ಪಡುವಣ ಕಡಲಿನ ಸಾಂಗತ್ಯದಲ್ಲಿ ಸ್ವರ್ಣ ಮತ್ತು ಸೀತಾ ನದಿಗಳ ಸಂಗಮದಲ್ಲಿ ಪವಡಿಸಿರುವ ಕಾರಣಿಕ ದೈವಗಳ ಸಾನ್ನಿಧ್ಯವೇ ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುಖ್ಯವಾಗಿ ಮೀನುಗಾರ ಖಾರ್ವಿ, ಮೊಗವೀರರು ಮತ್ತು ಬಿಲ್ಲವ ಸಮಾಜದ ಆರಾಧನ ಕೇಂದ್ರವಾಗಿರುವ ಈ ದೈವಸ್ಥಾನ ಅಪಾರ ಭಕ್ತರ ಅಭೂತಪೂರ್ವ ನಂಬಿಕೆಯ ಭಕ್ತಿಯ ನೆಲವೀಡು.


ಈ ದೈವಸ್ಥಾನದ ಐತಿಹ್ಯ, ಸ್ಥಳಪುರಾಣ ಬಹಳ ಕೂತೂಹಲಕಾರಿಯಾಗಿದ್ದು ಹೈಗುಳಿ ದೈವದ ಪೌರಾಣಿಕ ಕಥನದೊಂದಿಗೆ ಕೋಳೆರಾಯ ದೈವದ ಐತಿಹಾಸಿಕ ಕಥೆಯೊಂದಿಗೆ ಮಿಳಿತಗೊಂಡಿದೆ. ಲೋಕ ಕಲ್ಯಾಣಕ್ಕಾಗಿ ಪರಶಿವನ ವರದಾನದೊಂದಿಗೆ ಎರಡು ಕಾಲಿನ ಹೈಗುಳಿ ನಾಲ್ಕು ಪಾದದ ಹೈಗುಳಿಯಾಗಿ ಪರಿವರ್ತನೆಯಾಗಿ ಊರಿನ ರಕ್ಷಣೆಗಾಗಿ ಸಾಸ್ತಾನ ಕೋಡಿತಲೆಯಲ್ಲಿ ನೆಲೆ ನಿಂತು ನಂಬಿದ ಭಕ್ತರನ್ನು ಹರಸುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಹಾಯಿ ಹಡಗಿನಲ್ಲಿ ಕೋಳಿ ಜನಾಂಗದ ಕೋಳೆರಾಯ ವ್ಯಾಪಾರಕ್ಕಾಗಿ ಕೋಡಿತಲೆಯ ಸಮುದ್ರ ತೀರಕ್ಕೆ ಬರುತ್ತಾನೆ, ಇಲ್ಲಿ ಅನಾದಿಕಾಲದಿಂದಲೂ ಪ್ರತಿಷ್ಠಾಪಿಸಲ್ಪಟ್ಟ ಹೈಗುಳಿ ದೈವದ ಅಪಾರ ಕಾರಣಿಕ ಶಕ್ತಿಯನ್ನು ಮೊದಲೇ ತಿಳಿದುಕೊಂಡ ಆತ ತಾನು ಕರಗತ ಮಾಡಿಕೊಂಡಿರುವ ಮಂತ್ರ ಶಕ್ತಿ ವಿದ್ಯೆಯಿಂದ ಹೈಗುಳಿಯನ್ನು ವಶೀಕರಣ ಮಾಡಿಕೊಂಡು ತನ್ನ ಊರಿಗೆ ತೆಗೆದುಕೊಂಡು ಹೋಗಬೇಕೆಂದು ನಿಶ್ಚಯಿಸಿಕೊಂಡಿರುತ್ತಾನೆ.


ಈ ವಿಚಾರವನ್ನು ದಿವ್ಯಶಕ್ತಿಯಿಂದ ಅರಿತುಕೊಂಡ ಹೈಗುಳಿ ಆತ ಬರುತ್ತಿದ್ದ ಹಾಯಿದೋಣಿಯಿಂದ ಆತನನ್ನು ಕೆಡವಿ ಹಾಕಿ ತನ್ನ ಸ್ವಾಧೀನಪಡಿಸಿಕೊಂಡು ಆತನನ್ನು ತಾನು ನೆಲೆ ನಿಂತ ಕ್ಷೇತ್ರದಲ್ಲಿ ತನ್ನ ಪೂರಕ ಶಕ್ತಿಯನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿ ತನ್ನ ಬಂಟನನ್ನಾಗಿ ನೇಮಿಸಿಕೊಂಡು ಕೋಡಿತಲೆ ಕ್ಷೇತ್ರದಲ್ಲಿ ಕೋಳೆರಾಯನಿಗೆ ಸಾನ್ನಿಧ್ಯ ಕಲ್ಪಿಸಿಕೊಡುತ್ತಾನೆ.ಹೀಗೆ ಹೈಗುಳಿಯನ್ನು ತನ್ನ ಮಂತ್ರ ಶಕ್ತಿಯಿಂದ ಬಂಧಿಸಿ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಲು ಬಂದ ಕೋಳೆರಾಯ ಶ್ರೀ ನಾಲ್ಕು ಪಾದದ ಹೖಾಗೂಳಿಯ ಕಾರಣಿಕ ಶಕ್ತಿಗೆ ಶರಣಾಗಿ ಕೋಡಿತಲೆ ಕ್ಷೇತ್ರದಲ್ಲಿ ನೆಲೆ ನಿಲ್ಲುತ್ತಾನೆ.


ಶ್ರೀ ಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯಂತೆ ಸಾಸ್ತಾನ ಕೋಡಿತಲೆ ಕ್ಷೇತ್ರದಲ್ಲಿ ಕೋಳೆರಾಯ ದೈವಕ್ಕೆ ವಿಶಿಷ್ಟ ಸ್ಥಾನವಿದೆ. ಕೋಳೆರಾಯ ಕೈಯಲ್ಲಿ ಕೋಳಿ ಹಿಡಿದಿರುವುದರಿಂದ ಕೋಳೆರಾಯ ಎಂಬ ಹೆಸರು ಬಂದಿದೆ ಎಂದು ಕೆಲವರ ಅಭಿಪ್ರಾಯ ಆದರೆ ಆ ಅಭಿಪ್ರಾಯ ಸತ್ಯವಲ್ಲ ಕೋಳೆರಾಯ ಮಹಾರಾಷ್ಟ್ರದ ಕೋಳಿ ಜನಾಂಗದವನಾಗಿರುವುದರಿಂದ ಆತನಿಗೆ ಕೋಳೆರಾಯ ಎಂಬ ಹೆಸರು ಬಂತು ಶ್ರೀ ನಾಲ್ಕು ಪಾದದ ಹೈಗುಳಿ ಕೃಪೆಯಿಂದ ಆತನಿಗೆ ದೈವತ್ವ ಪ್ರಾಪ್ತಿಯಾಯಿತು.


ಕೋಳಿ ಕೋಳೆರಾಯ ದೈವಕ್ಕೆ ಪ್ರಿಯವಾದ ಆಹಾರವಾಗಿರುವುದರಿಂದ ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡ ಕೋಳೆರಾಯನ ಮೂರ್ತಿಯನ್ನು ನಿರ್ಮಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ನಾಲ್ಕು ಪಾದದ ಹೈಗುಳಿ ಪ್ರಧಾನ ದೇವತೆಯಾದರೂ,ಕೋಳೆರಾಯ ಹೖಾಗೂಳಿಯ ಪ್ರಮುಖ ಬಂಟ ದೈವವಾಗಿದ್ದು ಭಕ್ತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಕಾರಣಿಕ ದೈವವಾಗಿ ಸ್ಪಂದಿಸುತ್ತಾನೆ. ಮುಖ್ಯವಾಗಿ ಮೀನುಗಾರರು ಸಮದ್ರದಲ್ಲಿ ಪ್ರಕೃತಿಯ ವೈಪರೀತ್ಯದಿಂದಾಗಿ ಸಮಸ್ಯೆಗೆ ಸಿಲುಕಿದಲ್ಲಿ ಕೋಳೆರಾಯನಿಗೆ ಪ್ರಾರ್ಥನೆ ಸಲ್ಲಿಸಿ ಸಮಸ್ಯೆಯಿಂದ ಪಾರಾದ ನೂರಾರು ಪವಾಡ ಸದೃಶ ಉದಾಹರಣೆಗಳು ನಡೆದಿದೆ.


ಸುನಾಮಿ ಸಂದರ್ಭದಲ್ಲೂ ಕೂಡಾ ಸಮುದ್ರ ತೀರದ ಈ ಪ್ರದೇಶಗಳಿಗೆ ಕಿಂಚಿತ್ತೂ ಹಾನಿಯಾಗದಂತೆ ಸಾನ್ನಿಧ್ಯದ ದೈವಗಳು ಕಾಪಾಡಿವೆ. ಪ್ರತಿನಿತ್ಯ ಇಲ್ಲಿ ಪೂಜೆ ಇರುತ್ತದೆ.ಸಂಕ್ರಾಂತಿ ದಿನ ದರ್ಶನ ಸೇವೆ ಜರುಗುತ್ತದೆ ದೂರ ದೂರದ ಊರಿನಿಂದ ಭಕ್ತರು ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೈವ ಪಾತ್ರಿಗಳಲ್ಲಿ ನಿವೇದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಈ ಸಾನ್ನಿಧ್ಯದಲ್ಲಿ ನಡೆಯುವ ಮತ್ತೊಂದು ವಿಶೇಷ ಕಾರ್ಯವೆಂದರೆ ಅದು ಪ್ರೇತ ಮದುವೆ.ಮದುವೆಯಾಗದೇ ಸತ್ತ ಅತೃಪ್ತ ಆತ್ಮಗಳಿಗೆ ಪರಸ್ಪರ ಜೋಡಿಯನ್ನು ಗೊತ್ತುಪಡಿಸಿ ದೈವದ ಅಪ್ಪಣೆ ಪಡೆದು ಗಂಡು ಹೆಣ್ಣು ಉಭಯ ಕುಟುಂಬದ ಕೂಡುವಿಕೆಯಲ್ಲಿ ಪ್ರೇತ ಮದುವೆ ಮಾಡುತ್ತಾರೆ. ಇದರಿಂದ ಮದುವೆಯಾಗದೇ ಸತ್ತ ಅತೃಪ್ತ ಆತ್ಮಗಳು ಸಂತೃಪ್ತಿ ಹೊಂದಿ ತಮ್ಮ ಮನೆ ಮಂದಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಇದೆ.ಈ ಪ್ರೇತ ಮದುವೆ ಕಾರ್ಯ ಜನಪದೀಯ ನಂಬಿಕೆಯ ನೆಲೆಗಟ್ಟಿನಲ್ಲಿ ಧಾರ್ಮಿಕ ವಿಧಿಯಂತೆ ಜರುಗುತ್ತದೆ.


ಅಪಾರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾದ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ಈ ದೈವಸ್ಥಾನದಲ್ಲಿ ಜನವರಿ 23 ಮತ್ತು 24 ರಂದು ವಾರ್ಷಿಕ ಜಾತ್ರೆ ನಡೆಯಲಿದೆ. ಮೊದಲ ದಿನ ಕೆಂಡ ಸೇವೆ, ಕೋಲಸೇವೆ ಮುಂತಾದ ಕಾರ್ಯಕ್ರಮಗಳು ನಡೆದರೆ ಮರುದಿನ ತುಲಾಭಾರ ಇತ್ಯಾದಿ ಸೇವೆಗಳು ಸಂಪನ್ನಗೊಳ್ಳಲಿದೆ. ಮೂರು ಕಡೆ ಜಲರಾಶಿಯ ನಡುವೆ ಹಸಿರುನ್ನುಟ್ಟ ವಿಶಿಷ್ಟ ಭೂ ಪ್ರದೇಶದಲ್ಲಿ ಪವಡಿಸಿರುವ ಸಾಸ್ತಾನ ಕೋಡಿತಲೆಯ ಈ ಕಾರಣಿಕ ದೈವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಒಂದು ಅದ್ಭುತ ಅನುಭವ.


ಕೆಂಡಸೇವೆ ಜರುಗುವಾಗ ದರ್ಶನ ಪಾತ್ರಿಯೊಡನೆ ಮೈ ಮೇಲೆ ದರ್ಶನ ಆವಾಹನೆಗೊಂಡ ನೂರಾರು ಮಹಿಳೆಯರು ಆವೇಶ ಭರಿತರಾಗಿ ಕೆಂಡವನ್ನು ಹಾಯುವ ನೋಟ ಬಹಳ ರೋಮಾಂಚನಕಾರಿಯಾಗಿರುತ್ತದೆ. ಸಾಸ್ತಾನ ಕೋಡಿತಲೆ ಶ್ರೀ ನಾಲ್ಕು ಪಾದ ಹೖಾಗೂಳಿ ದೈವಸ್ಥಾನದಲ್ಲಿ ಕೋಳೆರಾಯ ನೆಲೆ ನಿಂತ ಅದ್ಭುತ ಇತಿಹಾಸದ ಕಥೆ.
ಉಮಾಕಾಂತ ಖಾರ್ವಿ ಕುಂದಾಪುರ

















