ ತೀರ್ಥವು ಅಂತರ್ಗಾಮಿಯಾಗಿ ಹರಿಯುತ್ತಿದೆ. ಈ ನಾಗತೀರ್ಥವು ಮುಂದೆ ಕುಬ್ಜೆಯಲ್ಲಿ ಸಂಗಮವಾಗುತ್ತದೆ. ಕುಬ್ಜಾ ನಾಗತೀರ್ಥ ಸಂಗಮವಾಗುವಲ್ಲಿ ರೈಕ್ವಾ ಮಹರ್ಷಿಗಳ ಆಶ್ರಮದಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀಯು ಲಿಂಗ ರೂಪಿಯಾಗಿ ಪಾತಾಳದಿಂದ ಅವಿರ್ಭವಿಸಿರುತ್ತಾಳೆ. ಗುಹೆಯ ಮೇಲ್ಗಡೆ ದೇವರ ಹುಲಿಗಳಿಗೆ ಚಳಿ ನಿವೃತ್ತಿಗೆ ಬೆಂಕಿ (ಆಗಿಷ್ಟಿಕೆ) ಹಾಕುವ ಸಂಪ್ರದಾಯವಿದೆ. ‘ಹುಲಿ ಚಾವಡಿ’ ಎಂಬ ಕಟ್ಟಡವಿರುತ್ತದೆ. ದೇವೀ ಸಾನಿಧ್ಯದಿಂದಲೂ, ಋಷಿಮುನಿಗಳ ತಪಸ್ಸಿನ ಪ್ರಭಾವದಿಂದಲೂ ಸುಪಾರ್ಶ್ವ ಗುಹೆಯು ಪರಮ ಪವಿತ್ರವಾಗಿದೆ. ಆದಿಶೇಷನು ತಪಸ್ಸು ಮಾಡಿದ ಗುಹೆಯಾದ್ದರಿಂದ ಇದಕ್ಕೆ ಆದಿ ಸ್ಥಳ ಗುಹಾಲಯ ಎಂತಲೂ ಕರೆಯುತ್ತಾರೆ.

ಕುಬ್ಜಾ ನದಿ :

ಹಿಂದೆ ಕೈಲಾಸ ಪರ್ವತದ ಶಿಖರದಲ್ಲಿ ಸಿದ್ದ ಗಂಧರ್ವರಿಂದ ಸೇವಿಸಲ್ಪಡುವ ವಜ್ರ ವೈಡೂರ್ಯಗಳಿಂದ ಕೂಡಿದ ಶಿವ ಭಕ್ತ ಸಮೂಹದಿಂದ ಆರಾಧಿಸಲ್ಪಡುವ ಮಹೇಶ್ವರನು ಸತಿ ಪಾರ್ವತಿಯೊಂದಿಗೆ ನವರತ್ನ ಖಚಿತ ಪೀಠದಲ್ಲಿ ಆಸೀನನಾಗಿದ್ದನು. ಇಲ್ಲಿ ಪ್ರತಿನಿತ್ಯ ಸಂಧ್ಯಾ ಕಾಲದಲ್ಲಿ ಪದ್ದತಿಯಂತೆ ನಾಟ್ಯ ಕೋವಿದೆಯಾದ ಪಿಂಗಲಾ ಎಂಬ ವೇಶೈಯಿಂದ ನರ್ತನ ಸೇವೆ ನಡೆಯುತ್ತಿತ್ತು. ಇದರಿಂದ ಶಿವ ಪಾರ್ವತಿಯರು ಸಂತೋಷ ಪಡುತ್ತಿದ್ದರು. ಒಂದು ದಿನ ಪಿಂಗಲೆಯು ತನ್ನ ದೇಹ ಸೌಂದರ್ಯದಿಂದ ಗರ್ವಿತಳಾಗಿ ರೂಪಮದದಿಂದ ನಾಟ್ಯವನ್ನು ಮಾಡುವುದಿಲ್ಲ. ಆಗ ಕ್ರೋಧಗೊಂಡ ಪಾರ್ವತಿಯು ಪಿಂಗಲೆಗೆ ‘ಸರ್ವಲೋಕವೆ ಅಸಹ್ಯ ಪಡುವಂತಹ ಅಂಕುಡೊಂಕಿನ ಗೂನು ಬೆನ್ನಿನ ಕುಬ್ಜೆಯಾಗು. ರೂಪಮದದಿಂದ ಗರ್ವಿತಳಾದ ನಿನಗೆ ಇದೇ ಶಾಪ’ ಎಂದು ಶಪಿಸುತ್ತಾಳೆ. ಶಾಪಗ್ರಸ್ತಳಾದ ಪಿಂಗಲೆಯು ತಕ್ಷಣವೇ ಸುಂದರವಾದ ದೇಹದಿಂದ ಬಿಡಲ್ಪಟ್ಟು ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ ದೇವಿಯನ್ನು ಪರಿಪರಿಯಾಗಿ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಕುಬ್ಜೆಯ ಮೊರೆಗೆ ಪ್ರಸನ್ನಳಾದ ಪಾರ್ವತಿಯು ಈ ರೀತಿ ಅಭಯವನ್ನು ನೀಡುತ್ತಾಳೆ.

“ನಾನು ಭೂಲೋಕದಲ್ಲಿ ಕಂಟಕರಾಗಿರುವ ಖರರಟ್ಟಾಸುರರ ಸಂಹಾರಕ್ಕಾಗಿ ಹೋಗುತ್ತೇನೆ. ಅಲ್ಲಿ ಸಹ್ಯ ಪರ್ವತದ ಬಳಿ ಇರುವ ಮನೋಹರವಾದ ರೈಕ್ವಾ ಮಹಾಮುನಿಗಳ ಆಶ್ರಮದ ಮುಂಭಾಗದಲ್ಲಿ ಬರುವ ಶ್ರಾವಣ ಮಾಸದ ಕೃಷ್ಣ ನವಮಿ ಶುಕ್ರವಾರದಂದು ಪಾತಾಳದಿಂದ ಲಿಂಗ ರೂಪಿಯಾಗಿ ಅವತರಿಸುತ್ತೇನೆ. ಸದಾ ಶಿವನ ಆಜ್ಞೆಯಂತೆ ಆ ಪುಣ್ಯತಮ ಮತ್ತು ಪವಿತ್ರವಾದ ಸ್ಥಳದಲ್ಲಿ “ಕಮಲಶಿಲಾ” ರೂಪದ ಲಿಂಗೆಯಾಗಿ ಅವಿರ್ಭವಿಸಿ, ಭಕ್ತರ ಭಕ್ತಿಗೆ ಮೆಚ್ಚಿ ಭಕ್ತಾಭೀಷ್ಟ ಪ್ರದಾಯಿನಿಯಾಗುತ್ತೇನೆ. ಮುಂದೆ ಆ ಕ್ಷೇತ್ರವು ಕಮಲಶಿಲೆಯೆಂದು ಖ್ಯಾತಿಯಾಗುತ್ತದೆ. ನೀನು ಭೂಲೋಕಕ್ಕೆ ಹೋಗಿ ರೈಕ್ವಾಶ್ರಮದ ಬಳಿ ಇರುವ ಸುಪಾರ್ಶ್ವ ಗುಹೆಯಿಂದ ಹೊರಡುವ ನಾಗತೀರ್ಥದ ಸಮೀಪ ಆಶ್ರಮ ರಚಿಸಿಕೊಂಡು ನನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಾಡು. ನಿನ್ನ ತಪಸ್ಸಿಗೆ ಮೆಚ್ಚಿ ಮುಂದೆ ಶಾಪಕ್ಕೆ ಮೋಕ್ಷವನ್ನು ಕರುಣಿಸುತ್ತೇನೆ.” ಎಂಬುದಾಗಿ ಅಪ್ಪಣೆ ಕೊಡಿಸುತ್ತಾಳೆ.

ಪಾರ್ವತಿಯ ಆಜ್ಞೆಯಂತೆ ಭೂಲೋಕಕ್ಕೆ ಬಂದು ಪಿಂಗಲೆಯು ರೈಕ್ವಾಶ್ರಮದ ಬಳಿ ಇರುವ ನಾಗತೀರ್ಥದ ಸಮೀಪ ಆಶ್ರಮ ರಚಿಸಿಕೊಂಡು ಅಂಬಿಕೆಯ ದರ್ಶನವನ್ನು ಅಪೇಕ್ಷಿಸುತ್ತಾ ಮಹತ್ತಾದ ತಪಸ್ಸನ್ನು ಮಾಡಿದಳು. ರೈಕ್ವಾ ಮಹಾಮುನಿಗಳು ಮಹಾ ದಿವ್ಯಜ್ಞಾನಿಯಾದ ಮಹರ್ಷಿಗಳಾಗಿರುತ್ತಾರೆ. ಇವರು ಇಲ್ಲಿ ಕಠಿಣವಾದ ತಪಸ್ಸನ್ನು ಮಾಡಿ ಸಿದ್ದಿ ಪಡೆದು ಮೋಕ್ಷ ಹೊಂದಿದ ಮುನಿ ಪುಂಗವರಾಗಿರುತ್ತಾರೆ. ಇವರ ತಪೋ ಬಲದಿಂದ ಕಮಲಶಿಲೆಯು ಇಂದು ಪುಣ್ಯಭೂಮಿಯಾಗಿದೆ. ರೈಕ್ವಾ ಮಹರ್ಷಿಗಳ ಅಭೀಷ್ಟದಂತೆ ಕುಬ್ಜೆಯು ತಪಸ್ಸಿಗೆ ಸಂತುಷ್ಟಳಾಗಿ ಹಿಂದೆ ಹೇಳಿದಂತೆ ಪಾತಾಳದಿಂದ ಲಿಂಗ ರೂಪಿಯಾಗಿ ಪ್ರತ್ಯಕ್ಷಳಾದ ಪಾರ್ವತಿಯು ಈ ರೀತಿ ಶಾಪಕ್ಕೆ ವಿಮೋಚನಾ ದಾರಿಯನ್ನು ಸೂಚಿಸುತ್ತಾಳೆ.

‘ಪಿಂಗಲೆಯೇ ನಿನ್ನ ತಪಸ್ಸಿಗೆ ಮೆಚ್ಚಿರುತ್ತೇನೆ. ನೀನು ಈಗ ಮಧುರೆಗೆ ಹೋಗು. ಅಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕಂಸನ ವಧೆಗಾಗಿ ಬರುತ್ತಾನೆ. ನೀನು ಮಧುರೆಯಲ್ಲಿ ಮನೆಮಾಡಿಕೊಂಡು ಕೃಷ್ಣನ ದರ್ಶನಕ್ಕೆ ಕಾದಿರು. ಶ್ರೀ ಕೃಷ್ಣನ ದರ್ಶನ, ಆಲಿಂಗನದಿಂದ ನಿನ್ನ ಕುಬ್ಜತ್ವವು ನಿವಾರಣೆಯಾಗಿ ಮೊದಲಿನ ರೂಪದಿಂದ ಹೊಂದಿ ಕೈಲಾಸವನ್ನು ಸೇರುತ್ತಿ. ನೀನು ತಪಸ್ಸು ಮಾಡಿದ ಈ ಪ್ರದೇಶದಲ್ಲಿರುವ ಸಹ್ಯ ಪರ್ವತದಲ್ಲಿ ಹುಟ್ಟಿ ಪಶ್ಚಿಮಾಂಬುಧಿಯನ್ನು ಸೇರುವ ಈ ನದಿಯು ‘ಕುಬ್ಜಾನದಿ’ಯಾಗಲಿ, ಆ ಚಂದ್ರಾರ್ಕವಾಗಿ ನಿನ್ನ ಹೆಸರು ಬೆಳಗಲಿ. ನಿನ್ನ ಕೋರಿಕೆಯಂತೆ ವರ್ಷಕ್ಕೊಮ್ಮೆ ನೀನಾಗಿಯೆ ಹುಟ್ಟಿ ಬಂದು ನನ್ನನ್ನು ಸ್ನಾನ ಮಾಡಿಸುವ ಪುಣ್ಯ ಅವಕಾಶವನ್ನು ನಿನಗೆ ಕರುಣಿಸಿದ್ದೇನೆ. ಯಾರು ಈ ನದಿಯಲ್ಲಿ ಸ್ನಾನ ಮಾಡಿ ನನ್ನನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಸಕಲ ವಿಧವಾದ ಸಂಪತ್ತು ದೊರೆಯುತ್ತದೆ. ಶರತ್ಕಾಲದಲ್ಲಿ ವಿಶೇಷವಾದ ಹೋಮ ಹವನಗಳು ಸುವಾಸಿನೀ ಬ್ರಾಹ್ಮಣ ಸಂತರ್ಪಣೆ ಭಕ್ಷ್ಯಭೋಜ್ಯಾದಿ ನೈವೇದ್ಯಗಳಿಂದ ಭಕ್ತಿಪೂರ್ವಕವಾಗಿ ಯಾರು ನನ್ನನ್ನು ಪೂಜಿಸುತ್ತಾರೋ ಅವರಿಗೆ ಸಂಪೂರ್ಣ ಅನುಗ್ರಹವನ್ನಿಯುತ್ತೇನೆ. ನೀನು ಮಧುರೆಗೆ ಹೋಗು” ಎಂಬುದಾಗಿ ಪಾರ್ವತಿಯು ವಚನವೀಯುತ್ತಾಳೆ.

ದೇವಿಯಿಂದ ವರ ಪಡೆದ ಕುಬ್ಜೆಯು ಮಧುರೆಗೆ ಬಂದು ತನಗಾಗಿ ಒಂದು ಮನೆಯನ್ನು ಕಟ್ಟಿಕೊಂಡು ಶ್ರೀ ದೇವಿಯನ್ನು ಧ್ಯಾನಿಸುತ್ತಾ ಕೃಷ್ಣನ ಆಗಮನಕ್ಕಾಗಿ ಕಾಯುತ್ತಿದ್ದಳು. ಕಂಸನಿಗೆ ಸುಗಂಧ ದ್ರವ್ಯಗಳನ್ನು ಸಾಗಿಸುವ ಕೆಲಸದಲ್ಲಿ ನಿರತಳಾಗಿ ಶ್ರೀ ಕೃಷ್ಣಾನುಗ್ರಹಕ್ಕೆ ಕಾತರಳಾಗಿರುತ್ತಾಳೆ. ಕಂಸನ ವಧೆಗಾಗಿ ಶ್ರೀ ಕೃಷ್ಣ ಬಲರಾಮರು ಬರುವಾಗ ದಾರಿಯಲ್ಲಿ ಕುಬ್ಜೆ ಸಿಗುತ್ತಾಳೆ. ಶ್ರೀ ಕೃಷ್ಣ ದರ್ಶನದಿಂದ ಆನಂದ ಭರಿತಳಾಗಿ ತನ್ನ ಮನೆಗೆ ಆಹ್ವಾನಿಸಿ ನಡೆದ ವೃತ್ತಾಂತವನ್ನೆಲ್ಲ ವಿವರಿಸುತ್ತಾಳೆ. ಶ್ರೀ ಕೃಷ್ಣನ ಆಲಿಂಗನದಿಂದ ಅವಳ ಶಾಪ ವಿಮೋಚನೆಯಾಗಿ ಕುಬ್ಬತ್ವ ವಿವಾರಣೆ ಆಗುತ್ತದೆ. ಅತ್ಯಂತ ಸುಂದರಿಯಾಗಿ ಮೊದಲಿನ ರೂಪವನ್ನು ಪಡೆಯುತ್ತಾಳೆ. ಶ್ರೀ ಕೃಷ್ಣ ಪರಮಾತ್ಮನಿಗೆ ಸಾಷ್ಟಾಂಗ ನಮಸ್ಕರಿಸಿ ಪುನಃ ರೈಕ್ವಾಶ್ರಮಕ್ಕೆ ಬಂದು ಶ್ರೀ ಬ್ರಾಹ್ಮಿ ದುರ್ಗಾಂಬೆಯನ್ನು ಸ್ತುತಿಸಿ ಕೈಲಾಸಕ್ಕೆ ಹೊಗುತ್ತಾಳೆ.

ಹೀಗೆ ಕುಬ್ಜಾ ನದಿಯು ಪಂಚನದಿಗಳಲ್ಲಿ ಒಂದಾಗಿ ಪಂಚಗಂಗಾವಳಿ (ಕುಬ್ಜಾ, ಕೇಟಕೀ, ವಾರಾಹಿ, ಸೌಪರ್ಣಿಕಾ, ಚಕ್ರಾ)ಯಲ್ಲಿ ಪಶ್ಚಿಮಾಂಬುಧಿಯನ್ನು ಸೇರುತ್ತದೆ. ಪ್ರತೀ ವರ್ಷವೊಮ್ಮೆಯಾದರೂ ಕುಬ್ಜಾನದಿಯು ಉಕ್ಕಿ ಹೆಬ್ಬಾಗಿಲಿನಿಂದ ಒಳ ಪ್ರವೇಶಿಸಿ ಶ್ರೀ ಬ್ರಾಹ್ಮಿ ದುರ್ಗಾಂಬೆಯನ್ನು ಸ್ನಾನಮಾಡಿಸುವ ಪರಿಪಾಠವಿದೆ. ಈ ನದಿಯು ಎಲ್ಲಿಯೂ ನೇರವಾಗಿ ಹರಿಯದೆ ಅಂಕುಡೊಂಕಾಗಿ ಹರಿಯುತ್ತಿರುತ್ತದೆ. ‘ಕುಬ್ಜಾ’ ಎಂಬ ಹೆಸರು ಅನ್ವರ್ಥಕವಾಗಿದೆ.

ಪುರಾಣದ ಪ್ರಕಾರ ಯುಯುಗಾಂತರಗಳ ಹಿಂದಿನ ಉಲ್ಲೇಖವಿದೆ. ಈ ಯುಗದಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಗೋಚರವಾಗಿರಬಹುದೆಂದು ಅಂದಾಜಿಸಲಾಗಿದೆ. ಈಗ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನವಿರುವ ಸ್ಥಳವು ಕುಬ್ಜಾ ನದಿ ತೀರ ಪ್ರದೇಶವಾಗಿದ್ದು ಮರಗಿಡ ಪೊದೆಗಳಿಂದ ಆರಿಸಲ್ಪಟ್ಟಿತ್ತು ಇಲ್ಲಿ ವಾಸವಿದ್ದ ಬ್ರಾಹ್ಮಣರೊಬ್ಬರ ಮನೆಯ ದನವು ಹಾಲು ಕೊಡುವುದನ್ನು ನಿಲ್ಲಿಸಿತು. ಅವರು ಏಕೆ ಹಾಲು ಕೊಡುವುದಿಲ್ಲವೆಂದು ಪರೀಕ್ಷಿಸಿದಾಗ ಆ ದನವು ಮರಗಿಡಗಳ ನಡುವೆ ಧಾರಾಕಾರವಾಗಿ ಹಾಲು ಸುರಿಸುತ್ತಿತ್ತು. ಅದೇನೆಂದು ಪರಿಶೀಲಿಸಿದಾಗ ಕಮಲಶಿಲಾ ರೂಪದ ಲಿಂಗದ ಮೇಲೆ ಹಾಲಿನ ಅಭಿಷೇಕವಾಗುತ್ತಿತ್ತು. ಇದನ್ನು ಕಂಡ ಆ ವಿಪ್ರ ಶ್ರೇಷ್ಠರು ಇಲ್ಲಿನ ಅರಣ್ಯವನ್ನೆಲ್ಲ ಕಡಿದು ದೇಗುಲವನ್ನು ಕಟ್ಟಿ ಲಿಂಗ ರೂಪವಾದ್ದರಿಂದ ‘ಬ್ರಹ್ಮಲಿಂಗೇಶ್ವರ’ ಎಂದು ಪೂಜಿಸಿ ತೊಡಗಿದರು. ಹೀಗೆ ಹಲವು ಕಾಲ ಕಳೆದ ನಂತರ ಆ ಅರ್ಚಕರಿಗೆ ಸ್ವಪ್ನದಲ್ಲಿ ‘ನಾನು ಬ್ರಹ್ಮ ಲಿಂಗನಲ್ಲ ನನ್ನನ್ನು ಬ್ರಾಹ್ಮೀ ದುರ್ಗಾಪರಮೇಶ್ವರಿ ಎಂದು ಆರಾಧಿಸು’ ಎಂದು ಅಪ್ಪಣೆ ಆಗುತ್ತದೆ. ಅಂದಿನಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ಷೇತ್ರವಾಗಿ ಪ್ರವರ್ಧಮಾನಕ್ಕೆ ಬಂದಿರುತ್ತದೆ. ನಿತ್ಯಾಲಂಕಾರದ ರಜತ ಮುಖವಾಡವು ಶಿವನದ್ದಾಗಿದೆ. ಅಭಿಷೇಕದ ಧಾರಾಬಟ್ಟಲಿನಲ್ಲಿ ‘ಕಮಲಶಿಲೆ ಬ್ರಹ್ಮಲಿಂಗ ದೇವರಿಗೆ ಬಿದನೂರು ಅಣ್ಣಾಜೀ ಬಂಕಪ್ಪನ ಸೇವೆ” ಎಂದಿದೆ.

ವೃಶ್ಚಿಕ ಬಹುಳ ಪಂಚಮಿಯಂದು ಡಮರು ಸೇವೆ (ತೊಡಗು ಬಳಿ) ನಡೆಯುತ್ತದೆ. ಇದರಿಂದ ಹಿಂದೆ ಬ್ರಹ್ಮಲಿಂಗನೆಂದು ಪೂಜಿಸುತ್ತಿದ್ದಾರೆಂತ ವ್ಯಕ್ತವಾಗುತ್ತದೆ. ದೇವಳದಲ್ಲಿರುವ ಆಭರಣಾದಿಗಳ ಲಾಂಛನದಿಂದ ಹಿಂದೆ ಕೆಳದಿ ಅರಸರ ಮತ್ತು ಮೈಸೂರು ಅರಸರ ಕೊಡುಗೆ ಎಂದು ತಿಳಿದು ಬರುತ್ತದೆ. ಕೆಳದಿ ಮತ್ತು ಮೈಸೂರು ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿತ್ತು ಎಂದು ತಿಳಿದುಬರುತ್ತದೆ. ಹೀಗೆ ರಾಜ ಮಹಾರಾಜರ ಆಶ್ರಯದಲ್ಲಿ ಅನೇಕ ಮಹನೀಯರ ಆಡಳಿತದಲ್ಲಿ ಶ್ರೀ ಕ್ಷೇತ್ರವು ಅಭಿವೃದ್ಧಿಯಾಗುತ್ತಾ ಬಂದಿದೆ. ಈಗಿನ ಆಡಳಿತ ಮಂಡಳಿಯವರು ಶ್ರೀ ಕ್ಷೇತ್ರವನ್ನು ಅತ್ಯಂತವಾಗಿ ಅಭಿವೃದ್ಧಿ ಪಡಿಸಿರುತ್ತಾರೆ. ಅಭಿವೃದ್ಧಿ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಾ ತಮ್ಮನ್ನು ತೊಡಗಿಸಿಕೊಂಡು ಕ್ಷೇತ್ರವು ಪ್ರಗತಿಯ ಮುಂಚೂಣಿಗೇರಲು ಕಾರಣೀಕರಾಗಿರುತ್ತಾರೆ. ಕ್ಷೇತ್ರಕ್ಕೆ ಭಕ್ತರ ಅನುಕೂಲತೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಫಲರಾಗಿರುತ್ತಾರೆ.

ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನ ಅನ್ನ ಪ್ರಸಾದ

ಕಮಲಶಿಲೆ ದೇವಸ್ಥಾನದ ಪ್ರಸಾದ ಭೋಜನಕ್ಕೆ ಅತಿಶಯವಾದ ಮಹತ್ವ ಇದೆ.ಭಕ್ತರು ಇದನ್ನು ಅಮ್ಮನ ವರಪ್ರಸಾದವೆಂದೇ ಭಕ್ತಿಯಿಂದ ಸವಿಯುತ್ತಾರೆ.ವಿಧ ವಿಧದ ತರಕಾರಿ ಬೇಳೆಕಾಳುಗಳಿಂದ ಮಾಡುವ ಪದಾರ್ಥಗಳು,ಪಲ್ಯಗಳು ನಾಲಿಗೆಗೆ ಪವಿತ್ರತೆಯ ಸ್ವಾದವನ್ನು ನೀಡುತ್ತದೆ.ಸುವಾಸನೆ ಭರಿತ ಊಟದ ಜೊತೆಗೆ ಮೂರ್ನಾಲ್ಕು ಬಗೆಯ ಸಿಹಿತಿಂಡಿಗಳು ,ಸಂತೃಪ್ತಿಯನ್ನು ನೀಡುತ್ತದೆ.ವಿಧ ವಿಧದ ಭಕ್ಷ್ಯ ಭೋಜನಗಳ ಜೊತೆಗೆ ಉದರ ತಂಪಿಗೆ ಮೊಸರು, ಮಜ್ಜಿಗೆ, ಕೋಲ್ಡ್ ನೀರು, ಬೀಸಿ ನೀರು ಎಲ್ಲವೂ ಲಭ್ಯ.ಊಟದ ಸಮಯ ಮುಗಿಯುವ ತನಕವೂ ಹಸಿದು ಬಂದ ಭಕ್ತರ ಹೊಟ್ಟೆ ತಣಿಸಲು ಇಲ್ಲಿನ ಅನ್ನಭೋಜನ ಶಾಲೆಯ ಸಿಬ್ಬಂದಿಗಳು ತೋರುವ ಕಾಳಜಿ,ಪ್ರೀತಿ ಅನನ್ಯ.ಜೀವನದಲ್ಲಿ ಒಮ್ಮೆಯಾದರೂ ಕಮಲಶಿಲೆ ದೇಗುಲದ ಊಟವನ್ನು ಸವಿದರೆ ಖಂಡಿತಾವಾಗಿಯೂ ನಿಮಗೆ ಅದ್ಭುತ ಅನುಭವವಾಗುತ್ತದೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹ ಪ್ರಾಪ್ತಿಯಾಗುತ್ತದೆ.ನಿಜಕ್ಕೂ ಈ ಪ್ರಸಾದ ಭೋಜನ ಮಾಡಲು ಪುಣ್ಯ ಮಾಡಿರಬೇಕು.

ತಾವೆಲ್ಲರೂ ಶಕ್ತಿ ಕ್ಷೇತ್ರ ಕಮಲಶಿಲೆಗೆ ಬಂದು ಭಕ್ತಿಗೊಲಿವ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಕೃತಾರ್ಥರಾಗಿರಿ.

ಸುಧಾಕರ್ ಕುಂದಾಪುರ
ಕೃಪೆ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ.

Share This Article
Leave a Comment
error: Content is protected !!