ಪ್ರಪಂಚದ ಏಕೈಕ ಜಲಾಧಿವಾಸ ಗುಡ್ಡಟ್ಟು ವಿನಾಯಕ

kundapuradotcom@gmail.com
7 Min Read

ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ, ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯದೇವ, ಸ್ವಯಂಭುವಿನಲ್ಲಿ ಬಹಳ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತು ಈ ಕ್ಷೇತ್ರ ರಮಣೀಯ.

ಈ ದೇವಳವು ಯಾವ ಶತಮಾನಕ್ಕೆ ಸೇರಿದ್ದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿರುವುದಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಅಸ್ತಿತ್ವದಲ್ಲಿ ಇದ್ದಿತ್ತು ಎನ್ನುವುದು ನಿಸ್ಸಂದೇಹ. ದೇವಳದ ಗರ್ಭಗುಡಿ ಅರ್ಥಾತ್ ದೇವರು ನೆಲೆಸಿರುವ ಗುಹೆ ಪ್ರಾಕೃತಿಕವಾದರೂ ಎದುರು ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ಇತ್ಯಾದಿ ರಚನೆಯಾಗಿರುತ್ತದೆ. ಕಲಾತ್ಮಕವಾದ, ಭವ್ಯವಾದ ಶಿಲಾಮಯ ಗರ್ಭಗುಡಿಯು 1997 ರಲ್ಲಿ ನವೀಕರಣ ಗೊಂಡಿದೆಯಾದರೂ, ಮೊದಲೂ ಕೂಡಾ ಶಿಲಾಮಯ ಗರ್ಭಗುಡಿಯೇ ಅಸ್ತಿತ್ವದಲ್ಲಿ ಇತ್ತು. ಈ ಗರ್ಭಗುಡಿಯು ಸಾಧಾರಣ 800 ವರ್ಷ ಹಳೆಯದು ಎನ್ನುವ ಅಭಿಪ್ರಾಯವನ್ನು ಇಲ್ಲಿಗೆ ಭೇಟಿನೀಡಿದ ಪುರಾತತ್ವ ಸಂಶೋಧಕರು, ಉಡುಪಿ ಎಂ.ಜಿ.ಎಂ ಕಾಲೇಜಿನ ಆಗಿನ ಪ್ರಾಂಶುಪಾಲರೂ ಆದ ಪ್ರೊ. ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿರುತ್ತಾರೆ. ಅಂದರೆ ಸಾವಿರಾರು ವರ್ಷಗಳಿಂದ ಇಲ್ಲಿ ಗಣಪತಿಯ ಆರಾಧನೆ ನಡೆಯುತ್ತಿತ್ತು ಎನ್ನುವುದು ನಿಸ್ಸಂದೇಹ.

ಅರ್ಚಕರು: ಈ ದೇವಳದ ಅರ್ಚಕತ್ವವು ಗುಡ್ಡಟ್ಟು ಅಡಿಗರ ಮನೆತನಕ್ಕೆ ಸೇರಿದ್ದಾಗಿದ್ದು, ಆನುವಂಶಿಕವಾಗಿ ತಲತಲಾಂತರದಿಂದ ನಡೆದು ಕೊಂಡು ಬಂದಿರುತ್ತದೆ. ಸದ್ಯ ವೇ.ಮೂ. ಶ್ರೀ ಅನಂತ ಪದ್ಮನಾಭ ಅಡಿಗರು, ವೇ.ಮೂ. ಶ್ರೀ ರಾಘವೇಂದ್ರ ಅಡಿಗರು, ಹಾಗೂ ವೇ.ಮೂ. ಶ್ರೀ ಸೂರ್ಯನಾರಾಯಣ ಅಡಿಗರು ಇಲ್ಲಿನ ದೈನಂದಿನ ಪೂಜೆ, ಕಟ್ಟು ಕಟ್ಟಲೆ, ವಿಶೇಷಕಟ್ಟಲೆ ಇತ್ಯಾದಿ ಎಲ್ಲವುಗಳನ್ನು ಇಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಉಪಾಧಿವಂತರಾಗಿ ಇಲ್ಲಿಯ ಆಸುಪಾಸಿನ ಹಾರ್ಯಾಡಿ, ಹೆದ್ದಾರಿಮಠ, ಹಳ್ಳಾಡಿ ಹಾಗೂ ಕತ್ತೆಕಾನಿನಲ್ಲಿರುವ ಸುಮಾರು 30 ಮನೆಯವರು ಸಹಕರಿಸುತ್ತಿದ್ದಾರೆ.

ಈ ದೇವಳದ ಆಡಳಿತವನ್ನು ದೇವಳದ ಅರ್ಚಕ ಮನೆತನದವರೇ ತಲೆತಲಾಂತರದಿಂದ ಆನುವಂಶಿಕ ನೆಲೆಯಲ್ಲಿ ನೋಡಿಕೊಂಡು ಬಂದಿರುತ್ತಾರೆ. ಈ ಹಿಂದಿನ ಧರ್ಮದರ್ಶಿಯವರಾದ ವೇ.ಮೂ. ಶ್ರೀ ರಾಮಕೃಷ್ಣ ಅಡಿಗರು ದೇವಳದ ಜೀರ್ಣೋದ್ದಾರದ ಕನಸನ್ನು ಕಂಡವರು. ಅವರು ಶಿಲಾಮಯ ಗರ್ಭಗುಡಿಯ ನವೀಕರಣದ ಕೆಲಸಕ್ಕೆ ಚಾಲನೆ ನೀಡಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿದರು. ನಿಯೋಜಿತ ಕಾರ್ಯ ಮುಗಿಯುವ ಮೊದಲೇ ಅವರ ಅವಸಾನವಾದ ಕಾರಣ, 1995 ರಲ್ಲಿ ಅವರ ಮಗನಾದ ಶ್ರೀ ಅನಂತ ಪದ್ಮನಾಭ ಅಡಿಗ ಅವರು ಆನುವಂಶಿಕ ನೆಲೆಯಲ್ಲಿ ದೇವಳದ ಆಡಳಿತವನ್ನು ಕೈಗೆತ್ತಿಕೊಂಡು ದೇವಳದ ಸರ್ವಾಂಗೀಣ ಅಭಿವೃದ್ಧಿಗ ಹರಿಕಾರರಾದರು. ಈ ಒಂದು ದಶಕದಲ್ಲಿ ಒಂದು ಕೋಟಿಗೂ ಮಿಕ್ಕಿ ದ್ರವ್ಯವನ್ನು ಕ್ರೋಢೀಕರಿಸಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದರು. ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳ ನೀಲಿನಕ್ಷೆ ತರಿತವಾರಿಸಿದ್ದು, ಶ್ರೀ ದೇವತಾನುಗ್ರಹದಿಂದ ಹಾಗೂ ಭಕ್ತಾಭಿಮಾನಿಗಳ ತುಂಬು ಹೃದಯದ ಸಹಕಾರದಿಂದ ಅವುಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ಆಶದಿತು ಅವರದಾಗಿರುತ್ತದೆ.

ಇಲ್ಲಿನ ಸ್ಥಳ ಪುರಾಣದ ಬಗ್ಗೆ ಲಿಖಿತವಾಗಿ ಈ ವರಗೆ ಏನೂ ದೊರೆತಿಲ್ಲವಾದರೂ ಇದೊಂದು ಪುರಾಣ ಪ್ರಸಿದ್ಧವಾದ ಕ್ಷೇತ್ರ ಎಂಬುದು ನಿಸ್ಸಂದೇಹ. ಇಲ್ಲಿ ಪ್ರಸಿದ್ಧಿಯಲ್ಲಿರುವ ಸ್ಥಳ ಪುರಾಣ ಈ ರೀತಿ ಇದೆ. ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಆದರೆ ಜಯ ಲಭಿಸದೇ ಪರದಾಡುತ್ತಾನೆ. ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತ ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ ಯಾವ ಅಸ್ತ್ರವೂ ಗಣಪತಿಯನ್ನು ಏನೂ ಮಾಡಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡೆಯುತ್ತದೆ. ಮಧು ಅರ್ಥಾತ್ ಜೇನು ತುಪ್ಪ, ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಛ ಮಧುಪಾನ ಮಾಡಿದ ಗಣಪತಿಯು ತೃಪ್ತನಾಗಿ ತನ್ನನ್ನು ಇಲ್ಲಿ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರದಾನ ಮಾಡುತ್ತಾನೆ. ತತ್ ಪರಿಣಾಮ ತ್ರಿಪುರಾಸುರ ಸಂಹಾರವಾಗಿ ಶಿವನಿಗೆ ಜಯಲಭಿಸುತ್ತದೆ. ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭವಾಗುವುದು ಸ್ವಾಭಾವಿಕ. ಇದೇ ಪರಿಸ್ಥಿತಿ ಗಣಪತಿಗೆ ಪ್ರಾಪ್ತಿಯಾಗಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿಶಮನಕ್ಕಾಗಿ ನರಸಿಂಹ ತೀರ್ಥದ ಪಕ್ಕದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸಿರುತ್ತಾನೆ ಎನ್ನುವುದು ಪ್ರತೀತಿ. ಅಂತೆಯೇ ಇಲ್ಲಿ ಹರಿಯುವ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬೃಹತ್ ಬಂಡೆಯ ಮಡುವಿನಲ್ಲಿ ಜಲಾಧಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಿದ್ದಾನೆ ಎನ್ನುವುದು ನಂಬಿಕೆ.

ಈ ವರೆಗೆ ನಡೆದ ಅಭಿವೃದ್ಧಿ ಕಾರ್ಯಗಳು: ತೀರಾ ಕುಗ್ರಾಮ ವಾಗಿರುವ ಈ ಕ್ಷೇತ್ರ ದಶಕಗಳ ಹಿಂದೆ ಬಹಳ ಜೀರ್ಣಾವಸ್ಥೆಯಲ್ಲಿತ್ತು. ಸುಮಾರು 800 ವರ್ಷಗಳಷ್ಟು ಹಳೆಯದಾದ ಗರ್ಭಗುಡಿ ಹಾಗೂ ಎದುರಿಗೆ ಇರುವ ಹೆಬ್ಬಾಗಿಲು, ಪೌಳಿ ಇತ್ಯಾದಿ ಎಲ್ಲವೂ ಜೀರ್ಣವಾಗಿದ್ದು, ನವೀಕರಣಕ್ಕಾಗಿ ಎದುರು ನೋಡುತ್ತಿದ್ದವು. ಇಂದು ನಾವು ನೋಡುವ ಈ ಭವ್ಯವಾದ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು, ಪೌಳಿ ಇತ್ಯಾದಿ ಎಲ್ಲಾ ರಚನೆಗಳು ದೇವಳದ ಅಂದಿನ ಆನುವಂಶಿಕ ಧರ್ಮದರ್ಶಿಗಳಾಗಿದ್ದ ಶ್ರೀ ವೇ, ಮ. ರಾಮಕೃಷ್ಣ ಅಡಿಗರ ಕನಸು. ಅವರು ಅಂದು 1993 ರ ರಲ್ಲಿ ದೇವಳದ ಗರ್ಭಗುಡಿಯನ್ನು ದಕ್ಷಿಣ ಕನ್ನಡದ ಅಪೂರ್ವವಾದ ಕಾಷ್ಟ ಶಿಲ್ಪ ಕಲೆಯನ್ನು ಶಿಲೆಯಲ್ಲಿ ಅಳವಡಿಸಿ ಶಿಲಾಮಯ ದೇಗುಲ ರಚಿಸಬೇಕೆಂದು ಸಂಕಲ್ಪಿಸಿ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷಗಳ ಒಳಗಾಗಿ ಮುಗಿಯಬೇಕಾಗಿದ್ದ ಆ ಕಾಮಗಾರಿ ಕಾರಣಾಂತರ ದಿಂದ ನಾಲ್ಕು ವರ್ಷಗಳವರೆಗೆ ಮುಂದುವರಿಯಿತು.br>

ಶ್ರೀ ದೇವರ ಅನುಗ್ರಹ ದಿಂದ 1997ರಲ್ಲಿ ಕಾಮಗಾರಿಯು ಪೂರ್ತಿಗೊಂಡು ಭವ್ಯವಾದ ಶಿಲಾ ದೇಗುಲ ಅತ್ಯಾಕರ್ಷಕವಾಗಿ ಎದ್ದು ನಿಂತಿತು. 1997ರ ಫೆಬ್ರವರಿಯಲ್ಲಿ ಶೃಂಗೇರಿ ಶಾರದಾ ಪೀಠಾಧಿಪತಿ ಶಂಕರಾಚಾರ್ಯ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಸದ್ರಿ ಶಿಲಾಮಯ ದೇಗುಲವನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಅಂದು ಚಾಲನೆ ದೊರೆತ ಅಭಿವೃದ್ಧಿ ಕಾರ್ಯ ಎಗ್ಗಿಲ್ಲದೇ ಮುಂದುವರಿಯುತ್ತಾ ಬಂದು 2004ರಲ್ಲಿ ಹೆಬ್ಬಾಗಿಲು, ಪೌಳಿ, ಶಿಲಾಮಯ ತೀರ್ಥಮಂಟಪ, ಶಿಲಾಮಯ ದೇವಿಗುಡಿ ಇತ್ಯಾದಿಗಳು ರಚನೆಗೊಂಡವು. ಈ ಭವ್ಯ ಮಂದಿರ ಈಗ ಪ್ರತಿದಿನ ಊರ ಪರಊರ ಬಹಳ ಜನರನ್ನು ತನ್ನೆಡೆಗೆ ಆಕರ್ಶಿಸುತ್ತಿದೆ. 2007ರಲ್ಲಿ ಸುಸಜ್ಜಿತವಾದ ಪಾಕಶಾಲೆಯನ್ನೊಳಗೊಂಡ ಭೋಜನಶಾಲೆ ಯನ್ನು ರಚಿಸಲಾಯಿತು. 2007 ರ ಜೂನ್ ನಿಂದ ದೇವಳದಲ್ಲಿ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ. 2010ರಲ್ಲಿ ಅತ್ಯಾಕರ್ಷಕವಾದ ಸುಸಜ್ಜಿತ ಯಾಗಾಶಾಲೆಯನ್ನು ರಚಿಸಲಾಯಿತು.

“ಆಯರ ಕೊಡ” ಸೇವೆ ಇಲ್ಲಿಯ ಒಂದು ವಿಶೇಷವಾದ ಸೇವೆಯಾಗಿರುತ್ತದೆ. ಇದೊಂದು ಶುದ್ಧ ವೈದಿಕ ಪ್ರಕ್ರಿಯೆಯಾಗಿರುತ್ತದೆ. ಸೇವೆಯ ಪ್ರಾರಂಭದಲ್ಲಿ ಆ ಮಡುವಿನಲ್ಲಿರುವ ನೀರನ್ನು ತಾಮ್ರದ ಕೈ ಬಟ್ಟಲು ಉಪಯೋಗಿಸಿ ಪೂರ್ತಿ ತೋಡಿ ತೆಗೆದು ಪಾಲಿಗೊಳಿಸಲಾಗುತ್ತದೆ. ನಂತರ ತೈಲಾಭ್ಯಂಜನ ಅರ್ಥಾತ್ ಕೊಬ್ಬರಿ ಎಣ್ಣೆ ಹಚ್ಚಿ ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಈ ಅಭಿಷೇಕದ ನೀರನ್ನು ಹೊರ ತೆಗೆದು ದೇವರಿಗೆ ಮಹಾನೈವೇದ್ಯ (5 ಕಿಲೋ ಅಕ್ಕಿ ಅನ್ನ) ನೆರವೇರಿಸಲಾಗುತ್ತದೆ. ತದನಂತರ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪುನಃ ರುದ್ರಾಭಿಷೇಕ ನಡೆಯುತ್ತದೆ. ಪುನಃ ಅಭಿಷೇಕ ಮಾಡಿದ ನೀರನ್ನು ಹೊರ ತೆಗೆದು ಋಗ್ವೇದದ ಮೊದಲನೇಯ ಅಷ್ಟಕದ ಮೊದಲನೆಯ ಅಧ್ಯಾಯದ ಮಂತ್ರವನ್ನು ಪಠಿಸುತ್ತಾ ಒಳಗಿನ ಅಭಿಷೇಕ ನೀರನ್ನು ಒಂದು ಹನಿಯೂ ಬಿಡದಂತೆ ಬಟ್ಟೆ ಹಾಕಿ ಒರೆಸಿ ತೆಗೆಯಲಾಗುತ್ತದೆ. ಈ ಮಡು ಪ್ರಾಕೃತಿಕವಾದ ಕಾರಣ ಸಮತಟ್ಟಾಗಿರದೇ ಅನೇಕ ಹೊಂಡ (ಕುಳಿ) ಗಳಿಂದ ಕೂಡಿರುತ್ತದೆ. ಇವುಗಳಲ್ಲಿ ಸೇರಿರುವ ನೀರನ್ನು ಬಟ್ಟೆ ಉಪಯೋಗಿಸಿ ಪೂರ್ತಿಯಾಗಿ ಒರೆಸಿ ಚೊಕ್ಕಗೊಳಿಸಲಾಗುತ್ತದೆ. ನಂತರ ಬಂದ ಭಕ್ತಾದಿಗಳಿಗೆ ಶ್ರೀ ದೇವರ ಮೂಲಬಿಂಬ ದರ್ಶನ ಮಾಡಿಸಲಾಗುತ್ತದೆ. ನಂತರ ಮೂಲ ಬಿಂಬಕ್ಕೆ ಪೂಜೆ, ಅಲಂಕಾರ, ನೈವೇದ್ಯ, ಮಂಗಳಾರತಿ, ಮಂತ್ರಪುಷ್ಟ ಇತ್ಯಾದಿಗಳನ್ನು ನೆರವೇರಿಸಿ ಅರ್ಚಕರು ಹೊರಬರುತ್ತಾರೆ.

ತದನಂತರ ಪವಮಾನ ಮಂತ್ರ ಪಠಿಸುತ್ತಾ ಆ ಗುಹೆ ಪೂರ್ತಿ ತುಂಬಿ ಎದುರಿನ ದಂಡೆಯಿಂದ ನೀರು ಹೊರ ಹರಿಯುವ ವರೆಗೆ ಶುದ್ದ ಜಲ ಅಭಿಷೇಕ ಮಾಡಲಾಗುತ್ತದೆ. ನಂತರ ಶ್ರೀ ದೇವರಿಗೆ ಮಹಾ ನೈವೇದ್ಯ, ಮಹಾಮಂಗಳಾರತಿ ಇತ್ಯಾದಿ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಗುತ್ತದೆ. ಮೇಲೆ ತಿಳಿಸಿದಂತೆ ಈ ಸೇವೆಯಲ್ಲಿ ಶ್ರೀ ದೇವರಿಗೆ ಎರಡು ಬಾರಿ ರುದ್ರಾಭಿಷೇಕ ಹಾಗೂ ಒಮ್ಮೆ ಪವಮಾನ ಅಭಿಷೇಕ ಹೀಗೆ ಮೂರು ಬಾರಿ ಅಭಿಷೇಕ ಸೇರಿ ಸಾಧಾರಣ ಒಂದು ಸಾವಿರ ಕೊಡ ಶುದ್ದ ಜಲ ಅಭಿಷೇಕ ವಾಗುವದರಿಂದ ಈ ಸೇವೆಗೆ “ಆಯರ ಕೊಡ” (ಅರ್ಥಾತ್ ಸಹಸ್ರ ಕುಂಭಾಭಿಷೇಕ) ಎಂದು ಹೆಸರು ಬಂದಿರುತ್ತದೆ. ಉರಿಶಮನಕ್ಕಾಗಿ ಇಲ್ಲಿ ನೆಲೆಸಿರುವ ಈ ವಿನಾಯಕನನ್ನು ಯಾರು ತಂಪಾಗಿ ಇರಿಸುತ್ತಾರೋ ಅರ್ಥಾತ್ ಹಳೆಯ ನೀರನ್ನು ತೆಗೆದು ಹೊಸ ನೀರಿನ ಅಭಿಷೇಕ (ಆಯರ ಕೊಡ ಸೇವೆ) ಮಾಡಿಸುತ್ತಾರೋ ಅವರ ಕಾರ್ಯ ಸಿದ್ಧಿಯಾಗುವುದು ಖಂಡಿತ. ಈ ಸೇವೆ ಹಿಂದೆ ದಿನಕ್ಕೆ ಒಂದು ಮಾತ್ರ ನಡೆಯುತ್ತಿತ್ತು. ಇದಕ್ಕಿರುವ ಭಾರೀ ಬೇಡಿಕೆಯನ್ನು ಮನಗಂಡು ಜೂನ್ 16-2007 ರಿಂದ ದಿನಕ್ಕೆ ಎರಡು ಸೇವೆ ನಡೆಯುತ್ತದೆ.

ಗುಡ್ಡಟ್ಟು ವಿನಾಯಕ ದೇವಾಲಯ ಕುಂದಾಪುರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ ಮತ್ತು ಕೋಟೇಶ್ವರ – ಹುನ್ಸೆಮಕ್ಕಿ- ಗುಡ್ಡಿಯಂಗಡಿ ಮೂಲಕ ತಲುಪಬಹುದು. ಗುಡ್ಡಟ್ಟು ವಿನಾಯಕ ದೇವಾಲಯವು ಶಂಕರನಾರಾಯಣದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ ಮತ್ತು ಹಾಲಾಡಿ – ಬಿದ್ಕಲ್ ಕಟ್ಟೆ – ಶಿರಿಯಾರ ಮೂಲಕ ತಲುಪಬಹುದು.

ಮುಂದಿನ ಅಭಿವೃದ್ಧಿಯೋಜನೆಗಳು: ಮುಂದೆ ಭಾರೀ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.ಇವುಗಳಲ್ಲೂ ಈ ಕೆಳಗಿನವು ಮುಖ್ಯವಾಗಿರುತ್ತದೆ.
1) ದೇವಳದ ಹೊರ ಪ್ರಾಕಾರ
2) ಉದ್ಯಾನ ವನ
3) ಸುಸಜ್ಜಿತ ವಾಹನನಿಲುಗಡೆ
4) ದೇವಳದ ಬಂಡೆಯ ಸುತ್ತಲೂ ರಥಬೀದಿ
5) ಶ್ರೀ ರಥ ನಿರ್ಮಾಣ
6) ಸುಸಜ್ಜಿತ ವಸತಿಗೃಹ ಇತ್ಯಾದಿ…….
ಶ್ರೀ ದೇವರ ಅನುಗ್ರಹ ಹಾಗೂ ಭಕ್ತಾದಿಗಳ ಉದಾರ ಸಹಾಯದಿಂದ ಇವುಗಳೆಲ್ಲವೂ ಅತಿ ಶೀಘ್ರದಲ್ಲಿ ನಡೆಯಲಿವೆ ಎಂಬ ತುಂಬು ವಿಶ್ವಾಸ ಈಗಿನ ಧರ್ಮದರ್ಶಿ ಯವರದಾಗಿದೆ. ಈ ಕೆಲವು ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಆದ ನಂತರ ಕೆಲವು ಜನಸೇವಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಆಕಾಂಕ್ಷೆ ಇರುತ್ತದೆ.

ವರದಿ: ಸುಧಾಕರ್ ಕುಂದಾಪುರ
www.kundapura.com

ಕೃಪೆ: ಶ್ರೀ ಗಂಗಾಧರ್ ಅಡಿಗ
ಗುಡ್ಡಟ್ಟು ವಿನಾಯಕ ದೇವಸ್ಥಾನ

Share This Article
Leave a Comment
error: Content is protected !!