ನವೆಂಬರ್ 15: ಉಡುಪಿ-ದ.ಕ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ “ಕಾರ್ಟೂನು ಸ್ಪರ್ಧೆ”

kundapuradotcom@gmail.com
2 Min Read

ಕಾರ್ಟೂನು ಕುಂದಾಪ್ರ ಇವರ ನೇತೃತ್ವದಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ 12ನೆಯ ವರ್ಷದ “ಕಾರ್ಟೂನು ಹಬ್ಬ” ಈ ಬಾರಿ ನವೆಂಬರ್ 15 ರಿಂದ 19ರ ತನಕ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ನವೆಂಬರ್ 15 ರಂದು ಮಧ್ಯಾಹ್ನ 2ಗಂಟೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ “ಕಾರ್ಟೂನು ರಚನಾ ಸ್ಪರ್ಧೆ”ಯು ನಡೆಯಲಿದೆ.

“ಕಾರ್ಟೂನು ಸ್ಪರ್ಧೆ”ಯು 4ರಿಂದ 7ನೇಯ ತರಗತಿ, 8ರಿಂದ 10ನೇಯ ತರಗತಿ ಮತ್ತು ಪಿಯುಸಿ ಹಾಗೂ ಮೇಲ್ಪಟ್ಟು ಹೀಗೆ, ಮೂರು ವಿಭಾಗಗಳಲ್ಲಿ ನಡೆಯಲಿದೆ. “ಕಾರ್ಟೂನು ಸ್ಪರ್ಧೆಯ ವಿಷಯ”ವನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲೇ ನೀಡಲಾಗುವುದು.

ಸ್ಪರ್ಧೆಯ ನಿಯಮಗಳು: ಸ್ಥಳದಲ್ಲಿ “ಸ್ಪರ್ಧೆಯ ವಿಷಯ” ನೀಡಿದಾಗ ವಿದ್ಯಾರ್ಥಿಗಳು ಐಡಿಯಾ ಹೊಳೆಯದೆ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು ವಿದ್ಯಾರ್ಥಿಗಳು ತಮ್ಮ ತಮ್ಮ ಪೋಷಕರೊಂದಿಗೆ ವಿಷಯವನ್ನು ಚರ್ಚಿಸಲು ಸ್ಪರ್ಧೆಯ ಪೂರ್ವದಲ್ಲಿ 30ನಿಮಿಷಗಳ ಕಾಲಾವಕಾಶ ನೀಡಲಾಗುವುದು ಮತ್ತು ಆ ನಂತರ ಚಿತ್ರ ರಚಿಸಲು 2 ಗಂಟೆಗಳ ಕಾಲಾವಕಾಶ ದೊರೆಯಲಿದೆ. ಸ್ಪರ್ಧೆಯ ಸಮಯದಲ್ಲಿ ಚಿತ್ರರಚನೆ ಮತ್ತಿತರ ಕಾರ್ಯಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳೇ ಮಾಡಬೇಕಾಗಿದೆ. ಸ್ವಂತವಾದ ಮತ್ತು ಕ್ರೀಯಾಶೀಲ ಐಡಿಯಾಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಚಿತ್ರ ರಚನೆಗೆ ಡ್ರಾಯಿಂಗ್ ಹಾಳೆಗಳನ್ನು “ಕಾರ್ಟೂನು ಹಬ್ಬ”ದ ಆಯೋಜಕರೆ ಪೂರೈಕೆ ಮಾಡಲಿದ್ದು, ಚಿತ್ರ ಬಿಡಿಸಲು ಬೇಕಾಗುವ ಇತರ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕಾಗಿದೆ.

ಚಿತ್ರದ ಶೈಲಿ: ಕಪ್ಪುಬಿಳುಪಿನಲ್ಲಿ ಅಥವಾ ಇತರ ಬಣ್ಣಗಳನ್ನು ಬಳಸಿ ಅಥವಾ ಡೈಲಾಗ್ ರಹಿತವಾಗಿಯೂ ಚಿತ್ರಗಳನ್ನು ರಚಿಸಬಹುದಾಗಿದೆ. ಬಹುಮಾನಗಳ ಘೋಷಣೆ ಮತ್ತು ವಿತರಣೆ ನವೆಂಬರ್ 16ರಂದು ಸಂಜೆ 5 ಗಂಟೆಗೆ ನಡೆಯಲಿದೆ ಮತ್ತು ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ನವೆಂಬರ್ 16 ರಂದು ಬೆಳಿಗ್ಗೆ ಕಲಾಸಕ್ತ ಪೊಲೀಸ್ ಸಿಬ್ಬಂದಿಗಳಿಗೆ ಕಾರ್ಟೂನು/ಕ್ಯಾರಿಕೇಚರ್ ಕಾರ್ಯಾಗಾರ ನಡೆಯಲಿದೆ. ನವೆಂಬರ್ 17, 18 ಮತ್ತು 19ರಂದು ತಾಲೂಕಿನ ವಿವಿಧ ಶಾಲೆ, ಕಾಲೇಜುಗಳ ಮಕ್ಕಳಿಗಾಗಿ ವ್ಯಂಗ್ಯಚಿತ್ರ ತರಭೇತಿ ಕಾರ್ಯಾಗಾರ ನಡೆಯಲಿದೆ. ಕಾರ್ಟೂನು ಹಬ್ಬ ನಡೆಯುವ ಐದೂ ದಿನಗಳ ಕಾಲ ‘ಕಾರ್ಟೂನು ಪ್ರದರ್ಶನ’, ದಕ್ಷ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ ಮತ್ತು ‘ಸಾರ್ವಜನಿಕರ ಮತ್ತು ಪೊಲೀಸ್ ಸಿಬ್ಬಂದಿಗಳ ವ್ಯಂಗ್ಯಭಾವಚಿತ್ರ ರಚನೆ’ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 96861 09573

Share This Article
Leave a Comment
error: Content is protected !!