ಕಾಷ್ಠಶಿಲ್ಪ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತೀಕ್ ಗುಡಿಗಾರ್ ಕುಂದಾಪುರ

kundapuradotcom@gmail.com
3 Min Read

ದೈವಿಕ ಕಲಾಕೃತಿಗಳು ರೂಪುಗೊಳ್ಳಲು ಕಲಾವಿದನ ಮನಸ್ಸಿನ ಚಿತ್ತವೆಂಬ ಭಿತ್ತಿಯೊಳಗೆ ಶ್ರಧ್ದೆ ಮತ್ತು ಭಕ್ತಿಯ ದೃಢಸಂಕಲ್ಪವಿರಬೇಕು ಎಂದು ನುಡಿಯುತ್ತಾ ಮಾರಣಕಟ್ಟೆ ಹಬ್ಬದ ಪೂರ್ವಭಾವಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಪರಿವಾರ ದೈವಗಳ ಮೂರ್ತಿಗಳಿಗೆ ಬಣ್ಣ ಬಳಿಯುವ ಪವಿತ್ರ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರದ ಕಾಷ್ಠಶಿಲ್ಪ ಕಲಾವಿದ ಪ್ರತೀಕ್ ಗುಡಿಗಾರರದ್ದು ವಂಶ ಪರಂಪರೆಯ ಕಲಾಸೇವೆ.

ಇಂಜಿನಿಯರ್ ಪದವಿದಾರರಾಗಿರುವ ಪ್ರತೀಕ್ ಕೋವಿಡ್ ಸಂದರ್ಭದಲ್ಲಿ ತನ್ನ ತಂದೆ ನಿಧನದ ಬಳಿಕ ದೈವ ದೇವರುಗಳ ಕಾಷ್ಠಶಿಲ್ಪ ಕಲಾಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡರು. ಕರ್ನಾಟಕ ಕರಾವಳಿ ದೇವರು, ದೈವರಾಧನೆಗಳ ಅತೀವ ನಂಬಿಕೆಯ ಪುಣ್ಯಭೂಮಿ. ಇಲ್ಲಿ ಹಲವಾರು ದೈವಸ್ಥಾನಗಳು, ದೇವಸ್ಥಾನಗಳು ಮತ್ತು ಗರಡಿಗಳಲ್ಲಿ ವಿವಿಧ ದೈವ ದೇವರುಗಳ ಆರಾಧನೆಗಳು ಮತ್ತು ವಾರ್ಷಿಕ ಉತ್ಸವಗಳು ನಡೆಯುತ್ತದೆ.

ಪ್ರತಿ ದೈವಸ್ಥಾನ, ದೇವಸ್ಥಾನ, ಗರಡಿಗಳಲ್ಲಿ ವಿವಿಧ ದೈವಗಳಾದ ಪಂಜುರ್ಲಿ, ಹೈಗುಳಿ, ಯಕ್ಷಿ, ಮರ್ಲು ಚಿಕ್ಕು, ಕೋಳೆರಾಯ, ಕೋಟಿ ಚೆನ್ನಯ್ಯ ಮುಂತಾದ ಕಾಷ್ಠಶಿಲ್ಪದ ಮೂರ್ತಿಗಳ ಪೂಜೆ ಪುರಸ್ಕಾರ, ಕೋಲ ನೇಮಗಳು ,ವಾರ್ಷಿಕ ಉತ್ಸವಗಳು ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಮೂರ್ತಿಗಳು ಭಿನ್ನವಾದರೆ ಹೊಸದಾಗಿ ಮೂರ್ತಿಗಳನ್ನು ನಿರ್ಮಿಸಲಾಗುತ್ತದೆ ಮತ್ತು ಪ್ರತಿ ವರ್ಷ ಮೂರ್ತಿಗಳಿಗೆ ಬಣ್ಣ ಬಳಿಯಲಾಗುತ್ತದೆ. ಇಂತಹ ಕಾಷ್ಠಶಿಲ್ಪದ ಕೆಲಸವನ್ನು ಗುಡಿಗಾರ ಸಮಾಜದ ಕಲಾವಿದರು ಬಹಳ ಶ್ರದ್ಧೆ ಭಕ್ತಿಯಿಂದ ನಿರ್ವಹಿಸುತ್ತಾರೆ.

ಪ್ರತೀಕ್ ಗುಡಿಗಾರ್ ರವರ ತಂದೆಯಾದ ಪ್ರದೀಪ್ ಗುಡಿಗಾರ್ ರವರು ಹಲವಾರು ವರ್ಷಗಳಿಂದ ಈ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಮುಖ್ಯವಾಗಿ ಕುಂದಾಪುರದ ಪುರಾಣ ಪ್ರಸಿದ್ಧ ಸ್ಥಳವಾದ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ದೇವರ ಮೂರ್ತಿಗಳಿಗೆ ಬಣ್ಣ ಬಳಿಯುವ ಕಾರ್ಯವನ್ನು ನಿರ್ವಹಿಸಿಕೊಂಡು ಬಂದ್ದಿದರು. ಅವರ ನಿಧನದ ಬಳಿಕ ಪ್ರತೀಕ್ ಗುಡಿಗಾರ್ ರವರು ತಂದೆಯ ಕಾಯಕವನ್ನು ಮುಂದುವರಿಸಿಕೊಂಡು ಬಂದ್ದಿದು ಸುಮಾರು ಐವತ್ತಕ್ಕೂ ಹೆಚ್ಚು ದೈವಸ್ಥಾನ, ದೇವಸ್ಥಾನಗಳಲ್ಲಿ ಈ ದೈವಿಕ ಕಾಯಕವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಪ್ರತೀಕ್ ಗುಡಿಗಾರ್ ರವರು 2021 ರಲ್ಲಿ ಕಾಷ್ಠಶಿಲ್ಪ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಸುಮಾರು 48 ದೇವಸ್ಥಾನ, ದೈವಸ್ಥಾನಗಳಲ್ಲಿ 75 ಕ್ಕೂ ಹೆಚ್ಚು ಮರದ ಮೂರ್ತಿಗಳನ್ನು ಕೆತ್ತಿ ಕೊಟ್ಟಿದ್ದಾರೆ. ಇಂಜಿನಿಯರ್ ಪದವೀಧರರಾಗಿರುವ ಪ್ರತೀಕ್ ಗುಡಿಗಾರ್ ತನ್ನ ತಂದೆಯ ಕಾಷ್ಠಶಿಲ್ಪ ಕಾಯಕವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಮಾರಣಕಟ್ಟೆ ಮಕರ ಸಂಕ್ರಾಂತಿ ಉತ್ಸವಕ್ಕೆ ಪೂರ್ವಭಾವಿಯಾಗಿ ದೇವರ ಬ್ರಹ್ಮಲಿಂಗೇಶ್ವರ ಮತ್ತು ಇತರ ದೈವದ ಮೂರ್ತಿಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯ.

ದೇವರ ಮೂರ್ತಿಗಳ ನಿರ್ಮಾಣ ಮತ್ತು ಬಣ್ಣ ಬಳಿಯುವ ಕಾಯಕ ಪ್ರತೀಕ್ ಗುಡಿಗಾರ್ ಕುಟುಂಬ ಮೂರು ತಲೆಮಾರುಗಳಿಂದ ನಡೆಸಿಕೊಂಡು ಬಂದಿದೆ. ತಂದೆಯ ನಿಧನದ ನಂತರ ಈ ಕಾಯಕವನ್ನು ಪ್ರತೀಕ್ ಗುಡಿಗಾರ್ ರವರು ನಿಲ್ಲಿಸದೇ ಕಾಷ್ಠಶಿಲ್ಪ ಪರಂಪರೆಯ ಪ್ರತೀಕವಾಗಿ ಮುಂದುವರಿಸಿಕೊಂಡು ಬಂದಿದ್ದು, ಅವರು ತಮ್ಮ ಈ ಕಾಯಕದಲ್ಲಿ ತೋರಿಸುವ ಶ್ರದ್ಧೆ ಮತ್ತು ಕಾಳಜಿ ಈ ಕಾಷ್ಠಶಿಲ್ಪ ಪರಂಪರೆ ಅವಿಚ್ಚಿನ್ನವಾಗಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಹೃದಯಂಗಮವಾಗಿ ಗೋಚರಿಸತೊಡಗಿದೆ.

ಪ್ರತೀಕ್ ಗುಡಿಗಾರ್ ರೊಂದಿಗೆ ಅವರ ಸಹಾಯಕರಾದ ಚಂದ್ರಯ್ಯ ಆಚಾರ್ ರವರು ಕೂಡಾ ಈ ಕಾಷ್ಠಶಿಲ್ಪ ಕೆಲಸದಲ್ಲಿ ಅತ್ಯಂತ ಶ್ರದ್ಧೆಯಿಂದ ಸಾಥ್ ನೀಡುತ್ತಿದ್ದಾರೆ. ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿ ಕಟ್ಟಡಗಳು, ಸೇತುವೆಗಳು ಮುಂತಾದವುಗಳನ್ನು ವಿನ್ಯಾಸಗೊಳಿಸಿ, ನಿರ್ಮಿಸಿ ಮತ್ತು ನಿರ್ವಹಿಸುವ ಮಹತ್ವಪೂರ್ಣ ಇಂಜಿನಿಯರ್ ಶಿಕ್ಷಣದಲ್ಲಿ ಪದವಿ ಪಡೆದುಕೊಂಡಿರುವ ಪ್ರತೀಕ್ ಗುಡಿಗಾರ್ ರವರು ತಮ್ಮ ಕುಲಕಸುಬಾದ ಕಾಷ್ಠಶಿಲ್ಪ ಕಲೆಯನ್ನು ಬಿಡದೇ ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಸೃಜನಶೀಲ ಮನುಷ್ಯನ ಮನಸ್ಸು ಸದಾಕಾಲವೂ ಸಾಧನಾಶೀಲವಾಗಿರುತ್ತದೆ ಎಂಬುದಕ್ಕೆ ಪ್ರತೀಕ್ ಗುಡಿಗಾರ್ ಉತ್ತಮ ನಿದರ್ಶನವಾಗಿ ನಿಲ್ಲುತ್ತಾರೆ. ದೇವರು, ದೈವ ಮೂರ್ತಿಗಳಲ್ಲಿ ನೈಜತೆ ಮತ್ತು ಪರಿಪೂರ್ಣತೆಯನ್ನು ಬಿಂಬಿಸುವ ಅದ್ಭುತ ಕರಕುಶಲತೆಯ ಕೌಶಲ್ಯವನ್ನು ಹೊಂದಿರುವ ಪ್ರತೀಕ್ ಗುಡಿಗಾರ್ ರವರ ಕೈ ಚಳಕದಲ್ಲಿ ಮತ್ತಷ್ಟು ದೈವಿಕ ಪ್ರಭೆಯ ಕಲಾಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಕೆಗಳು.

ಸಂದರ್ಶನ: ಸುಧಾಕರ ಕುಂದಾಪುರ
www.kundapura.com

Share This Article
Leave a Comment
error: Content is protected !!