ಜೀವ ರಕ್ಷಕ ಇಬ್ರಾಹಿಂ ಗಂಗೊಳ್ಳಿ

kundapuradotcom@gmail.com
4 Min Read

ವರ್ತಮಾನದ ಬದುಕಿನ ತುರ್ತು ಸಂದರ್ಭದಲ್ಲಿ ಮಾನವೀಯ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಸಹಾಯ ಹಸ್ತ ಚಾಚುವ ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಸದ್ದಿಲ್ಲದೇ ತಮ್ಮ ಸಮಾಜ ಸೇವಾ ಕೈಂಕರ್ಯವನ್ನು ಮಾಡುತ್ತಿರುತ್ತಾರೆ, ಅಂತವರಲ್ಲಿ ಗಂಗೊಳ್ಳಿಯ ಅಪಧ್ಭಾಂದವ ಸಮಾಜ ಸೇವಕ ಇಬ್ರಾಹಿಂ ಒಬ್ಬರು. ಇಬ್ರಾಹಿಂರವರು ಹುಟ್ಟಿದ್ದು 1984 ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ M H ಮನೆತನದರಾಗಿರುವ ಇಬ್ರಾಹಿಂ ತಂದೆಯ ಹೆಸರು ಖಾಜಾ ವೈ ಸಾಹೇಬ್ ಕಳೆದ ಒಂಬತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಾಯಿಯ ಹೆಸರು ಖೈರುನ್ನಿಸಾ ಶಾಬುದ್ದೀನ್ ಒಬ್ಬರು ಅಣ್ಣ ಇದ್ದಾರೆ ಇಬ್ರಾಹಿಂರವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ ಇಬ್ರಾಹಿಂರವರು ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಕಲಿತಿದ್ದು ಬಿ.ಕಾಂ.ಪದವಿಧರರಾಗಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಇಬ್ರಾಹಿಂ ಗಂಗೊಳ್ಳಿಯವರು ಯಾವುದೇ ತುರ್ತು ಸಂದರ್ಭ ಇರಲಿ ಅದಕ್ಕೆ ತಕ್ಷಣ ತನ್ನ ಸಂಗಡಿಗರೊಂದಿಗೆ ಸ್ಪಂದಿಸುವ ಮಾನವೀಯ ಗುಣ ಸಂಪನ್ನರಾಗಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ಇಬ್ರಾಹಿಂರವರು ಸಾಲ ಮಾಡಿ ಖರೀದಿಸಿದ ಅಂಬ್ಯುಲೆನ್ಸ್ ಮೂಲಕ ಸರ್ವಧರ್ಮೀಯರನ್ನೊಳಗೊಂಡ ತನ್ನ ತಂಡದೊಂದಿಗೆ ಸಮಾಜ ಸೇವೆ ಮಾಡುತ್ತಿದ್ದು, ಪೋಲಿಸರ ಮತ್ತು ಪಂಚಾಯತ್ ಸಹಕಾರದಲ್ಲಿ ಮೂವತ್ತೇಳು ಅನಾಥ ಶವಗಳ ದಫನ, ಅಪಘಾತ ಇತ್ಯಾದಿ ಕಾರಣಗಳಿಂದಾಗಿ ಜರ್ಝರಿತಗೊಂಡ, ರಕ್ತಸಿಕ್ತ,ಕೊಳೆತ ಮತ್ತು ದುರ್ಗಂಧ ಬೀರುವ ಶವಗಳನ್ನು ಶಿಸ್ತುಬದ್ದವಾಗಿ ಪ್ಯಾಕ್ ಮಾಡಿ ಶವಾಗಾರಕ್ಕೆ ಕೊಂಡೊಯ್ದು ಗೌರವಯುತವಾಗಿ ಅಂತಿಮ ಸಂಸ್ಕಾರ ನಡೆಸಿದ್ದಾರೆ.

ಕೊರಾನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಬ್ರಾಹಿಂ ರವರ ಅಂಬುಲೆನ್ಸ್ ನ್ನು ಲೀಸ್ ಗೆ ಪಡೆದುಕೊಂಡಿತ್ತು ಈ ಸಂದರ್ಭದಲ್ಲಿ ಕೊರಾನಾದಿಂದ ಸತ್ತವರ ಹೆಣವನ್ನು ಮುಟ್ಟಲು ಕೂಡಾ ಸತ್ತವರ ಮನೆಯವರು ಬರುತ್ತಿರಲಿಲ್ಲ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಬ್ರಾಹಿಂ ಮತ್ತು ಸ್ವಯಂಸೇವಕರ ತಂಡ ಎದೆಗುಂದದೇ ಹಗಲು ರಾತ್ರಿ,ಮಳೆ, ಗಾಳಿ ಲೆಕ್ಕಿಸದೇ ಹಬ್ಬದ ಉಪವಾಸ ಸಮಯದಲ್ಲೂ ಮೃತದೇಹಗಳ ಸಾಗಾಟ, ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನಡೆಸಿದ್ದಾರೆ.

ಸಮಸ್ತ ಜಗತ್ತನ್ನೇ ಎರಡು ವರ್ಷಗಳ ಕಾಲ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಜಗತ್ತಿನ ಜನರಿಗೆ ಜೀವದ ಮತ್ತು ಜೀವನ ಮೌಲ್ಯಗಳ ಮರೆಯಲಾಗದ ಅದ್ಭುತ ಪಾಠವನ್ನು ಕಲಿಸಿಕೊಟ್ಟು ಹೋದ ಕೊರಾನಾ ಸಾಂಕ್ರಾಮಿಕ ರೋಗದ ಕಾಲಘಟ್ಟದ ಘಟಾನಾವಳಿಗಳು ಪ್ರಪಂಚದ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನೇ ಬರೆದಿದೆ ಇಂತಹ ದಾರುಣ ಸಂದರ್ಭದಲ್ಲಿ ಇಬ್ರಾಹಿಂ ಸರ್ಕಾರ ತನ್ನಿಂದ ಪಡೆದ ಅಂಬುಲೆನ್ಸ್ ಗೆ ಚಾಲಕನಾಗಿ ಮಾತ್ರವಲ್ಲ, ಒಬ್ಬ ಪ್ರಾಮಾಣಿಕ ಸ್ವಯಂಸೇವಕನಾಗಿ ತನ್ನನ್ನು ಸಮರ್ಪಿಸಿಕೊಂಡರು ಕೊರಾನಾ ಸಾಂಕ್ರಾಮಿಕ ರೋಗ ಭೀತಿಯ ನಡುವೆ, ಆರೋಗ್ಯ ಸಮಸ್ಯೆ, ಸಮಯದ ಒತ್ತಡಗಳನ್ನು ಮೆಟ್ಟಿನಿಂತು ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸ್ವಯಂಸೇವಕರ ಪಡೆಯೊಂದಿಗೆ ಸತ್ತವರ ಮನೆಯವರ ಅನುಪಸ್ಥಿತಿಯಲ್ಲಿ 175 ಕ್ಕೂ ಹೆಚ್ಚು ಶವಗಳ ವಿಲೇವಾರಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಲಾಕ್ ಡೌನ್ ಆಗಿ ಜನರಿಗೆ ತುಂಬಾ ತೊಂದರೆಯಾಗುತ್ತಿತ್ತು. ದಾನಿಗಳ ಸಹಕಾರದಿಂದ ಉತ್ತಮ ಗುಣಮಟ್ಟದ, ಆರೋಗ್ಯಕರವಾದ ಪುಡ್ ಕಿಟ್ ಗಳನ್ನೂ ಜಾತಿ, ಮತ ಭೇದವಿಲ್ಲದೇ ಜನರಿಗೆ ವಿತರಿಸಿದ್ದು, ಕೊರಾನಾ ಪ್ರಾರಂಭಿಕ ಹಂತ ಕರ್ಪ್ಯೂ ಸಂದರ್ಭ ಹೆದ್ದಾರಿ ತುರ್ತು ಸಂಚಾರದ ತುರ್ತು ಸೇವೆ ಮಾಡುವ ವಾಹನ ಚಾಲಕರಿಗೆ ಆಹಾರ ವಿತರಣೆ, ಅಗತ್ಯವಿರುವ ಕಡೆ ಮನೆಗೆ ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ,ಅಗ್ನಿಶಾಮಕ ದಳದ ಜೊತೆಗೆ ಸೇವೆ, ಟ್ರಾಫಿಕ್ ಸಮಸ್ಯೆ ಸಂದರ್ಭ ಪೋಲೀಸ್ ಜೊತೆಗೆ ಸ್ವಯಂಸೇವಕರ ಸೇವೆ, ಅಂಬುಲೆನ್ಸ್ ಧ್ವನಿವರ್ಧ ಮೂಲಕ ಕೊರಾನಾ ಜಾಗೃತಿ ಸಂದೇಶ, ಇತ್ಯಾದಿ ಕರ್ತವ್ಯಗಳನ್ನು ಮಾಡಲಾಗಿದೆ ಅಗಲಿದ ಗೆಳೆಯ ಸುಹ್ಯೆಲ್ ನೆನಪಿನಲ್ಲಿ ಗಂಗೊಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಇದುವರೆಗೂ ಉಚಿತ ಸೇವೆಯ ಮೂಲಕ 145 ಕ್ಕೂ ಹೆಚ್ಚು ತುರ್ತು ಚಿಕಿತ್ಸೆ ಅಗತ್ಯವುಳ್ಳ ರೋಗಿಗಳನ್ನು ಚಿಕಿತ್ಸೆಗಾಗಿ ಸಾಗಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಅಗತ್ಯ ಮತ್ತು ಸಂಧರ್ಭಾನುಸಾರವಾಗಿ, ಅರ್ಹ ಫಲಾನುಭವಿಗಳಿಗೆ ಸಹ ರಿಯಾಯಿತಿ, ಇಂಧನ ಚಾರ್ಜ್, ಚಾಲಕನ ಚಾರ್ಜ್ ಇತ್ಯಾದಿ ರೀತಿಯ ಸೇವೆಗಳನ್ನು ಕಲ್ಪಿಸಲಾಗಿದ್ದು, 39 ಕ್ಕೂ ಹೆಚ್ಚು ಅನಾಥ, ನಿರ್ಗತಿಕರ ಸಂಕಷ್ಟಕ್ಕೆ ಸ್ಪಂದಿಸಿ ಅವರನ್ನು ವಿವಿಧ ಆಶ್ರಮಗಳಿಗೆ ಸೇರಿಸಿದ್ದಾರೆ. ಈ ನಿರ್ಗತಿಕರು, ಅನಾಥರು ಗುಣಮುಖರಾಗಿ ತಮ್ಮ ಮನೆ ಸೇರಿದ ಬಳಿಕ ತನಗೆ ಬಹಳ ಆತ್ಮತೃಪ್ತಿಯಾಗುತ್ತದೆ ಎಂದು ಇಬ್ರಾಹಿಂ ನುಡಿಯುತ್ತಾರೆ. ಅನಾಥ ಹೆಣಗಳ ಶವಸಂಸ್ಕಾರ ಮಾಡುವಾಗ ದುಖಃವೂ ಆಗುತ್ತದೆ, ಜೊತೆಗೆ ಸಂತೋಷವೂ ಆಗುತ್ತದೆ ಎನ್ನುವ ಅವರು ಯಾರಾದೋ ತಂದೆ, ತಾಯಿ ,ಅಣ್ಣ,ತಮ್ಮ, ತಂಗಿ ಹೀಗೆ ಅನಾಥವಾಗಿ ಮೃತಪಟ್ಟವರ ಅಂತಿಮ ಸಂಸ್ಕಾರ ನಮ್ಮಿಂದ ನಡೆಯತ್ತಿಲ್ಲ ಎಂಬ ಧನ್ಯತಾ ಭಾವದ ಆತ್ಮ ಸಂತೋಷ ಒಂದು ಕಡೆಯಾದರೆ, ಇನ್ನೊಂದೆಡೆ ಪಾಪ ಯಾರ್ಯಾರು ಎಲ್ಲಿಂದಲೂ ಬಂದು ಅನಾಥ ಹೆಣವಾಗುತ್ತಾರಲ್ಲ ಎಂಬ ನೋವಿನಿಂದ ದುಖಃ ಆಗುತ್ತದೆ ಎಂದು ವಿಷಾದಪೂರ್ಣವಾಗಿ ಹೇಳುತ್ತಾರೆ.

ಇಬ್ರಾಹಿಂ ರವರ ತಂಡಕ್ಕೆ ಕೆಲವು ದಾನಿಗಳು ನೆರವು ನೀಡುತ್ತಾ ಬಂದಿದ್ದು, ಇದರ ಸಂಚಯವನ್ನೂ ಇಬ್ರಾಹಿಂ ಈ ಸಮಾಜ ಸೇವೆಗೆ ಪರಿಪೂರ್ಣವಾಗಿ ವಿನಿಯೋಗಿಸುತ್ತಿದ್ದಾರೆ. ಪ್ರಸ್ತುತ ಇಬ್ರಾಹಿಂ ತಂಡ ಆರ್ಥಿಕ ಅಡಚಣೆಯನ್ನು ಎದುರಿಸುತ್ತಿದೆ. ಸಮಾಜ ಸೇವೆಯನ್ನು ನಿರಂತರವಾಗಿ ಮಾಡಬೇಕೆಂಬ ಮಹಾದಾಸೆ ಈ ತಂಡಕ್ಕೆ ಇದ್ದು ದಾನಿಗಳು ಮುಂದೆಯೂ ನೆರವು ನೀಡಿ ಸಹಕರಿಸಬೇಕೆಂದು ಇಬ್ರಾಹಿಂ ಸಹೃದಯಿ ದಾನಿಗಳ ಬಳಿ ವಿಜ್ಞಾಪಿಸಿಕೊಂಡಿದ್ದಾರೆ. ಗಂಗೊಳ್ಳಿಯ ಆಪತ್ಭಾಂಧವ ಎಂದೇ ಜನಪ್ರಿಯನಾಗಿರುವ ಇಬ್ರಾಹಿಂರವರು ಕಳೆದ ಮೂರು ವರ್ಷಗಳಿಂದ 400 ಅಪಘಾತ ಪ್ರಕರಣಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದ ಹಲವರ ಪ್ರಾಣ ಉಳಿಸುವಲ್ಲಿ ನೆರವು ನೀಡಿದ್ದಾರೆ.

ಇದರ ಜೊತೆಗೆ ಇಬ್ರಾಹಿಂ ದಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದು, ಈಗ ಇರುವ ಅಂಬುಲೆನ್ಸ್ ಐದು ವರ್ಷಗಳ ಹಿಂದೆ ಖರೀದಿ ಮಾಡಿದ್ದು, ಒಂದುವರೆ ಲಕ್ಷ ಕೀಮೀ ಓಡಿದ್ದು ಅದರ ಕಾರ್ಯಕ್ಷಮತೆ ಒಂದಿಷ್ಟು ಕಡಿಮೆಯಾಗಿರುವುದರಿಂದ ಯಾರಾದರೂ ಸಹೃದಯಿ ದಾನಿಗಳು ಮುಂದೆ ಬಂದು ಹೊಸ ಅಂಬುಲೆನ್ಸ್ ಒದಗಿಸಿ ಕೊಟ್ಟರೆ ತುರ್ತು ಸೇವೆಗೆ ಮತ್ತಷ್ಟೂ ಅನುಕೂಲವಾಗುತ್ತದೆ ಎಂದು ವಿನಮ್ರಭಾವದಿಂದ ನುಡಿಯುತ್ತಾರೆ. ಜನಸೇವೆ ಜರ್ನಾಧನನ ಸೇವೆ ಎಂಬ ಗಾಧೆ ಮಾತು ಇದೆ. ದೀನ ದುರ್ಬಲರ ಸೇವೆ ಮಾಡುವುದು ದೇವರ ಪೂಜೆಕ್ಕಿಂತ ಶ್ರೇಷ್ಠ ಎಂದು ಈ ಗಾಧೆ ತಿಳಿಸುತ್ತದೆ. ಸಮಾಜ ಸೇವೆ ಎಂದರೆ ಬಿಡುವಿರುವ ಸಮಯದಲ್ಲಿ ಮಾಡುವ ಕೆಲಸವಲ್ಲ, ಅದು ನಮಗೆ ಸಮಾಜದ ಋಣ ತೀರಿಸಲು ಭಗವಂತ ಕೊಟ್ಟ ಒಂದು ಪುಣ್ಯಪ್ರಧ ಅವಕಾಶ.

ಸಮಾಜಸೇವೆಯಲ್ಲಿಯೇ ಮನುಷ್ಯನ ಜನ್ಮದ ಸಾರ್ಥಕತೆ ಅಡಕವಾಗಿದೆ. ಈ ದೆಸೆಯಲ್ಲಿ ಅವಲೋಕಿಸಿದರೆ ಗಂಗೊಳ್ಳಿ ಇಬ್ರಾಹಿಂ ಮತ್ತು ಅವರ ತಂಡ ಮಾಡುತ್ತಿರುವ ಸಮಾಜ ಸೇವೆ ಶ್ರೇಷ್ಠ ಮಟ್ಟದಾಗಿದೆ ಮತ್ತು ಇತರರಿಗೂ ಪ್ರೇರಣಾದಾಯಕವಾಗಿದೆ. ಕಿಂಚಿತ್ತೂ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜ ಸೇವೆ ಮಾಡುತ್ತಿರುವ ಅವರಿಗೆ ಸಾರ್ವಜನಿಕರು ಎಲ್ಲಾ ರೀತಿಯ ಬೆಂಬಲ ನೀಡಬೇಕಾಗಿದೆ.

ಸಂದರ್ಶನ : ಸುಧಾಕರ ಕುಂದಾಪುರ
www.kundapura.com

Share This Article
Leave a Comment
error: Content is protected !!