ಹೆಮ್ಮಾಡಿ ಸೇವಂತಿಗೆ ಪ್ರಪ್ರಥಮವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಿರಿಮುಡಿಗೆ

kundapuradotcom@gmail.com
5 Min Read

ಕುಂದಾಪುರ ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸುವಾಸನೆಯ ಅಪರೂಪದ ಹೂವಿನ ಪ್ರಭೇದವೇ ಹೆಮ್ಮಾಡಿ ಸೇವಂತಿಗೆ.

ಪ್ರಪ್ರಥಮವಾಗಿ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಾಂತಿ ಹಬ್ಬದಂದು ಸಮರ್ಪಿತವಾಗುವ ಹೆಮ್ಮಾಡಿ ಸೇವಂತಿಗೆ ಹೂವು ಪರಮ ಪಾವಿತ್ರ್ಯತೆಯ ದ್ಯೋತಕವಾಗಿದ್ದು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಪ್ರೀತ್ಯಾರ್ಥಕ್ಕೆಂದೇ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಸುತ್ತಾರೆ ಎಂಬ ಜನಜನಿತ ನಂಬಿಕೆ ಇದೆ. ಹೆಮ್ಮಾಡಿ ಸುತ್ತಮುತ್ತಲ ಪ್ರದೇಶದ ದೇವಸ್ಥಾನ ಬೆಟ್ಟು, ಜಾಲಾಡಿ, ಸುಳ್ಸೆ, ಹರೆಗೋಡು, ಕಟ್ಟು, ಕಟ್ ಬೆಲ್ತೂರು ಮುಂತಾದ ಕಡೆ ಬೆಳೆಸುವ ಹೆಮ್ಮಾಡಿ ಸೇವಂತಿಗೆ ಬೆಳೆದ ದಿಕ್ಕು ಯಾವುದೇ ಇರಲಿ ಅರಳುವ ಹೂವು ಮಾತ್ರ ಶ್ರೀ ಬ್ರಹ್ಮಲಿಂಗೇಶ್ವರನಿಗೆ ನಮಿಸುವ ಪರಿಯಲ್ಲಿ ಮಾರಣಕಟ್ಟೆ ದಿಕ್ಕಿನಲ್ಲಿ ಮುಖ ಮಾಡಿ ನಿಲ್ಲುತ್ತದೆ ಎಂಬ ಪ್ರತೀತಿ ಇದೆ.

ಆಗಸ್ಟ್ ತಿಂಗಳಲ್ಲಿ ಹೆಮ್ಮಾಡಿ ಸೇವಂತಿಗೆ ಗಿಡದ ನರ್ಸರಿ ಮಾಡಿದರೆ ಸೆಪ್ಟೆಂಬರ್ ತಿಂಗಳಲ್ಲಿ ನಾಟಿ ಮಾಡುತ್ತಾರೆ ಸರಿ ಸುಮಾರು ಜನವರಿ ತಿಂಗಳ ಮೊದಲ ವಾರದಲ್ಲಿ ಹೂಗಳು ಅರಳುತ್ತವೆ. ಹೀಗೆ ಅರಳಿದ ಸೇವಂತಿಗೆ ಹೂಗಳನ್ನು ತಲೆತಲಾಂತರಗಳ ಸಂಪ್ರದಾಯದಂತೆ ಮೊತ್ತಮೊದಲು ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಸಮರ್ಪಿತವಾಗುತ್ತದೆ ಹೆಮ್ಮಾಡಿ ಭಾಗದ ಸೇವಂತಿಗೆ ಬೆಳೆಗಾರರು ಎಲ್ಲರೂ ಸೇರಿ ಶ್ರದ್ಧೆ ಭಕ್ತಿಯಿಂದ ಶ್ರೀ ಬ್ರಹ್ಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾವು ಬೆಳೆದ ಹೆಮ್ಮಾಡಿ ಸೇವಂತಿಗೆ ಹೂಗಳನ್ನು ಸಮರ್ಪಿಸಿ ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಸುತ್ತಾರೆ.

ಇದಾದ ಬಳಿಕ ಹೆಮ್ಮಾಡಿಯ ಗ್ರಾಮದೇವತೆ ಶ್ರೀ ಲಕ್ಷೀ ನಾರಾಯಣ ಸ್ವಾಮಿಗೆ ಸೇವಂತಿಗೆ ಹೂಗಳನ್ನು ಅರ್ಪಿಸಿ ಸೇವಂತಿಗೆ ವ್ಯಾಪಾರ ಪ್ರಾರಂಭಿಸುತ್ತಾರೆ. ಹೆಮ್ಮಾಡಿ ಸೇವಂತಿಗೆ ಹೂವು ಮೊಟ್ಟಮೊದಲು ಮಾರಣಕಟ್ಟೆ ಜಾತ್ರೆಯಿಂದ ಮೊದಲ್ಗೊಂಡು ಕುಂದಾಪುರ, ಬೈಂದೂರು ತಾಲೂಕುಗಳ ವಿವಿಧ ದೇವಸ್ಥಾನ, ದೈವಸ್ಥಾನಗಳ ಹಬ್ಬ ಹರಿದಿನಗಳು, ಜಾತ್ರೆಗಳು, ವರ್ಷಾವಧಿ ಜಾತ್ರೆಗಳಲ್ಲಿ ಮಾರ್ಚ್ ತಿಂಗಳ ಮೊದಲ ಎರಡು ವಾರಗಳ ತನಕ ಬಳಕೆಯಾಗುತ್ತದೆ ಕೊನೆಯದಾಗಿ ಹೊಳ್ಮಗೆ ಹೋರ್ ಬೊಬ್ಬರ್ಯ ದೈವಸ್ಥಾನದ ಕೋಲ ಸೇವೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಮ್ಮಾಡಿ ಸೇವಂತಿಗೆ ಹೂವಿನ ವಹಿವಾಟು ನಡೆಯುತ್ತದೆ.

ಹೆಮ್ಮಾಡಿ ಸೇವಂತಿಗೆ ಹೂವು ಅರಳಲು ಮುಖ್ಯವಾಗಿ ಇಬ್ಬನಿ ಬೀಳಬೇಕು ಕಳೆದ ಮೂರು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಚಳಿಗಾಲದ ಋತುವಿನಲ್ಲಿ ಚಳಿ ಬೀಳಲೇ ಇಲ್ಲ ಹಾಗಾಗಿ ಹೆಮ್ಮಾಡಿ ಸೇವಂತಿಗೆ ಹೂವಿನ ಬೆಳೆಯಲ್ಲಿ ಬಹಳಷ್ಟು ಕುಂಠಿತ ಕಂಡು ಬಂದಿತ್ತು ಹಾಗಾಗಿ ರೈತರು ಹೆಮ್ಮಾಡಿ ಸೇವಂತಿಗೆ ಜೊತೆಯಲ್ಲಿ ಸೆಂಟ್ ಯಲ್ಲೋ, ಚಾಂದಿನಿ ಮುಂತಾದ ತಳಿಗಳನ್ನು ಚಿತ್ರದುರ್ಗ, ಭಧ್ರಾವತಿ ಮುಂತಾದ ಕಡೆಯಿಂದ ತಂದು ಪ್ರಾಯೋಗಿಕವಾಗಿ ಬೆಳೆಸಿದ್ದರು ಆದರೆ ಈ ಪ್ರಯೋಗ ಅಲ್ಪಾವಧಿ ಯಶಸ್ಸು ಕಂಡಿತ್ತು ಹೆಮ್ಮಾಡಿಯ ಮಣ್ಣು ಮತ್ತು ಹವಾಮಾನಕ್ಕೆ ಹೊರಜಿಲ್ಲೆಯ ಸೇವಂತಿಗೆ ಹೊಂದಿಕೊಳ್ಳುವುದು ಕಷ್ಟವಾಯಿತು ಈ ತಳಿಗಳ ಸಸ್ಯಗಳು ನೆಟ್ಟ ಕೆಲವೇ ದಿನಗಳಲ್ಲಿ ಸತ್ತು ಹೋದವು ಬದುಕಿದ ಕೆಲವು ಸಸ್ಯಗಳು ಕಡಿಮೆ ಪ್ರಮಾಣದಲ್ಲಿ ಹೂವಿನ ಇಳುವರಿ ನೀಡಿದ್ದವು.

ಇದಕ್ಕೆ ಹೋಲಿಸಿದರೆ ಹೆಮ್ಮಾಡಿ ಸೇವಂತಿಗೆ ಸಸ್ಯಗಳ ಇಳುವರಿ ಪ್ರಮಾಣ ಮತ್ತು ಬಾಳಿಕೆಯ ಅವಧಿಯೂ ಜಾಸ್ತಿ ಹೆಮ್ಮಾಡಿ ಅಸುಪಾಸಿನ ಪರಿಸರದಲ್ಲಿ ಮಾತ್ರ ಬೆಳೆಯುವ ಹೆಮ್ಮಾಡಿ ಸೇವಂತಿಗೆಯನ್ನು ಬೇರೆ ಕಡೆ ನೆಟ್ಟು ಬೆಳೆಸುವ ಪ್ರಯತ್ನಗಳು ಇದುವರೆಗೂ ಫಲಕಾರಿಯಾಗಿಲ್ಲ ಪಂಚಗಂಗಾವಳಿಯ ಪ್ರಮುಖ ನದಿಗಳಾದ ಚಕ್ರಾ ಮತ್ತು ಸೌಪರ್ಣಿಕಾ ನದಿಗಳು ಹೆಮ್ಮಾಡಿಯನ್ನು ವೃತ್ತಾಕಾರವಾಗಿ ಸುತ್ತಿ ಬಳಸಿ ಹರಿಯುವುದರಿಂದ ಹೆಮ್ಮಾಡಿಯ ಪರಿಸರದ ಮಣ್ಣು ಫಲವತ್ತತೆಯಿಂದ ಕೂಡಿದ್ದು, ಈ ವಿಶಿಷ್ಟ ತಳಿಯ ಹೆಮ್ಮಾಡಿ ಸೇವಂತಿಗೆ ಬೆಳೆಯಲು ಪ್ರಶಸ್ತವಾಗಿದೆ.

ಹೆಮ್ಮಾಡಿ ಸೇವಂತಿಗೆ ಬೆಳೆಯಲು ಮುಖ್ಯವಾಗಿ ಇಬ್ಬನಿ ಬೇಕು ಇಬ್ಬನಿ ಬಿದ್ದರೆ ಮಾತ್ರ ಹೆಮ್ಮಾಡಿ ಸೇವಂತಿಗೆ ಬೆಳೆಯುತ್ತದೆ ಕಳೆದ ಮೂರು ವರ್ಷಗಳಿಂದ ಚಳಿಯ ಸುಳಿವೇ ಇರಲಿಲ್ಲ ಪ್ರಸ್ತುತ ರಾಜ್ಯಾದ್ಯಂತ ವಾಡಿಕೆಯ ಚಳಿಯಿಲ್ಲದಿದ್ದರೂ ತಕ್ಕ ಮಟ್ಟಿಗೆ ಚಳಿ ಬೀಳುತ್ತಾ ಉಂಟು ಹೆಮ್ಮಾಡಿ ಸೇವಂತಿಗೆ ಹೂವು ಸಮೃದ್ಧವಾಗಿ ಬೆಳೆಯುವ ಲಕ್ಷಣಗಳು ಕಂಡುಬಂದಿದೆ. ಈಗಾಗಲೇ ಹೆಮ್ಮಾಡಿ ಪರಿಸರದಲ್ಲಿ ಚಳಿ ಹವಮಾನದ ಕೃಪಕಟಾಕ್ಷ ಮತ್ತು ಶ್ರೀ ಬ್ರಹ್ಮಲಿಂಗೇಶ್ವರನ ಅನುಗ್ರಹದಿಂದ ಹೆಮ್ಮಾಡಿ ಸೇವಂತಿಗೆ ಸಾಕಷ್ಟು ಪ್ರಮಾಣದಲ್ಲಿ ಅರಳಿದೆ.

ಭಾರತದಲ್ಲಿನ ಚಳಿಗಾಲವು ಏಶ್ಯಾಖಂಡದಲ್ಲಿನ ಸ್ಥಿತ್ಯಂತರಗಳ ಮೇಲೆ ಅವಲಂಬಿಸಿದೆ ಮುಖ್ಯವಾಗಿ ಸಮುದ್ರದ ಮೇಲಾಗುವ ಸ್ಥಿತ್ಯಂತರಗಳ ಮೇಲೆ ಅವಲಂಬಿಸಿದೆ ಬಂಗಾಳ ಕೊಲ್ಲಿಯ ದಕ್ಷಿಣ ಭಾಗದಿಂದ ಬರುವ ಆವರ್ತ ಗಾಳಿಗಳು ಡಿಸೆಂಬರ್ ತಿಂಗಳಲ್ಲಿ ಯಾವಾಗಾದರೊಮ್ಮೆ ಪಶ್ಚಿಮ ಕರಾವಳಿಯತ್ತ ಚಲಿಸಿ ಕೆಲವೊಮ್ಮೆ ಶೀತಗಾಳಿ ಮತ್ತು ಸ್ಥಾನೀಯ ಮಳೆಯನ್ನುಂಟು ಮಾಡುತ್ತವೆ ಚಳಿಗಾಲದ ಇನ್ನುಳಿದ ಸಮಯವು ಕರಾವಳಿ ಸಮೀಪ ಹಾಗೂ ಕೊಳ್ಳಗಳಲ್ಲಿ ನಿರಭ್ರವಾದ ಹಾಗೂ ಸ್ವಚ್ಛವಾದ ಹವೆಯುಳ್ಳ ತಂಪಾದ ರಾತ್ರಿಗಳಿಂದಲೂ ಮುಂಜಾನೆ ಇಬ್ಬನಿ ಅಥವಾ ಹೊಗೆ ಮಂಜಿನಿಂದಲೂ ಕೂಡಿಕೊಂಡಿರುತ್ತದೆ.

ಕರಾವಳಿಯ ಈ ಚಳಿಗಾಲದ ವಾತಾವರಣ ವಿವಿಧ ಹಣ್ಣಿನ ಗಿಡಗಳು ಹೂ ಬಿಡಲು ಪೂರಕವಾದ ಮೋಡಭರಿತ ತೇವಾಂಶದ ವಾತಾವರಣ ಸೃಷ್ಟಿಸುತ್ತದೆ ಆದರೆ ಜಾಗತಿಕ ಹವಮಾನ ವೈಪರೀತ್ಯರಿಂದ ಕಳೆದ ಮೂರು ವರ್ಷಗಳಿಂದ ಚಳಿಗಾಲದಲ್ಲಿ ಬೆಳೆಯುವ ಬೆಳೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು ಇಂತಹ ಪ್ರತಿಕೂಲ ಹವಮಾನದ ಪರಿಣಾಮ ಕಳೆದ ಮೂರು ವರ್ಷಗಳ ಹಿಂದೆ ಹೆಮ್ಮಾಡಿ ಸೇವಂತಿಗೆ ಬೆಳೆಯ ಮೇಲೂ ಬಿದ್ದು ರೈತರು ಹೈರಾಣಾಗಿದ್ದರು. ಭೌಗೋಳಿಕ ಪರಿಸರ ಮತ್ತು ಬೆಳೆಗಳ ನಡುವೆ ನಿಕಟ ಸಂಬಂಧವು ಮಣ್ಣಿನ ವಿಧ, ಹವಾಮಾನ, ಮಳೆ ತಾಪಮಾನ ಭೂಪ್ರದೇಶದ ನೈಸರ್ಗಿಕ ಸಸ್ಯವರ್ಗದಂತಹ ಅಂಶಗಳು ಯಾವ ಬೆಳೆಗಳು ಬೆಳೆಯಬಹುದು ಎಂಬುದನ್ನು ನಿರ್ಧರಿಸುತ್ತದೆ ಈ ಬಾರಿಯ ಹಿಂಗಾರಿನ ಋತು ಹೆಮ್ಮಾಡಿ ಸೇವಂತಿಗೆ ಕೃಷಿಗೆ ಒಂದಿಷ್ಟು ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದು, ಈ ಬಾರಿ ಸೇವಂತಿಗೆ ಹೂವಿನ ಕೃಷಿ ಯಶಸ್ವಿಯಾಗುವ ನಿರೀಕ್ಷೆಯಿದೆ.

ಹೆಮ್ಮಾಡಿ ಸೇವಂತಿಗೆ ಗಿಡಗಳಿಗೆ ಯಥೇಚ್ಛ ನೀರಿನ ಅವಶ್ಯಕತೆ ಇದೆ ಹೆಮ್ಮಾಡಿ ಪರಿಸರದಲ್ಲಿರುವ ಹಲವು ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ ಸೇವಂತಿಗೆ ಕೃಷಿಗೆ ಪ್ರಯೋಜನವಾಗುತ್ತದೆ ಎಂದು ಹೆಮ್ಮಾಡಿ ಸೇವಂತಿಗೆ ಬೆಳೆಗಾರರು ಹೇಳುತ್ತಾರೆ ಹೆಮ್ಮಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಬಳಿ ಅರಸು ಎಂಬ ಹೆಸರಿನ ಬೃಹತ್ ಕೆರೆಯಿದ್ದು, ಅಭಿವೃದ್ಧಿ ಪಡಿಸಿದರೆ ಸೇವಂತಿಗೆ ಬೆಳೆ ಬೆಳೆಯಲು ಸಾಕಷ್ಟು ನೀರು ಲಭ್ಯವಾಗುತ್ತದೆ ಮತ್ತು ಸುತ್ತಮುತ್ತ ಅಂತರ್ಜಲ ಪ್ರಮಾಣ ಕೂಡಾ ವೃದ್ಧಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಹೆಮ್ಮಾಡಿ ಕಟ್ಟು ಪ್ರದೇಶದಲ್ಲಿ ಕೆಲವು ರೈತರು ಸಮೀಪದಲ್ಲಿರುವ ಕೆರೆಯ ನೀರನ್ನು ಬಳಸಿಕೊಂಡು ಸೇವಂತಿಗೆ ಬೆಳೆಸುತ್ತಿದ್ದಾರೆ ಈ ಕೆರೆಯಲ್ಲಿ ನೀರಿನಕ್ಕಿಂತ ಕೆಸರೇ ಜಾಸ್ತಿ ಪ್ರಮಾಣದಲ್ಲಿ ಇದ್ದು ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಸೇವಂತಿಗೆ ಕೃಷಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂದು ಸ್ಥಳೀಯ ಸೇವಂತಿಗೆ ಕೃಷಿಕರಾದ ರಮೇಶ್ ದೇವಾಡಿಗರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದಲ್ಲಿಯೇ ಅತ್ಯಂತ ವಿಶಿಷ್ಟವಾದ ಪ್ರಾದೇಶಿಕ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೆಮ್ಮಾಡಿ ಸೇವಂತಿಗೆ ತಳಿಯನ್ನು ಉಳಿಸಿಕೊಳ್ಳುವುದೇ ಕಷ್ಟಕರ ಅತಿಯಾದ ಮಳೆ ಮತ್ತು ವ್ಯತಿರಿಕ್ತ ವಾತಾವರಣದ ನಡುವೆಯೂ ಬೆಳೆಗಾರರು ಈ ತಳಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ ಸರ್ಕಾರ ಈ ಬಗ್ಗೆ ಗಮನಹರಿಸುವ ಅವಶ್ಯಕತೆ ಇದೆ ಹೆಮ್ಮಾಡಿ ಸೇವಂತಿಗೆ ತಳಿಯ ಸಂಶೋಧನೆ ಮತ್ತು ಸಂವರ್ಧನೆ ಕಾರ್ಯ ನಡೆಸಿ ಸೇವಂತಿಗೆ ಬೆಳೆಗಾರರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಸಿರಿಮುಡಿಗೆ ಪ್ರಪ್ರಥಮವಾಗಿ ಸಮರ್ಪಿತವಾಗುವ ಹೆಮ್ಮಾಡಿ ಸೇವಂತಿಗೆ ಹೆಮ್ಮಾಡಿ ಪರಿಸರದ ಜೀವದೃಕ್ತ ಅಂಶಗಳನ್ನು ಪ್ರಭಾವಿಸಿಕೊಂಡು ಊರ ತುಂಬಾ ತನ್ನ ಕಂಪನ್ನು ಪಸರಿಸಿಕೊಂಡಿದೆ ತನ್ನ ಮನಮೋಹಕ ಚೆಲುವು, ವಿಶಿಷ್ಟ ಸುವಾಸನೆಯುಕ್ತ ಹೆಮ್ಮಾಡಿ ಸೇವಂತಿಗೆ ಕುಂದಾಪುರದ ಹಿರಿಮೆಯನ್ನು ಇಮ್ಮಡಿಗೊಳಿಸಿದೆ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮಕರ ಸಂಕ್ರಾಂತಿ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಹೆಮ್ಮಾಡಿ ಸೇವಂತಿಗೆಯ ಘಮಘಮಿಸುವ ಘಮಲು ಜಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಬರಹ: ಉಮಾಕಾಂತ ಖಾರ್ವಿ,
ಕುಂದಾಪುರ

Share This Article
Leave a Comment
error: Content is protected !!