ದಾಂಡೇಲಿ ದಟ್ಟಾರಣ್ಯದ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ

kundapuradotcom@gmail.com
3 Min Read

ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ, ತನ್ನೊಳಗೆ ಅದೆಷ್ಟೋ ಕಥೆಗಳನ್ನು, ರಹಸ್ಯಗಳನ್ನು ಹುದುಗಿಸಿಕೊಂಡು, ಹೊರ ಜಗತ್ತಿಗೆ ಕಾಣದಂತೆ ಭೂಮಿಯ ಗರ್ಭದಲ್ಲಿ ಅಡಗಿರುವ ಈ ಗುಹೆಗಳು, ಇಂದಿಗೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೆ ನಿಗೂಢವಾಗಿಯೇ ಉಳಿದಿವೆ. ಇಲ್ಲಿ ಪ್ರತಿಯೊಂದು ಕಲ್ಲೂ ಶತಮಾನಗಳ ಇತಿಹಾಸವನ್ನು ಪಿಸುಗುಟ್ಟುತ್ತದೆ. ಈ ರಹಸ್ಯಮಯ ಲೋಕದೊಳಗೆ ಹೆಜ್ಜೆ ಇಟ್ಟರೆ, ಪ್ರಕೃತಿಯ ಅಚ್ಚರಿ ಹಾಗೂ ಹಲವು ರೀತಿಯ ವಿಸ್ಮಯಗಳು ನಮ್ಮನ್ನು ಕಾಡುತ್ತದೆ.

ಪ್ರಕೃತಿ ದೈವಿಕತೆಯ ಪ್ರತಿರೂಪ ಎಂದು ಭಾರತೀಯ ಸಂಸ್ಕೃತಿ ಹೇಳುತ್ತದೆ.ಇದಕ್ಕೆ ಸ್ಪಷ್ಟ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕವಳ ಗುಹೆಗಳು ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ನೈಸರ್ಗಿಕ ಸುಣ್ಣದ ಕಲ್ಲುಗಳಿಂದ ಕವಳದ ಗುಹೆಗಳು ಸೃಷ್ಟಿಯಾಗಿದ್ದು, ಜ್ವಾಲಾಮುಖಿ ಚಟುವಟಿಕೆಗಳಿಂದ ರೂಪುಗೊಂಡ ಈ ಗುಹೆಗಳಲ್ಲಿ ಸ್ವಾಭಾವಿಕವಾಗಿ ಸಿದ್ಧಗೊಂಡ ಶಿವಲಿಂಗವಿದೆ ಹಾಗಾಗಿ ಇದನ್ನು ಕವಳೇಶ್ವರ ದೇವಸ್ಥಾನವೆಂದು ಆರಾಧಿಸಿಕೊಂಡು ಬರಲಾಗಿದೆ.

ಪ್ರಾಚೀನ ಇತಿಹಾಸದ ಪ್ರಕಾರ ಕವಳ ಗುಹೆಗಳು ಪ್ರಾಗೈತಿಹಾಸಿಕ ಕಾಲದಿಂದಲೂ ಆಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ ಸಾವಿರಾರು ವರ್ಷಗಳಿಂದ ಸುಣ್ಣದ ಕಲ್ಲಿನ ಮೇಲೆ ನೀರು ಇಳಿಯುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದ್ದರಿಂದ ಈ ಗುಹೆಗಳು ವಿಶಿಷ್ಟವಾಗಿ ರೂಪುಗೊಂಡವು ಎಂದು ಹೇಳುತ್ತಾರೆ.

ಪೌರಾಣಿಕ ಕಥನದ ಪ್ರಕಾರ ಮಹಾಭಾರತ ಕಾಲದ ತಪಸ್ಸಿಗಳ ತಪೋಭೂಮಿ ಎಂದು ಕವಳದ ಗುಹೆಗಳು ಕರೆಯಲ್ಪಡುತ್ತದೆ. ಕವಳೇಶ್ವರ ಎಂದು ಪೂಜಿಸಲ್ಪಡುವ ಇಲ್ಲಿನ ಶಿವಲಿಂಗವು ಸುಮಾರು 4 ಅಡಿ ಎತ್ತರವಾಗಿದೆ ಅಡಿಕೆಗೆ ಗ್ರಾಮ್ಯ ಕನ್ನಡದಲ್ಲಿ ಕವಳ ಎಂದು ಕರೆಯುತ್ತಾರೆ ಈ ಶಿವಲಿಂಗವು ಅಡಿಕೆಯ ಆಕೃತಿಯಲ್ಲಿರುವುದರಿಂದ ಕವಳೇಶ್ವರ ಎಂದು ಪ್ರಸಿದ್ಧಿ ಪಡೆಯಿತು.

ಶಿವಲಿಂಗದ ಮೇಲ್ಭಾಗದಲ್ಲಿ ಇರುವ ಕಲ್ಲಿನಿಂದ ನಿರಂತರವಾಗಿ ಬೀಳುವ ನೀರು ಶಿವಲಿಂಗದ ಹೊಳಪಿಗೆ ಕಾರಣವಾಗಿದೆ ಇದನ್ನು ಪ್ರಕೃತಿ ನಿರ್ಮಿಸಿದ ಜಲಾಭಿಷೇಕ ಎಂದು ಪರಿಗಣಿಸಲಾಗುತ್ತಿದ್ದು, ಈ ಮೊದಲು ನೀರಿನ ಬದಲಾಗಿ ಹಾಲು ಶಿವಲಿಂಗದ ಮೇಲೆ ಅಭಿಷೇಕವಾಗುತ್ತಿತ್ತು ಎಂಬ ಐತಿಹ್ಯವಿದೆ.

ಕವಳ ಗುಹೆಯಲ್ಲಿ ಹಲವಾರು ಜಾತಿಯ ಹಾವುಗಳು ಮತ್ತು ಬಾವಲಿಗಳು ನೆಲೆಸಿದ್ದು ಪರಿಸರದೊಂದಿಗೆ ತಾದ್ಯಾತ್ಮ ಹೊಂದಿದೆ ಶಿವರಾತ್ರಿ ದಿನದಂದು ಇಲ್ಲಿ ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ಕವಳೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ ಕಡು ಕತ್ತಲೆಯಿಂದ ತುಂಬಿದ ಕವಳದ ಗುಹೆಯೊಳಗೆ ಶಿವರಾತ್ರಿ ದಿನದಂದು ಮಾತ್ರ ಬಲ್ಬ್ ಬೆಳಗಿಸಲಾಗುತ್ತದೆ.

ಫಣಸೋಲಿ ಗ್ರಾಮದಿಂದ 3–4 ಕಿಲೋಮೀಟರ್ ಕಾಡು ದಾರಿಯಲ್ಲಿ ನಡೆದು, 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿಳಿದು, ಗುಹೆಗೆ ತಲುಪಬೇಕಾಗುತ್ತದೆ. ಎರಡನೆಯದು ಅಂಬಿಕಾ ನಗರದ ನಾಗಝರಿ ಇಂದ ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗುವ ಮಾರ್ಗವಾಗಿದೆ, ಗುಹೆಗೆ ತಲುಪಿದ ಬಳಿಕ ಅಲ್ಲಿಂದ ಕಾಳಿ ನದಿ ಕಣಿವೆಯ ಸುಂದರ ದೃಶ್ಯಾವಳಿ ಕಾಣಸಿಗುತ್ತದೆ. ಇದು ನಿಸರ್ಗ ಪ್ರೇಮಿಗಳು ಮತ್ತು ಸಾಹಸಿಗರಿಗೆ ಅತ್ಯುತ್ತಮ ತಾಣವಾಗಿದೆ.

ಶಿವರಾತ್ರಿ ದಿನ ಬೆಳಗಿನ ಜಾವ 4 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ಕವಳೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಇಲ್ಲಿನ ಪ್ರಕೃತಿ, ಕಾಡು, ಕಣಿವೆ, ನದಿ ಹಾಗೂ ಗುಹೆಯ ಸೌಂದರ್ಯವನ್ನು ನೋಡಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ದಾಂಡೇಲಿಗೆ ಧಾವಿಸುತ್ತಾರೆ.

ಕವಳ ಗುಹೆಯ ಬಾಗಿಲೊಳಗೆ ಕಾಲಿಡುತ್ತಿದ್ದಂತೆ ಸಣ್ಣದಾಗಿ ಇಳಿಜಾರಾಗಿರುವ ದಾರಿ, ಜಾರುಬಂಡೆಗಳಂತಹ ಕಲ್ಲಿನ ರಚನೆಗಳಿವೆ ಸೂರ್ಯನ ಬೆಳಕು ಕಿಂಚಿತ್ತೂ ತಲುಪದ ಕವಳ ಗುಹೆಯ ಕತ್ತಲ ಲೋಕದೊಳಗೆ,ಟಾರ್ಚ್ ಬೆಳಕಿನ ಸಹಾಯದಿಂದ ಸಾಗುವುದು ವಿಶಿಷ್ಟ ಅನುಭವ. ಕವಳ ಗುಹೆ ದಾಂಡೇಲಿಯ ಹುಲಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿದ್ದು, ದಾಂಡೇಲಿಯಿಂದ ಸುಮಾರು 24 ಕೀಮೀ ದೂರದಲ್ಲಿದೆ.

ಈ ದಟ್ಟ ಕಾನನದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಅದ್ಭುತ ವಿಸ್ಮಯ ತಾಣವಾಗಿರುವ ಕವಳದ ಗುಹೆಗಳನ್ನು ಸಂದರ್ಶಿಸುವುದು ಅನನ್ಯ ಅನುಭವ. ಧರೆಯಲ್ಲಿರುವ ಜೀವಿಗಳೆಲ್ಲವೂ ಸೃಷ್ಟಿಮಾತೆಯ ಕುಡಿಗಳು ಎನ್ನುವುದು ಕವಳ ಗುಹೆಯಲ್ಲಿ ಸಾಕ್ಷಾತ್ಕಾರಗೊಳ್ಳುತ್ತದೆ ಗಾಢಾಂಧಕಾರದೊಳಗೆ ಸಾವಿರಾರು ವರ್ಷಗಳಿಂದ ಈ ಗುಹೆಯಲ್ಲಿ ಬದುಕಿ ಬಾಳುತ್ತಿರುವ ವಿವಿಧ ಜಾತಿಯ ಹಾವುಗಳು ಮತ್ತು ಬಾವಲಿಗಳೇ ಇದಕ್ಕೆ ಸಾಕ್ಷಿ. ಅವೆಲ್ಲಗಳ ಸ್ಥಾನದಲ್ಲಿ ಅವು ಬದುಕಲು ಬೇಕಾದದನ್ನೆಲ್ಲ ಅವುಗಳಿಗೆ ಸೃಷ್ಟಿ ಮಾತೆ ಕಾಲಕಾಲಕ್ಕೆ ಒದಗಿಸಿಕೊಟ್ಟಿದ್ದಾಳೆ.

ಪ್ರಕೃತಿಯ ದೈವಿಕ ಸ್ವರೂಪದ ದಿವ್ಯ ದರ್ಶನದ ಮಧುರ ಅನುಭೂತಿ ಪ್ರಾಪ್ತಿಯಾಗಬೇಕಾದರೆ ಕವಳದ ಗುಹೆಯನ್ನು ಒಮ್ಮೆ ನೋಡಬೇಕು. ಪ್ರಕೃತಿಯ ವಿಸ್ಮಯದೊಂದಿಗೆ ಕವಳೇಶ್ವರ ರೂಪದಲ್ಲಿ ಭಕ್ತರನ್ನು ಹರಸುತ್ತಿರುವ ಪರಶಿವನ ದರ್ಶನವನ್ನು ಶಿವರಾತ್ರಿಯ ದಿನದಂದು ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಅಚಲ ನಂಬಿಕೆ ಇಲ್ಲಿ ಪ್ರಚಲಿತದಲ್ಲಿದೆ.

ಪ್ರವಾಸ ಕಥನ: ಸುಧಾಕರ ಕುಂದಾಪುರ
www.kundapura.com

Share This Article
Leave a Comment
error: Content is protected !!